ಮಂಗಳವಾರ, ಅಕ್ಟೋಬರ್ 20, 2009

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... !

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ! ಆಶ್ಚರ್ಯ ಆಗ್ತಾ ಇದ್ದೀಯ? ಆಶ್ಚರ್ಯ ಪಡೊಂಥದ್ದೆನಿಲ್ಲ ನಿಜವಾಗಿಯೂ ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ಕಂಡ್ರೀ.

ಪೀ ಯೂ ಸಿ ಓದೋವಾಗ ಸುಮಾರು ಹತ್ತು ವರ್ಷಗಳ ಹಿಂದೆ ನನಗೊಬ್ಬಳು ಆತ್ಮೀಯ ಗೆಳತಿ ಇದ್ದಳು. ಅವಳು ಮೊದಮೊದಲು ಅಸ್ಟೊಂದು ಹತ್ತಿರವಾಗಿರದಿದ್ದರೂ ಸಹ ನಂತರದ ದಿನಗಳಲ್ಲಿ ತುಂಬಾನೆ ಆತ್ಮೀಯಳಾದಳು. ಇದಕ್ಕೆ ಕಾರಣ ಆ ಕಾಲೇಜಿನ ವಾತಾವರಣ, ನಮ್ಮ ಆಟ, ಹಾರಾಟ, ತಲೆಹರಟೆ, ಏನ್ ಎಸ್ ಎಸ್, ಮತ್ತೆ ಆ ಒಂಬತ್ತು ದಿನಗಳ ತಮಿಳುನಾಡು ಪ್ರವಾಸ ಕಾರಣವಿರಬಹುದು. ಈ ರೀತಿಯಲ್ಲೆಲ್ಲೋ ಪರಿಚಯವಾದ ನಮ್ಮ ಗೆಳೆತನ ಅತ್ಯಂತ ಸಮೃದ್ಧವಾಗಿ ಬೆಳೆದು ಇಂದಿಗೂ ಹಾಗೇ ಇದೆ. ಆಗೊಮ್ಮೆ ಈಗೊಮ್ಮೆ ಫೋನ್ ಮಾಡುವ ಮೂಲಕ ಮಾತನಾಡುತ್ತೇವೆ. ಆ ನನ್ನ ಗೆಳತಿ ಅತ್ಯಂತ ಬುದ್ದಿವಂತೆ. ಅವಳ ನಗು, ಮುಗ್ಧ ಮುಖ, ಹಾಗೂ ಅವಳ ಮಾತು ನಮಗೆಲ್ಲರಿಗೂ ಇಸ್ಟಾನ್ದ್ರೆ ಇಷ್ಟ. ಅದರಲ್ಲೂ ನನಗಂತೂ ತುಂಬಾನೆ ಇಷ್ಟ. ಹೇಗ್ಹೇಗೋ ನಾವಿಬ್ರೂ ಸಖತ್ ಫ್ರೆಂಡ್ಸ್ ಆದ್ವಿ. ಅವಳಿಗೆ ನಾನು ತುಂಬಾನೆ ಗೌರವ ಕೊಡ್ತಾ ಇದ್ದೆ. ನಮ್ಮ ಜೊತೆಗೆ ಇನ್ನೂ ತುಂಬಾ ಜನ ಇದ್ರೂ. ಅವರೂ ಸಹ ನಮ್ಮ ಫ್ರೆನ್ದ್ಸೆ ಆಗಿದ್ರು. ಆದರೂ ಅವರೆಲ್ಲರಿಗಿಂತ ಈ ಹುಡುಗಿ ಸ್ವಲ್ಪ ಹೆಚ್ಚು. ಯಾಕೆ ಅಂತಾ ಇನ್ನೂ ಗೊತ್ತಿಲ್ಲ. ನಮ್ಮಿಬ್ಬರ ಗೆಳೆತನದಲ್ಲಿ ಪ್ರೀತಿ ಇತ್ತಾ? ಪ್ರೀತಿ ಅನ್ನೋದೇನಾದ್ರೂ ಗೆಳೆತನದ ಮುಖವಾಡ ಹಾಕ್ಕೊಂಡಿತ್ತಾ? ಪ್ರೀತಿ ಗೆಳೆತನ, ಗೆಳೆತನ ಪ್ರೀತಿ ಅಂತಾ ಜಪಿಸೋ ವಯಸ್ಸಿನ ಕಿತಾಪತಿ ಏನಾದರೂ......! ಉಹೂ ...... ಹಾಗೇನೂ ಇಲ್ಲ. ಅದು ನಿಜವಾದ ಸ್ನೇಹಾನೆ ಆಗಿತ್ತು ಅನ್ಸತ್ತೆ. ಅದಕ್ಕೇನೆ ನಾವಿಬ್ರೂ ಇಂದಿಗೂ ಯಾವುದೇ ಮುಜುಗರ ಇಲ್ಲದೆ ನಿರಾಳವಾಗಿ, ಆತ್ಮೀಯತೆಯಿಂದ ಮಾತಾಡ್ಲಿಕ್ಕೆ ಸಾದ್ಯವಾಗಿರೋದು. ಆದ್ರೆ ಅದೇನೋ ಗೊತ್ತಿಲ್ಲ ಆ ದಿನ ನಾನು ನನ್ನ ಈ ಮೇಲ್ ಐಡಿ ಕ್ರಿಯೇಟ್ ಮಾಡೋವಾಗ ಪಾಸ್ವರ್ಡ್ ಗೆ ದಿಡೀರ್ ಅಂತ ಅವಳ ಹೆಸರೇ ಬಂತು. ಆ ಗಟ್ಟಿ ಸ್ನೇಹದ ಕುರುಹಿಗಾಗಿ ಅನ್ಸತ್ತೆ. ನಾನೂ ಅದೇ ಹೆಸರನ್ನ ಹಾಕಿದೆ. ಅದರಲ್ಲೇನಾದ್ರೂ ತಪ್ಪಿದೆಯ? ಅದಕ್ಕೆ ಶಾಶ್ವತವಾಗಿ ಅದೇ ಹೆಸರೇ ಇತ್ತು. ಹೀಗಿರುವಾಗ ಮೊನ್ನೆ ನನ್ನ ಅಜ್ಜಿ ಊರಿನ, ಪಿ ಯೂ ಸಿ ಗೆಳೆಯ ಒಬ್ಬ ಸಿಕ್ಕಿದ. ಸಿಕ್ಕಿದವನೇ ಹೇ ನಿನ್ನ ಫ್ರೆಂಡ್ ........ಗೆ ಮದುವೆ ಕಣೋ ಅಂದ. ಯಾರಿಗೋ ಅಂತ ನಾ ಕೇಳಿದ್ದಕ್ಕೆ, ಅವ ಹೇಳಿದ್ದು ನನ್ ಪಾಸ್ವರ್ಡ್ ಹೆಸರನ್ನೇ. ಹೌದೇನೋ .....? ತುಂಬಾ ಖುಷಿ ಆಗ್ತಿದೆ ಕಣೋ. ಮತ್ತೆ ಅವ್ಳು ಹೇಳಲೇ ಇಲ್ಲಾ ಅಂತಾ ಅವ್ನಿಗೆ ನಗು ನಗುತಾ ಹೇಳಿದ್ರೂ ಸಹ ಒಳಗೆಲ್ಲೋ ಸ್ವಲ್ಪ ನೋವಾಗ್ತಾ ಇತ್ತು. ಯಾಕೆ ಅಂತಾನೆ ಗೊತ್ತಾಗ್ಲಿಲ್ಲ. ಆಗೆಲ್ಲಾ ಮತ್ತದೇ ಯೋಚನೆ ನಮ್ ಗೆಳೆತನ ಏನಾದರೂ, ಎಲ್ಲಾದ್ರೂ "ಒಂದ್ ಕಣ್ಣನ್ನ" ಮಿಟುಕಿಸಿತ್ತಾ.....? ಅಂತಾದ್ದೇನೂ ಗೊತ್ತಾಗ್ಲಿಲ್ಲಪ್ಪ. ಇರಲಿ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಆತ್ಮೀಯ ಗೆಳತಿಯ ಹೆಸರು ನನ್ನ ಈ ಮೇಲ್ ಐಡಿ ಗೆ ಪಾಸ್ವರ್ಡ್ ಆಗಿ ನನ್ನ ಕೈ ಬೆರಳುಗಳ ತುದಿಯಲ್ಲಿ ಕುಣೀತಾ ಇದ್ಲು. ಆದ್ರೆ ಈಗ ನನ್ನ ಪಾಸ್ ವರ್ಡ್ ಗೆ ಮದುವೆ ಇದೆ. ಹಾಗಾಗಿ ಅನಿವಾರ್ಯವಾಗಿ ಆ ಗೆಳತಿ ಹೆಸರನ್ನ ಭಾರವಾದ ಹೃದಯದಿಂದ ತೆಗೆದು ಬೇರೊಂದು ಹೆಸರು ಪಾಸ್ ವರ್ಡ್ ರೀತಿಯಲ್ಲಿ ಈಗಾಗ್ಲೇ ನನ್ನ ಬೆರಳುಗಳನ್ನ ಬಲವಂತವಾಗಿ ಕುಣಿಸ್ತಾ ಇದೆ.

ಏನೇ ಇರಲಿ ನನ್ನ ಪಾಸ್ ವರ್ಡ್ ನ ಮದುವೆಗೆ ನೀವೆಲ್ಲ ತುಂಬು ಹೃದಯದಿಂದ ಹಾರೈಸುತ್ತೀರಾ ಅಂತ ಭಾವಿಸಿದಿನಿ. ಹ್ಞಾ.......ನೆನಪಿರಲಿ, ಆಗಮನ ಮತ್ತು ಆಶೀರ್ವಾದವೇ ಉಡುಗೊರೆ

ಅಪ್ಪಾ...... ನನ್ನ ಕೈ ಬೆರಳುಗಳು ಮತ್ತೆ ಬೆಳೆಯೋದು ಯಾವಾಗ?

ಒಬ್ಬ ವ್ಯಕ್ತಿ ಒಂದು ದಿನ ತನ್ನ ಕಾರನ್ನ ತೊಳೀತಾ ಇದ್ದ. ಆಗ ಅಲ್ಲೇ ಇದ್ದ ಅವನ ನಾಲ್ಕು ವರ್ಷದ ಮಗ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಒಂದು ಮೂಲೆಯಲ್ಲಿ ಗೀಚುತ್ತಾ ಇದ್ದ. ಅದನ್ನ ನೋಡಿ ತಂದೆಗೆ ವಿಪರೀತ ಕೋಪ ಬಂದು ಅದನ್ನ ತಡೀಲಾರದೆ ಮಗುವಿನ ಮುದ್ದಾದ ಕೈ ಬೆರಳುಗಳ ಮೇಲೆ ಅತ್ಯಂತ ಬಲವಾಗಿ ಹಲವಾರು ಬಾರಿ ಹೊಡೆಯುತ್ತಾನೆ. ಆದರೆ ಕೊನೆಗೊಮ್ಮೆ ತನ್ನ ಕೋಪದ ಅರಿವಾಗಿ, ತಪ್ಪಿನ ಮನವರಿಕೆಯಾಗಿ ತಂದೆಯು ತನ್ನ ಮಗುವನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ ಹೋದರು. ಆದರೆ ಅಲ್ಲಿ ಆ ಮಗು ತನ್ನೆಲ್ಲಾ ಬೆರಳುಗಳನ್ನ ಕಳೆದುಕೊಂಡಿರುತ್ತದೆ. ತನ್ನ ತಂದೆಯನ್ನು ನೋಡಿದ ಆ ಮಗು ತನ್ನ ನೋವು ತುಂಬಿಕೊಂಡ ಕಣ್ಣುಗಳಿಂದ ತಂದೆಯನ್ನ ಕೆಳುವುದೆನೆಂದರೆ, "ಅಪ್ಪಾ ....ಯಾವಾಗ ನನ್ನ ಕೈ ಬೆರಳುಗಳು ಮೊದಲಿನಂತೆ ಬೆಳೆಯೋದು ?" ಅಂತ. ಈ ಪ್ರಶ್ನೆ ಕೇಳಿದ ತಂದೆಗೆ ಇನ್ನೂ ದುಃಖ ತಡೆಯಲಾಗಲಿಲ್ಲ. ಮಾತೇ ಬಾರದಂತಾಗಿ ತನ್ನ ಕಾರಿದ್ದ ಸ್ಥಳಕ್ಕೆ ಹೋಗಿ ಕಾರಿಗೆ ಮನ ಬಂದಂತೆ ಒದ್ದು ಒದ್ದು ಹತಾಶನಾಗಿ ಅವನು ಮೂಲೆಯಲ್ಲಿ ಕಾರಿಗೆ ಒರಗಿ ಕೂರುತ್ತಾನೆ. ಅಚಾನಕ್ಕಾಗಿ ತನ್ನ ಮಗು ಗೀಚಿದ ಜಾಗ ನೋಡುತ್ತಾನೆ. ಅದರ ಮೇಲೆ ಆ ಮಗು ಬರೆದಿದ್ದೇನು ಗೊತ್ತಾ? "ಲವ್ ಯೂ ಡ್ಯಾಡಿ " ಅಂತ. ಎಷ್ಟು ಪ್ರೀತಿಯಿತ್ತು ಆ ಮಗುವಿನಲ್ಲಿ ಅಲ್ವಾ?
ಈ ಕಥೆಯಲ್ಲಿ "ವಸ್ತುಗಳಿರುವುದು ಉಪಯೋಗಿಸಲು, ಮನುಷ್ಯರಿರುವುದು ಪ್ರೀತಿಸಲು" ಎಂಬ ಮಾತಿಗೆ ಬದಲಾಗಿ " ವಸ್ತುಗಳಿರುವುದು ಪ್ರೀತಿಸಲು, ಮನುಸ್ಯರಿರುವುದು ಉಪಯೋಗಿಸಲು" ಎಂಬಂತಾಗಿದೆ. ಇದನ್ನ ನಾನು ಮೊದಲೇ ಓದಿದ್ದೆ ಅಂತಾ ನೀವನ್ದುಕೊಂದಿದ್ದರೆ ನಿಮ್ಮ ಮಾತು ನಿಜ. ಇದು ಯಾರೋ, ಎಲ್ಲೋ ಬರೆದಿದ್ದು ನನ್ನ ಗೆಳೆಯ ಒಬ್ಬ ಮೇಲ್ ಮಾಡಿದ್ದ. ಅರ್ಥಪೂರ್ಣ ಹಾಗೂ ಮನ ಕಲುಕುವಂತೆಇತ್ತಲ್ಲ ಎಂದು ನಿಮಗೂ ತಿಳಿಸುವ ಮನಸ್ಸಾಯಿತು ಬರೆದೆ. ನಿಮ್ಮ ಅಭಿಪ್ರಾಯ ?