ಮಂಗಳವಾರ, ಸೆಪ್ಟೆಂಬರ್ 22, 2009

ಅಜ್ಜಾ........... ನಿನಗೊಂದು ಪತ್ರ




ಅಜ್ಜ, ಹೇಗಿದ್ದೀಯ? ಹೇಗಿದೆ ನಿನ್ ಪ್ರಪಂಚ. ಅಲ್ಲೆಲ್ರೂ ನಿನ್ನ ಏನಂತ ಮತಾಡ್ಸಿದ್ರು. ನನ್ನಜ್ಜಿ ಹೇಗಿದಾಳೆ. ಮೊನ್ನೆ ಭಾನುವಾರ ರಾತ್ರಿ ಮಾವ ಫೋನ್ ಮಾಡಿದ್ದ. ನಿಂಗೆ ಹುಷಾರಿಲ್ಲ ಇನ್ನೊಂದು ಸಾರಿ ಬಂದು ನೋಡ್ಕೊಂಡ್ ಮಾತಾಡ್ಸ್ಕೊಂಡ್ ಹೋಗು ಅಂತ ಅಂದಿದ್ದ. ನಿಂಗೊತ್ತಾ ಅವತ್ತೇ ರಾತ್ರಿ ನಾ ಹೊರಟು, ಶಿವಮೊಗ್ಗ ರೈಲು ಹತ್ತಿಯಾಗಿತ್ತು. ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಾಗ ಆರೂವರೆಯಾಗಿತ್ತು. ಮಾವ ಹೇಳಿದ್ದ, ಬೆಳಿಗ್ಗೆ ಏಳೂವರೆಗೆ ಬಸ್ಸಿದೆ ಅಂತ. ಆದ್ರೆ ಯಾವ ಬಸ್ಸು ಅಂತ ನಾನೂ ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಅದಿಕ್ಕೆ ಮತ್ತೆ ಫೋನ್ ಮಾಡಿದಾಗಲೇ ಮಾವ ಸರಿಯಾಗಿ ಹೇಳಿದ್ದು. ಏಳೂವರೆಗೆ ಗಣೇಶ ಬಸ್ಸಿದೆ, ನೀನು ಅಲ್ಲೇ ಹೂವು ಹಿಡ್ಕೊಂಡ್ ಬಾ. ಅಜ್ಜ ರಾತ್ರೀನೇ ಎರಡೂವರೆಗೆ ತೀರ್ಕೊಂಡಿದಾರೆ ಅಂತ. ತುಂಬಾ ನೋವಾಯ್ತು ಅಜ್ಜ. ಆ ಕ್ಷಣ ಏನೇನೋ ನೆನಪಾಯ್ತು. ನಾ ಹುಟ್ಟಿದಾಗಿನಿಂದ ನಿನ್ನ ಮನೇಲಿ, ನಿಮ್ಮೆಲ್ಲರ ಜೊತೆಗೆ ಬೆಳೆದವನು. ಅದರಲ್ಲೂ ನಿನ್ನ ಪ್ರೀತಿ, ಕೋಪ ಎಲ್ಲಾ ನೋಡಿದವನು, ಅನುಭವಿಸಿದವನು. ಅದೆಸ್ಟು ಸಲ ನೀ ನನ್ನ ಸ್ನಾನ ಮಾಡಿಸಿಲ್ಲ, ಅದೆಸ್ಟು ಸಲ ನಿನ್ನ ಹೆಗಲ ಮೇಲೆ ಕೂತು ತೋಟ, ಗದ್ದೆ, ಅಸ್ಟೇ ಏಕೆ ಶನಿವಾರ ಶನಿವಾರ ದಿನ ಮಾತ್ರ ಕಟ್ಟಿಂಗ್ ಮಾಡಿಸ್ಕೊಲ್ಲೋದಿಕ್ಕು ನಿನ್ನ ಹೆಗಲ ಮೇಲೆ ನನ್ ಸವಾರಿ. ನಿನ್ ಜೊತೆ ಆ ಭಯಂಕರ "ಕಾನುಮನೆ ಕಾನು, ಹನ್ದೊಲ್ಲಿ ಕಾನಲ್ಲಿ" ಗಬ್ಬದ ದನ ಕರು ಹಾಕಿತ್ತು ಅಂತ ರಾತ್ರಿ ಹಗಲೆಲ್ಲ ಹುಡ್ಕಿದ್ದು, ಇಬ್ಬರೇ ಬ್ಯಾಣದಲ್ಲಿ ಎಮ್ಮೆ, ಎತ್ತಿನ ಮೆಯಿಸಿದ್ದು, ಆಗ ನೀ ನನ್ಗೆಸ್ಟು ಪೆಟ್ಲೆ, ಬುಗುರಿ, ಚಿನ್ನಿದಾಂಡು, ಬಾರುಕೋಲು, ಗಾಡಿ, ಗಾಡಿಚಕ್ರ, ಗಿರಿಗಿಟ್ಲೆ ಇನ್ನೂ ಏನೇನೋ ಆಟದ ವಸ್ತುಗಳನ್ನ ಮಾಡಿಕೊಟ್ಟಿದ್ದೆ. ಅದೇನೂ ಒಂದೆರಡು ಬಾರಿಯಲ್ಲ ಪದೇ ಪದೇ. ಹಾಗೆ ಅದನ್ನ ಹಾಳು ಮಾಡಿಕೊಂಡಾಗ ನೀ ಕೊಟ್ಟ ಅದೇ ಬಾರುಕೊಲಿನ ಎಟುಗಳೂ ನೆನಪಾಯ್ತು. ನಿನ್ನೊಂದಿಗೆ ದೇವಸ್ಥಾನಗಳಿಗೆ ಸುತ್ತಾಡಿದ್ದು ನೆನಪಾಯ್ತು. ನಿನ್ನ ದೈವಭಕ್ತಿ, ಹಬ್ಬದ ದಿನಗಳಲ್ಲಿ ನಿನ್ನ ಸಂಬ್ರಮದ ಹಾಗು ಅಚ್ಚುಕಟ್ಟು ಆಚರಣೆ, ಶನಿವಾರದ ಒಪ್ಪೊತ್ತು, ಅವತ್ತಿನ ಪೂಜೆಯಲ್ಲಿ ಹಣೆ, ಮೈಗೆಲ್ಲ ನಾಮ ಹಾಕ್ಕೊಂಡಾಗ ನನಗೂ ಜೊತೆ ಕೂರಿಸಿಕೊಂಡು ನಿನ್ನಂತೆ ನಂಗೂ ಹಚ್ಚುತ್ತಿದ್ದೆ. ಇಂಥವೇ ಕೆಲವೊಂದು ವಿಚಾರಗಳನ್ನ ನಾನು ಚಿಕ್ಕವನಿದ್ದಾಗ ನಿನ್ನನ್ನೇ ಅನುಕರಿಸುತ್ತಿದ್ದೆ, ಅನುಸರಿಸುತ್ತಿದ್ದೆ. ನಿನ್ನ ದೈತ್ಯ ದೇಹ, ಗಾಂಭೀರ್ಯ, ಅಚ್ಚುಕಟ್ಟು, ಸ್ವಚ್ಛತೆ, ಸರಳತೆ ಜೋತೆಗೊಂದಿಸ್ಟ್ ಸಿರಿತನದ ಗತ್ತು ಇದೆಲ್ಲ ಒಂದೆರಡು ಕ್ಷಣದಲ್ಲೇ ಕಣ್ಣೀರ ಹನಿಯೊಳಗೆ ನೆನಪಾಗಿ ಜಾರಿದವು. ನೋವಿದ್ದರೂ ತೋರಗೊಡದೆ ಸಹಜವಾಗಿ ಮನೆಯೊಳಗೆ ಬಂದು ನಿನ್ನ ಉಸಿರಿಲ್ಲದ ದೇಹ ನೋಡಿದಾಗ ಬದುಕು ಇಸ್ಟೇನಾ? ಅಂತನ್ನಿಸಿತು. ನಿನ್ನ ನೋಡಿ ಭಾರವಾದ ಎದೆ ಹೊತ್ತುಕೊಂಡು ಹೊರ ಬರುವಾಗ, "ಇವನು ಬಾಳಾ ಗಟ್ಟಿಗಸ್ತ. ಸಿಕ್ಕಾಪಟ್ಟೆ ಧೈರ್ಯದ ಮನುಷ್ಯ. ದೊಡ್ಡ ಜೀವ ಬೇರೆ. ಪ್ರಾಯದಲ್ಲಿ ಒಂದು ಸರಿಯಾದ 'ಹುಲಿ' ಹೊಡೆದಿದ್ದ. ಅದನ್ನ ಇವನ ಜೊತೆ ಗಾಡಿ ಮೇಲೆ ಇಟ್ಟು ಊರ ತುಂಬಾ ಮೆರವಣಿಗೆ ಮಾಡಿದ್ವಿ. ಅಂಥಾ ಬೇಟೆಗಾರ" ಎಂಬ ಮಾತು ಕಿವಿಗೆ ಬಿತ್ತು. ತಿರುಗಿ ಆ ಕಡೆ ನೋಡಿದ್ರೆ ನಿನಗಿಂತಾ ಚಿಕ್ಕವರಾದ್ರೂ ಕೂಡಾ ಅಜ್ಜನ್ದಿರೆ ಆಗಿದ್ದವರೆಲ್ಲ ಒಂದು ಕಡೆ ಕೂತು ನಿನ್ನ ಬಗ್ಗೆ ಮಾತಾಡ್ತಾ ಇದ್ರು. ನೋಡಿದ್ಯಾ ಅಜ್ಜ ನೀ ಮಾಡಿದ ಒಂದೊಂದು ಕೆಲಸದಲ್ಲೂ ನಿಂದು ಅನ್ನೋದೊಂದಿರ್ತಿತ್ತು. ಅಲ್ಲೇ ನೂರಾರು ಹಂದಿ ಹೊಡೆದವ ಇದ್ರೂ ಬೇಟೆಗಾರ ಅನ್ನಿಸ್ಕೊಲ್ಲಿಲ್ಲ ನೀ ಒಂದ್ ಹುಲಿ ಹೊಡೆದು ಬೇಟೆಗಾರ ಅನ್ನಿಸ್ಕೊಂಡೆ. ಮೊನ್ನೆ ಅಂದ್ರೆ ಮೊನ್ನೆ ಎರಡು ತಿಂಗಳ ಹಿಂದೆ ಅಜ್ಜಿ ಕಳಕೊಂಡ ನನಗೆ ನೀನೊಬ್ಬನೇ ಅಜ್ಜ ಅಂತಾ ಕೊನೆಯದಾಗಿ ಉಳಿದುಕೊಂಡವನು. ನೀನೂ ಇನ್ಮೇಲೆ ನೆನಪು ಮಾತ್ರ. ನಿನ್ನ ಬಗ್ಗೆ, ನಿನ್ನ ಪ್ರೀತಿ ಬಗ್ಗೆ ನಾ ಇಲ್ಲೇನೆ ಬರೆದರೂ ಅದು ಇರುವೆ ಗೂಡಿನ ಹೊರಗೆ ಹರಿದಾಡುವ ನಾಲ್ಕಾರು ಇರುವೆಯಂತೆ. ಇನ್ನೂ ಗೂಡಿನಲ್ಲಿರುವ ಸಹಸ್ರ ಇರುವೆಯಂತೆ ನಿನ್ನ ನೆನಪು, ಆರೈಕೆ, ನಿನ್ನಿಂದ ಕಲಿತದ್ದು ಎಲ್ಲ ನನ್ನೊಳಗೆ ಇನ್ನೂ ಹಸಿರಾಗಿದೆ. ಇದು ಬರೀ ನನ್ನ ಹೃದಯ ಭಾರವನ್ನು ಸ್ವಲ್ಪ ಹೊರ ಹಾಕ್ಲಿಕ್ಕೆ ಬರೆದಿದ್ದಸ್ಟೇ. ಅಜ್ಜ ಈ ಪತ್ರ ಮುಗಿಸುವಾಗ ಆ ದೇವರಲ್ಲಿ ಬೇಡಿಕೊಳ್ಳುವುದೆನೆಂದರೆ ನಿನ್ನ ಮತ್ತು ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಜ್ಜ. ಮತ್ತೊಮ್ಮೆ ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತಿರುವ ನಿನ್ನ ಮೊಮ್ಮಗ ಪ್ರಶಾಂತ.

ಸೋಮವಾರ, ಆಗಸ್ಟ್ 31, 2009

ನಂದಿ ಬೆಟ್ಟ ಕೊಟ್ಟ ಖುಷಿ







ತುಂಬಾ ದಿನದ ಆಸೆಯೊಂದು ಮೊನ್ನೆ ಭಾನುವಾರ ಪೂರ್ತಿಯಾಗಿತ್ತು. ಅದೇನೆಂದರೆ ನಂದಿ ಬೆಟ್ಟ ನೋಡುವುದಾಗಿತ್ತು. ಅದಕ್ಕಾಗಿ ಕಳೆದ ವಾರಾನೇ ಗೆಳೆಯರೆಲ್ಲ ಸೇರಿ ಮುಂದಿನ ಭಾನುವಾರ ನಂದಿಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಿದೆವು. ಅದರಂತೆ ಭಾನುವಾರ ಬೆಳಿಗ್ಗೆ ಸುಮಾರು ಐದೂವರೆಗೆ ಸರಿಯಾಗಿ ಚುಮು ಚುಮು ಚಳಿಯಲ್ಲಿ ಬೈಕ್ ಮಾಡಿಕೊಂಡು ಹೊರಟ್ವಿ. ಜೊತೆಗೆ ಬೆಳಿಗ್ಗೆ ಬೇಗ ಎದ್ದು ಮಾಡಿದ್ದ ಟೊಮ್ಯಾಟೊ ಬಾತ್ ಬೆನ್ನ ಮೇಲಿನ ಬ್ಯಾಗ್ನಲ್ಲಿತ್ತು. ನಮ್ಮನೆಯಿಂದ ನಾನು ಮತ್ತು ನನ್ಗೆಳೆಯ ಚಂದ್ರು ನನ್ ಬೈಕ್ನಲ್ಲಿ, ಹಾಗೆ ಇನ್ನೊಬ್ಬ ನನ್ ಫ್ರೆಂಡ್ ಉಮೇಶನ ಬೈಕ್ನಲ್ಲಿ ಅವನ ಗೆಳೆಯ ಶಶಾಂಕ್ ಇದ್ದ. ಹೀಗೆ ಹೊರಟವರು ಕೆ ಆರ್ ರೋಡ್ ಮೇಲೆ ಮಾರ್ಕೆಟ್ ದಾಟಿ ವಿಧಾನಸೌಧ ನೋಡ್ತಾ ನೋಡ್ತಾ ಮುಂದೆ ಹೆಬ್ಬಾಳದ ಹತ್ತಿರ ಕೊಲಂಬಿಯ ಆಸ್ಪತ್ರೆ ಎದುರಿಗೆ ಬೈಕ್ ನಿಲ್ಲಿಸಿದೆವು. ಅಲ್ಲಿಗೆ ಮತ್ತೈದು ಬೈಕ್ ಬಂದವು. ಅದರಲ್ಲಿ ನನ್ ತಮ್ಮ ಮತ್ತು ನನ್ನತ್ತೆಮಗ ಇಬ್ಬರೇ ನಂಗೆ ಚಂದ್ರುಗೆ ಗೊತ್ತಿದ್ದಿದ್ದು. ಮತ್ತೆಲ್ಲ ನಮಗೆ ಹೊಸ ಪರಿಚಯದವರಾಗಿದ್ದರು. ಅಂದರೆ ಅವರೆಲ್ಲ ಉಮೇಶನ ಫ್ರೆಂಡ್ಸ್. ಅಲ್ಲಿಂದ ಟೀಕುಡಿದು ಹೊರಟ ನಮ್ಮ ತಂಡದಲ್ಲಿ ಏಳು ಬೈಕ್, ಹದಿನಾಲ್ಕು ಜನರ ಪಯಣ ನಂದಿ ಬೆಟ್ಟದ ಕಡೆಗೆ. ಆ ಸುಂದರ ರಸ್ತೆಗೆ ಎಲ್ಲರೂ ಏರ್ ಪೋರ್ಟ್ ರಸ್ತೆ ಅನ್ನೋದು ಸರಿಎನೋ ಅನ್ನಿಸ್ತು. ಕಾರಣ ಅಲ್ಲಿ ಓಡಾಡೋ ಪ್ರತಿಯೊಂದು ವಾಹನಾನು ವಿಮಾನದ ತರಾನೆ ಗುಯ್ನ್ನ್ನ್ ಅಂತಾನೆ ಶಬ್ದ ಮಾಡ್ತಾ ಸುಯ್ನ್ನ್ ಸುಯ್ನ್ನ್ ಅಂತ ಓಡಾಡ್ತವೆ.ಸ್ವಲ್ಪ ಭಯದಲ್ಲೇ ಕೊನೆ ಲೈನ್ ನಲ್ಲಿ ಬೈಕ್ ಓಡಿಸ್ತಿದ್ದ ನನಗೆ ಹಿಂದಿಂದ ದೊಡ್ಡದೊಂದು ಲಾರಿ ಬರ್ತಾ ಇದೆ ಅಂತ ಅನ್ನಸ್ತು. ಅದರ ಶಬ್ದಕ್ಕೆ ಕೊಂಚ ಹೆದರಿ ಇನ್ನೂ ಸ್ವಲ್ಪ ಸೈಡ್ ಗೆ ಹೋದೆ. ಆ ಲಾರಿ ನನ್ ಹಿಂದೇನೆ ಬಂದೇ ಬಿಡ್ತು ಇನ್ನೇನ್ ಮಾಡ್ಲಿ ಅನ್ನೋಸ್ಟ್ ತ್ತಿಗಾಗ್ಲೆ ಆ ಲಾರಿ ಕಣ್ಣಿಗೆ ಕಾಣದ ವೇಗದಲ್ಲಿ ನನ್ನ ದಾಟಿ ಹೋಗಿತ್ತು. ಆದ್ರೆ ಅದು ಲಾರಿಯಾಗಿರಲಿಲ್ಲ ಬದಲಿಗೆ ಬೈಕ್ ರೇಸ್ ನಲ್ಲಿ ಇರುವಂತಹ ಬೈಕ್ ಆಗಿತ್ತು.ಆ ಸಾಹಸಿಗಳು ಮೈಗೆಲ್ಲ ರೊಬೋಟ್ ತರ ಬಟ್ಟೆ ಹಾಕ್ಕೊಂಡಿದ್ರು.ಅವರು ಹೋದ ವೇಗದಿಂದಾಗಿ ನಂಗೆ ಸರಿಯಾಗಿ ಆ ಬೈಕ್ನ ಚಂದ ನೋಡ್ಲಿಕ್ಕು ಆಗ್ಲಿಲ್ಲ. ನಾನ್ ಭಯಪಟ್ಟಿದ್ದು ನನ್ ಹಿಂದೆ ಕೂತಿದ್ ಭೂಪನಿಗೆ ಗೊತ್ತಾಯ್ತೋ ಇಲ್ವೋ ಗೊತ್ತಿಲ್ಲ. ಯಾಕೆ ಅಂದ್ರೆ ನನ್ ಬೈಕ್ ನಲ್ಲಿ ಸದಾ ಜೊತೆಗಿರೋನು ಅಂದ್ರೆ ಈ ಚಂದ್ರುನೇ. ಇವನ ಒಂದ್ ವಿಶೇಷ ಅಂದ್ರೆ ಹಿಂದೆ ಕೂತರೆ ನಾನು ಪದೇ ಪದೇ ಮುಟ್ಟಿನೋಡ್ಬೇಕು ಅವನ್ನ ಕೂತಿದಾನೋ ಇಲ್ವೋ ಅಂತ.ಅಸ್ಟ್ ನೀಟಾಗಿ ಕೂರ್ತಾನೆ.ನಾನೇನಾದ್ರು ಸ್ವಲ್ಪ ಚನ್ನಾಗಿ ಬೈಕ್ ಓಡಿಸ್ತೀನಿ ಅಂದ್ರೆ ಅದು ಇವನು ಹಿಂದೆ ಕೂತಾಗ ಮಾತ್ರ. ಇರಲಿ, ಆ ಸಾಹಸಿಗಳ ಬಗ್ಗೆನೇ .... ಏನ್ ಸ್ಪೀಡಗೊದ್ರೋ ಮಾರಾಯ ಅಂತ ಹೇಳ್ತಾ ಹೇಳ್ತಾ ಏರ್ ಪೋರ್ಟ್ ದಾಟಿ ನಂದಿ ಬೆಟ್ಟದ ಹತ್ರ ಹತ್ರ ಬಂದ್ವಿ. ಆಗಿನ್ನೂ ಆರೂವರೆ ಇರಬಹುದು. ಅಬ್ಬಬ್ಬಾ ಆ ಬೆಟ್ಟ ನೋಡಿದ್ರೆ, ಬೆಟ್ಟದ ತುದಿಗೆ ಸುತ್ತಲೂ ಹೊಗೆಯ ಟೋಪಿ ಧರಿಸಿದ ಹಾಗೆ ಕಾಣಿಸ್ತಿತ್ತು. ಅಸ್ಟೊಂದು ಹಿಮ ಬೀಳ್ತಾ ಇತ್ತು. ನಿದಾನವಾಗಿ ಬೆಟ್ಟದ ಕೆಳಗಿಂದ ಹತ್ತಲು ಪ್ರಾರಂಬಿಸಿ, ತಿರುವುಗಳಲ್ಲಿ ಸಾಗುವಾಗ ಭಯಮಿಶ್ರಿತ ಆನಂದ ಅನುಭವಿಸಿದ್ದು ಮರೆಯಲು ಸಾದ್ಯವಿಲ್ಲ. ಆಶ್ಚರ್ಯ ಅಂದ್ರೆ ಅಲ್ಲೂ ಕೂಡಾ ಮತ್ತದೇ ಗುಂಯ್ ಗುಂಯ್ ಶಬ್ದ. ಈಗ ಮಾತ್ರ ನಮಗೆ ಗೊತ್ತಾಯ್ತು, ಇದು ಅವ್ರೆ ಬೈಕ್ನವರು ಅಂತ.ಆದ್ರೆ ಆ ಹಾವು ಹರಿದಂತಿರುವ ಡೊಂಕು ಡೊಂಕು ರಸ್ತೆಲೂ ಅವರದ್ದು ಅದೇ ವೇಗ. ನೋಡಿ ನಿಜಕ್ಕೂ ಗಾಬರಿಯಾಯಿತು.ಅವರು ಸ್ಪರ್ದೆಗೆ ತಯಾರಿ ನಡೆಸ್ತಾ ಇದ್ರು. ನಂತರ ಬೆಟ್ಟದ ಮೇಲೆ ಹೊದಾಗಲಂತೂ ಚಳೀ ಚಳೀ. ಪೂರ್ತಿ ಮಂಜಿನಿಂದ ಮುಚ್ಚಿಕೊಂಡಿತ್ತು ಬೆಟ್ಟ. ಇದೇನೂ ಮಲೆನಾಡಿನವನಾದ ನನಗೆ ಹೊಸತೆನಲ್ಲದಿದ್ದರೂ ಸಹ ಸದ್ಯಕ್ಕಿದು ಹಳೆಯ ನೆನಪುಗಳನ್ನ ಮತ್ತೆ ಮತ್ತೆ ಕಣ್ಮುಂದೆ ತಂದಿತು. ಇದೇ ಥರದ ಬೆಟ್ಟಗಳು ನಮ್ಮೂರಿನಲ್ಲಿವೆ. "ಕೆಮ್ಮಣ್ಣುಗುಂಡಿ, ಕುಂದಾದ್ರಿ ಬೆಟ್ಟ, ಆಗುಂಬೆ, ಕೊಡಚಾದ್ರಿ. ಬಾಬಾ ಬುಡನ್ಗಿರಿ" ಇವೆಲ್ಲ ನಮ್ಮೂರಿಗೆ ಕೆಲವೇ ಕಿಲೋಮೀಟರುಗಳ ದೂರದವು. ಅವುಗಳನ್ನೆಲ್ಲ ಸ್ನೇಹಿತರ ಜೊತೆಗೆ ಹತ್ತಿಳಿದ ದಿನಗಳು ಅದೆಸ್ಟೋ. ಈ ನಂದಿ ಬೆಟ್ಟವು ಸಹ ಅಸ್ಟೇ ಸುಂದರವಾದ ಬೆಟ್ಟ. ಈಗ ನಮ್ಮದು ಬೆಟ್ಟ ಸುತ್ತುವ ಸರದಿ. ಮೊದಮೊದಲು ಕಂಡಿದ್ದೇ ಆ ದೊಡ್ಡ ಸುಂದರ ಕೆರೆ. ನಿಜಕ್ಕೂ ಸುಂದರವಾಗಿದೆ. ಆಮೇಲೆ ಉದ್ಯಾನ ವನ, ಬಂಡೆಗಲ್ಲು, ಮರಗಿಡ, ಮೊಖವಿಸ್ಮಿತರನ್ನಾಗಿಸುವ ದೇವಸ್ಥಾನಗಳು ಮನಸ್ಸಿಗೆ ಉಲ್ಲಾಸ ತಂದವು. ಆದರೆ ವಿಪರೀತ ಅನ್ನಿಸಿದ್ದು ಅಲ್ಲಿನ ಕೋತಿಗಳ ಅತೀ ಎನ್ನಿಸುವ ಒಗ್ಗಟ್ಟು ಮತ್ತು ಕಿತ್ತು ತಿನ್ನುವ ಬುದ್ದಿ. ಹೌದು, ಅವು ನಾವು ತೆಗೆದುಕೊಂಡು ಹೋಗಿದ್ದ ತಿಂಡಿನ ಯಾರದ್ದೂ ಅನುಮತಿ ಇಲ್ಲದೆ, ಭಯವೂ ಇಲ್ಲದೇ ಕಿತ್ತು ತಿಂದು ಮುಗಿಸಿದವು. ಆಮೇಲೆ ಅಲ್ಲಿಂದ ಭಯಾನಕ ಟಿಪ್ಪೂ ಡ್ರಾಪ್ ನೋಡಿಕೊಂಡು ಕೆಲವೊಂದು ಫೋಟೋ ತೆಗೆದುಕೊಂಡು ನಂದಿ ಬೆಟ್ಟದ ಕೆಳಗೆ ಬರುವಾಗಲೇ ಸ್ವಲ್ಪ ದಣಿವಾದಂತೆ ಆಗಿದ್ದೆವು. ಬೆಟ್ಟದ ಕೆಳಗೆ ಬಂದು ಟೀ ಕುಡಿಯುತ್ತಿರುವಾಗ ಸಮಯ ಸುಮಾರು ಹನ್ನೆರಡು ಘಂಟೆ ಅನ್ನಿಸತ್ತೆ, ಆಗ ಕಂಡಂತ ದೃಶ್ಯ ಚನ್ನಾಗಿತ್ತು. ಅದೇನೆಂದರೆ ನಂದಿಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಬೈಕ್ ನಲ್ಲಿ ಹುಡುಗ ಹುಡುಗಿಯರ ಜೋಡಿಯಿತ್ತು. ಆಗ ಅನ್ನಿಸಿದ್ದೇನೆಂದರೆ ನಾವು ಬೇಗ ಬೆಟ್ಟ ಇಳಿದು ಬಂದೆವ? ಅಂತ. ಇರಲಿ ಈ ಪ್ರವಾಸ ನನಗಂತೂ ವಿಶೇಷ ಅನ್ನಿಸಿದ್ದು, ಮುಂದಿನ ಬೇರೆ ಸುಂದರ ಸ್ಥಳದ ಹುಡುಕಾಟದಲ್ಲಿ ನಾವಿದ್ದೇವೆ. ನೀವೂ ಒಮ್ಮೆ, ಮತ್ತೊಮ್ಮೆ ಸಮಯ ಮಾಡಿಕೊಂಡು ನಂದಿ ಬೆಟ್ಟಕ್ಕೆ ಹೋಗಿಬನ್ನಿ. ಆ ರೋಮಾಂಚನದ ಸವಿ ನೀವೇ ಅನುಭವಿಸಿ.

ಮಂಗಳವಾರ, ಜುಲೈ 28, 2009

ಸ್ನೇಹ ಅಂದರೆ.......

ಮನಸು ಮೌನವಾದಾಗ
ಮಾತು ಬಾರದಾದಾಗ
ಮಾನ ಹೋಗುವಂತಿರುವಾಗ
ಸಿಗುವ ಮುತ್ತಿನಂಥ ಮಾತೇ ಸ್ನೇಹ.

ಗೆದ್ದಾಗ ಗಮನಿಸುವ
ಸೋತಾಗ ಸಂತೈಸುವ
ಸತ್ತಾಗ ಸ್ಮರಿಸುವ
ಆ ಜೀವದ ಹೃದಯವೇ ಸ್ನೇಹ.

ಭಾವನೆಯಲ್ಲಿನ ಭವ್ಯತೆಯನ್ನ
ಕಣ್ಣುಗಳಲ್ಲಿನ ಕನಸುಗಳನ್ನ
ಕನಸುಗಳಲ್ಲಿನ ಕವನಗಳನ್ನ
ಬರೆಯಲು ಸಿಗುವ ಸ್ಪೂರ್ತಿಯೇ ಸ್ನೇಹ.

ಸಾಧನೆ ಮಾಡಲು ಸೇತುವೆಯನ್ನ
ಸಮಸ್ಯೆ ಬಂದಾಗ ಸಹಕಾರವನ್ನ
ಸಿಟ್ಟು ಬಂದಾಗ ಸಂಯಮವನ್ನ
ತೋರಿಸುವ ಕೈಗಳೇ ಸ್ನೇಹ.

ಸುಮ್ ಸುಮ್ನೆ ಸಡಿಲವಾಗದ
ಚಂಗ್ ಚಂಗನೆ ಬಂದು ಹೋಗದ
ನಿಶ್ಚಲವಾದ, ಅಚಲವಾದ, ಶುಭ್ರವಾದ
ಈ ನಮ್ಮ ಬಾಂಧವ್ಯವೇ ಸ್ನೇಹ.

ಮನದ ಗೆಳತಿ

ನೀ ಇಬ್ಬನಿಯಾದರೆ
ನಾ ಗರಿಕೆಯಾಗುವೆ ಗೆಳತಿ
ಸದಾ ಶೋಭಿಸುತ್ತಿರು ನನ್ನ ಶಿರದ ಮೇಲೆ.

ನೀ ತಾರೆಯಾದರೆ
ನಾ ಬಾನಾಗುವೆ ಗೆಳತಿ
ಸದಾ ಮಿನುಗುತ್ತಿರು ನನ್ನಲ್ಲೇ.

ನೀ ಚುಕ್ಕೆಯಾದರೆ
ನಾ ಜಿಂಕೆಯಾಗುವೆ ಗೆಳತಿ
ಸದಾ ಮಿಂಚುತ್ತಿರು ನನ್ನ ಮೈಮೇಲೆ.

ನೀ ತಾವರೆಯಾದರೆ
ನಾ ತೊರೆಯಾಗುವೆ ಗೆಳತಿ
ಸದಾ ಅರಳಿ ನಿಂತಿರು ನನ್ನ ಎದೆ ಮೇಲೆ

ನೀ ಮೀನಾದರೆ
ನಾ ಸಾಗರವಾಗುವೆ ಗೆಳತಿ
ಸದಾ ನೀ ಆಡುತ್ತಿರು ನನ್ನ ಒಡಲಲ್ಲೇ

ಅನಾಹುತಗಳ ಸರಮಾಲೆ

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.

ಮಾನವನ ಸುತ್ತ ಅನಾಹುತಗಳ ಸರಮಾಲೆ
ಆದರೂ ಪ್ರಪಂಚವ ನೋಡುವನು ಕಾಮಾಲೆ ಕಣ್ಣಲ್ಲೇ
ಮಾಡುವುದೆಲ್ಲ ದೂರದೃಷ್ಟಿಯಿಂದಲೇ
ಆದರೆ ಆಗುವುದೆಲ್ಲ ದುರಾದ್ರುಸ್ಟದಲ್ಲೇ

ಮಾನವ ಹಾರಾಡುವುದು ವಿಮಾನದಲ್ಲೇ
ಆಗ ಹೇಳುತ್ತಾನೆ ಸ್ವರ್ಗ ಇಲ್ಲೇ ಮೇಲೆ
ಅನಾಹುತವಾದಾಗ ಮದ್ಯದಲ್ಲೇ
ಅವನ ಸಾವು ವಿಮಾನ ಬಿದ್ದ ಸ್ತಳದಲ್ಲೇ.

ಮಾನವನ ಜೀವನ ಸಾಗುವುದು ಬೆಳಕಲ್ಲೇ
ಅದಕ್ಕಾಗಿ ಹರಡಿರುವನು ತಂತಿಯ ಮಾಲೆ
ವಿದುತ್ ಎನ್ನುವ ಮಿಂಚು ಅದರ ಮೇಲೆ
ಕೊಂಚ ಎಚ್ಚರ ತಪ್ಪಿದರೆ ಸಾವು ಕ್ಷಣದಲ್ಲೇ

ಮಾನವ ಈಗ ತಿರುಗಾಡುವುದೆಲ್ಲಕಾರಲ್ಲೇ
ಅದೂ ಘಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲೇ
ಅಪ್ಪಿತಪ್ಪಿ ಕಣ್ಣು ಮುಚ್ಚಿದರೆ ತೂಕಡಿಕೆಯಲ್ಲಿ
ಮತ್ತೆ ಕಣ್ಣು ತೆರೆಯುವುದು ಪರಲೋಕದಲ್ಲೇ.

ಮಾನವನು ಆಹಾರ ಬೆಳೆಯುವುದು ಕಲ್ಮಶದಲ್ಲೇ
ಹೀಗಾಗಿ ಅವನ ಹೊಟ್ಟೆಯೂ ತುಂಬಿರುವುದು ವಿಷದಲ್ಲೇ
ಆದ್ದರಿಂದ ವರ್ಷವಿಡೀ ನರಳುವನು ರೋಗದಲ್ಲೇ
ಅದು ಕೊನೆಯಾಗುವುದು ಆತನ ಸಾವಿನಲ್ಲೆ.

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.



ಏಕೆ ಹೀಗೆ?

ಮನಸ್ಸಿಗೆ ಬೇಜಾರಾಗಿದೆ
ಹೃದಯ ಭಾರವಾಗಿದೆ
ದೇಹ ನಿಶ್ಚಲವೆನಿಸಿದೆ
ದುಃಖ ಉಮ್ಮಳಿಸುತ್ತಿದೆ
ಏಕೆ ಹೀಗೆ?

ಕಣ್ಣು ಕಾಣದಾಗಿದೆ
ಕಿವಿ ಕೇಳದಾಗಿದೆ
ಕೈ ಆಡದಾಗಿದೆ
ಕಾಲು ನಡುಗುತಲಿದೆ
ಏಕೆ ಹೀಗೆ?

ಊಟ ಸೇರದಾಗಿದೆ
ನೀರು ಬೇಡವಾಗಿದೆ
ಬಾಯಿ ಒಣಗಿ ಹೋಗಿದೆ
ನಾಲಿಗೆ ಸಪ್ಪೆಯಾಗಿದೆ
ಏಕೆ ಹೀಗೆ?

ನೆನಪು ಕಹಿಯಾಗಿದೆ
ಮಾತೆ ಬಾರದಾಗಿದೆ
ಪ್ರೀತಿ ಇಲ್ಲದಾಗಿದೆ
ಜೀವನ ಬೇಡವಾಗಿದೆ
ಏಕೆ ಹೀಗೆ?

ಜೀವನವೆಂದರೆ ಇದೇನಾ?
ಇದು ಜೀವನದ ಭಾಗ ಮಾತ್ರಾನಾ?
ಇದು ಒಂದೆರಡು ಗಳಿಗೆ ಮಾತ್ರಾನಾ?
ಜೀವನಪೂರ್ತಿ ಇದೇನಾ?
ಬದಲಾಗುವುದು ಹೇಗೆ?

ಶಿವರಾತ್ರಿಯ ಸುಂದರಿ

ಶಿವರಾತ್ರಿಯ ದಿನದಂದು
ನೀ ಬಂದೆ ಪೂಜೆಗೆಂದು
ಹೂ, ಹಣ್ಣು, ಕಾಯಿ ಹಿಡಿದು
ನಿಂತಿದ್ದೆ ನೀ ಕೈ ಮುಗಿದು.

ಪೂಜೆ ಮಾಡುವ ಸಲುವಾಗಿ
ನನ್ನ ನೀ ಕರೆದೆ ಮೆಲುವಾಗಿ
ನಿನ್ನಂದಕ್ಕೆ ನಾ ಮರುಳಾಗಿ
ಪೂಜೆ ಮಾಡಿದೆ ಪೂಜಾರಿಯಾಗಿ.

ನಿನ್ನ ನೋಡಿದ ಆ ಹೊತ್ತು
ನನ್ನ ಹೃದಯ ಹಾರಿಹೋಯ್ತು
ನಿನಗಾಗಿ ಹಂಬಲಿಸುತ್ತ
ಹುಡುಕಾಡಿದೆ ಸುತ್ತಾ ಮುತ್ತಾ .

ನೀ ಅಲ್ಲೇ ಪಕ್ಕದಲ್ಲೇ ನಿಂತಿದ್ದೆ
ನಾ ನಿನ್ನೆ ಗಮನಿಸುತಿದ್ದೆ
ನೀ ನನ್ನ ಮನಗೆದ್ದೆ, ಹೃದಯ ಕದ್ದೆ
ನಾ ನಿನ್ನ ಪ್ರೀತಿಯ ಬಲೆಗೆ ಬಿದ್ದೆ.

ಆಮೇಲೆರಡು ಬಾರಿ ಆಯಿತು
ನಮ್ಮಿಬ್ಬರ ಭೇಟಿ
ನಾಚಿಕೆಯ ದಾಟಿ, ಭಾವನೆಗಳ ಮೀಟಿ
ಸೇರಿಸಿದೆವು ನಾವಿಬ್ಬರೂ ತುಟಿಗೆ ತುಟಿ.

ಆಮೇಲೆಏನಾಯ್ತೆ ನಮಗೆ ಗೆಳತಿ
ಹೃದಯದಲ್ಲೈತೆ ಈ ಪ್ರೀತಿ
ಅದಕ್ಕಡ್ಡಿ ನಮ್ಮಿಬ್ಬರ ಜೀವನ ರೀತಿ
ಸುದಾರಿಸಲಿ ಈ ರೀತಿ ನೀತಿ.

ನನಗಾಗಿ ನೀ ಬರುವೆ
ಅಂತಾ ನಾ ಕಾದಿರುವೆ
ನನ್ನ ಹೃದಯ ನೀನಾಗಿರುವೆ
ನಿನಗಾಗಿ ನಾ ಕಾದಿರುವೆ.