ಅಜ್ಜ, ಹೇಗಿದ್ದೀಯ? ಹೇಗಿದೆ ನಿನ್ ಪ್ರಪಂಚ. ಅಲ್ಲೆಲ್ರೂ ನಿನ್ನ ಏನಂತ ಮತಾಡ್ಸಿದ್ರು. ನನ್ನಜ್ಜಿ ಹೇಗಿದಾಳೆ. ಮೊನ್ನೆ ಭಾನುವಾರ ರಾತ್ರಿ ಮಾವ ಫೋನ್ ಮಾಡಿದ್ದ. ನಿಂಗೆ ಹುಷಾರಿಲ್ಲ ಇನ್ನೊಂದು ಸಾರಿ ಬಂದು ನೋಡ್ಕೊಂಡ್ ಮಾತಾಡ್ಸ್ಕೊಂಡ್ ಹೋಗು ಅಂತ ಅಂದಿದ್ದ. ನಿಂಗೊತ್ತಾ ಅವತ್ತೇ ರಾತ್ರಿ ನಾ ಹೊರಟು, ಶಿವಮೊಗ್ಗ ರೈಲು ಹತ್ತಿಯಾಗಿತ್ತು. ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಾಗ ಆರೂವರೆಯಾಗಿತ್ತು. ಮಾವ ಹೇಳಿದ್ದ, ಬೆಳಿಗ್ಗೆ ಏಳೂವರೆಗೆ ಬಸ್ಸಿದೆ ಅಂತ. ಆದ್ರೆ ಯಾವ ಬಸ್ಸು ಅಂತ ನಾನೂ ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಅದಿಕ್ಕೆ ಮತ್ತೆ ಫೋನ್ ಮಾಡಿದಾಗಲೇ ಮಾವ ಸರಿಯಾಗಿ ಹೇಳಿದ್ದು. ಏಳೂವರೆಗೆ ಗಣೇಶ ಬಸ್ಸಿದೆ, ನೀನು ಅಲ್ಲೇ ಹೂವು ಹಿಡ್ಕೊಂಡ್ ಬಾ. ಅಜ್ಜ ರಾತ್ರೀನೇ ಎರಡೂವರೆಗೆ ತೀರ್ಕೊಂಡಿದಾರೆ ಅಂತ. ತುಂಬಾ ನೋವಾಯ್ತು ಅಜ್ಜ. ಆ ಕ್ಷಣ ಏನೇನೋ ನೆನಪಾಯ್ತು. ನಾ ಹುಟ್ಟಿದಾಗಿನಿಂದ ನಿನ್ನ ಮನೇಲಿ, ನಿಮ್ಮೆಲ್ಲರ ಜೊತೆಗೆ ಬೆಳೆದವನು. ಅದರಲ್ಲೂ ನಿನ್ನ ಪ್ರೀತಿ, ಕೋಪ ಎಲ್ಲಾ ನೋಡಿದವನು, ಅನುಭವಿಸಿದವನು. ಅದೆಸ್ಟು ಸಲ ನೀ ನನ್ನ ಸ್ನಾನ ಮಾಡಿಸಿಲ್ಲ, ಅದೆಸ್ಟು ಸಲ ನಿನ್ನ ಹೆಗಲ ಮೇಲೆ ಕೂತು ತೋಟ, ಗದ್ದೆ, ಅಸ್ಟೇ ಏಕೆ ಶನಿವಾರ ಶನಿವಾರ ದಿನ ಮಾತ್ರ ಕಟ್ಟಿಂಗ್ ಮಾಡಿಸ್ಕೊಲ್ಲೋದಿಕ್ಕು ನಿನ್ನ ಹೆಗಲ ಮೇಲೆ ನನ್ ಸವಾರಿ. ನಿನ್ ಜೊತೆ ಆ ಭಯಂಕರ "ಕಾನುಮನೆ ಕಾನು, ಹನ್ದೊಲ್ಲಿ ಕಾನಲ್ಲಿ" ಗಬ್ಬದ ದನ ಕರು ಹಾಕಿತ್ತು ಅಂತ ರಾತ್ರಿ ಹಗಲೆಲ್ಲ ಹುಡ್ಕಿದ್ದು, ಇಬ್ಬರೇ ಬ್ಯಾಣದಲ್ಲಿ ಎಮ್ಮೆ, ಎತ್ತಿನ ಮೆಯಿಸಿದ್ದು, ಆಗ ನೀ ನನ್ಗೆಸ್ಟು ಪೆಟ್ಲೆ, ಬುಗುರಿ, ಚಿನ್ನಿದಾಂಡು, ಬಾರುಕೋಲು, ಗಾಡಿ, ಗಾಡಿಚಕ್ರ, ಗಿರಿಗಿಟ್ಲೆ ಇನ್ನೂ ಏನೇನೋ ಆಟದ ವಸ್ತುಗಳನ್ನ ಮಾಡಿಕೊಟ್ಟಿದ್ದೆ. ಅದೇನೂ ಒಂದೆರಡು ಬಾರಿಯಲ್ಲ ಪದೇ ಪದೇ. ಹಾಗೆ ಅದನ್ನ ಹಾಳು ಮಾಡಿಕೊಂಡಾಗ ನೀ ಕೊಟ್ಟ ಅದೇ ಬಾರುಕೊಲಿನ ಎಟುಗಳೂ ನೆನಪಾಯ್ತು. ನಿನ್ನೊಂದಿಗೆ ದೇವಸ್ಥಾನಗಳಿಗೆ ಸುತ್ತಾಡಿದ್ದು ನೆನಪಾಯ್ತು. ನಿನ್ನ ದೈವಭಕ್ತಿ, ಹಬ್ಬದ ದಿನಗಳಲ್ಲಿ ನಿನ್ನ ಸಂಬ್ರಮದ ಹಾಗು ಅಚ್ಚುಕಟ್ಟು ಆಚರಣೆ, ಶನಿವಾರದ ಒಪ್ಪೊತ್ತು, ಅವತ್ತಿನ ಪೂಜೆಯಲ್ಲಿ ಹಣೆ, ಮೈಗೆಲ್ಲ ನಾಮ ಹಾಕ್ಕೊಂಡಾಗ ನನಗೂ ಜೊತೆ ಕೂರಿಸಿಕೊಂಡು ನಿನ್ನಂತೆ ನಂಗೂ ಹಚ್ಚುತ್ತಿದ್ದೆ. ಇಂಥವೇ ಕೆಲವೊಂದು ವಿಚಾರಗಳನ್ನ ನಾನು ಚಿಕ್ಕವನಿದ್ದಾಗ ನಿನ್ನನ್ನೇ ಅನುಕರಿಸುತ್ತಿದ್ದೆ, ಅನುಸರಿಸುತ್ತಿದ್ದೆ. ನಿನ್ನ ದೈತ್ಯ ದೇಹ, ಗಾಂಭೀರ್ಯ, ಅಚ್ಚುಕಟ್ಟು, ಸ್ವಚ್ಛತೆ, ಸರಳತೆ ಜೋತೆಗೊಂದಿಸ್ಟ್ ಸಿರಿತನದ ಗತ್ತು ಇದೆಲ್ಲ ಒಂದೆರಡು ಕ್ಷಣದಲ್ಲೇ ಕಣ್ಣೀರ ಹನಿಯೊಳಗೆ ನೆನಪಾಗಿ ಜಾರಿದವು. ನೋವಿದ್ದರೂ ತೋರಗೊಡದೆ ಸಹಜವಾಗಿ ಮನೆಯೊಳಗೆ ಬಂದು ನಿನ್ನ ಉಸಿರಿಲ್ಲದ ದೇಹ ನೋಡಿದಾಗ ಬದುಕು ಇಸ್ಟೇನಾ? ಅಂತನ್ನಿಸಿತು. ನಿನ್ನ ನೋಡಿ ಭಾರವಾದ ಎದೆ ಹೊತ್ತುಕೊಂಡು ಹೊರ ಬರುವಾಗ, "ಇವನು ಬಾಳಾ ಗಟ್ಟಿಗಸ್ತ. ಸಿಕ್ಕಾಪಟ್ಟೆ ಧೈರ್ಯದ ಮನುಷ್ಯ. ದೊಡ್ಡ ಜೀವ ಬೇರೆ. ಪ್ರಾಯದಲ್ಲಿ ಒಂದು ಸರಿಯಾದ 'ಹುಲಿ' ಹೊಡೆದಿದ್ದ. ಅದನ್ನ ಇವನ ಜೊತೆ ಗಾಡಿ ಮೇಲೆ ಇಟ್ಟು ಊರ ತುಂಬಾ ಮೆರವಣಿಗೆ ಮಾಡಿದ್ವಿ. ಅಂಥಾ ಬೇಟೆಗಾರ" ಎಂಬ ಮಾತು ಕಿವಿಗೆ ಬಿತ್ತು. ತಿರುಗಿ ಆ ಕಡೆ ನೋಡಿದ್ರೆ ನಿನಗಿಂತಾ ಚಿಕ್ಕವರಾದ್ರೂ ಕೂಡಾ ಅಜ್ಜನ್ದಿರೆ ಆಗಿದ್ದವರೆಲ್ಲ ಒಂದು ಕಡೆ ಕೂತು ನಿನ್ನ ಬಗ್ಗೆ ಮಾತಾಡ್ತಾ ಇದ್ರು. ನೋಡಿದ್ಯಾ ಅಜ್ಜ ನೀ ಮಾಡಿದ ಒಂದೊಂದು ಕೆಲಸದಲ್ಲೂ ನಿಂದು ಅನ್ನೋದೊಂದಿರ್ತಿತ್ತು. ಅಲ್ಲೇ ನೂರಾರು ಹಂದಿ ಹೊಡೆದವ ಇದ್ರೂ ಬೇಟೆಗಾರ ಅನ್ನಿಸ್ಕೊಲ್ಲಿಲ್ಲ ನೀ ಒಂದ್ ಹುಲಿ ಹೊಡೆದು ಬೇಟೆಗಾರ ಅನ್ನಿಸ್ಕೊಂಡೆ. ಮೊನ್ನೆ ಅಂದ್ರೆ ಮೊನ್ನೆ ಎರಡು ತಿಂಗಳ ಹಿಂದೆ ಅಜ್ಜಿ ಕಳಕೊಂಡ ನನಗೆ ನೀನೊಬ್ಬನೇ ಅಜ್ಜ ಅಂತಾ ಕೊನೆಯದಾಗಿ ಉಳಿದುಕೊಂಡವನು. ನೀನೂ ಇನ್ಮೇಲೆ ನೆನಪು ಮಾತ್ರ. ನಿನ್ನ ಬಗ್ಗೆ, ನಿನ್ನ ಪ್ರೀತಿ ಬಗ್ಗೆ ನಾ ಇಲ್ಲೇನೆ ಬರೆದರೂ ಅದು ಇರುವೆ ಗೂಡಿನ ಹೊರಗೆ ಹರಿದಾಡುವ ನಾಲ್ಕಾರು ಇರುವೆಯಂತೆ. ಇನ್ನೂ ಗೂಡಿನಲ್ಲಿರುವ ಸಹಸ್ರ ಇರುವೆಯಂತೆ ನಿನ್ನ ನೆನಪು, ಆರೈಕೆ, ನಿನ್ನಿಂದ ಕಲಿತದ್ದು ಎಲ್ಲ ನನ್ನೊಳಗೆ ಇನ್ನೂ ಹಸಿರಾಗಿದೆ. ಇದು ಬರೀ ನನ್ನ ಹೃದಯ ಭಾರವನ್ನು ಸ್ವಲ್ಪ ಹೊರ ಹಾಕ್ಲಿಕ್ಕೆ ಬರೆದಿದ್ದಸ್ಟೇ. ಅಜ್ಜ ಈ ಪತ್ರ ಮುಗಿಸುವಾಗ ಆ ದೇವರಲ್ಲಿ ಬೇಡಿಕೊಳ್ಳುವುದೆನೆಂದರೆ ನಿನ್ನ ಮತ್ತು ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಜ್ಜ. ಮತ್ತೊಮ್ಮೆ ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತಿರುವ ನಿನ್ನ ಮೊಮ್ಮಗ ಪ್ರಶಾಂತ.
ಮಂಗಳವಾರ, ಸೆಪ್ಟೆಂಬರ್ 22, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)