ಸೋಮವಾರ, ಆಗಸ್ಟ್ 31, 2009

ನಂದಿ ಬೆಟ್ಟ ಕೊಟ್ಟ ಖುಷಿತುಂಬಾ ದಿನದ ಆಸೆಯೊಂದು ಮೊನ್ನೆ ಭಾನುವಾರ ಪೂರ್ತಿಯಾಗಿತ್ತು. ಅದೇನೆಂದರೆ ನಂದಿ ಬೆಟ್ಟ ನೋಡುವುದಾಗಿತ್ತು. ಅದಕ್ಕಾಗಿ ಕಳೆದ ವಾರಾನೇ ಗೆಳೆಯರೆಲ್ಲ ಸೇರಿ ಮುಂದಿನ ಭಾನುವಾರ ನಂದಿಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಿದೆವು. ಅದರಂತೆ ಭಾನುವಾರ ಬೆಳಿಗ್ಗೆ ಸುಮಾರು ಐದೂವರೆಗೆ ಸರಿಯಾಗಿ ಚುಮು ಚುಮು ಚಳಿಯಲ್ಲಿ ಬೈಕ್ ಮಾಡಿಕೊಂಡು ಹೊರಟ್ವಿ. ಜೊತೆಗೆ ಬೆಳಿಗ್ಗೆ ಬೇಗ ಎದ್ದು ಮಾಡಿದ್ದ ಟೊಮ್ಯಾಟೊ ಬಾತ್ ಬೆನ್ನ ಮೇಲಿನ ಬ್ಯಾಗ್ನಲ್ಲಿತ್ತು. ನಮ್ಮನೆಯಿಂದ ನಾನು ಮತ್ತು ನನ್ಗೆಳೆಯ ಚಂದ್ರು ನನ್ ಬೈಕ್ನಲ್ಲಿ, ಹಾಗೆ ಇನ್ನೊಬ್ಬ ನನ್ ಫ್ರೆಂಡ್ ಉಮೇಶನ ಬೈಕ್ನಲ್ಲಿ ಅವನ ಗೆಳೆಯ ಶಶಾಂಕ್ ಇದ್ದ. ಹೀಗೆ ಹೊರಟವರು ಕೆ ಆರ್ ರೋಡ್ ಮೇಲೆ ಮಾರ್ಕೆಟ್ ದಾಟಿ ವಿಧಾನಸೌಧ ನೋಡ್ತಾ ನೋಡ್ತಾ ಮುಂದೆ ಹೆಬ್ಬಾಳದ ಹತ್ತಿರ ಕೊಲಂಬಿಯ ಆಸ್ಪತ್ರೆ ಎದುರಿಗೆ ಬೈಕ್ ನಿಲ್ಲಿಸಿದೆವು. ಅಲ್ಲಿಗೆ ಮತ್ತೈದು ಬೈಕ್ ಬಂದವು. ಅದರಲ್ಲಿ ನನ್ ತಮ್ಮ ಮತ್ತು ನನ್ನತ್ತೆಮಗ ಇಬ್ಬರೇ ನಂಗೆ ಚಂದ್ರುಗೆ ಗೊತ್ತಿದ್ದಿದ್ದು. ಮತ್ತೆಲ್ಲ ನಮಗೆ ಹೊಸ ಪರಿಚಯದವರಾಗಿದ್ದರು. ಅಂದರೆ ಅವರೆಲ್ಲ ಉಮೇಶನ ಫ್ರೆಂಡ್ಸ್. ಅಲ್ಲಿಂದ ಟೀಕುಡಿದು ಹೊರಟ ನಮ್ಮ ತಂಡದಲ್ಲಿ ಏಳು ಬೈಕ್, ಹದಿನಾಲ್ಕು ಜನರ ಪಯಣ ನಂದಿ ಬೆಟ್ಟದ ಕಡೆಗೆ. ಆ ಸುಂದರ ರಸ್ತೆಗೆ ಎಲ್ಲರೂ ಏರ್ ಪೋರ್ಟ್ ರಸ್ತೆ ಅನ್ನೋದು ಸರಿಎನೋ ಅನ್ನಿಸ್ತು. ಕಾರಣ ಅಲ್ಲಿ ಓಡಾಡೋ ಪ್ರತಿಯೊಂದು ವಾಹನಾನು ವಿಮಾನದ ತರಾನೆ ಗುಯ್ನ್ನ್ನ್ ಅಂತಾನೆ ಶಬ್ದ ಮಾಡ್ತಾ ಸುಯ್ನ್ನ್ ಸುಯ್ನ್ನ್ ಅಂತ ಓಡಾಡ್ತವೆ.ಸ್ವಲ್ಪ ಭಯದಲ್ಲೇ ಕೊನೆ ಲೈನ್ ನಲ್ಲಿ ಬೈಕ್ ಓಡಿಸ್ತಿದ್ದ ನನಗೆ ಹಿಂದಿಂದ ದೊಡ್ಡದೊಂದು ಲಾರಿ ಬರ್ತಾ ಇದೆ ಅಂತ ಅನ್ನಸ್ತು. ಅದರ ಶಬ್ದಕ್ಕೆ ಕೊಂಚ ಹೆದರಿ ಇನ್ನೂ ಸ್ವಲ್ಪ ಸೈಡ್ ಗೆ ಹೋದೆ. ಆ ಲಾರಿ ನನ್ ಹಿಂದೇನೆ ಬಂದೇ ಬಿಡ್ತು ಇನ್ನೇನ್ ಮಾಡ್ಲಿ ಅನ್ನೋಸ್ಟ್ ತ್ತಿಗಾಗ್ಲೆ ಆ ಲಾರಿ ಕಣ್ಣಿಗೆ ಕಾಣದ ವೇಗದಲ್ಲಿ ನನ್ನ ದಾಟಿ ಹೋಗಿತ್ತು. ಆದ್ರೆ ಅದು ಲಾರಿಯಾಗಿರಲಿಲ್ಲ ಬದಲಿಗೆ ಬೈಕ್ ರೇಸ್ ನಲ್ಲಿ ಇರುವಂತಹ ಬೈಕ್ ಆಗಿತ್ತು.ಆ ಸಾಹಸಿಗಳು ಮೈಗೆಲ್ಲ ರೊಬೋಟ್ ತರ ಬಟ್ಟೆ ಹಾಕ್ಕೊಂಡಿದ್ರು.ಅವರು ಹೋದ ವೇಗದಿಂದಾಗಿ ನಂಗೆ ಸರಿಯಾಗಿ ಆ ಬೈಕ್ನ ಚಂದ ನೋಡ್ಲಿಕ್ಕು ಆಗ್ಲಿಲ್ಲ. ನಾನ್ ಭಯಪಟ್ಟಿದ್ದು ನನ್ ಹಿಂದೆ ಕೂತಿದ್ ಭೂಪನಿಗೆ ಗೊತ್ತಾಯ್ತೋ ಇಲ್ವೋ ಗೊತ್ತಿಲ್ಲ. ಯಾಕೆ ಅಂದ್ರೆ ನನ್ ಬೈಕ್ ನಲ್ಲಿ ಸದಾ ಜೊತೆಗಿರೋನು ಅಂದ್ರೆ ಈ ಚಂದ್ರುನೇ. ಇವನ ಒಂದ್ ವಿಶೇಷ ಅಂದ್ರೆ ಹಿಂದೆ ಕೂತರೆ ನಾನು ಪದೇ ಪದೇ ಮುಟ್ಟಿನೋಡ್ಬೇಕು ಅವನ್ನ ಕೂತಿದಾನೋ ಇಲ್ವೋ ಅಂತ.ಅಸ್ಟ್ ನೀಟಾಗಿ ಕೂರ್ತಾನೆ.ನಾನೇನಾದ್ರು ಸ್ವಲ್ಪ ಚನ್ನಾಗಿ ಬೈಕ್ ಓಡಿಸ್ತೀನಿ ಅಂದ್ರೆ ಅದು ಇವನು ಹಿಂದೆ ಕೂತಾಗ ಮಾತ್ರ. ಇರಲಿ, ಆ ಸಾಹಸಿಗಳ ಬಗ್ಗೆನೇ .... ಏನ್ ಸ್ಪೀಡಗೊದ್ರೋ ಮಾರಾಯ ಅಂತ ಹೇಳ್ತಾ ಹೇಳ್ತಾ ಏರ್ ಪೋರ್ಟ್ ದಾಟಿ ನಂದಿ ಬೆಟ್ಟದ ಹತ್ರ ಹತ್ರ ಬಂದ್ವಿ. ಆಗಿನ್ನೂ ಆರೂವರೆ ಇರಬಹುದು. ಅಬ್ಬಬ್ಬಾ ಆ ಬೆಟ್ಟ ನೋಡಿದ್ರೆ, ಬೆಟ್ಟದ ತುದಿಗೆ ಸುತ್ತಲೂ ಹೊಗೆಯ ಟೋಪಿ ಧರಿಸಿದ ಹಾಗೆ ಕಾಣಿಸ್ತಿತ್ತು. ಅಸ್ಟೊಂದು ಹಿಮ ಬೀಳ್ತಾ ಇತ್ತು. ನಿದಾನವಾಗಿ ಬೆಟ್ಟದ ಕೆಳಗಿಂದ ಹತ್ತಲು ಪ್ರಾರಂಬಿಸಿ, ತಿರುವುಗಳಲ್ಲಿ ಸಾಗುವಾಗ ಭಯಮಿಶ್ರಿತ ಆನಂದ ಅನುಭವಿಸಿದ್ದು ಮರೆಯಲು ಸಾದ್ಯವಿಲ್ಲ. ಆಶ್ಚರ್ಯ ಅಂದ್ರೆ ಅಲ್ಲೂ ಕೂಡಾ ಮತ್ತದೇ ಗುಂಯ್ ಗುಂಯ್ ಶಬ್ದ. ಈಗ ಮಾತ್ರ ನಮಗೆ ಗೊತ್ತಾಯ್ತು, ಇದು ಅವ್ರೆ ಬೈಕ್ನವರು ಅಂತ.ಆದ್ರೆ ಆ ಹಾವು ಹರಿದಂತಿರುವ ಡೊಂಕು ಡೊಂಕು ರಸ್ತೆಲೂ ಅವರದ್ದು ಅದೇ ವೇಗ. ನೋಡಿ ನಿಜಕ್ಕೂ ಗಾಬರಿಯಾಯಿತು.ಅವರು ಸ್ಪರ್ದೆಗೆ ತಯಾರಿ ನಡೆಸ್ತಾ ಇದ್ರು. ನಂತರ ಬೆಟ್ಟದ ಮೇಲೆ ಹೊದಾಗಲಂತೂ ಚಳೀ ಚಳೀ. ಪೂರ್ತಿ ಮಂಜಿನಿಂದ ಮುಚ್ಚಿಕೊಂಡಿತ್ತು ಬೆಟ್ಟ. ಇದೇನೂ ಮಲೆನಾಡಿನವನಾದ ನನಗೆ ಹೊಸತೆನಲ್ಲದಿದ್ದರೂ ಸಹ ಸದ್ಯಕ್ಕಿದು ಹಳೆಯ ನೆನಪುಗಳನ್ನ ಮತ್ತೆ ಮತ್ತೆ ಕಣ್ಮುಂದೆ ತಂದಿತು. ಇದೇ ಥರದ ಬೆಟ್ಟಗಳು ನಮ್ಮೂರಿನಲ್ಲಿವೆ. "ಕೆಮ್ಮಣ್ಣುಗುಂಡಿ, ಕುಂದಾದ್ರಿ ಬೆಟ್ಟ, ಆಗುಂಬೆ, ಕೊಡಚಾದ್ರಿ. ಬಾಬಾ ಬುಡನ್ಗಿರಿ" ಇವೆಲ್ಲ ನಮ್ಮೂರಿಗೆ ಕೆಲವೇ ಕಿಲೋಮೀಟರುಗಳ ದೂರದವು. ಅವುಗಳನ್ನೆಲ್ಲ ಸ್ನೇಹಿತರ ಜೊತೆಗೆ ಹತ್ತಿಳಿದ ದಿನಗಳು ಅದೆಸ್ಟೋ. ಈ ನಂದಿ ಬೆಟ್ಟವು ಸಹ ಅಸ್ಟೇ ಸುಂದರವಾದ ಬೆಟ್ಟ. ಈಗ ನಮ್ಮದು ಬೆಟ್ಟ ಸುತ್ತುವ ಸರದಿ. ಮೊದಮೊದಲು ಕಂಡಿದ್ದೇ ಆ ದೊಡ್ಡ ಸುಂದರ ಕೆರೆ. ನಿಜಕ್ಕೂ ಸುಂದರವಾಗಿದೆ. ಆಮೇಲೆ ಉದ್ಯಾನ ವನ, ಬಂಡೆಗಲ್ಲು, ಮರಗಿಡ, ಮೊಖವಿಸ್ಮಿತರನ್ನಾಗಿಸುವ ದೇವಸ್ಥಾನಗಳು ಮನಸ್ಸಿಗೆ ಉಲ್ಲಾಸ ತಂದವು. ಆದರೆ ವಿಪರೀತ ಅನ್ನಿಸಿದ್ದು ಅಲ್ಲಿನ ಕೋತಿಗಳ ಅತೀ ಎನ್ನಿಸುವ ಒಗ್ಗಟ್ಟು ಮತ್ತು ಕಿತ್ತು ತಿನ್ನುವ ಬುದ್ದಿ. ಹೌದು, ಅವು ನಾವು ತೆಗೆದುಕೊಂಡು ಹೋಗಿದ್ದ ತಿಂಡಿನ ಯಾರದ್ದೂ ಅನುಮತಿ ಇಲ್ಲದೆ, ಭಯವೂ ಇಲ್ಲದೇ ಕಿತ್ತು ತಿಂದು ಮುಗಿಸಿದವು. ಆಮೇಲೆ ಅಲ್ಲಿಂದ ಭಯಾನಕ ಟಿಪ್ಪೂ ಡ್ರಾಪ್ ನೋಡಿಕೊಂಡು ಕೆಲವೊಂದು ಫೋಟೋ ತೆಗೆದುಕೊಂಡು ನಂದಿ ಬೆಟ್ಟದ ಕೆಳಗೆ ಬರುವಾಗಲೇ ಸ್ವಲ್ಪ ದಣಿವಾದಂತೆ ಆಗಿದ್ದೆವು. ಬೆಟ್ಟದ ಕೆಳಗೆ ಬಂದು ಟೀ ಕುಡಿಯುತ್ತಿರುವಾಗ ಸಮಯ ಸುಮಾರು ಹನ್ನೆರಡು ಘಂಟೆ ಅನ್ನಿಸತ್ತೆ, ಆಗ ಕಂಡಂತ ದೃಶ್ಯ ಚನ್ನಾಗಿತ್ತು. ಅದೇನೆಂದರೆ ನಂದಿಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಬೈಕ್ ನಲ್ಲಿ ಹುಡುಗ ಹುಡುಗಿಯರ ಜೋಡಿಯಿತ್ತು. ಆಗ ಅನ್ನಿಸಿದ್ದೇನೆಂದರೆ ನಾವು ಬೇಗ ಬೆಟ್ಟ ಇಳಿದು ಬಂದೆವ? ಅಂತ. ಇರಲಿ ಈ ಪ್ರವಾಸ ನನಗಂತೂ ವಿಶೇಷ ಅನ್ನಿಸಿದ್ದು, ಮುಂದಿನ ಬೇರೆ ಸುಂದರ ಸ್ಥಳದ ಹುಡುಕಾಟದಲ್ಲಿ ನಾವಿದ್ದೇವೆ. ನೀವೂ ಒಮ್ಮೆ, ಮತ್ತೊಮ್ಮೆ ಸಮಯ ಮಾಡಿಕೊಂಡು ನಂದಿ ಬೆಟ್ಟಕ್ಕೆ ಹೋಗಿಬನ್ನಿ. ಆ ರೋಮಾಂಚನದ ಸವಿ ನೀವೇ ಅನುಭವಿಸಿ.