ಶುಕ್ರವಾರ, ಜೂನ್ 26, 2009

ಅಜ್ಜೀ......


ಇದು ನಂಬಲಸಾದ್ಯವಾದರು ನಂಬಲೇಬೇಕಾದ ಸತ್ಯ. ನಾನು ನನ್ನ ಅಜ್ಜಿ ಊರಾದ {ಅಮ್ಮನ ಅಮ್ಮ } ಜಡ್ದಗದ್ದೆಯಲ್ಲಿಬೆಳೆದವನು. ಆದ್ದರಿಂದ ನನ್ನ ತಂದೆಯ ಮನೆಗೆ ನಾನೊಬ್ಬ ಅಥಿತಿ ತರ. ಅಲ್ಲಿನವರೆಲ್ಲಾ ನನಗೆ ನೆಂಟರಂತೆ. ನನಗರಿವಿರುವಂತೆ ನನ್ನ ತಂದೆಯ ತಾಯಿಯನ್ನು ನನ್ನ ಸ್ವಂತ ಅಜ್ಜಿ ಅಂತ ತಿಳುವಳಿಕೆ ಬಂದಿದ್ದು ಬಹುಶಃ ನಾನು ನಾಲ್ಕೋ ಐದನೇ ಕ್ಲಾಸ್ನಲ್ಲಿ ಇದ್ದಾಗ ಅನ್ಸತ್ತೆ. ಅಲ್ಲೀವರೆಗೂ ಅವರ ಒಡನಾಟ ಆಸ್ಟಕಸ್ಟೆ. ಆಮೇಲೂ ಕೂಡಾ ಅಂದರೆ ಪಿ ಯೂ ಸಿ ಹಂತದವರೆಗೂ ಹಾಗೋ ಹೀಗೋ ಅನ್ನೂ ರೀತಿ ಅವರ ಮೇಲೆ ಪ್ರೀತಿ. ಆದರೆ ನಂತರದ ದಿನಗಳಲ್ಲಿ ನನ್ನಜ್ಜಿ ನನಗೆ ಅತ್ಯಂತ ಪ್ರಿಯವೆನಿಸಿದರು. ಇದಕ್ಕೆ ಕಾರಣ ನನ್ನ ಮುದ್ದಿನ ಅಜ್ಜಿ {ಅಮ್ಮನ ಅಮ್ಮ } ಯನ್ನು ಕಳೆದುಕೊಂಡದ್ದಾಗಿರಬಹುದು. ಆ ನನ್ನಜ್ಜಿ ತೋರಿಸುತ್ತಿದ್ದ ಪ್ರೀತಿ ಈ ಅಜ್ಜಿಯಿಂದ ಸಿಗುತ್ತಿತ್ತಲ್ಲ ಅದಕ್ಕೆ. ಮೊದಮೊದಲು ನೆಂಟನಂತಿದ್ದ. ನನಗೆ ಈಗ ನಾನೂ ಮನೆಯ ಸದಸ್ಯ ಅನ್ನೋ ಸಂಪೂರ್ಣ ತಿಳುವಳಿಕೆ ಬಂದಿದೆ. ಹಾಗಾಗಿ ನನ್ನ ಕುಟುಂಬದ ಬಗ್ಗೆ ವಿಶೇಷ ಆಸಕ್ತಿ ನನಗೆ. ನನಗೆ ನೆನಪಿರುವ ಹಾಗೆ ಈ ನನ್ನಜ್ಜಿ ಬದುಕು ವಿಸ್ಮಯ, ಅದ್ಭುತ ಅಂದ್ರೆ ತಪ್ಪಾಗಲಾರದು. ಸರಳ ಆದರೆ ಅತ್ಯಂತ ಕಷ್ಟ ಜೀವಿ. ನಮ್ಮೂರಿನಲ್ಲಿ ಈಗಲೂ ಒಣಕಟ್ಟಿಗೆಯಿಂದಲೇ ಅಡಿಗೆ ಇನ್ನಿತರ ಕೆಲಸಗಳು ನಡೆಯುವುದು. ಬೆಸಿಗೆಯಾಯಿತೆಂದರೆ ಸಾಕು ಕೊಟ್ಟಿಗೆಗೆ ದರಗು ತಂದು ಹಾಕಬೇಕು. ಜಾನುವಾರುಗಳಿಗೆ ಮಲಗಲು ಸಹಕಾರಿಯಾಗಲಿ ಅಂತ ಅಂದರೂ ಕೂಡಾ ಅದರ ಹಿಂದೆ ಗೊಬ್ಬರ ಮಾಡುವ ಉದ್ದೇಶವಿದೆ. ಮಳೆಗಾಲ ಶುರುವಾದರೆ ಆ ಬಿರುಗಾಳಿ ಮಳೆಯಲ್ಲೂ ಧೈತ್ಯಾಕಾರದ, ದೇಹಕ್ಕೆ ದುಪ್ಪಟ್ಟು ಭಾರದ ಗೊರಬು ಹಾಕಿಕೊಂಡು ನಾಟಿ ಮಾಡಬೇಕು. ಗದ್ದೆಗೆ, ತೋಟಕ್ಕೆ ಗೊಬ್ಬರ ಹಾಕಬೇಕು, ಬೇಸಾಯ ಮಾಡ್ಬೇಕು ಜ್ಯೋತೆಗೆ ಮನೆಯಲ್ಲೂ ಕೆಲಸ ಹೀಗೆ ಹತ್ತು ಹಲವು ಕೆಲಸಗಳನ್ನ ನನ್ನಜ್ಜಿ ಮಾಡಿದ್ದು ಕಂಡಿದ್ದೇನೆ. ಆಗೆಲ್ಲ ಅದು ಅಸ್ಟೋನ್ದು ಗಮನಿಸುವ ಅಂಶವಾಗಿರಲಿಲ್ಲ. ಆದರೂ ಅವರು ಧರಗು, ಸೌದೆ ತರುವಾಗ ಮೈಲುಗಳ ದೂರದಿಂದ ಕಾಲಿಗೆ ಮೆಟ್ಟಿಲ್ಲದೆ {ಚಪ್ಪಲಿ } ಕಲ್ಲು, ಇನ್ಚಿಂಚಿಗೊಂದರಂತೆ ನಾನಾ ಜಾತಿಯ ಮುಳ್ಳುಗಳು, ಕೊರಲುಗಲು, ಕ್ರಿಮಿ, ಕೀಟ, ಹಾವು, ಚೇಳು ಎಂಬಿತ್ಯಾದಿ ಅಪಾಯಕಾರಿ ಹಂತಗಳನ್ನೆಲ್ಲ ದಾಟಿ ಬಯಲಿಗೆ ಕಾಲಿಟ್ಟರೆ ಸಾಕು ಅಲ್ಲಿ ಬಿಸಿಲಿಗೆ ಬೆಂದು ಬೆಂದು ಕೆಂಡವಾಗಿರುವ ನೆಲದ ಮೇಲೆ ಬರಿಗಾಲಲ್ಲಿಯೇ ತಲೆಯ ಮೇಲಿರುವ ಭಾರವನ್ನು ಹೊತ್ತುಕೊಂಡೇ ಮನೆ ಸೇರುವ ಅಂದಿನ ಆ ಸ್ಥಿತಿಯನ್ನು ಈಗ ಹಾಗೆ ಯೋಚಿಸಿದರೆನೆ ಮೈ ಜುಂ ಅನ್ಸತ್ತೆ. ಆದರೂ ನನ್ನಜ್ಜಿ ಅಂಜಲಿಲ್ಲ, ಅಳುಕಲಿಲ್ಲ, ಸೋಮಾರಿಯಂತೂ ಅಲ್ಲವೇ ಅಲ್ಲ.

ನೋಡಲೇಸ್ಟು ಸಪೂರ ಗೊತ್ತ ನನ್ನಜ್ಜಿ. ಆದರೂ ನನ್ನಂತಹ ಹುಡುಗರು ಮಾಡಲು ಅಂಜುವಂತಹ ಕೆಲಸಗಳನ್ನು ಸಹ ನನ್ನಜ್ಜಿ ಸರಾಗವಾಗಿ ಮಾಡಿದ್ದಾಳೆ. ನನಗಿನ್ನೂ ಹಸಿರಾಗಿದೆ ಆ ಒಂದು ದಿನದ ನೆನಪು. ನನಗಾಗ ಹತ್ತೋ ಹನ್ನೆರಡೋ ವರ್ಷವಿರಬೇಕು ಅನ್ಸತ್ತೆ. ರಜೆಗೆಂದು ನನ್ನಜ್ಜಿ {ಅಮ್ಮನ ಅಮ್ಮ } ಊರಿಂದ ಬಂದಿದ್ದೆ. ಒಂದು ದಿನ ನನ್ನಜ್ಜಿ ಜ್ಯೋತೆಗೆ ಇನ್ನೊಂದಿಸ್ಟು ಹೆಂಗಸರೆಲ್ಲ ಸೇರಿ {ಬಹುಷಃ ನನ್ನ ಅಮ್ಮನೂ ಅವರ ಗುಂಪಿನಲ್ಲಿ ಇದ್ದರೋ? ಸರಿಯಾಗಿ ನೆನಪಿಲ್ಲ} ಕಾಡಿಗೆ ಹೊರಟರು. ಅವರೊಂದಿಗೆ ನಾನೂ ಹಠ ಮಾಡಿ ಹೋಗಿದ್ದೆ. ನಮ್ಮೂರು ಮತ್ತು ಕಾಡಿನ ಮದ್ಯ ಮಾಲತಿ ನದಿ ಇದೆ. ನದಿಯಾಚೆ ದಾಟಿದ ಸ್ವಲ್ಪ ಸಮಯದಲ್ಲೇ ಬಾನೆಲ್ಲ ಕಪ್ಪಾಗಿ, ಭಯಾನಕ ಗಾಳಿ ಮಳೆಯಾಯಿತು. ಬಾನೆತ್ತರದ ಮರಗಳು ಸರಿಯಾಗಿ ನಿಲ್ಲಲಾಗದೆ ಅತ್ತಿಂದಿತ್ತ ಜೋರಾಗಿ ತೂಗಾಡುತ್ತಿದ್ದವು.ಸೌದೆಗೆ ಬಂದವರೆಲ್ಲ ತರಾತುರಿಯಿಂದ ಇದ್ದಸ್ಟೆ ಸೌದೆಯನ್ನು ಹೊರೆಕಟ್ಟಿ ಹೊತ್ತುಕೊಂಡು ಮನೆಕಡೆ ಹೊರಟರು. ಅಸ್ಟ್ರಲ್ಲಾಗಲೇ ಮಳೆ ಶುರು ಆಗಿ ಅರ್ಧ ಘಂಟೆ ಮೇಲೆ ಆಗಿತ್ತು. ನಾವೆಲ್ಲಾ ಒದ್ದೆ ಮುದ್ದೆಯಾಗಿದ್ವಿ. ನದೀ ದಂಡೆ ಹತ್ರ ಬಂದಾಗ ನದಿ ನೀರು ವಿಪರೀತ ಜಾಸ್ತಿ ಆಗಿತ್ತು. ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ನೀರಿನ ಸೆಳವು ಹೆಚ್ಚಾಗಿದ್ದು ನೀರಿಗಿಳಿಯಲು ಭಯವಾಗಿತ್ತು. ಆದರೆ ವಿಧಿಯಿಲ್ಲ. ಯೋಚಿಸುತ್ತಿದ್ದರೆ ಮತ್ತೆ ನೀರು ಹೆಚ್ಚಾಗುತ್ತದೆ. ದಾಟಲು ಸಾದ್ಯವೇ ಇಲ್ಲ. ಆಗಲೇ ನನ್ನಜ್ಜಿ ಅನುಭವ ಹಾಗು ಧೈರ್ಯದಿಂದ ಒಂದು ಆಯಕಟ್ಟಿನ ಸ್ಥಳದಲ್ಲಿ ನೀರಿಗಿಳಿದರೆ.....! ಸಣ್ಣ ಹುಡುಗ ನನಗೆ ಕುತ್ತಿಗೆಮಟ್ಟದ ನೀರು. ಕಾಲು ಎಸ್ಟೇ ಪ್ರಯತ್ನಿಸಿದರೂ ನೆಲದ ಮೇಲೆ ನಿಲ್ಲುತ್ತಿಲ್ಲ. ತೇಲುವ ಅನುಭವ. ಹೆಜ್ಜೆ ಇಟ್ಟರೆ ಪಾದದಡಿಯಿರುವ ಮರಳು ಕೊರೆದು ಮತ್ತೆ ಮತ್ತೆ ತೆಲುವಂತಾಗುತ್ತಿತ್ತು. ಅಂದೇ ಇರಬೇಕು ಮೊದಲ ಬಾರಿಗೆ ನದಿ ನೀರಿಗೆ ಹೆದರಿದ್ದು. ಆದರೂ ನಾನು ನೀರಿನಲ್ಲಿ ತೇಲಿ ಹೋಗಲಿಲ್ಲ. ಕಾರಣ ನನ್ನಜ್ಜಿ ನನ್ನನ್ನು ಗಿಡುಗನಂತೆ ಭದ್ರವಾಗಿ ತನ್ನ ಪಕ್ಕೆಯಲ್ಲಿ ಅವುಚಿಕೊಂಡಿದ್ದಳು. ತಲೆಯಲ್ಲಿ ಮಣಭಾರದ ಸೌದೆ ಹೊರೆ, ಜೊತೆಗೆ ನೀರಿನ ವಿಪರೀತ ಸೆಳೆತ, ನನ್ನ ಭಯ ಮಿಶ್ರಿತ ಒದ್ದಾಟ, ಸರಿಯಾಗಿ ಹೆಜ್ಜೆ ಹಾಕಲು ಅಡ್ಡಿಪಡಿಸುವ ಸೀರೆ. ಇದೆಲ್ಲವನ್ನೂ ಸರಾಗವಾಗಿ ನಿಭಾಯಿಸಿ ಆಚೆ ದಡ ಮುಟ್ಟಿಸಿದ್ದ ನನ್ನಜ್ಜಿ ಮುಖದಲ್ಲಿ ಆ ವಯಸ್ಸಿನಲ್ಲೇ ನಾ ಕಂಡಿದ್ದು ದೈವ ಸಮಾನ ಶಕ್ತಿ. ಆಗ ನನ್ನಜ್ಜಿಗೆ ವಯ್ಯಸ್ಸು ಎಷ್ಟು ಇರಬಹುದು ಗೊತ್ತೇ? ಕನಿಸ್ಟ ಅಂದರೂ ಎಪ್ಪತ್ತರಿಂದ ಎಪ್ಪತ್ತೈದಿರಬಹುದು. ನನ್ನಜ್ಜಿಯ ದೇಹ ಬಡಕಲಾದರೆನಂತೆ ಆಕೆಯ ಅಂದಿನ ಭಯಂಕರವಾದ ಬದುಕಿನ ಅನುಭವವೇ ಬಲ ತಂದಿತ್ತು.ಅದೇ ನಮಗೂ ಅವರಿಗೂ ಇರುವ ವ್ಯತ್ಯಾಸ.......?


ಮೊನ್ನೆ ಅಂದ್ರೆ ಮೊನ್ನೆ ತಾನೆ ನನ್ನ ತಂದೆ ಹೀಗೆ ದಿನನಿತ್ಯದಂತೆ ಫೋನಲ್ಲಿ ಮಾತಾಡುವಾಗ ಹೇಳಿದ್ದೇನು ಗೊತ್ತ? ನಿಮಗೆಲ್ಲ ಫ್ರೀ ಇದ್ದರೆ ....... ಒಮ್ಮೆ ನಿಮ್ಮಜ್ಜಿನ ಬಂದು ನೋಡ್ಕೊಂಡ್ ಹೋಗಿ ಅಂತ. ಅಂದರೆ... ನನ್ನಜ್ಜಿ ಈಗ ಜೀವನದ ಅಂತಿಮ ದಿನಗಳನ್ನ ಕಾಣುತ್ತಿದ್ದಾರೆ. ಅವರ ಮಾತಿನಂತೆ ಒಂದು ದಿನ ರಜೆ ಹಾಕಿ ನನ್ನಜ್ಜಿನ ನೋಡಲು ನಾನು ನನ್ನಣ್ಣ ಹೋಗಿದ್ದೆವು. ಅವತ್ತೆನಾಯಿತೋ ಏನೋ ಯಾವತ್ತೂ ನನ್ನಜ್ಜಿ ನೋಡಿದಾಗ ಇಲ್ಲದ ದುಃಖ ನನ್ನ ಎದೆಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿತು. ನನ್ನಜ್ಜಿ ಅಸ್ತಿಪಂಜರದಂತಹ ದೇಹದ ಮೇಲೆ ಚರ್ಮದ ಹೊದಿಕೆಯೊಂದಿದೆ ಅಸ್ಟೆ.ಆದರೆ ಅವರ ಕಣ್ಣು ಈಗಲೂ ಸ್ಪಷ್ಟವಾಗಿದೆ, ಮಾತು ತೊದಲಾದರೂ ಸ್ಪಷ್ಟ. ಕಿವಿ ಸ್ವಲ್ಪ ಮಂದ. ನಿಮಗೆ ಗೊತ್ತ? ನನ್ನಜ್ಜಿ ಈಗಲೂ ಇಂಥಾ ಸ್ಥಿತಿಯಲ್ಲೂ ಸೌಚಕ್ಕೆ ತಾನೊಬ್ಬರೇ ಜಲ್ಲೂರಿಕೊಂಡ್ ಹೋಗಿ ಬರ್ತಾರೆ. ಈಗವರ ಆಹಾರ ಕೇವಲ ಹಾಲು, ಕಾಫ್ಫೀ ಸ್ವಲ್ಪ ಸ್ವಲ್ಪ ಸಾರಾಯಿ. ಅಸ್ಟೆ. ನನ್ನಜ್ಜಿಗೀಗ ವಯ್ಯಸ್ಸು ನನ್ನ ತಂದೆಯ ಅಂದಾಜಿನಂತೆ ತೊಂಬತ್ತೈದರಿಂದ ನೂರೆರಡು. ಅವರನ್ನ ನೋಡಿಕೊಂಡು ವಾಪಾಸ್ಸು ಹೊರಡುವ ಮುನ್ನ ಅವ್ರ ಆಶೀರ್ವಾದಕ್ಕಾಗಿ ಆ ದೈವ ಪಾದಕ್ಕೆ ನಮಸ್ಕರಿಸಿದಾಗ ನನ್ನಜ್ಜಿ ಕೇಳಿದ ಪ್ರಶ್ನೆ ಏನು ಗೊತ್ತಾ? ಯಾವತ್ತೂ ಕೇಳದ ಪ್ರಶ್ನೆ ಅದು......"ನೀ ಮತ್ತೆ ಬತ್ತೀಯ?".


ಅಜ್ಜೀ ...... ನಿನ್ನ ಮಾತಿನ ಅರ್ಥ ಏನೇ. ನಾ ಬಾರುವಾಗ ಚಿಕ್ಕ ಮಕ್ಕಳ ತರ ಟಾಟ ಮಾಡಿದೆಯಲ್ಲ ಅದ್ಯಾಕೆ ಅಜ್ಜಿ? ಇಂಥ ಸ್ಥಿತಿಯಲ್ಲಿ ನಿನ್ನೊಂದಿಗಿಲ್ಲದ ಈ ನಮ್ಮ ಜೀವನದ ಬಗ್ಗೆ ಅಸಹ್ಯ ಅನ್ಸತ್ತ ನಿಂಗೆ ?.ಇದು ಒಂದ್ ಜೀವನನ ನಂದು ..... ಛೀ


ಏನೇ ಆದರು ಅಜ್ಜೀ ನೀನಂದ್ರೆ ನಂಗಿಸ್ಟ ಕಣೇ

3 ಕಾಮೆಂಟ್‌ಗಳು: