ಭಾನುವಾರ, ಜೂನ್ 28, 2020

ಕೊರೋನಾ: ಬದುಕು ಮತ್ತು ಸಂಬಂಧಗಳ ಅವಲೋಕನ

ಕೊರೋನಾ: ಬದುಕು ಮತ್ತು ಸಂಬಂಧಗಳ ಅವಲೋಕನ

"ಛೆ....! ಯಾರ ಬರುವಿಕೆಯ ಸುಳಿವಿಲ್ಲ ಈ ದಾರಿಯಲ್ಲಿ. ಈಗ ನಾನೇನು ಮಾಡುವುದು. ಸಮಯ ಸುಮಾರಾಗುತ್ತಿದೆ. ಅಲ್ಲೇನಾಗಿದಿಯೋ ಏನೋ!" ರಮೇಶ ವಿಪರೀತ ಕಂಗಾಲಾಗಿದ್ದ. ದಾರಿ ಮಧ್ಯೆ ಬಿದ್ದ ದೊಡ್ಡ ಮರದಿಂದಾಗಿ ಸ್ವಿಫ್ಟ್ ಕಾರು ಮುಂದೆ ಹೋಗಲಾಗದಷ್ಟು ದಾರಿ ಮುಚ್ಚಿದೆ. ಊರಿಗೆ ಹೊಸಬನಾಗಿದ್ದ ರಮೇಶನ ಗಾಬರಿ ಹೆಚ್ಚಾಗಿ, ಅವಸರದಲ್ಲಿ ಮರ ತಳ್ಳುವ ವ್ಯರ್ಥ ಪ್ರಯತ್ನದಲ್ಲಿರುವಾಗಲೇ, ಬೆಟ್ಟಗೇರಿ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಅಂತ ದೊಡ್ಡಪ್ಪಗೌಡರು ಮತ್ತು ಅವರ ಕೆಲಸಗಾರರು ಅದೇ ದಾರಿಯಲ್ಲಿ ಬಂದರು.
ದೊಡ್ಡಪ್ಪಗೌಡರು ಬಾರೀ ಗಡಿಬಿಡಿಯಲ್ಲಿದ್ದರು ಮತ್ತು ಪದೇ ಪದೇ ಆಕಾಶ ನೋಡಿ, "ಮಧಾಹ್ನದ ಒಳಗೆ ಉಳಿದಿರೋ ತೋಟಕ್ಕೆ ಔಷಧಿ ಹೊಡೆದು ಮುಗಿಸ್ಬೇಕು ಮಾರಾಯ. ಇಲ್ಲ ಅಂದ್ರೆ ಮಳೆ ಸಾಯ್ತದೇನೋ!. ಮೊನ್ನೆನೇ ಗುಂಡಗದ್ದೆ ತೋಟದ್ ಆದ್ ಮಾರನೇ ದಿನ ಇದುನ್ನು ಮುಗ್ಸ ಅಂದ್ರೆ ಎಂತದೋ ರಾಗ ಹಾಡ್ಕೊಂಡ್ ಬಂದ. ಮಳೆ ಏನರ ಬಂದು ಔಷಧಿ ತೊಳೆದು ಹೋಗ್ಬಕಲ ಇವತ್ತು" ಅಂತ ಔಷಧಿಯವನಿಗೆ ಬಯ್ತಾ ಬಂದೋರೆ....... ದಾರಿಮೇಲೆ ಬಿದ್ದ ಮರ ನೋಡಿ, "ಥೋ..... ಆತಲ, ಇವತ್ತು ತೋಟಕ್ಕೆ ಹೋದಂಗೆ" ಅಂತ ಕೆಲ್ಸದವರ ಮುಖನ ತಮ್ಮ ಕಣ್ಣುಹುಬ್ಬು ಬಿಗಿ ಮಾಡಿ ನೋಡಿದರು.

 "ಗೌಡ್ರೆ, ಸ್ವಲ್ಪ ಪಿರಿಪಿರಿ ಕಮ್ಮಿ ಮಾಡಿ ಬದಿಗೆ ಬನ್ನಿ" ಅಂದವನೇ ಔಷಧಿ ಹೊಡಿಯೋ ಕುಮಾರ, ಇರಿ, ಯಾರೋ ಮರ ತಳ್ತಾ ಇದಾರೆ ಅವ್ರ ಜೊತೆ ನಾವೂ ಸೇರಿ ತಳ್ಳೋಣ ಎಂದು ಮರ ಸರಿಸುವ ಅಪರಿಚಿತನ ಕೆಲಸಕ್ಕೆ ಸ್ಪಂದಿಸಿದ. ಅವನೊಂದಿಗೆ ವಯಸ್ಸು ಅರವತ್ತಾದರೂ ರೈತಾಪಿ ಜೀವನದಲ್ಲಿ ನಿವೃತ್ತಿ ಇಲ್ಲ ಎಂದು ಸಾರಿ ಹೇಳುವ ರಾಮಣ್ಣ ಮತ್ತು ಗೂಡ್ಸ್ ಗಾಡಿ ಡ್ರೈವರ್ ಕಿಶೋರ ಜೊತೆಗೂಡಿದರು. ಅಷ್ಟರಲ್ಲಾಗಲೇ, ವಾರದಿಂದ ಮಳೆಬಿದ್ದು ವಾತಾವರಣ ತಂಪಾಗಿದ್ದರೂ ರಮೇಶನ ಮುಖ ಬೆವತು ಹೋಗಿತ್ತು ಅಥವಾ ಹಾಗೆಂದುಕೊಳ್ಳಬೇಕಿತ್ತು. ರಮೇಶನಿಗೆ ಪಕ್ಕದಲ್ಲಿ ತನ್ನ ಸಹಾಯಕ್ಕೋ ಅಥವಾ ಪರಸ್ಪರರ ಸಹಾಯಕ್ಕೋ ಬಂದ ವ್ಯಕ್ತಿಗಳ ಪರಿವೆಯೇ ಇಲ್ಲ. ಮನಸ್ಸು ಅಣ್ಣನ ಉಸಿರಿಗಾಗಿ ಮಿಡಿಯುತಿತ್ತು. "ಸ್ವಲ್ಪ ಹೊತ್ತು ಕಣೋ ಬಂದೆ. ನನಗಾಗಿ... ದಯವಿಟ್ಟು ನನಗಾಗಿ ಜೀವ ಹಿಡಿದಿಟ್ಟುಕೋ" ಅಂತಾನೆ ಮರ ತಳ್ಳುತ್ತಿದ್ದ.

 ಕುಮಾರ, ಔಷಧಿ ಹೊಡೆಯುವವನಾದರೂ ಹೃದಯವಂತ. ಕಷ್ಟವನ್ನೇ ಹೆಚ್ಚಾಗಿ ಕಂಡ ಜೀವ. ಮಳೆಗಾಲದಲ್ಲಿ ಅಳುತ್ತಲೇ ಎಷ್ಟೋ ದಿನ ಮರ ಹತ್ತಿ ಔಷಧಿ ಹೊಡೆದು ಬಂದಿದ್ದ. ನಗುನಗುತ್ತಲೇ ಜೀವಿಸುವ ಕುಮಾರನ ಅಳು ಕಂಡವರು ಯಾರೂ ಇರಲಿಲ್ಲ. ಸ್ನಾತಕೋತ್ತರ ಪದವಿ ಪಡೆದಿದ್ದರೂ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಕೆಲಸ ಸಿಗದೇ, ಸಿಕ್ಕ ಕೆಲಸ ಮರ್ಯಾದೆ ವಂಚಿತ ಮಾಡಿದಾಗ, ತನ್ನ ಕುಟುಂಬದ ಕಷ್ಟ ಕಣ್ಣಿಗೆ ರೆಪ್ಪೆಯಾಗಿತ್ತು. ಕೊನೆಗೊಂದು ನಿರ್ಧಾರ ಮಾಡಿ, "ನಾನ್ಯಾಕೆ ನನ್ನೂರಲ್ಲೇ ಅನ್ನದ ಬದಲು ಗಂಜಿಯಾದರೂ ಸರಿ" ಹೌದು ಗಂಜಿಯಾದರೂ ಸರಿ ಊರಿಗೇ ಹೋಗುತ್ತೇನೆ ಅಂತ ಬಂದಿದ್ದ. ಅಂದಿನಿಂದ ಮಲೆನಾಡಿನ ಎಲ್ಲಾ ಕೆಲಸ ಗಳಲ್ಲಿ ಹಿರಿಯರಿಂದ ನೋಡಿ ಕಲಿತ ವಿಧ್ಯೆಯಿಂದ ಬದುಕು ಸಾಗಿಸುತ್ತಿದ್ದ. ಆಯಾ ಋತುಗಳಿಗೆ ಸಂಬಂದಿಸಿದ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ. ಹಲವರಿಗೆ ಮಾದರಿಯಾಗಿದ್ದ.
ಮರ ತಳ್ಳುವಾಗ, ರಮೇಶನ ಸ್ವಗತ ವೊಂದು ರಮೇಶನ ಅರಿವಿಗೆ ಬಾರದೆ ಧ್ವನಿಯಾಗಿ ಪ್ರತಿಧ್ವನಿಸಿತು. "ಜೀವ  ಹಿಡಿದಿಟ್ಟುಕೋ.............".ಕುಮಾರನ ಕರ್ಣ ತಲುಪಿದ ಆ ಧ್ವನಿಯಲ್ಲಿ ವೇದನೆಯನ್ನು ಗ್ರಹಿಸಿದ. ಬೆವರಿನಿಂದ ರಮೇಶನ ಮುಖದ ಮೇಲೆ ಹನಿ ಮೂಡಿದ್ದವು. ಜೊತೆಗೆ ಕಣ್ಣೀರ ಹನಿ ಒಂದೊಂದೇ ಜಾರಿದ್ದರೂ ಅದು ಹೆದ್ದಾರಿಯಂತೆ ಕೆನ್ನೆಮೇಲೆ ದಾರಿ ಮಾಡಿತ್ತು. ಕುಮಾರ ಈಗ ಈ ಅಪರಿಚಿತ ಯಾರೆಂದು ಊಹಿಸಿದ. ಕುಮಾರ ತಡ ಮಾಡದೆ ಮರವನ್ನು ಭೀಮ ಬಲ ಮಾಡಿ ಸರಿಸಿದ ಮತ್ತು ರಮೇಶನಿಗೆ, "ಧೈರ್ಯವಾಗಿರಿ ನಿಮ್ಮೊಂದಿಗೆ ನಾ ಬರುತ್ತೇನೆ" ಎಂದು ಸಮಸ್ಯೆ ಕೇಳದೆ ರಮೇಶನ ನೋವನ್ನು ಗ್ರಹಿಸಿ ಸಹಾಯ ಹಸ್ತ ನೀಡಿದ್ದ. "ಮಲೆನಾಡೆಂದರೆ ಹಾಗೆ ಒಣ ಬೀಜ ಕಂಡರೂ ಸಾಕು ಹನಿ ನೀರು ಸೋಕಿಸಿಯಾದರೂ ಮೊಳಕೆಯೊಡೆಸುತ್ತದೆಯಲ್ಲಾ ಹಾಗೇ ಮಲೆನಾಡಿಗರು ಯಾರ ಎದೆಯಾಳದಲ್ಲಾದರೂ ಸಣ್ಣ ನೋವಿನ ಎಳೆ ಕಂಡರೂ ಕೈ ನೀಡುತ್ತಾರೆ ಸಹಾಯಕ್ಕೆ" ಕುಮಾರನು ಹಾಗೇ ಮಾಡಿದ್ದ.

ಗೌಡ್ರೆ,"ದಮ್ಮಯ್ಯ ಅಂತೀನಿ ಇವತ್ತೊಂದಿನ ಬೇಡ. ಮಳೇನು ಬರಾನ್ಗೆ ಆಗೇದೇ ಸುಮ್ನೆ ಔಷಧಿ ನೀರ್ಪಾಲು ಮಾಡದು ಬ್ಯಾಡ. ಈಗ್ಲೇ ಲೇಟ್ ಆಗ್ಯದೆ" ಎಂದು ಕುಮಾರ ಗೌಡ್ರಿಗೆ ಕೇಳಿದ. ಕುಮಾರನಿಗೆ ಹೇಗಾದ್ರು ಮಾಡಿ ರಮೇಶನ ನೋವಿಗೆ ಸ್ಪಂದಿಸಬೇಕೆಂಬ ಹಪಾಹಪಿ. "ಆತು ಮಾರಾಯ, ನೀ ಎಂತಾರು ಮಾಡು. ಊರಿಗೊಬ್ಳೆ ಪದ್ಮಾವತಿ ಅಂತಾರಲ್ಲ ಹಂಗಾಗಿಯ ನೀನು" ಅಂತ ಒಂತರಾ ಅಸಮಾಧಾನದ ಧಾಟಿಯಲ್ಲೇ ಕಿಶೋರನಿಗೆ ಗೂಡ್ಸ್ ಗಾಡಿ ಮನೆ ಕಡೆ ತಿರುಗಿಸಲು ಹೇಳಿದರು. ರಾಮಣ್ಣ ನೀ ಬಾರ ಮನೆಗೆ ಹೈಗನ್ ಅಳಬೇ ತರಬೇಕಂತೆ ನಮ್ಮನೇಳಿಗೆ. ಒಂಚೂರ್ ಎಲ್ಲಾರ್ ಹುಡ್ಕಿ ತಂದ್ಕೊಟ್ ಹೋಗು ಮಾರಾಯ ಅಂತನ್ನೋಷ್ಟರಲ್ಲಿ....., ರಾಮಣ್ಣಾ......, "ಬೆಟಗೇರಿ ಹಡ್ಡಿಲಿ ಸಿಗ್ತವೆ ನೋಡಿ" ಕುಮಾರ, ರಮೇಶನ ಕಾರಿನ ಬಾಗಿಲು ತೆಗಿಯುತ್ತಲೇ ಹೇಳಿದ. "ನೀವೂ.....! ನೀವೆಲ್ಲಿಗೆ ಬರುವವರು" ಎಂದು ಕೇಳುತಿದ್ದ ರಮೇಶನ ಮಾತು ಮುಗಿಸುವ ಮೊದಲೇ..... ನೀವು ಕಾನುಮನೆಯವರು ಅಲ್ವ? ಪ್ರಶ್ನಿಸಿದ ಕುಮಾರ. ಕ್ಷಣ ರಮೇಶ ಪರಿಸ್ಥಿತಿಯಿಂದ ಹೊರಬಂದು, ಹಾ.......... ಹೌದು, ನಾ ಕಾನುಮನೆಯವ. ನೀವ್ ಹೇಗೆ ಗುರುತಿಸಿದಿರಿ ನನ್ನ? ಅಯ್ಯೋ ಅದಿರಲಿ ನಾನೀಗ ಆದಷ್ಟು ಬೇಗ ಹೊಸಪೇಟೆ ಅನ್ನೋ ಊರಿಗೆ ಹೋಗಬೇಕು.ಅಲ್ಲಿ ಮಾಲತಿ ನದಿಗೆ ಹೊಸ ಸೇತುವೆ ಮಾಡುವ ಜಾಗದ ಹತ್ತಿರ ನನ್ನ ಅಣ್ಣನ ಜೀವ ಅಪಾಯದಲ್ಲಿದೆ. ನಂಗೆ  ಫೋನ್ ಮಾಡಲೂ ಆಗುತ್ತಿಲ್ಲ ಅವರಿಗೆ. ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಎಂದು ಒಂದೇ ಸಮನೆ ರಮೇಶ ಬಡಬಡಿಸಿದ. ಅವನ ದುಃಖಕ್ಕೆ ಕಣ್ಣೀರು ಮತ್ತು ಸಿಂಬಳ ಜೊತೆಯಾಗಿ ಸ್ಪಂದಿಸಿದವು ಮತ್ತು ಕುಮಾರ, "ನಾನೂ ಬರುತ್ತೇನೆ ಆದರೆ, ಅದಕ್ಕೂ ಮೊದಲು ನಮ್ಮ ಮನೆಗೆ ಹೋಗೋಣ ಅಂದ". ಪರಿಸ್ಥಿತಿಯ ಗಂಭೀರತೆ ನಿಮಗೆ ಅರ್ಥವಾಗದಿದ್ದರೆ ನಿಮ್ಮ ಅವಶ್ಯಕತೆ ನಂಗೆ ಬೇಡ. ನೀವು ಕಾರಿಂದ ಇಳಿಯಿರಿ ಮತ್ತು ನನಗೆ ದಾರಿ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈಗಾಗಲೇ ಇಲ್ಲೇ ಕಾಲು ಗಂಟೆ ಆಯ್ತು ಎಂದು ಗಡಿಬಿಡಿಯಿಂದ ಒದ್ದಾಡಿದ ರಮೇಶ.

 "ಈ ಮುತುವರ್ಜಿ, ಅಕ್ಕರೆ, ಕಾಳಜಿ, ಪ್ರೀತಿ, ಬಾಂಧವ್ಯ ಈಗ್ಯಾಕೆ ರಮೇಶ. ವಿಧ್ಯೆ ಕಲಿಸಬೇಕಾದದ್ದು, ಸಂಸ್ಕಾರವನ್ನೇ ಹೊರತು ಸಮಯ ಸಾಧಕತನ ಅಲ್ಲ. ಕುಮಾರನ ಬಿರುನುಡಿಗಳು ರಮೇಶನಲ್ಲಿ ಗೊಂದಲ ಮೂಡಿಸಿತು."ನಿಂಗೆ ನಾಚಿಕೆ ಆಗಬೇಕು, ಒಡ ಹುಟ್ಟಿದವನನ್ನ ಹೀನಾಯವಾಗಿ ಕಂಡ ನೀನು ಮನುಷ್ಯನ?" ಎಂದು ಆಕ್ರೋಶಿತನಾಗಿ ಮಾತಿನಲ್ಲೇ ತಿವಿಯುತನಿದ್ದ ಕುಮಾರ. "ನಾ ನಿಮಗೆ ಗೊತ್ತಾ?" ರಮೇಶ ಅನ್ನೋಷ್ಟರಲ್ಲಿ, ನಡಿ ನಮ್ಮನೆಗೆ ನಿಮ್ಮಣ್ಣ ನಮ್ಮನೇಲಿ ಇದ್ದಾನೆ.

ಇಬ್ಬರೂ ಕುಮಾರನ ಮನೆಗೆ ಹೊರಟರು. ಕಾರು ಚಲಿಸುತ್ತಿತ್ತು. ಕೊಂಚ ಸಮಯ ಒಬ್ಬರಿಗೊಬ್ಬರು ಮಾತನಾಡದೆ ಮೌನವಾಗಿದ್ದರೂ ಸಹ ರಮೇಶನ ಪಶ್ಚಾತ್ತಾಪದ ಮತ್ತು ಕುಮಾರನ ಆಕ್ರೋಶದ ಉಸಿರು ಜೋರಾಗಿ ಮಾತನಾಡುತಿತ್ತು.

ಕಾಲೇಜಿನ ಸ್ಪೋರ್ಟ್ಸ್ ಡೇ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಬಾಕಿ ಉಳಿದಿದ್ದವು. ಪ್ರತಿ ವರ್ಷ ಫೆಬ್ರುವರಿ ಮಾರ್ಚ್ ತಿಂಗಳೆಂದರೆ ದಿನೇಶನ ಕಾಲೇಜಿನಲ್ಲಿ ಉಲ್ಲಾಸದ ದಿನಗಳವು, ವರ್ಷ ಪೂರ್ತಿ ಪಾಠ ಪ್ರವಚನ ಅಂತ ವಿದ್ಯಾರ್ಥಿ ಮತ್ತು ಉದ್ಯೋಗಿಗಳೆಲ್ಲರೂ ಮಾನಸಿಕವಾಗಿ ದಣಿದಿದ್ದಾಗ ಈ ಸಮಯ ಎಲ್ಲರಿಗೂ ಒಂದು ರೀತಿಯ ಮನೋಲ್ಲಾಸದ ಸಮಯ. ದಿನೇಶ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ. ಪಾದರಸದಂತಿದ್ದ ಮಧ್ಯ ವಯಸ್ಸ್ಕ ದಿನೇಶ, ಸಾಂಸ್ಕೃತಿಕ ಉತ್ಸವದ ನಿರೀಕ್ಷೆಯಲ್ಲಿರುವಾಗಲೇ, ಚೀನಾದ ವುಹಾನ್ ನಲ್ಲಿ ಕೊರೊನ ವೈರಸ್ ದಾಳಿಯಿಂದಾದ ಮಾರಣ ಹೋಮದ ಬಗ್ಗೆ ಸುದ್ದಿ ನೋಡಿದ. ಮತ್ತು ದೂರದೂರಿನ ವಿಷಯ ಅಂತ ತಳ್ಳಿಹಾಕಿದ್ದ. ಆದ್ರೆ ಕೆಲವೇ ಸಮಯದಲ್ಲಿ ಕಾಲೇಜಿನಲ್ಲಿ ಕೊರೊನ ಬಂದಿದೆಯಂತೆ. ಯಾರಿಗಂತೆ; ಅವರಿಗಂತೆ; ಇವರಿಗಂತೆ ಹೀಗೆ ಅಂತೇ ಕಂತೆಗಳು ಶುರುವಾದವು.ಇಡೀ  ಜಗತ್ತು ಕೊರೋನಾದ ಹರಡುವಿಕೆ ಮತ್ತು ಅದರ ರೋಗ ಲಕ್ಷಣಗಳನ್ನ ಪ್ರಸಾರ ಮಾಡಲಾರಂಭಿಸಿದಾಗ ದಿನೇಶನಿಗೂ ಮೈ ಬೆಚ್ಚುಗಾಯಿತು. ಯಾವತ್ತೂ ಮಾಸ್ಕ್ ಹಾಕದವನು ಮಾಸ್ಕ್ ಹಾಕಲು ಶುರು ಮಾಡಿದ ಮತ್ತು ಅದನ್ನ ಅನುಮಾನಿಸಿದವರಿಗೆ, ಛೆ ಛೆ ಅಂತದ್ದೇನಿಲ್ಲ ಡಸ್ಟ್ ಗೆ ಹಾಕಿದ್ದು ಅಂತ ತನ್ನನು ತಾನೇ ಸಮರ್ಥಿಸಿಕೊಳ್ಳುತ್ತಿದ್ದ. ಶೀತಕ್ಕೋ, ಉಷ್ಣಕ್ಕೋ ಮೂಗು ಸೋರಿದರೆ, ತಲೆನೋವು ಬಂದರೆ, ಮೈ ಬಿಸಿಯಾಗಿದ್ದರೆ ಕೊರೊನ ರೋಗ ಲಕ್ಷಣದ ಗೈಡ್ಲೈನ್ಸ್ ನೋಡುತ್ತಿದ್ದ. "ಹೌದು, ನಂಗೆ ಕೊರೊನ ಬಂದಿದೆ. ನಾ ಮನೆಗೆ ಹೋಗುವುದು ಬೇಡ, ಸ್ವಲ್ಪ ದಿನ ಫ್ರೆಂಡ್ಸ್ ಮನೇಲಿ ಇರೋಣ", ಅಂತೆಲ್ಲ ಯೋಚಿಸುತ್ತಿದ್ದ. ಅದಕ್ಕೆ ಸರಿಯಾಗಿ ಖಾಯಿಲೆ ಹರಡುವಿಕೆ ಜಾಸ್ತಿಯಾಗಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶವನ್ನು ಲಾಕ್ ಡೌನ್ ಅಂತ ಘೋಷಿಸಿದಾಗ, ದಿನೇಶ ಮಡದಿ ಮಗು ಜೊತೆಗೆ ಊರಿನ ದಾರಿ ಹಿಡಿದ. ತನ್ನ ಹತ್ತಿರದ ಸಂಬಂಧಿಯೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಮಲೆನಾಡಿನ ತೀರ್ಥಹಳ್ಳಿಯ, ಬೆಜ್ಜವಳ್ಳಿ ಸಮೀಪದ ‘ಕಾನುಮನೆಗೆ’ ಹೊರಟ. ದಿನೇಶನಿಗೆ ದಾರಿ ಸಾಗಿದಂತೆ ಮತ್ತೆ ತಾನು ಹುಟ್ಟಿ ಬೆಳೆದ ಊರಿನ, ತನ್ನ ಮನೆಯ ಅಪ್ಪ ಅಮ್ಮ, ತಮ್ಮ ಮತ್ತುಅವನ ಸಂಸಾರ ಎಲ್ಲ ಮೆಲುಕು ಹಾಕುತ್ತಾ ಅವರೊಂದಿಗೆ ಸಮಯ ಕಳೆಯಲು ಸೂಕ್ತ ಎಂದು ಖುಷಿಯಿಂದ ತೇಲಾಡುತ್ತಿದ್ದ. ಮೂಲತಃ ದಿನೇಶ ನಾಲ್ಕಕ್ಷರ ಕಲಿತಿದ್ದರಿಂದ ಮತ್ತು ಮನೆಯ ಕಡು ಬಡತನ ಕಾರಣದಿಂದ ಊರು ಬಿಟ್ಟು ದುಡಿಯಲು ಬೆಂಗಳೂರಿಗೆ ಹೋಗಿದ್ದನಾದರೂ ತನ್ನ ಹೃದಯದ ಬೆಸುಗೆ ಅವನ ಹಳ್ಳಿಯೊಂದಿಗೆ ಬೆಸೆದಿತ್ತು. ‘ಕಾನುಮನೆ’ಯೂ ಹೆಸರಿಗೆ ತಕ್ಕಂತೆ ದಟ್ಟಾರಣ್ಯದಿಂದ ಕೂಡಿದ ಊರಾಗಿತ್ತು. ತಾನು ಬಾಲ್ಯದಲ್ಲಿ ಓಡಾಡಿದ ಎಲ್ಲ ಕಡೆ ಸುತ್ತಬೇಕು, ತನ್ನ ಮಗನನ್ನು ಅಲ್ಲೆಲ್ಲ ಸುತ್ತಿಸಬೇಕೆಂದು ಕಾರಲ್ಲಿ ದಾರಿಯುದ್ದಕ್ಕೂ ಕಣ್ಣು ಬಿಟ್ಟುಕೊಂಡೇ ಕನಸು ಕಾಣುತ್ತಿದ್ದನು. ಬಾಲ್ಯದ ದಿನಗಳ ನೆನಪಲ್ಲೇ ಮುಗಳ್ನಗು ಬಂದೊಗುತಿತ್ತು. ಅವನಿಗರಿವಿಲ್ಲದೆ ಆ ದಿನಗಳ ತುಂಟಾಟಗಳು ತುಟಿಮೇಲೆ ಪಿಸುಮಾತಾಗಿ ಆ ಕ್ಷಣದಲ್ಲಿಒಬ್ಬರಿಗೊಬ್ಬರ ನಡುವೆ ಸಂಭಾಷಣೆ ನಡೆಸುತ್ತಿದ್ದವು. ಆ ನೆನಪುಗಳ ಬುತ್ತಿಯಲ್ಲಿ, ಒಂದಿನ, “ನಾಳೆ ಬೇಗ ಬಾರೋ ಗುಡ್ಡದ ತುದಿಗೆ ಹೋಗಿ ನೇರಳೆ ಹಣ್ಣು ತರೋಣ ಅಂತ ರಾಘು ಹೇಳಿದ್ದು, ಅದರ ಬೆನ್ನಲ್ಲೇ.... ನಾಗರತ್ನನ ಮರ ಹತ್ಸೋಣ ಕಣ ಅಂತ ಸುರೇಶ ಕಿಸಿಕ್ ಅಂತ ನಕ್ಕಿದ್ದು, ಸುರೇಶನ ದುರ್ಬುದ್ದಿ ಅರಿತ ದಿನೇಶ ಅವತ್ತು "ಥೂ... ಎಂಥದ ಹಂಗಂತೀಯಲ ಮಂಡೆ ಸಮ ಇಲ್ಲನ" ಅಂದಿದ್ದು ನೆನಪಾಗಿ, ಕಾರಲ್ಲೂ ತನಗರಿವಿಲ್ಲದೆ, "ಥೂ... ಎಂಥದ ಹಂಗಂತೀಯಲ ಮಂಡೆ ಸಮ ಇಲ್ಲನ" ಅಂತ ಜೋರಾಗಿ ಅಂದೇ ಬಿಟ್ಟ”. ತಿಪಟೂರಿನ ಹತ್ತಿರ ಹೈವೇಯಲ್ಲಿ ಗಾಳಿ ಸೀಳುತ್ತ ಹೊರಟ ಎರ್ಟಿಗಾ ಕಾರು ಓಡಿಸುತ್ತಿದ್ದ, ಸಂಬಂಧದಲ್ಲಿ ಭಾವ ಆಗಬೇಕಾದ ರೋಹಿತ್ "ಏನೋ ಅಂದ್ಯಲಾ ನೀನು" ಅಂದ. ದಿನೇಶ ಎಚೆತ್ತುಕೊಂಡು, "ಓಯ್ ಸರಿಯಾಗಿ ಗಮನ ಕೊಟ್ಟು ಗಾಡಿ ಓಡ್ಸು. ನಿದ್ರೆ ಬಂದ್ರೆ ಕೊಡು ಓಡಿಸ್ತಿನಿ. ನಿದ್ರೆಗಣ್ಣಲಿ ಏನೇನೋ ಹೇಳ್ಬೇಡ ಅಂತ" ಅವನಿಗೆ ಮೆಲುವಾಗಿ ಗದರಿಸಿ ತಾನು ವಾಸ್ತವಕ್ಕೆ ಬಂದ. ಅಲ್ಲಿಂದ ನಂತರದ ದಾರಿ ರೋಹಿತ್ ನೊಂದಿಗೆ ತಮಾಷೆ ಮಾಡುತ್ತ, ಕಳೆದುಕೊಳ್ಳುತ್ತಾ ಸಾಗಿತು. ರೋಹಿತ್ಗೆ "ನಿದಾನ ಕಣ, ನಿದಾನ ಕಣ" ಅಂತ ದಿನೇಶ ನಿದ್ರೆಗೆ ಜಾರಿದ್ದ.

ಬೆಳಗ್ಗಿನ ಜಾವ ಮನೆ ಎದುರಿಗೆ ಕಾರು ನಿಲ್ಲಿಸಿ ರೋಹಿತ್, "ಭಾವ ಇಳಿ ಮಾರಾಯ" ಅಂತ ಹೇಳಿದಾಗಲೇ ದಿನೇಶ ಎಚ್ಚರಾಗಿದ್ದು. ಹೆಂಡತಿ ಮಗುವಿನೊಂದಿಗೆ ಕಾರಿಂದ ಇಳಿದು ಹದಿನೈದು ದಿನಕ್ಕಷ್ಟಾಗುವ ಲಗ್ಗೇಜಿನೊಂದಿಗೆ ಮನೆ ಗೇಟ್ ತೆಗೆಯುವಷ್ಟರಲ್ಲಿ, ದಿನೇಶನ ತಮ್ಮ ರಮೇಶ ಅತೀವ ಆನಂದದಿಂದ, ಏಯ್, ಹೆಂಗಿದಿಯೋ. ಇಲ್ ಕೊಡು ನಾ ಹಿಡಕುತಿನಿ ಬ್ಯಾಗ್ ನಾ, ಅತ್ತಿಗೆ ಪಾಪು ಕೊಡ್ರಿ, ಮುದ್ದು ಮಗನೆ ಅಂತ ಮಗುವನ್ನು ಮುದ್ದಾಡಿದ. ಸಂತೋಷದ ಉತ್ತುಂಗದಲ್ಲಿದ್ದ ರಮೇಶನಿಗೆ, ಅಣ್ಣ ಊರಿಗೆ ಬಂದಿದ್ದು ಅವನನ್ನ ಚಿಕ್ಕ ಮಗುವಿನಂತೆ ಮಾಡಿತ್ತು. ಬೆಳಿಗ್ಗೆ ಬೇಗ ಎದ್ದು ಬಿಸಿನೀರು ಕಾಯಿಸಿ ಅಣ್ಣಂಗೆ ಸ್ನಾನ ಮಾಡಲು ಹೇಳಿದ. ಅಣ್ಣ ತಮ್ಮ ಇಬ್ಬರು ಗದ್ದೆ, ತೋಟಕ್ಕೆ ಹೋದರು. ಮನೆಯಲ್ಲಿ ಅಪ್ಪ ಅಮ್ಮ ಮತ್ತು ಇಬ್ಬರು ಸೊಸೆಯಂದಿರು ಮಕ್ಕಳು ಎಲ್ಲ ಸೇರಿ ಕೂಗಾಟ ಕಿರುಚಾಟ ಸೂರ್ಯನಿಗಿಂತ ಮೊದಲೇ ಶುರುವಾಗಿತ್ತು, ಮನೆ ಒಂಥರಾ ಹಣ್ಣು ಬಿಟ್ಟ ಆಲದ ಮರ ಆಗಿತ್ತು. ಎಲ್ಲರ ಸದ್ದು ಮರದಲ್ಲಿರೋ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಇಂಪಾಗಿತ್ತು. ಒಂದು ವಾರ ಹೀಗೆ ನಡೆಯಿತು. ಆ ವಾರ ಪೂರ್ತಿ ದಿನೇಶ ಅಕ್ಕಪಕ್ಕದ ಮನೆ, ಬಾಲ್ಯದಲ್ಲಿ ಓಡಾಡಿದ ಜಾಗ ಎಲ್ಲ ಸುತ್ತಾಡಿದ. ಮನಸ್ಸು ಏನೋ ಕಳೆದುಕೊಂಡದ್ದು ಮತ್ತೆ ಸಿಕ್ಕಿದಷ್ಟು ಖುಷಿಯಾಗಿತ್ತು. ಅಣ್ಣನಿಂದ ಯಾವ ಕೆಲಸ ಮಾಡಲು ಬಿಡುತ್ತಿರಲಿಲ್ಲ ರಮೇಶ. ಮನೆಯಲ್ಲಿ ಕೂತೂ ಕೂತೂ ಸಮಯ ಕಳೆಯುವುದು ಕಷ್ಟ ಎನಿಸಿದಾಗ ದಿನೇಶ ಊರ ಹೊರಗೆ ಒಬ್ಬಂಟಿಯಾಗಿ ಅಲ್ಲಿ ಇಲ್ಲಿ ಸುತ್ತಾಡಲು ಶುರು ಮಾಡಿದ. ಆಗಲೇ ಅವನಿಗೆ ಭಯಾನಕ ಸತ್ಯ ಅರಿವಾಗುತ್ತಾ ಹೋಯಿತು. ಮಲೆನಾಡಿನ ಅಮಾಯಕ ಜನರಲ್ಲಿ ಮಾಫಿಯಾಗಳು ಬಂದು ಸೇರಿಕೊಂಡಿದ್ದಾರೆ. ಎಲ್ಲವೂ ಈಗ ಮಲೆನಾಡಿನಲ್ಲಿ ದಂಧೆಗಳಾಗಿದ್ದಾವೆ. ಮುಗ್ಧ ಮಕ್ಕಳಲ್ಲಿ ಕ್ರೌರ್ಯ ಮೈಗೂಡಿದೆ. ಪ್ರಕೃತಿ ಸಂಪತ್ತೆಲ್ಲ "ಕೊಪ್ಪರಿಗೆ ಹೊನ್ನಾಗಿ" ಸರಳರು, ಸಜ್ಜನರು, ಬಡವರ ಬಂಧು, ರೈತ ಬಂಧು, ಪರಿಸರ ಪ್ರೇಮಿ, ಎಂಬ ಹಣೆಪಟ್ಟಿ ತಮಗೆ ತಾವೇ ಹಾಕ್ಕೊಂಡವರ ಮನೆಯ ಇಟ್ಟಿಗೆಯಾಗಿವೆ. ಕೊಳ್ಳೆ ಹೊಡೆದ ಸಂಪತ್ತಲ್ಲಿ ಅಲ್ಪ ಸ್ವಲ್ಪ ಬಡವರು ದಲಿತರಿಗೆ ಒರೆಸಿ, ಅವರನ್ನೇ ಅಸ್ತ್ರವಾಗಿಸಿ ಅವ್ರ ಹಿಂದೆ ಅಡಗಿದ್ದಾರೆ. ದಿನೇಶನಿಗೆ ಅರಿವಾಯಿತು. ನಾನೂ ಮತ್ತು ನನ್ನಂತ ಅನೇಕರು ಊರು ಬಿಟ್ಟು ಪರ ಊರಲ್ಲಿ ಅನ್ನ ಹುಡುಕಲು ಹೊರಟರೆ, ಊರಲ್ಲಿ ಅಪರಿಚಿತರಿಂದ ಮಲೆನಾಡಿನ ಸಂಪತ್ತು ದಿನೇ ದಿನೇ ಖಾಲಿ ಆಯಿತು. ಸ್ವಚಂದವಾಗಿ ಹರಿಯುತ್ತಿದ್ದ ನದಿ ಬತ್ತಿ ಹೋಗಿದೆ. ಕಾರಣ ಮರಳು ದಂಧೆ. ಡ್ರಗ್ ಮಾಫಿಯಾ, ಹೊಲದಲ್ಲಿ ರಾಗಿ ಚೆಲ್ಲಿದಂತೆ ಮಲೆನಾಡಿನಲ್ಲಿದ್ದ ಗಂಧದ ಮರದ ಸುಳಿವೇ ಇಲ್ಲ. ಅಬ್ಭಾ, ದಿನೇಶ ಕಂಗಾಲಾಗಿ ಹೋದ. ಇದಾ ನನ್ನೂರು. ಇದಾ ಮಲೆನಾಡು. ತನ್ನನು ತಾನು ನಂಬದಾದ. ತನ್ನೂರಲ್ಲೇ ಅವನು ಪರಕೀಯನಾಗಿದ್ದ. ಮೂಲ ನಿವಾಸಿಯೊಬ್ಬ ವಲಸೆ ಹೋದರೆ ತನ್ನ ವಾಸ ಸ್ಥಳ ಹೇಗಾಗುತ್ತದೆ ಎಂದು ಅರಿಯಲು ಮಲೆನಾಡು ಸಾಕ್ಷಿ. ದುಃಖ ಬಂತಾದರೂ ತಪ್ಪು ನಾನು ಮತ್ತು ನನ್ನಂತ ರೀತಿ ವ್ಯವಸಾಯ ಮರೆತು ದೂರದ ಬೆಟ್ಟ ಅಪ್ಪಿಕೊಂಡ ಎಲ್ಲರದ್ದಾಗಿತ್ತು ಎಂಬುದು ಮನವರಿಕೆಯಾಯಿತು. ಮಲೆನಾಡು ಎಂಬ ಮನೆಯನ್ನು ನಾವೆಲ್ಲಾ ಒಬ್ಬೊಬ್ಬರಾಗಿ ಖಾಲಿ ಮಾಡಿದಾಗ ಕಿರಾತಕರು ಎಂಬ ಉಡ ಹೊಕ್ಕಂತಾಯಿತು ಎಂದು ಭಾವಿಸಿದ. ನನ್ನ ಮತ್ತು ನನ್ನಂತವರಿಂದಾದ ತಪ್ಪಿಗೆ ಯಾರನ್ನು ದೂಷಿಸಿ ಪ್ರಯೋಜನವೇನೆಂದು ದಿನೇಶ ನಿಟ್ಟುಸಿರುಬಿಟ್ಟ.
ಭಾರವಾದ ಹೆಜ್ಜೆಯಿಂದ ಮನೆ ಕಡೆ ಬಂದಾಗ ಸುದ್ದಿವಾಹಿನಿಯೊಂದು ಅತ್ಯಂತ ಸಂತೋಷದಿಂದ, ಅವರ ನಿರೀಕ್ಷೆಗೆ ಸಿಕ್ಕ ಜಯ ಎಂಬಂತೆ, ಬ್ರೇಕಿಂಗ್ ನ್ಯೂಸ್ ಹೇಳುತ್ತಲಿತ್ತು. ಅದು, "ಲಾಕ್ಡೌನ್ ಮತ್ತೆ ನಿರ್ಧಿಷ್ಟ ಅವಧಿಯ ವರೆಗೆ ಮುಂದುವರಿಕೆ". ಹೌದು, ದೇಶದಲ್ಲಿ ಲಾಕ್ಡೌನ್ ಮತ್ತೆ ಹದಿನೈದು ದಿನಕ್ಕೆ ಮುಂದೊಯಿತು. ದುಡಿಮೆಗಾಗಿ ವಲಸೆ ಹೋದವರೆಲ್ಲ ಊರಿಗೆ ವಾಪಾಸಾಗಿದ್ದರು. ಮಲೆನಾಡಿಗೆ ಕಾಲಿಟ್ಟವರಲ್ಲಿ ಅನೇಕರು ಊರಿನ ಬೇರೆ ಜಾಗಗಳಿಗೆ ಕಣ್ಣು ಹಾಕಿದರು. ಊರಲ್ಲಿದ್ದ ಗೋಮಾಳ, ಬ್ಯಾಣ, ಬಯಲು, ಕಾಡು ಈಗ ಜೆಸಿಬಿ ಗಳಿಂದ ಗುಪ್ತವಾಗಿ ಮಟ್ಟಸವಾಗಿ, ಬೋರೆವೆಲ್ ಗಳ ಪಾಯಿಂಟ್ ಗಳಾಗಿ, ಬೇಲಿಗಳಾಗಿ, ಅಡಿಕೆ ಸಸಿಗಳ ಆಗಮನಕ್ಕೆ ತಯಾರಿ ನಡೆಸಿದೆ. ಊರಿನ ಒಂದಿಂಚೂ ಬಿಡದೆ ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯ ಅತ್ಯಾಚಾರ ಮಾಡಲು ಶುರು ಮಾಡಿದರು. ದಟ್ಟ ಕಾಡಿದ್ದ ಊರು ಕೇವಲ ಒಂದು ತಿಂಗಳಲ್ಲಿ ವಾಣಿಜ್ಯ ಬೆಳೆಗಳ ಆವಾಸ ಸ್ಥಾನವಾಯ್ತು. ಸ್ಪರ್ಧೆಗೆ ಬಿದ್ದವರಂತೆ ನಿಸರ್ಗ ನಾಶ ನಡೆಸಿದರು. ರಕ್ಷಿಸಬೇಕಾದ ಅಧಿಕಾರಿಗಳು, ಅನಾಯಾಸವಾಗಿ ಮನೆಗೆ ಬಂದು ಬೀಳುತ್ತಿದ್ದ ಕಾಂಚಾಣದ ಸೀರೆಯುಟ್ಟಿದ್ದರು. ಎಲ್ಲರಂತೆ ದಿನೇಶನೂ  ತನ್ನ ತಮ್ಮನಿಗೆ ಹೇಳಿದ, "ಅಲ್ಲಿ ನಮ್ಮ ಜಮೀನಿನ ಮೇಲ್ಗಡೆ ಸ್ವಲ್ಪ ಸರ್ಕಾರೀ ಜಾಗಕ್ಕೆ ಬೇಲಿ ಹಾಕಿದ್ದೆ ಅಂದಿದ್ದೆ ಅದೇನಾಯ್ತು. ಬಾ ಅಲ್ಲಿ ಅಡಿಕೆನಾದ್ರೂ ನೆಡೋಣ" ಅಂದ. ರಮೇಶ, "ಆಯ್ತು ಹಾಗೇ ಮಾಡೋಣ" ಅಂತಾನೂ ಅಂದಿದ್ದ. ಇದ್ರೆಲ್ಲಾದರ ಜೊತೆಗೆ ದಿನೇಶನಿಗೆ ಈಗ ತನ್ನ ವೃತ್ತಿ ಮತ್ತು ದುಡಿಮೆಯ ಚಿಂತೆಯಾಯಿತು ಮತ್ತು ಅದನ್ನು ತೋರಗೊಡದೆ ಮನೆಯವರೊಂದಿಗೆ ಕಾಲ ಕಳೆಯುತಿದ್ದ. ವಾರ ಪೂರ್ತಿ ರಮೇಶ ಅಣ್ಣನಿಗೆ ಕೂರಿಸಿ ಊಟ ಹಾಕುತ್ತಿದ್ದವನು, ಅಣ್ಣ ಬಾ ತೋಟಕ್ಕೆ ಹೋಗೋಣ, ಗದ್ದೆಗೆ ಹೋಗೋಣ, ಸ್ವಲ್ಪ ಇಟ್ಟಿಗೆ ಎತ್ತಿ ಬೇರೆ ಕಡೆ ಇಡೋಣ ಹೀಗೆ ನಿಧಾನವಾಗಿ ಒಂದೊಂದಾಗಿ ಕೆಲಸ ಹೇಳಲು ಶುರು ಮಾಡಿದ. ಇದೇ ಸಮಯದಲ್ಲಿ ವಾಟ್ಸಪ್ಪ್ ಗಳಲ್ಲಿ ಪ್ರತಿದಿನ ಕೊರೋನಾದ ಬಗ್ಗೆ ಗಾಬರಿ ಜೊತೆಗೆ, "ಊರು ಬಿಟ್ಟವರಿಗೆ ತವರೂರ ನೆನಪಿಸಿತು", "ಕುಟುಂಬ ತೊರೆದವರಿಗೆ ಕುಟುಂಬವ ಪರಿಚಯಿಸಿತು", "ಹೆತ್ತವರ ಬಿಟ್ಟೋದವರು ಗತಿ ಇಲ್ಲದೆ ಹೆತ್ತವರ ಕಾಲು ಹಿಡಿದರು", "ಜಮೀನು ಒದ್ದೋದವರು ನೇಗಿಲ ಹಿಡಿದರು", "ಪಟ್ಟಣವೆಂಬ ಸೂಳೆಯ ಸೆರಗಿಡಿದವರು ಈಗ ಹಳ್ಳಿಯ ಪತಿರ್ವತೆ ಪಾದ ಹಿಡಿದರು", ಹೀಗೆ ಹತ್ತು ಹಲವು ಘೋಷಣೆಗಳನ್ನು ಹೊತ್ತು ತರುತ್ತಿತ್ತು. ತಮಾಷೆಗಾಗಿ, ಕಿಚಾಯಿಸಲೋ ಎಂಬಂತೆ ಇವೆಲ್ಲ ಒಬ್ಬರಿಂದೊಬ್ಬರಿಗೆ ಮೊಬೈಲ್ಗಳಲ್ಲಿ ಹರಿದಾಡುತ್ತಿದ್ದವು. ದಿನೇಶನಿಗೆ ಮಾತ್ರ ಹೊಟ್ಟೆ ಪಾಡಿನ ಯೋಚನೆ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು.

ದಿನೇಶ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ತನ್ನ ಸಂಪೂರ್ಣ ಖರ್ಚು ವೆಚ್ಚಗಳನ್ನ ತಾನೇ ಕೂಲಿ ಮಾಡಿ ಭರಿಸಿಕೊಳ್ಳೋದರ ಜೊತೆಗೆ ರಮೇಶನನ್ನು ಬಿ ಎ ಮಾಡಿಸಿದ್ದ. ತಮ್ಮನೆಂದರೆ ಅತೀವ ಪ್ರೀತಿ ಇಟ್ಟಿದ್ದ ದಿನೇಶನಿಗೆ ಊರಿನಲ್ಲಿ ವಿಶೇಷ ಮರ್ಯಾದೆ. ಕಾಲಾ ನಂತರ ಪಿತ್ರಾರ್ಜಿತ ಜಮೀನನ್ನ ರಮೇಶ ಮುತುವರ್ಜಿ ಇಂದ ಮಾಡಲು ಶುರು ಮಾಡಿದ ಹಾಗು ದಿನೇಶ ತನ್ನ ವಿದ್ಯಾಭ್ಯಾಸದ ಆಧಾರದ ಮೇಲೆ ಬೆಂಗಳೂರಿಗೆ ಹೋಗಿ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗ ಕಂಡುಕೊಂಡ. ಬಂದಂತಹ ಸಂಬಳದಲ್ಲೇ    ತಾನೊಂದಷ್ಟೂ ಇಟ್ಟುಕೊಂಡು ಉಳಿದಿದ್ದರಲ್ಲಿ ಊರಲ್ಲಿದ್ದ ಜಮೀನಿನ ಅಕ್ಕಪಕ್ಕದ ಸಣ್ಣ ಕಾಡನ್ನು ಒತ್ತುವರಿ ಮಾಡಿ ಅಡಿಕೆ ತೋಟ ಮಾಡಲು ತಮ್ಮನಿಗೆ ಹಣ ಕಳಿಸಿ ನೆಮ್ಮದಿಯಾಗಿದ್ದ. ನಂತರದ ದಿನಗಳಲ್ಲಿ ರಮೇಶನ ಪರಿಶ್ರಮ ಹಾಗೂ ದಿನೇಶನ ಹಣ ಸಹಾಯದಿಂದ ತಕ್ಕಮಟ್ಟಿನ ತೋಟ ಗದ್ದೆ ಮಾಡಿಕೊಂಡು ಊರಲ್ಲಿ ಇತರ ಜಮೀನ್ದಾರರಂತೆ ಸಿರಿವಂತರಾದರು. `ದಿನೇಶನ ಮದುವೆಯ ನಂತರ ತನ್ನ ಸಂಸಾರದ ಕಡೆ ಗಮನ ಹರಿಸಿದ ದಿನೇಶ, ಊರಿನ ಜಮೀನು ತನ್ನ ತಮ್ಮನಿಗೆ ಮಾತ್ರ ಎಂದು ರಮೇಶನ ಎದುರೇ ತನ್ನ ಹೆಂಡತಿಯ ಬಳಿ ಸಾಕಷ್ಟು ಬಾರಿ ಹೇಳಿದ್ದ, ಹಾಗೆಯೇ ನಡೆದುಕೊಂಡು ಬಂದಿದ್ದ. ಯಾವಾಗ ಲಾಕ್ಡೌನ್ ಹಂತ ಹಂತ ವಾಗಿ ಮುಂದೊಯ್ತೋ ದಿನೇಶನಿಗೆ ತನ್ನ ಸ್ವಂತ ಮನೆಯಲ್ಲೇ ಕಿರಿಕಿರಿಯ ಅನುಭವ ಆಗಲು ಶುರುವಾಯಿತು. ಗಾಯದ ಮೇಲೆ ಬರೆ ಎಳೆದಂತೆ, ಕಾಲೇಜಿನಿಂದ ಒಂದು ಈ ಮೇಲ್ ಬಂತು ದಿನೇಶನಿಗೆ. "ಇನ್ನು ಮೂರು ತಿಂಗಳು ಕಾಲೇಜಿಗೆ ಬರುವುದು ಬೇಡ ಹಾಗು ಮೂರು ತಿಂಗಳ ನಂತರ ನಾವೇ ಅಗತ್ಯ ಬಿದ್ದರೆ ನಿಮ್ಮನ್ನು ಸಂಪರ್ಕಿಸುತ್ತೇವೆ". ಸಂಬಳವೂ ಬಂದಿರಲಿಲ್ಲ. ಇದ್ದ ಹಣದಲ್ಲೇ ವ್ಯವಹರಿಸಬೇಕಾಗಿತ್ತು ದಿನೇಶ. ಆದರೂ ದಿನೇಶ ದೃತಿಗೆಟ್ಟಿರಲಿಲ್ಲ. ಮೂರು ತಿಂಗಳು ಹೆತ್ತವರು ಮತ್ತು ಒಡಹುಟ್ಟಿದವನೊಂದಿಗೆ ಇದ್ದು ನಂತರ ಅಗತ್ಯ ಬಿದ್ದರೆ ಕೆಲಸ ಬದಲಾಯಿಸೋಣ ಎಂದು ಮತ್ತು ಇದನ್ನು ಚರ್ಚಿಸಲು ರಮೇಶನ ಬರುವಿಕೆಗಾಗಿ ಕಾಯುತ್ತಿದ್ದ.

ರಮೇಶ  ಗದ್ದೆಗೆ ಹೋದವನು ಮರಳುವಾಗ, ಊರಿನ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ, "ಅಣ್ಣ ಹೇಳಿದ್ದಾನೆ ನಮ್ಮ ಜಮೀನಿನ ಮೇಲೆ ಇರುವ ಸರ್ಕಾರಿ ಜಾಗದಲ್ಲಿ ತೋಟ ಮಾಡೋಣ" ಅಂತ ಅಂದ. ರಮೇಶ, ನಿಮ್ಮಣ್ಣ ಹಂಗಂದ್ನಾ....? ಹುಷಾರು ಮಾರಾಯ. ಹಂಗಂದ್ರೆ? ರಮೇಶ ಕೇಳಿದ. ಗೆಳೆಯ ಒಳ್ಳೆದೇನೂ ಹೇಳ್ತಾ ಇದೀನಿ ಅನ್ನೋ ಭ್ರಮೇಲಿ ಅಣ್ಣ ತಮ್ಮಂದಿರ ನಡುವೆ ಹುಳಿ ಹಿಂಡಿದ. ಗೆಳೆಯನೆಂದಿದ್ದಾ, "ನೋಡು ನಮ್ಮನೆಯಲ್ಲಿ ಮೈಸೂರಿಂದ ಫ್ಯಾಕ್ಟಾರಿಲಿ ಕೆಲಸ ಸಧ್ಯ ನಿಂತಿದೆ ಅಂತ ಬಂದ ನಮ್ಮಣ್ಣನ ಮಾತಿನಂತೆ, ಹೊಳೆ ದಡದ ಹತ್ತಿರದ ಸರ್ಕಾರೀ ಜಾಗದಲ್ಲಿ ಯಾರಿಗೂ ತಿಳಿಯದ ಹಾಗೇ ರಾತ್ರೋ ರಾತ್ರಿ ಜಾಗ ಸಮ ಮಾಡಿಸಿ ಅಡಿಕೆ ಸಸಿ ನೆಡಲು ತಯಾರಿ ಮಾಡಿದೀವಿ. ಬೇಲಿ ಹಾಕಿ ಬಂದೋ ಬಸ್ತ್ ಮಾಡಿದೀವಿ. ಈಗ ಯಾಕೋ ಅಣ್ಣ ಊರಲ್ಲೇ ಉಳಿಯುವ ಹಾಗೆ ಕಾಣಿಸ್ತಿದಾನೆ. ನಿನ್ನಣ್ಣನೂ ಹಾಗೇ ಮಾಡಿದರೆ ನೀನು ಅವನಿಗೆ ಆಸ್ತಿ ಪಾಲು ಕೊಡಬೇಕಾಗಬಹುದು. ನೋಡು ಯೋಚ್ನೆ ಮಾಡು" ಅಂತ ಹೇಳಿ ತನ್ನ ಕೆಲ್ಸದ ದಾರಿ ಹಿಡಿದ. ಗೆಳೆಯನ ಮಾತಿನಿಂದ ರಮೇಶನೂ ತನ್ನ ರಕ್ತ ಸಂಬಂಧವನ್ನೇ ಸಂಪೂರ್ಣ ಮರೆತ. ಅಣ್ಣನ ಇಲ್ಲೀವರೆಗಿನ ಸಹಾಯ ಮರೆತ. ರಮೇಶನಿಗೆ ತನ್ನಣ್ಣ ಬೆಂಗಳೂರು ಬಿಟ್ಟು ಊರಲ್ಲೇ ಉಳಿದುಬಿಟ್ಟರೆ ನಾನೂ ಜಮೀನನ್ನು ಅವನಿಗೆ ಪಾಲು ಕೊಡಬೇಕಾಗಬಹುದು ಎಂದು ಭಾವಿಸ ತೊಡಗಿದನು. ಅವನಿಗೆ ಮತ್ತು ಅವನ ಆಲೋಚನೆಗಳಿಗೆ ಇಂಬು ಕೊಡುವಂತೆ ದಾರಿಯಲ್ಲಿ ಸಿಕ್ಕ, ಊರಿನಲ್ಲಿರುವ ರಮೇಶನ ಸ್ನೇಹಿತರು ಕಿವಿ ಕಚ್ಚಲು ಶುರು ಮಾಡಿದರು.

ರಮೇಶನ ಆಗಮನದ ನಿರೀಕ್ಷೆಯಲ್ಲಿದ್ದ ದಿನೇಶ, ತಾನು ತನ್ನ ಪರಿಸ್ಥಿತಿಯನ್ನು ರಮೇಶನೊಂದಿಗೆ ಹೇಳಿದ. ರಮೇಶ ಇನ್ನು ಮೂರು ತಿಂಗಳು ಕಾಲೇಜಿಲ್ವಂತೆ ಕಣೋ. ನಾವೆಲ್ಲಾ ಇನ್ನು ಮೂರು ತಿಂಗಳು ಊರಲ್ಲಿರ್ತೀವೋ. ನಿಂಗೆ ಈಗ ಖುಷಿ ಆಯ್ತು ಅಲ್ವ ಅಂತ ಹೇಳುವ ಅಣ್ಣನ ಮಾತನ್ನು ಅರ್ಧದಲ್ಲೇ ತುಂಡರಿಸಿದ ರಮೇಶ, ದಿನೇಶನ ಮನಸ್ಸಿಗೆ ಚುಚ್ಚುವಂತೆ, "ಅಣ್ಣ ನೀ ಏನು ಇಲ್ಲೇ ಇರೋ ಹಾಗೇ ಕಾಣಿಸ್ತಿದೆ. ಕಾಲೇಜಿಲ್ಲ ಅಂದ್ರೆ ಅಲ್ಲಿವರೆಗೂ ಬೇರೆ ಏನಾದ್ರೂ ಮಾಡು. ಬೆಂಗಳೂರಲ್ಲಿ ಕೆಲ್ಸಕ್ಕೆನು ಕೊರತೆ. ಸುಮ್ನೆ ಹಿಂಗೇ ಊರಲ್ಲಿ ಎಸ್ಟ್ ದಿನ ಅಂತ ಇರ್ತೀಯ. ಈಗ ಮೂರ್ ತಿಂಗಳು ಅಂತೀಯಾ ಆಮೇಲೆ ಇಲ್ಲೇ ಇರೋ ಹಂಗೂ ಕಾಣಿಸ್ತೀಯ. ನಂಗೂ ಕಷ್ಟ ಆಗತ್ತೆ ನಿಮ್ಮೆಲ್ಲರನ್ನ ಸಂಬಾಳಿಸೋದು" ಅಂತ ಅಂದ. ತಮ್ಮನ ಅನಿರೀಕ್ಷಿತ ಮಾತಿನಿಂದ ತೀವ್ರ ಮನ ನೊಂದ ದಿನೇಶ, "ಏನಾದ್ರು ಕೆಲಸ ಮಾಡ್ತಿನೋ ನಾನು ಮನೇಲಿ. ನಿಂಗೆ ಸಹಾಯ ಆದರು ಆಗತ್ತೆ" ಅಂತಂದರೆ, ಬೇಡಪ್ಪ ಬೇಡ. ಏನೂ ಮಾಡೋದು ಬೇಡ ನೀ ಮೊದಲು ಹೋಗಪ್ಪಅಂತ ರಮೇಶ ನೇರವಾಗಿ ದಿನೇಶನನ್ನು ಮನೆಯಿಂದ ಹೊರ ಹೋಗುವಂತೆ ಹೇಳಿದನು. ತನ್ನೆಲ್ಲ ಒಳ್ಳೆತನ ಧಾರೆ ಎರೆದು ತನ್ನ ತಮ್ಮನಿಗಾಗಿ ಮಿಡಿದ ಹೃದಯಕ್ಕೆ ಚೂರಿ ಹಾಕಿದ ತಮ್ಮನಿಂದಾಗಿ ದಿನೇಶ ಈಗ ತನ್ನ ಹೆಂಡತಿ ಮಗುವಿನ ಬಗ್ಗೆ ಚಿಂತಿಸಿದ. ಅವರಿಗೆ ಅನ್ಯಾಯ ಮಾಡಿದೆನಾ ಅಂತ ದುಃಖಿಸಿದ. ನಾಳೆ ಬೆಳಿಗ್ಗೆ ಸರಿ ಹೋಗಬಹುದು ಎಂದು ತಿಳಿದ ದಿನೇಶನಿಗೆ ದಿಕ್ಕು ತೋಚದಂತಾಗಿದ್ದು ತನ್ನ ತಂದೆಯ ಮಾತಿನಿಂದ. ವಯಸ್ಸಿನ ಹೊಡೆತದಿಂದಾಗಿ ಆಲೋಚನಾ ಶಕ್ತಿ ಹೀನರಾಗಿ ಮತ್ತು ಮನೆಲ್ಲಿದ್ದ ಮಗನೆ ತಮ್ಮನ್ನು ನೋಡಿಕೊಳ್ಳುತ್ತಾನೆಂಬ ನಂಬಿಕೆಯಿಂದ, "ಓದ್ಕೊಂಡಿರೋ ನಿಂಗೆ ಇಲ್ಲೇನೋ ಕೆಲಸ. ಬೆಂಗಳೂರು ಹಳಿಸಿತೇನೋ?" ಅಂತ ರಮೇಶನ ಮಾತಿಗೆ ದನಿಯಾದರು ಅಪ್ಪ. ಪ್ರಪಂಚ ತಲೆಮೇಲೆ ಬಿದ್ದಂಗಾಗಿ ದಿನೇಶ ಕುಸಿದು ಬಿಟ್ಟ. ಕೊರೊನ ಕಾರಣದಿಂದ ಬೆಂಗಳೂರು ಇರಲು ಸುರಕ್ಷಿತವಲ್ಲ ಎಂದು ಹುಟ್ಟೂರಿಗೆ ತನ್ನವರೊಂದಿಗೆ ಒಂದಷ್ಟು ಸಮಯ ಕಳೆಯುವ ಶುದ್ಧ ಮನಸ್ಸಿನಿಂದ ಬಂದವನಿಗೆ ಅವಮಾನದ ಜೊತೆಗೆ ಮನೆಯಿಂದ ಹೊರ ಹಾಕುವ ಯೋಚನೆ ಮನೆಯವರದ್ದು. ರಮೇಶನ ಮನಸ್ಸು ಕಲ್ಲಾಗಿತ್ತು ಮತ್ತು ಆಸ್ತಿಯಲ್ಲಿ ತಾನೊಬ್ಬನೇ ಪಾಲುದಾರ ಎಂಬ ಭಾವನೆ ಅವನನ್ನು ಯಾವ ಹಂತಕ್ಕೂ ಇಳಿಸಿಬಿಟ್ಟಿತ್ತು. ಯಾವಾಗ ರಮೇಶ ಮುಂದುವರೆದು, ದಿನೇಶನ ಲಗ್ಗೇಜು ಕೈಯ್ಯಲ್ಲಿಡಿದು ಹೊರ ಎಸೆಯಲು ಮುಂದಾದಾಗ, ನಿಲ್ಲು, ನಾನೇ ಹೋಗುತ್ತೇನೆ ಎಂದು ತನ್ನ ಹೆಂಡತಿ ಮಗುವಿನೊಂದಿಗೆ ಹೊಸಿಲ ಹೊರಗೆ ಹೆಜ್ಜೆ ಹಾಕಿದ ದಿನೇಶ. ಆದ್ರೆ ದುರಂತ ಅಂದ್ರೆ ಇದು ದಿನೇಶನ ಮನೆಯಲ್ಲಿ ಮಾತ್ರವಲ್ಲ ಇಡೀ ಊರಿನ ಸ್ಥಿತಿಯಾಗಿತ್ತು. ದುಡಿಮೆಗಾಗಿ ಹೊರಹೋದವರು ಸುರಕ್ಷತೆಗಾಗಿ ನಾಲ್ಕು ದಿನ ತಮ್ಮ ಊರಿಗೆ, ಮನೆಗೆ ಬಂದಾಗ ಅವರನ್ನು ತಮ್ಮವರೇ ಎಂದು ಒಪ್ಪಿಕೊಳ್ಳಲಾಗದ, ಆಸ್ತಿ ಅಂತಸ್ತಿನ ದುರಾಸೆಗೆ ಕರುಣೆ ತುಂಬಿದ ಜನರೆನಿಸಿಕೊಡ ಹಳ್ಳಿಯವರೂ ಬದಲಾಗಿದ್ದರು. ದಿನೇಶ ಒಂದೊಂದೇ ಹೆಜ್ಜೆ ಇಟ್ಟು ಊರ ಹೊರ ಹೋಗುವಾಗ ಸಹಾಯಕ್ಕೆ ಬರಬೇಕಾಗಿದ್ದ ಊರ ಜನ ತಮ್ಮ ಮನೆಯಲ್ಲೂ ಇಂತದ್ದೇ ಆಸಾಮಿ ಇದಾನಲ್ಲ ಅವನು ಯಾವಾಗ ತೊಲಗುತ್ತಾನೋ ಅಂತ ಹಲುಬುತ್ತಿದ್ದರು. ಮಾನವೀಯತೆ ಮಲೆನಾಡಿನಿಂದಲೂ ಮರೆಯಾದ ದಿನಗಳು ಸ್ಪಷ್ಟವಾಗಿ ಗೋಚರಿಸಿದವು. ದಿನೇಶ ತನ್ನ ದೃಷ್ಟಿಯನ್ನು ಯಾವುದೊ ಬಿಂದುವಿನಲ್ಲಿ ಕೇಂದ್ರೀಕರಿಸಿ, ಹೆಂಡತಿ, ಮಗುವಿನೊಂದಿಗೆ ಅರಿಯದ ದಿಕ್ಕಿಗೆ ಹೆಜ್ಜೆ ಹಾಕಿದನು.

ದೊಡ್ಡಪ್ಪ ಗೌಡರ ದೂರದ ಗುಂಡಗದ್ದೆ ಅಡಿಕೆ ತೋಟದಲ್ಲಿ ಕುಮಾರ ಔಷಧಿ ಹೊಡೆದು ವಾಪಸ್ಸು ಬರೋವಾಗ, ಯಾರೋ ಗಂಡ ಹೆಂಡತಿ ಇಬ್ಬರು ತನ್ನ ಮಗುವಿನೊಂದಿಗೆ ಬಸ್ಸು ಇಲ್ಲದ ರಸ್ತೆಯಲ್ಲಿ ಭಾರವಾದ ಹೆಜ್ಜೆ ಹಾಕಿ ನಡೆಯುತ್ತಿದ್ದುದನ್ನು ಪೇರಳೆ ಹಣ್ಣು ತಿನ್ನುತ್ತಾ ಗೂಡ್ಸ್ ಗಾಡೀಲಿ ಕೂತಿದ್ದ ಕುಮಾರ ಗಮನಿಸಿ, ಯಾರೋ ಕಿಶೋರ ಅದು ಈ ಕೊರೊನ ಟೈಮ್ ಲಿ ಅಷ್ಟೊಂದ್ ಲಗ್ಗೇಜು ಹಿಡಿದು ಹೋಗ್ತಾ ಇದಾರಲ್ಲ. ಮಗು ಬೇರೆ ಇದೇ ಅಂತ ಕುಮಾರನ ಹೃದಯ ಸಹಾಯಕ್ಕೆ ಮಿಡಿಯಿತು. ಆದ್ರೆ ಕಿಶೋರ, "ಬೇಡ ಕುಮಾರಣ್ಣ ಕೊರೊನ ಟೈಮ್ ಬೇರೆ, ಸುಮ್ನೆ ಯಾಕೆ ರಿಸ್ಕು. ಅವರು ಎಲ್ಲಿಂದ ಬರ್ತಾ ಇದಾರೋ, ಎಸ್ಟ್ ದಿನದಿಂದ ನಡೀತಾ ಇದರೊ" ಅಂತ ಅಂದ. ಹಾಗೆಂದುಕೊಂಡು ಗೂಡ್ಸ್ ಮುಂದೆ ಹೋಯ್ತು ಕುಮಾರನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಕಿಶೋರನ ಮಾತು ಸರಿ ಅನ್ನಿಸಿತು. ಒಂದೆರಡು ಕಿಲೋಮೀಟರ್ ಹೋದ ಮೇಲೆ ಕಿಶೋರನ ಆ ಒಂದು ಮಾತು ಈಗ ಸರಿಯಾಗಿ ಕುಮಾರನಿಗೆ ತಾಕಿತು. ಮನ ಕಲುಕಿತು. "ಕಿಶೋರ ಗಾಡಿ ನಿಲ್ಸು" ಕುಮಾರನ ಧ್ವನಿಯಲ್ಲಿ ಮರುಕವಿತ್ತು. ಏನಂದೆ ನೀನು..... "ಅವರು ಎಸ್ಟ್ ದಿನದಿಂದ ನಡೀತಿದ್ದಾರೋ". ಹೌದಲ್ವಾ, ಅವರು ಎಷ್ಟು ದಿನದಿಂದ ನಡೀತಿದ್ದಾರೋ, ಮಗು ಇದೆ. ಊಟ ಮಾಡಿದ್ದಾರೋ ಇಲ್ವೋ , ಇಂತ ಟೈಮ್ ನಲ್ಲಿ ಅವರನ್ನ ವಿಚಾರಿಸದೆ ಬಂದ್ವಿ ಅಲ್ವ? ಛೆ... ಎಂತ ಕೆಲಸ ಮಾಡಿದ್ವಿ ನಾವು. "ಕಿಶೋರ ಏನೂ ಮಾತಾಡದೆ ಗೂಡ್ಸ್ ಅವರಿದ್ದಲ್ಲಿಗೆ ತಿರುಗಿಸು" ಕುಮಾರನ ಧ್ವನಿಯಲ್ಲಿ ಆದೇಶ ಇತ್ತು ಮತ್ತು ಕುಮಾರಣ್ಣ ಅಂದ್ರೆ ವಿಪರೀತ ಗೌರವಿಸೋ ಕಿಶೋರ ತನ್ನ ತಪ್ಪನ್ನೂ ಅರಿತುಕೊಂಡ. ಹಿಂತಿರುಗಿ ಬಂದಾಗ, ದಿನೇಶನ ಹೆಂಡತಿ ನಡೆದು ನಡೆದು ನಿತ್ರಾಣಳಾಗಿದ್ದಳು. ಮಗು ಪರಿಸ್ಥಿತಿಯ ಅರಿವಿಲ್ಲದೆ ತಾಯಿಯ ಕೂದಲಿನ ಜೊತೆ ಆಡುತ್ತಿದ್ದಳು. ದಿನೇಶ ಹತಾಶನಾಗಿ ತನ್ನ ಒಳ್ಳೆತನಕ್ಕೆ ದೊರೆತ ಉಡುಗೊರೆಗೆ ಮಂದಿರ ಕಟ್ಟುತ್ತಿದ್ದ. ಗಾಡಿಯಿಂದ ಇಳಿದ ಕುಮಾರ, ದಿಗಿಲುಬಡಿದಂತಾಗಿ, "ಏನೋ ಇದು, ನಾನು ಕಣೋ ಕುಮಾರ. ದಿನಿ, ಏನೋ ಇದು ಯಾಕೋ ನಡ್ಕೊಂಡ್ ಹೋಗ್ತಾ ಇದ್ದೀಯ. ಏನಾಯ್ತೋ....." ಹೀಗೆ ಬಿಟ್ಟೂ ಬಿಡದೆ ಒಂದೇ ಸಮನೆ ಕೇಳಿದ. ದಿನೇಶನಿಗೆ ಏನೋ ಹೇಳ್ಬೇಕೆಂದೇ ತೋಚಲಿಲ್ಲ. ಅವನೆದುರಿಗೆ ತನ್ನ ಆತ್ಮೀಯ ಗೆಳೆಯ, ಹತ್ತು ವರ್ಷಗಳ ಹಿಂದೆ ಸಹಪಾಠಿಯಾಗಿದ್ದ ಕುಮಾರ ಇದಾನೆ. ಕುಮಾರನ ಸಹಕಾರದ ಬಗ್ಗೆ ಅರಿವಿದ್ದ ದಿನೇಶನಿಗೆ ಈಗ ನಿತ್ರಾಣದಲ್ಲೂ ರಕ್ತ ಮೈಕೈ ತುಂಬಾ ಹರಿದಾಡಿ ಸದೃಢನಾದ. ಕುಮಾರನು ಮೊದಲು ತನ್ನಲ್ಲಿದ್ದ ನೀರನ್ನು ಅವರೆಲ್ಲರಿಗೂ ಕೊಟ್ಟು ನಂತರ ಅಲ್ಲೇ ಇದ್ದ ಹೊನ್ನೆ ಮರದ ಬುಡಲ್ಲಿ ಕೂರಿಸಿದ. ದಿನೇಶ, ತನ್ನ ಪರಿಸ್ಥಿತಿಯನ್ನ ಮುಜುಗರದಲ್ಲೇ ಕುಮಾರನಿಗೆ ವಿವರಿಸಿದ. ಕುಮಾರ ಆ ಒಂದು ಕ್ಷಣ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಓದುವಾಗಿನ ಕಷ್ಟ ದಿನಗಳಲ್ಲಿ ಪರಸ್ಪರರ ಸಹಕಾರ ನೆನೆದು ತಬ್ಬಿಕೊಂಡರು. ಅಲ್ಲೇ ಕುಮಾರ ನಿಶ್ಚಯಿಸಿದ. ದಿನೇಶನ ರಕ್ಷಣೆಯ ಜೊತೆಗೆ ರಮೇಶನಿಗೆ ಅರಿವು ಮೂಡಿಸುವುದು ಸಹ ಮಾಡಬೇಕೆಂದು.
ವಾಸ್ತವವಾಗಿ ರಮೇಶ ಉತ್ತಮ ವ್ಯಕ್ತಿತ್ವದವನೇ ಆಗಿದ್ದ. ಒಂದೆರಡು ಬಾರಿ ಓದುವಾಗ ಅಣ್ಣನ ನೋಡಲು ವಿಶ್ವವಿದ್ಯಾಲಯಕ್ಕೆ ಬಂದಾಗ ರಮೇಶನ ಕೃಷಿ ಚಟುವಟಿಕೆಯ ಬಗ್ಗೆ ಇದ್ದ ಅಗಾಧ ಜ್ಞಾನ ಮತ್ತು ಆಸಕ್ತಿಯ ಕುರಿತು ಸ್ವತಃ ಕುಮಾರ ಚಕಿತನಾಗಿದ್ದ. ಸ್ವ-ಹಿತ ಚಿಂತನೆ ಮತ್ತು ಅನ್ಯರ ಮಾತಿನ ಮೇಲೆ ಅತೀಯಾದ ಅವಲಂಬನೆ ಅವನನ್ನು ಕುರುಡಾಗಿಸಿದೆ ಅಂಬುದನ್ನು ಬೇಗನೆ ಗ್ರಹಿಸಿದ ಕುಮಾರ, ದಿನೇಶನ ಸಂಸಾರವನ್ನು ತನ್ನ ಮನೆಗೆ ಗೂಡ್ಸ್ ಗಾಡಿಯಲ್ಲಿ ಕರೆದುಕೊಂಡು ಹೋದ.

ಅವತ್ತು ಏಪ್ರಿಲ್ ೧೯. ಬೆಳಿಗ್ಗೆ ೬ ಗಂಟೆಗೆ ರಮೇಶ ದನಕ್ಕೆ ಹುಲ್ಲು ಹಾಕಲು ಕೊಟ್ಟಿಗೆಗೆ ಹೋದಾಗ, ಅಚಾನಕ್ಕಾಗಿ ಅಣ್ಣನ ನೆನೆದ. ಅಣ್ಣ ಮನೆ ಬಿಟ್ಟು ಹೋದ ೪ ದಿನವಾದರೂ ಅಣ್ಣನ ಬಗ್ಗೆ ಯೋಚಿಸದ ಕುಮಾರ ಅವತ್ತೇಕೆ ಚಿಂತಿಸಿದ ಅನ್ನೋದು ಯಕ್ಷ ಪ್ರಶ್ನೆ. ಬಹುಶ ದನ ತನ್ನ ಕರುವಿನ ಬೆನ್ನು ನೆಕ್ಕುವುದು ರಮೇಶನ ಚಿತ್ತ ಕಲುಕಿರಲು ಸಾಕು. ಅಣ್ಣ ಬಹಳಷ್ಟು ಸಾರಿ ಹೇಳಿದ್ದು ನೆನಪಿತ್ತು ರಮೇಶನಿಗೆ. ಅಣ್ಣ ಹೇಳುತ್ತಿದ್ದ ಆ ಮಾತು ರಮೇಶನಿಗೆ ನೆನಪಾಯಿತು. ನಾವು ಸಹ ಈ ದನಕರುಗಳಂತೆ ಪರಸ್ಪರ ಮುದ್ದಿಸುತ್ತಲೇ ಇರಬೇಕು ಅಂತ. ಕಣ್ಣೀರು ರಮೇಶನಿಗರಿವಿಲ್ಲದೆ ಕೆನ್ನೆಮೇಲೆ ಇಳಿದೋಯ್ತು. ಅರಿವಿಲ್ಲದೆ ಅಣ್ಣ ಎಂದು ತುಟಿ ಕಂಪಿಸಿತು. ಇದನ್ನು ಗಮನಿಸಿದ ರಮೇಶನ ಹೆಂಡತಿ, "ಯಾರದ್ದೋ ಮಾತಿಗೆ ಈ ರೀತಿ ಮಾಡಿದ್ದು ಸರಿಯಲ್ಲ. ನಿಮ್ಮಣ್ಣ ನಿಮಗಾಗಿ ಮಾಡಿದ ಪ್ರತಿ ಕೆಲಸ ನೆನಪಿಸಿಕೊಳ್ಳಿ. ಕಾರು, ತೋಟ, ಇವೆಲ್ಲ ನಿಮಗೆ ದಯಪಾಲಿಸಿದ್ದು ಯಾರು. ನಿಮ್ಮಣ್ಣನ ಸಹಕಾರ ಇಲ್ಲದಿದ್ದರೆ ಇದೆಲ್ಲ ಇತ್ತಾ ನಿಮಗೆ. ನಾ ಹೇಳುವುದಿಷ್ಟೇ, ನೀವು ಮಾಡಿದ್ದು ತಪ್ಪು. ನಾವೆಲ್ಲಾ ಒಟ್ಟಿಗಿರೋಣ" ಅಂತ ಅಂದಳು. ಹೆಂಡತಿಯ ವಿಶಾಲ ಮನಸ್ಥಿತಿಗೆ ಮೆಚ್ಚಿ ತನ್ನ ತಪ್ಪಿಗೆ ಮರುಗುತ್ತ ಅಣ್ಣನ ಹುಡುಕಲು ಮನಸ್ಸು ಮಾಡಿದ. ಅದೇ ಸಮಯದಲ್ಲಿ ಫೋನ್ ರಿಂಗಾಯಿತು. ಆ ಕಡೆಯಿಂದ, "ರಮೇಶ್ ಅವರಾ ಮಾತಾಡುವುದು?" ಎಂದಿತು. ಮೊದಲೇ ದುಃಖದ ಮಡುವಲ್ಲಿದ್ದ ರಮೇಶ, ಹೌದು ಏನ್ ಹೇಳಿ ಅಂದ. “ಅದೂ....... ಅದೂ......”, ಅಸ್ಪಷ್ಟವಾಗಿದ್ದ ಧ್ವನಿ   "ಚಂಗಾರು ಬಳಿಯ ಹೊಸಪೇಟೆ ಹತ್ತಿರ ಮಾಲತಿ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲಿ ದಿನೇಶ ಅನ್ನೋರು....... ಆದಷ್ಟು ಬೇಗ........... ಬಂದ್ರೆ ........ಸಾ ......" ಅಂತಂದು ಮಧ್ಯೆ ಮಧ್ಯೆ ಅಸ್ಪಷ್ಟವಾದ ಮಾತಿನೊಂದಿಗೆ ಕರೆ ಕಟ್ ಆಗಿತ್ತು. ರಮೇಶ ತಡ ಮಾಡದೇ ಸ್ವಿಫ್ಟ್ ಕಾರ್ ಸ್ಟಾರ್ಟ್ ಮಾಡಿದವನೇ ಹೊಸಪೇಟೆ ಕಡೆ ಹೊರಟ.  ೮ ಗಂಟೆಗೆ ಕೊರೋಡಿ ಹತ್ರದ ಉಬ್ಬಿಗೆ ಬಂದವನೇ ರಸ್ತೆಗೆ ಬಿದ್ದಿದ್ದ ಮರ ನೋಡಿ ಈಗೇನು ಮಾಡೋದು. ಮರ ಹೇಗೆ ಸರಿಸೋದು. ನಾ ಹೇಗೆ ತಲುಪಲಿ ಹೊಸಪೇಟೆ. ಮುಗಿದೇ ಹೋಯ್ತು. ನನ್ನ ಪ್ರೀತಿಯ ಅಣ್ಣನ ಬಲಿ ಪಡೆದೆ ನಾನು. ಅಪ್ಪನಿಗಿಂತ ಹೆಚ್ಚಾಗಿದ್ದ ಅಣ್ಣ, ನಂಗೆ ಜೀವನ ಕೊಟ್ಟ ಅಣ್ಣ, ನಾನಿರುವ ಇವತ್ತಿನ ಸ್ಥಿತಿ ಅವನ ಭಿಕ್ಷೆ ಅನ್ನೋದು ಮರೆತು ಅವನನ್ನೇ ....ಛೆ... ಅಂತ ತನ್ನಷ್ಟಕ್ಕೆ ತಾನೇ ದಂಡಿಸಿಕೊಳ್ಳುತ್ತಾ, ಕಾರಿನಿಂದಿಳಿದು ದಾರಿಗಡ್ಡವಾಗಿದ್ದ ಮರ ಸರಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಮತ್ತು "ಸ್ವಲ್ಪ ಹೊತ್ತು ಕಣೋ ಬಂದೆ. ನನಗಾಗಿ... ದಯವಿಟ್ಟು ನನಗಾಗಿ ಜೀವ ಹಿಡಿದಿಟ್ಟುಕೋ" ಅಂತಾನೆ ಮರ ತಳ್ಳುತ್ತಿದ್ದ. ಔಷಧಿ ಹೊಡೆಯುವ ಕುಮಾರ ಜೊತೆಯಾಗಿದ್ದು ಮತ್ತು ಇಬ್ಬರ ನಡುವೆ ಈ ಸಂಭಾಷಣೆ ನಡೆದದ್ದು ಇದೇ ಸಂದರ್ಭದಲ್ಲಿ. "ಈ ಮುತುವರ್ಜಿ, ಅಕ್ಕರೆ, ಕಾಳಜಿ, ಪ್ರೀತಿ, ಬಾಂಧವ್ಯ ಈಗ್ಯಾಕೆ ರಮೇಶ. ನಡಿ ನಮ್ಮನೆಗೆ ನಿಮ್ಮಣ್ಣ ನಮ್ಮನೇಲಿ ಇದ್ದಾನೆ”.

ಕಾರು ಚಲಿಸುತ್ತಿತ್ತು.ಒಬ್ಬರಿಗೊಬ್ಬರು ಮಾತನಾಡದೆ ಮೌನವಾಗಿದ್ದರೂ ಸಹ, ರಮೇಶನ ಪಶ್ಚಾತ್ತಾಪದ ಮತ್ತು ಕುಮಾರನ ಆಕ್ರೋಶದ “ಉಸಿರು” ಜೋರಾಗಿ ಮಾತನಾಡುತಿತ್ತು. ಕುಮಾರನ ಮನೆ ಬಂತು. ಕಾರಿಂದ ಇಳಿಯುವ ಮೊದಲು ಕುಮಾರನು, ಆತಂಕದಲ್ಲಿದ್ದ ರಮೇಶನಿಗೆ, ಹೆದರಬೇಡ ಗೆಳೆಯ. ಧೈರ್ಯವಾಗಿರು. ನಾ ನಿನ್ನಣ್ಣನ ಗೆಳೆಯ ಕುಮಾರ. ಈಗ್ಗೆ ಹತ್ತು ವರ್ಷಗಳ ಹಿಂದೆ ನೀ ಎರಡು ಬಾರಿ ನಮ್ಮ ಹಾಸ್ಟೆಲ್ಗೆ ಬಂದಿದ್ದೆ ಮತ್ತು ನಾವಿಬ್ರೂ ಲಕ್ಕವಳ್ಳಿ ಥಿಯೇಟರ್ ನಲ್ಲಿ "ರಕ್ತಕಣ್ಣೀರು" ಸಿನಿಮಾ ನೋಡಿದ್ವಿ ನೆನಪುಂಟಾ ಅಂದಾಗ, "ಕುಮಾರಣ್ಣ ನೀವಾ...! ಉದ್ಗಾರ ತೆಗೆದ ರಮೇಶ ಮತ್ತು ಅಣ್ಣಾ..... ಹೇಗಿದ್ದಾನೆ. ನನಗೆ ತಪ್ಪಿನ ಅರಿವಾಗಿದೆ. ಇನ್ನೆಂದೂ ನಾ ಮೈ ಮರೆಯುವುದಿಲ್ಲ. ಅಣ್ಣನ ಉಸಿರಿದ್ದರೆ ಸಾಕು ಎಂದು ಪರಿತಪಿಸುತ್ತಾನೆ ರಮೇಶ. "ಸ್ನೇಹ ಅಮರ. ಅವತ್ತು ದಾರಿಯಲ್ಲಿ ನಾನು ಅಚಾನಕ್ಕಾಗಿ ದಿನೇಶನ್ನ ಗುರುತಿಸಿದೆ. ದೊಡ್ಡ ಅನಾಹುತ ತಪ್ಪಿತು. ಹಾಗಂತ ಅವನು ಜೀವಕ್ಕೆ ಹಾನಿ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ. ಆದ್ರೆ ಅವನಿಗಾದ ಮಾನಸಿಕ ವೇದನೆ ತಡೆದುಕೊಳ್ಳಲಾರದೆ ಹೊರ ಬರಲು ಅದೆಷ್ಟು ದಿನ ಬೇಕಿತ್ತೋ" ಎಂದು ತಿಳಿ ಹೇಳಿದ ಕುಮಾರ. ಅಣ್ಣನ ನೋಡಲು ಕಾತುರದಿಂದ ಓಡುತ್ತಿದ್ದ ರಮೇಶನನ್ನು ಕೂಗಿದ ಕುಮಾರ, " ಬೆಳಿಗ್ಗೆ ನಿಂಗೆ ಕರೆ ಮಾಡಿದ್ದು ನಾನೇ, ಮತ್ತು ಅದೂ ನಿನ್ನ ಅಣ್ಣನಿಗೆ ಗೊತ್ತಿಲ್ಲ. ನೀನೂ ಅದನ್ನು ಅವನಿಗೆ ಹೇಳಬೇಡ. ನೀ ಇಲ್ಲಿರುವೆಂದು ತಿಳಿದು ಕರೆದುಕೊಂಡು ಹೋಗಲು ಬಂದಿರುವೆನೆಂದು ಹೇಳು ಎಂದಾಗ, ಹಾಗಾದರೆ ಹೊಸಪೇಟೆ, ನದಿ ಅದೇನದು? ರಮೇಶ ಕೇಳಿದ. ನೀ ತಕ್ಷಣ ಬರಲಿ ಎಂದು ಹಾಗಂದೆ. ಕ್ಷಮೆ ಇರಲಿ ರಮೇಶ. ಖುಷಿಯಿಂದ ರಮೇಶ ಓಡಿ ಬಂದು ಕುಮಾರನಿಗೆ ತಬ್ಬಿಕೊಂಡು, "ಅಣ್ಣನನ್ನು ನಾನು ಇವತ್ತು ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಅಣ್ಣನನ್ನು ಮಾತಾಡಿಸಿಕೊಂಡು ನಾ ಮನೆಗೆ ಹೋಗಿ ನನ್ನ ಹೆಂಡತಿ ಮಗನೊಂದಿಗೆ ಬಂದು ನಾವೆಲ್ಲರೂ ನಿಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಹೋಗುತ್ತೇನೆ ಕುಮಾರಣ್ಣ" ಎಂದು ಹೇಳಿ ಅಳುತ್ತಲೇ ಅಣ್ಣನ ಬಳಿ ಓಡಿದ ರಮೇಶ.

ಪ್ರಶಾಂತ ಶೀರೂರು