ಗುರುವಾರ, ಜೂನ್ 25, 2009

ಮುದ್ದು ನಿನಗಿದು ಮೊದಲ ಪತ್ರ

ನೂರಾರು ಭಾವನೆಗಳಿಗೆ, ನೂರಾರು ಕನಸುಗಳಿಗೆ ಆಸರೆಯಾಗಿದ್ದ ನನ್ನ ಮನಸ್ಸಲ್ಲಿ ದಿಡೀರನೆ ಬಂದೆರಗಿದ ಬದುಕಿನ ಬವಣೆಗಳನ್ನ, ಅವುಗಳನ್ನೆದುರಿಸುವ ಧಾವಂತದಲ್ಲಿ ನಿರಾಸೆ, ನೋವು, ಆಘಾತ, ಅವಮಾನ ಅನ್ನೋಬಿರುಗಾಳಿ ಬೀಸಿ ನನ್ನ ಬಾವನೆಗಳನ್ನ, ಕನಸುಗಳನ್ನ ಒಣಗಿಸಿ ತರಗೆಲೆಗಳಂತೆ ಧರೆಗಿಳಿಸಿದ್ದವು. ಒಣಗಿದ ಮರದಂತೆ, ಮೌನ ಸ್ಮಶಾನದಲ್ಲಿ ಏಕಾಂಗಿ ಪಿಶಾಚಿಯಂತೆ, ಹರೆಯದಲ್ಲೇ ಮುದಿಯಾದಂತಿತ್ತು ನನ್ನ ಮನಸ್ಸು. ಇಂಥಹ ದುಷ್ಪರಿಣಾಮದ ಪರಿಚಯವಾದ ದಿನದಿಂದಲೇ ಮನಸ್ಸಿಗೆ ಮುದ ನೀಡಲು ಪರಿ ಪರಿಯಾಗಿ ಪ್ರಯತ್ನಿಸಿದೆ. ಪ್ರಯತ್ನ ಮಾತ್ರ ನನ್ನದಾಗಿತ್ತು. ಫಲ ನನ್ನಿಂದ ಬಲು ದೂರದಲ್ಲಿ ನಿಂತು "ತು" ನಿನ್ನ ಅಂತಿತ್ತು. ನಿರಾಸೆಯ ಬೀಜಾಸುರ ನನ್ನೊಳಗಿನ ಅಲ್ಪ ಸ್ವಲ್ಪ ಆಸೆಗಳನ್ನ ಅಟ್ಟಾಡಿಸಿಕೊಂಡು ನಿರ್ಭಯವಾಗಿ, ನಿರಾತಂಕವಾಗಿ ನುಂಗುವಂತಹ ಸಮಯದಲ್ಲಿ ನನಗೊಂದು ರೋಮಾಂಚನದ ಅನುಭವವಾಯ್ತು. ತೊಟ್ಟಿಲಲ್ಲಿದ್ದ ಮಗುವೊಂದು ಎದೆಗೆ ಒದ್ದ ಅನುಭವ. ಆಗ ತಾನೇ ಚಿಗುರಿದ ಎಲೆಯನ್ನು ಸ್ಪರ್ಶಿಸಿದ ಅನುಭವ. ಎಳೆಗರುವಿನ ಹಣೆಗೆ ಮುತ್ತಿಟ್ಟ ಖುಷಿಯ ಅನುಭವ. ಏನಿದು? ಏನಾಶ್ಚರ್ಯ? ಏನಾಗಿದೆ..... ಅಲ್ಲ ಅಲ್ಲ ಏನಾಗುತ್ತಿದೆ ಅನ್ನೋಸ್ಟರಲ್ಲಿ ನನಗರಿವಿಲ್ಲದೆ ನನ್ನ ಹೃದಯದೊಳಗೊಂದು ಕೋಗಿಲೆ ನುಸಿಳಿತ್ತು. ಅದು ನಿರಂತರವಾಗಿ ಕುಹೂ ಕುಹೂ ಅಂತಿತ್ತು. ಆ ಕೋಗಿಲೆಯ ಆಗಮನವೇ ನನ್ನ ಮನಸ್ಸಿಗೆ ಮರುಜನ್ಮ ನೀಡಿದ್ದು. ಅದರ ಕುಹೂ ಕುಹೂ ದನಿಯೇ ನನ್ನ ಮನಸ್ಸನ್ನ ಮುಗಿಲ ಗಲ್ಲಿ ಗಲ್ಲಿಗೂ ಹಾರಾಡುವಂತೆ ಮಾಡಿದ್ದು. ಆ ಕೋಗಿಲೆ ಯಾರು ಗೊತ್ತಾ? ನೀನೇ ಕಣೇ. ಕುಹೂ ದನಿ ಯಾರದ್ದು ಗೊತ್ತಾ? ನಿಂದೇ ಕಣೇ. ನನ್ನೊಳಗೇ ಬಾಡಿ ಹೋಗಿದ್ದ ಭಾವನೆಗಳು ಬದುಕುಳಿದಿದ್ದು ನಿನ್ನಿಂದ ಕಣೇ. ಕಣ್ಣುಗಳಿಗೆ ಕೋಲ್ಮಿಂಚಿನ ಬೆಳಕು ನೀಡಿ, ಕಣ್ಮರೆಯಾಗಿದ್ದ ಕನಸುಗಳನ್ನ ಹುಡುಕಿ ಕರೆತಂದದ್ದು ನೀನು. ಹೌದು ಕಣೇ ನೀನೇ ಅದು. ನಿನ್ನಿಂದಲೇ ಅದೆಲ್ಲ. ನನ್ನ ಮನಸ್ಸಿಗಾದ ವಸಂತಗಾಲ ನಿನ್ನಿಂದ ಕಣೇ.
ಏಯ್ ಮುದ್ದುಮರಿ ಅದಕ್ಕೆ ನೀನಂದ್ರೆ ನಂಗಿಸ್ಟ ಕಣೇ.........

ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ