ಮಂಗಳವಾರ, ಡಿಸೆಂಬರ್ 8, 2009

ಫ್ರೆಂಡ್ ನ ಒಂದ್ ಮಾತು, ಮನಸನ್ನ ಮುಗಿಲೆತ್ತರಕ್ಕೆ ಹಾರಿಸತ್ತ?

ಖಂಡಿತ ಹಾರಿಸತ್ತೆ. ಅದೆನಾಯ್ತು ಅಂದ್ರೆ ನಿನ್ನೆ ಹೀಗೆ ಮನೇಲಿ ಫ್ರೆಂಡ್ಸ್ ಜೊತೆ ಏನೇನೋ ಮಾತಾಡ್ತಾ, ಕಿತ್ತಾಡ್ತಾ ಇದ್ದಾಗ ನನ್ಫ್ರೆಂಡ್ ಪುಷಿ ಫೋನ್ ಮಾಡಿದ್ಲು. ಏನ್ ಮಾಡ್ತಾ ಇದ್ಯೋ? ಅಂದ್ಲು. ಏನಿಲ್ಲ ಕಣೇ ಅಡಿಗೆ ಮಾಡ್ತಾ ಇದೀನಿ ಊಟ ಮಾಡಬೇಕು ಅಂದೆ. ಹೌದಾ ಸರಿ, ನಿನ್ ಫ್ರೆಂಡ್ ಫೋನ್ ಮಾಡಿದ್ಲು ಅಂದ್ಲು. ಯಾರೇ? ಅಂದೆ. ಭವ್ಯಾ ಕಣೋ ಅಂದ್ಲು. ಅದೇ ನಾವು ಯೂನಿವೆರ್ಸಿಟಿನಲ್ಲಿದ್ದಾಗ ಫ್ರೆಂಡ್ ಆಗಿದ್ವಲ್ಲ? ಅದೇ ಕಣೋ ನಾವೆಲ್ಲ ನಿಂಗೆ ಏನೇನೋ ಹೇಳ್ತಾ ಇದ್ವಲ್ಲ? ........ ಅದೂ ಇದೂ ಅಂತ ಒಂದೇ ಸಮನೆ ಹೇಳ್ತಾ ಇದ್ಲು.ಆದ್ರೆ ಅವ್ಳು ಭವ್ಯಾ ಕಣೋ ಅಂದಾಗಲೇ ನಂಗೆ ಗೊತ್ತಾಗಿತ್ತು ಇವಳು ಯಾರ ಬಗ್ಗೆ ಮಾತಾಡ್ತಾ ಇದಾಳೆ ಅಂತ. ಅವ್ಳು ಹೇಳಿದ್ದು ನನ್ ಫ್ರೆಂಡ್ ಭವ್ಯಾ ಬಗ್ಗೆ. ನನಗೆ ಈ ಬರವಣಿಗೆ ಬಗ್ಗೆ ಆಸಕ್ತಿ ಮೂಡಿಸಿದ ನನ್ ಫ್ರೆಂಡ್ ಭವ್ಯಾ ಬಗ್ಗೆ. ಏನ್ ಅಂದ್ರೆ ಈ ಗೆಳೆತನ ಹುಟ್ಟಿದ್ದೇ ಚಿತ್ರ ವಿಚಿತ್ರವಾಗಿ. ಸ್ನೇಹಿತರ ಏನೋ ಒಂದು ಸವಾಲಿಗೆ ಬೆಲೆ (ತಲೆ) ಕೊಟ್ಟು, ಆ ಸವಾಲನ್ನ ಸಾದಿಸಲು ಹೋಗಿ, ಅವಾಂತರ ಆಗಿ, ಈ ವಿಷ್ಯ ನನ್ ತಂಗಿಯರ ಕಿವಿಗೆ ಬಿದ್ದು (ಅವ್ರು ಭವ್ಯಾ ಫ್ರೆಂಡ್ಸ್) ಅವರಿಂದ "ಅದ್ದೂರಿ" ಮಂಗಳಾರತಿ ಕಾರ್ಯಕ್ರಮ ಆಗಿ, ನಂತರ ಮೂರ್ನಾಲ್ಕು ತಿಂಗಳು ಭವ್ಯಾ ಜೊತೆ ಮಾತಾಡದೆ ಇದ್ದಿದ್ದು, ......ಅಬ್ಬ ಅದೆಲ್ಲ ಈಗ ಸುಂದರ ನೆನಪು ಮಾತ್ರ. ಕೊನೆಗೆ ಆಟೋಗ್ರಾಪ್ಹ್ ಬರೆಯೋ ಸಮಯದಲ್ಲಿ ನನ್ ತಂಗಿ ಫ್ರೆಂಡ್ಸೆ ಮತ್ತೆ ಭವ್ಯಾ ಜೊತೆಗೆ ಫ್ರೆಂಡ್ ಮಾಡ್ಸಿದ್ರು. ಆಮೇಲಿಂದ ನಿಜಕ್ಕೂ ಅತ್ಯಂತ ಆತ್ಮೀಯವಾದ ಗೆಳೆತನ ನಮ್ಮಲ್ಲಿತ್ತು. ಸುಮಾರು ಒಂದೆರಡು ವರ್ಷಗಳ ಕಾಲ ಹಾಗೆ ಇತ್ತು. ಆದ್ರೆ ಯಾವಾಗಲೋ ಏನೋ ಭವ್ಯಾ ದಿಡೀರ್ ಅಂತಾ ನಂಬರ್ ಚೇಂಜ್ ಮಾಡಿದ್ಲು. ಯಾಕೋ ಏನೋ ಆ ನಂಬರ್ ನನಗೆ ಕೊಡಲೇ ಇಲ್ಲ. ನಂಗೂ ಎಲ್ಲೋ ಒಂದ್ಕಡೆ ಸ್ವಲ್ಪ ಬೇಜಾರಾಗಿತ್ತು. ಅವಳು ನಂಗೆ ಒಳ್ಳೆ ಫ್ರೆಂಡ್ ಆಗಿದ್ಲು. ಅಂಥಾ ಫ್ರೆಂಡ್ಶಿಪ್ನ ಕಳ್ಕೊಲ್ಲೋದಿಕ್ಕೆ ನನ್ ಮನಸು ಒಪ್ಪಲಿಲ್ಲ. ಹಾಗಾಗಿ ಅವಳ ನಂಬರ್ ಹುಡುಕೋಕೆ ಸ್ವಲ್ಪ ಜಾಸ್ತಿನೆ ಪ್ರಯತ್ನ ಪಟ್ಟೆ. ಊಹೂ ನಂಬರ್ ಸಿಗ್ಲಿಲ್ಲ. ಆಗ ಅಂದ್ಕೊಂಡೆ ಬಹುಷಃ ಭಾವ್ಯಾಗೆ ನನ್ ಫ್ರೆಂಡ್ ಶಿಪ್ ಸಾಕಾಯ್ತು ಅಂತ ಅನ್ಸತ್ತೆ ಅಂತ. ಹಾಗಂದುಕೊಂಡು ಸುಮ್ನಾದೆ ಕೂಡಾ. ಆದ್ರೆ ಅವಳ ನೆನಪು ಸದಾ ಇತ್ತು. ಕಾರಣ ಮತ್ತದೇ ಫ್ರೆಂಡ್ ಶಿಪ್. ಹೀಗಿರುವಾಗಲೇ, ಸುಮಾರು ಮೂರು ವರ್ಷಗಳ ನಂತರ ಮತ್ತೆ ಭಾವ್ಯಾನ ಜೊತೆ ಮಾತಾಡೋದು ಅಂದ್ರೆ ಖುಷಿ ಆಲ್ವಾ?. ನನಗಂತೂ ಖುಷಿ ಆಯ್ತು. ಪುಷಿ ನಂಬರ್ ಕೊಟ್ಟಾಗ, ಕಾಲ್ ಮಾಡಿದಾಗ, ಮಾತಾಡಿದಾಗ, ಮಾತಾಡಿ ಮುಗಿಸಿದಾಗ, ಮೊದಲೇ ಸ್ವಚ್ಚಂದವಾಗಿ ಹಾರಾಡ್ತಾ ಇದ್ದ ನನ್ ಮನಸ್ಸು ಮತ್ತಸ್ತು ಎತ್ತರಕ್ಕೆ ಹಾರಿತು. ಕಾರಣ ಮತ್ತದೇ ಸ್ನೇಹ. ಈ ಸ್ನೇಹ ಅಂದ್ರೇನೆ ಹೀಗೆ ನೀರಿನ ತರ. ಇದಕ್ಕೆ ರುಚಿ ಇಲ್ಲ, ಬಣ್ಣ ಇಲ್ಲ, ಅಕಾರ ಗೊತ್ತಿಲ್ಲ. ಇದಕ್ಕೆ ಗೊತ್ತಿರೋದು ಆಳ, ಅಗಲ ಮಾತ್ರ. ಆಳ ಎಷ್ಟು ಅಂದ್ರೆ ಸಾಗರಕ್ಕಿಳಿಯತ್ತೆ, ಅಗಲ ಎಷ್ಟು ಅಂದ್ರೆ ಆಕಾಶ ಅನ್ನತ್ತೆ. ಈ ತರದ ಸ್ನೇಹ ನಿಮ್ಮಲ್ಲಿದ್ದರೆ , ಇಂತಹ ಗೆಳತಿ/ಗೆಳೆಯ/ಗೆಳೆತನ ನಿಮ್ಮಲ್ಲಿದ್ದರೆ ಅವರೊಂದಿಗಿನ ನಿಮ್ಮ ಸವಿ ಸವಿ ನೆನಪನ್ನ ಹಾಗೆ ಹರಿಯಬಿಡಿ. ಇದು ಸಣ್ಣ ಸಣ್ಣ ವಿಷಯ ಅನ್ನಿಸಿದರೂ ಸಾಕಷ್ಟುಖುಷಿ ಇರತ್ತೆ. ಏನಂತೀರಾ?

ಮಂಗಳವಾರ, ಅಕ್ಟೋಬರ್ 20, 2009

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... !

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ! ಆಶ್ಚರ್ಯ ಆಗ್ತಾ ಇದ್ದೀಯ? ಆಶ್ಚರ್ಯ ಪಡೊಂಥದ್ದೆನಿಲ್ಲ ನಿಜವಾಗಿಯೂ ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ಕಂಡ್ರೀ.

ಪೀ ಯೂ ಸಿ ಓದೋವಾಗ ಸುಮಾರು ಹತ್ತು ವರ್ಷಗಳ ಹಿಂದೆ ನನಗೊಬ್ಬಳು ಆತ್ಮೀಯ ಗೆಳತಿ ಇದ್ದಳು. ಅವಳು ಮೊದಮೊದಲು ಅಸ್ಟೊಂದು ಹತ್ತಿರವಾಗಿರದಿದ್ದರೂ ಸಹ ನಂತರದ ದಿನಗಳಲ್ಲಿ ತುಂಬಾನೆ ಆತ್ಮೀಯಳಾದಳು. ಇದಕ್ಕೆ ಕಾರಣ ಆ ಕಾಲೇಜಿನ ವಾತಾವರಣ, ನಮ್ಮ ಆಟ, ಹಾರಾಟ, ತಲೆಹರಟೆ, ಏನ್ ಎಸ್ ಎಸ್, ಮತ್ತೆ ಆ ಒಂಬತ್ತು ದಿನಗಳ ತಮಿಳುನಾಡು ಪ್ರವಾಸ ಕಾರಣವಿರಬಹುದು. ಈ ರೀತಿಯಲ್ಲೆಲ್ಲೋ ಪರಿಚಯವಾದ ನಮ್ಮ ಗೆಳೆತನ ಅತ್ಯಂತ ಸಮೃದ್ಧವಾಗಿ ಬೆಳೆದು ಇಂದಿಗೂ ಹಾಗೇ ಇದೆ. ಆಗೊಮ್ಮೆ ಈಗೊಮ್ಮೆ ಫೋನ್ ಮಾಡುವ ಮೂಲಕ ಮಾತನಾಡುತ್ತೇವೆ. ಆ ನನ್ನ ಗೆಳತಿ ಅತ್ಯಂತ ಬುದ್ದಿವಂತೆ. ಅವಳ ನಗು, ಮುಗ್ಧ ಮುಖ, ಹಾಗೂ ಅವಳ ಮಾತು ನಮಗೆಲ್ಲರಿಗೂ ಇಸ್ಟಾನ್ದ್ರೆ ಇಷ್ಟ. ಅದರಲ್ಲೂ ನನಗಂತೂ ತುಂಬಾನೆ ಇಷ್ಟ. ಹೇಗ್ಹೇಗೋ ನಾವಿಬ್ರೂ ಸಖತ್ ಫ್ರೆಂಡ್ಸ್ ಆದ್ವಿ. ಅವಳಿಗೆ ನಾನು ತುಂಬಾನೆ ಗೌರವ ಕೊಡ್ತಾ ಇದ್ದೆ. ನಮ್ಮ ಜೊತೆಗೆ ಇನ್ನೂ ತುಂಬಾ ಜನ ಇದ್ರೂ. ಅವರೂ ಸಹ ನಮ್ಮ ಫ್ರೆನ್ದ್ಸೆ ಆಗಿದ್ರು. ಆದರೂ ಅವರೆಲ್ಲರಿಗಿಂತ ಈ ಹುಡುಗಿ ಸ್ವಲ್ಪ ಹೆಚ್ಚು. ಯಾಕೆ ಅಂತಾ ಇನ್ನೂ ಗೊತ್ತಿಲ್ಲ. ನಮ್ಮಿಬ್ಬರ ಗೆಳೆತನದಲ್ಲಿ ಪ್ರೀತಿ ಇತ್ತಾ? ಪ್ರೀತಿ ಅನ್ನೋದೇನಾದ್ರೂ ಗೆಳೆತನದ ಮುಖವಾಡ ಹಾಕ್ಕೊಂಡಿತ್ತಾ? ಪ್ರೀತಿ ಗೆಳೆತನ, ಗೆಳೆತನ ಪ್ರೀತಿ ಅಂತಾ ಜಪಿಸೋ ವಯಸ್ಸಿನ ಕಿತಾಪತಿ ಏನಾದರೂ......! ಉಹೂ ...... ಹಾಗೇನೂ ಇಲ್ಲ. ಅದು ನಿಜವಾದ ಸ್ನೇಹಾನೆ ಆಗಿತ್ತು ಅನ್ಸತ್ತೆ. ಅದಕ್ಕೇನೆ ನಾವಿಬ್ರೂ ಇಂದಿಗೂ ಯಾವುದೇ ಮುಜುಗರ ಇಲ್ಲದೆ ನಿರಾಳವಾಗಿ, ಆತ್ಮೀಯತೆಯಿಂದ ಮಾತಾಡ್ಲಿಕ್ಕೆ ಸಾದ್ಯವಾಗಿರೋದು. ಆದ್ರೆ ಅದೇನೋ ಗೊತ್ತಿಲ್ಲ ಆ ದಿನ ನಾನು ನನ್ನ ಈ ಮೇಲ್ ಐಡಿ ಕ್ರಿಯೇಟ್ ಮಾಡೋವಾಗ ಪಾಸ್ವರ್ಡ್ ಗೆ ದಿಡೀರ್ ಅಂತ ಅವಳ ಹೆಸರೇ ಬಂತು. ಆ ಗಟ್ಟಿ ಸ್ನೇಹದ ಕುರುಹಿಗಾಗಿ ಅನ್ಸತ್ತೆ. ನಾನೂ ಅದೇ ಹೆಸರನ್ನ ಹಾಕಿದೆ. ಅದರಲ್ಲೇನಾದ್ರೂ ತಪ್ಪಿದೆಯ? ಅದಕ್ಕೆ ಶಾಶ್ವತವಾಗಿ ಅದೇ ಹೆಸರೇ ಇತ್ತು. ಹೀಗಿರುವಾಗ ಮೊನ್ನೆ ನನ್ನ ಅಜ್ಜಿ ಊರಿನ, ಪಿ ಯೂ ಸಿ ಗೆಳೆಯ ಒಬ್ಬ ಸಿಕ್ಕಿದ. ಸಿಕ್ಕಿದವನೇ ಹೇ ನಿನ್ನ ಫ್ರೆಂಡ್ ........ಗೆ ಮದುವೆ ಕಣೋ ಅಂದ. ಯಾರಿಗೋ ಅಂತ ನಾ ಕೇಳಿದ್ದಕ್ಕೆ, ಅವ ಹೇಳಿದ್ದು ನನ್ ಪಾಸ್ವರ್ಡ್ ಹೆಸರನ್ನೇ. ಹೌದೇನೋ .....? ತುಂಬಾ ಖುಷಿ ಆಗ್ತಿದೆ ಕಣೋ. ಮತ್ತೆ ಅವ್ಳು ಹೇಳಲೇ ಇಲ್ಲಾ ಅಂತಾ ಅವ್ನಿಗೆ ನಗು ನಗುತಾ ಹೇಳಿದ್ರೂ ಸಹ ಒಳಗೆಲ್ಲೋ ಸ್ವಲ್ಪ ನೋವಾಗ್ತಾ ಇತ್ತು. ಯಾಕೆ ಅಂತಾನೆ ಗೊತ್ತಾಗ್ಲಿಲ್ಲ. ಆಗೆಲ್ಲಾ ಮತ್ತದೇ ಯೋಚನೆ ನಮ್ ಗೆಳೆತನ ಏನಾದರೂ, ಎಲ್ಲಾದ್ರೂ "ಒಂದ್ ಕಣ್ಣನ್ನ" ಮಿಟುಕಿಸಿತ್ತಾ.....? ಅಂತಾದ್ದೇನೂ ಗೊತ್ತಾಗ್ಲಿಲ್ಲಪ್ಪ. ಇರಲಿ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಆತ್ಮೀಯ ಗೆಳತಿಯ ಹೆಸರು ನನ್ನ ಈ ಮೇಲ್ ಐಡಿ ಗೆ ಪಾಸ್ವರ್ಡ್ ಆಗಿ ನನ್ನ ಕೈ ಬೆರಳುಗಳ ತುದಿಯಲ್ಲಿ ಕುಣೀತಾ ಇದ್ಲು. ಆದ್ರೆ ಈಗ ನನ್ನ ಪಾಸ್ ವರ್ಡ್ ಗೆ ಮದುವೆ ಇದೆ. ಹಾಗಾಗಿ ಅನಿವಾರ್ಯವಾಗಿ ಆ ಗೆಳತಿ ಹೆಸರನ್ನ ಭಾರವಾದ ಹೃದಯದಿಂದ ತೆಗೆದು ಬೇರೊಂದು ಹೆಸರು ಪಾಸ್ ವರ್ಡ್ ರೀತಿಯಲ್ಲಿ ಈಗಾಗ್ಲೇ ನನ್ನ ಬೆರಳುಗಳನ್ನ ಬಲವಂತವಾಗಿ ಕುಣಿಸ್ತಾ ಇದೆ.

ಏನೇ ಇರಲಿ ನನ್ನ ಪಾಸ್ ವರ್ಡ್ ನ ಮದುವೆಗೆ ನೀವೆಲ್ಲ ತುಂಬು ಹೃದಯದಿಂದ ಹಾರೈಸುತ್ತೀರಾ ಅಂತ ಭಾವಿಸಿದಿನಿ. ಹ್ಞಾ.......ನೆನಪಿರಲಿ, ಆಗಮನ ಮತ್ತು ಆಶೀರ್ವಾದವೇ ಉಡುಗೊರೆ

ಅಪ್ಪಾ...... ನನ್ನ ಕೈ ಬೆರಳುಗಳು ಮತ್ತೆ ಬೆಳೆಯೋದು ಯಾವಾಗ?

ಒಬ್ಬ ವ್ಯಕ್ತಿ ಒಂದು ದಿನ ತನ್ನ ಕಾರನ್ನ ತೊಳೀತಾ ಇದ್ದ. ಆಗ ಅಲ್ಲೇ ಇದ್ದ ಅವನ ನಾಲ್ಕು ವರ್ಷದ ಮಗ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಒಂದು ಮೂಲೆಯಲ್ಲಿ ಗೀಚುತ್ತಾ ಇದ್ದ. ಅದನ್ನ ನೋಡಿ ತಂದೆಗೆ ವಿಪರೀತ ಕೋಪ ಬಂದು ಅದನ್ನ ತಡೀಲಾರದೆ ಮಗುವಿನ ಮುದ್ದಾದ ಕೈ ಬೆರಳುಗಳ ಮೇಲೆ ಅತ್ಯಂತ ಬಲವಾಗಿ ಹಲವಾರು ಬಾರಿ ಹೊಡೆಯುತ್ತಾನೆ. ಆದರೆ ಕೊನೆಗೊಮ್ಮೆ ತನ್ನ ಕೋಪದ ಅರಿವಾಗಿ, ತಪ್ಪಿನ ಮನವರಿಕೆಯಾಗಿ ತಂದೆಯು ತನ್ನ ಮಗುವನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ ಹೋದರು. ಆದರೆ ಅಲ್ಲಿ ಆ ಮಗು ತನ್ನೆಲ್ಲಾ ಬೆರಳುಗಳನ್ನ ಕಳೆದುಕೊಂಡಿರುತ್ತದೆ. ತನ್ನ ತಂದೆಯನ್ನು ನೋಡಿದ ಆ ಮಗು ತನ್ನ ನೋವು ತುಂಬಿಕೊಂಡ ಕಣ್ಣುಗಳಿಂದ ತಂದೆಯನ್ನ ಕೆಳುವುದೆನೆಂದರೆ, "ಅಪ್ಪಾ ....ಯಾವಾಗ ನನ್ನ ಕೈ ಬೆರಳುಗಳು ಮೊದಲಿನಂತೆ ಬೆಳೆಯೋದು ?" ಅಂತ. ಈ ಪ್ರಶ್ನೆ ಕೇಳಿದ ತಂದೆಗೆ ಇನ್ನೂ ದುಃಖ ತಡೆಯಲಾಗಲಿಲ್ಲ. ಮಾತೇ ಬಾರದಂತಾಗಿ ತನ್ನ ಕಾರಿದ್ದ ಸ್ಥಳಕ್ಕೆ ಹೋಗಿ ಕಾರಿಗೆ ಮನ ಬಂದಂತೆ ಒದ್ದು ಒದ್ದು ಹತಾಶನಾಗಿ ಅವನು ಮೂಲೆಯಲ್ಲಿ ಕಾರಿಗೆ ಒರಗಿ ಕೂರುತ್ತಾನೆ. ಅಚಾನಕ್ಕಾಗಿ ತನ್ನ ಮಗು ಗೀಚಿದ ಜಾಗ ನೋಡುತ್ತಾನೆ. ಅದರ ಮೇಲೆ ಆ ಮಗು ಬರೆದಿದ್ದೇನು ಗೊತ್ತಾ? "ಲವ್ ಯೂ ಡ್ಯಾಡಿ " ಅಂತ. ಎಷ್ಟು ಪ್ರೀತಿಯಿತ್ತು ಆ ಮಗುವಿನಲ್ಲಿ ಅಲ್ವಾ?
ಈ ಕಥೆಯಲ್ಲಿ "ವಸ್ತುಗಳಿರುವುದು ಉಪಯೋಗಿಸಲು, ಮನುಷ್ಯರಿರುವುದು ಪ್ರೀತಿಸಲು" ಎಂಬ ಮಾತಿಗೆ ಬದಲಾಗಿ " ವಸ್ತುಗಳಿರುವುದು ಪ್ರೀತಿಸಲು, ಮನುಸ್ಯರಿರುವುದು ಉಪಯೋಗಿಸಲು" ಎಂಬಂತಾಗಿದೆ. ಇದನ್ನ ನಾನು ಮೊದಲೇ ಓದಿದ್ದೆ ಅಂತಾ ನೀವನ್ದುಕೊಂದಿದ್ದರೆ ನಿಮ್ಮ ಮಾತು ನಿಜ. ಇದು ಯಾರೋ, ಎಲ್ಲೋ ಬರೆದಿದ್ದು ನನ್ನ ಗೆಳೆಯ ಒಬ್ಬ ಮೇಲ್ ಮಾಡಿದ್ದ. ಅರ್ಥಪೂರ್ಣ ಹಾಗೂ ಮನ ಕಲುಕುವಂತೆಇತ್ತಲ್ಲ ಎಂದು ನಿಮಗೂ ತಿಳಿಸುವ ಮನಸ್ಸಾಯಿತು ಬರೆದೆ. ನಿಮ್ಮ ಅಭಿಪ್ರಾಯ ?

ಮಂಗಳವಾರ, ಸೆಪ್ಟೆಂಬರ್ 22, 2009

ಅಜ್ಜಾ........... ನಿನಗೊಂದು ಪತ್ರ




ಅಜ್ಜ, ಹೇಗಿದ್ದೀಯ? ಹೇಗಿದೆ ನಿನ್ ಪ್ರಪಂಚ. ಅಲ್ಲೆಲ್ರೂ ನಿನ್ನ ಏನಂತ ಮತಾಡ್ಸಿದ್ರು. ನನ್ನಜ್ಜಿ ಹೇಗಿದಾಳೆ. ಮೊನ್ನೆ ಭಾನುವಾರ ರಾತ್ರಿ ಮಾವ ಫೋನ್ ಮಾಡಿದ್ದ. ನಿಂಗೆ ಹುಷಾರಿಲ್ಲ ಇನ್ನೊಂದು ಸಾರಿ ಬಂದು ನೋಡ್ಕೊಂಡ್ ಮಾತಾಡ್ಸ್ಕೊಂಡ್ ಹೋಗು ಅಂತ ಅಂದಿದ್ದ. ನಿಂಗೊತ್ತಾ ಅವತ್ತೇ ರಾತ್ರಿ ನಾ ಹೊರಟು, ಶಿವಮೊಗ್ಗ ರೈಲು ಹತ್ತಿಯಾಗಿತ್ತು. ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಾಗ ಆರೂವರೆಯಾಗಿತ್ತು. ಮಾವ ಹೇಳಿದ್ದ, ಬೆಳಿಗ್ಗೆ ಏಳೂವರೆಗೆ ಬಸ್ಸಿದೆ ಅಂತ. ಆದ್ರೆ ಯಾವ ಬಸ್ಸು ಅಂತ ನಾನೂ ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಅದಿಕ್ಕೆ ಮತ್ತೆ ಫೋನ್ ಮಾಡಿದಾಗಲೇ ಮಾವ ಸರಿಯಾಗಿ ಹೇಳಿದ್ದು. ಏಳೂವರೆಗೆ ಗಣೇಶ ಬಸ್ಸಿದೆ, ನೀನು ಅಲ್ಲೇ ಹೂವು ಹಿಡ್ಕೊಂಡ್ ಬಾ. ಅಜ್ಜ ರಾತ್ರೀನೇ ಎರಡೂವರೆಗೆ ತೀರ್ಕೊಂಡಿದಾರೆ ಅಂತ. ತುಂಬಾ ನೋವಾಯ್ತು ಅಜ್ಜ. ಆ ಕ್ಷಣ ಏನೇನೋ ನೆನಪಾಯ್ತು. ನಾ ಹುಟ್ಟಿದಾಗಿನಿಂದ ನಿನ್ನ ಮನೇಲಿ, ನಿಮ್ಮೆಲ್ಲರ ಜೊತೆಗೆ ಬೆಳೆದವನು. ಅದರಲ್ಲೂ ನಿನ್ನ ಪ್ರೀತಿ, ಕೋಪ ಎಲ್ಲಾ ನೋಡಿದವನು, ಅನುಭವಿಸಿದವನು. ಅದೆಸ್ಟು ಸಲ ನೀ ನನ್ನ ಸ್ನಾನ ಮಾಡಿಸಿಲ್ಲ, ಅದೆಸ್ಟು ಸಲ ನಿನ್ನ ಹೆಗಲ ಮೇಲೆ ಕೂತು ತೋಟ, ಗದ್ದೆ, ಅಸ್ಟೇ ಏಕೆ ಶನಿವಾರ ಶನಿವಾರ ದಿನ ಮಾತ್ರ ಕಟ್ಟಿಂಗ್ ಮಾಡಿಸ್ಕೊಲ್ಲೋದಿಕ್ಕು ನಿನ್ನ ಹೆಗಲ ಮೇಲೆ ನನ್ ಸವಾರಿ. ನಿನ್ ಜೊತೆ ಆ ಭಯಂಕರ "ಕಾನುಮನೆ ಕಾನು, ಹನ್ದೊಲ್ಲಿ ಕಾನಲ್ಲಿ" ಗಬ್ಬದ ದನ ಕರು ಹಾಕಿತ್ತು ಅಂತ ರಾತ್ರಿ ಹಗಲೆಲ್ಲ ಹುಡ್ಕಿದ್ದು, ಇಬ್ಬರೇ ಬ್ಯಾಣದಲ್ಲಿ ಎಮ್ಮೆ, ಎತ್ತಿನ ಮೆಯಿಸಿದ್ದು, ಆಗ ನೀ ನನ್ಗೆಸ್ಟು ಪೆಟ್ಲೆ, ಬುಗುರಿ, ಚಿನ್ನಿದಾಂಡು, ಬಾರುಕೋಲು, ಗಾಡಿ, ಗಾಡಿಚಕ್ರ, ಗಿರಿಗಿಟ್ಲೆ ಇನ್ನೂ ಏನೇನೋ ಆಟದ ವಸ್ತುಗಳನ್ನ ಮಾಡಿಕೊಟ್ಟಿದ್ದೆ. ಅದೇನೂ ಒಂದೆರಡು ಬಾರಿಯಲ್ಲ ಪದೇ ಪದೇ. ಹಾಗೆ ಅದನ್ನ ಹಾಳು ಮಾಡಿಕೊಂಡಾಗ ನೀ ಕೊಟ್ಟ ಅದೇ ಬಾರುಕೊಲಿನ ಎಟುಗಳೂ ನೆನಪಾಯ್ತು. ನಿನ್ನೊಂದಿಗೆ ದೇವಸ್ಥಾನಗಳಿಗೆ ಸುತ್ತಾಡಿದ್ದು ನೆನಪಾಯ್ತು. ನಿನ್ನ ದೈವಭಕ್ತಿ, ಹಬ್ಬದ ದಿನಗಳಲ್ಲಿ ನಿನ್ನ ಸಂಬ್ರಮದ ಹಾಗು ಅಚ್ಚುಕಟ್ಟು ಆಚರಣೆ, ಶನಿವಾರದ ಒಪ್ಪೊತ್ತು, ಅವತ್ತಿನ ಪೂಜೆಯಲ್ಲಿ ಹಣೆ, ಮೈಗೆಲ್ಲ ನಾಮ ಹಾಕ್ಕೊಂಡಾಗ ನನಗೂ ಜೊತೆ ಕೂರಿಸಿಕೊಂಡು ನಿನ್ನಂತೆ ನಂಗೂ ಹಚ್ಚುತ್ತಿದ್ದೆ. ಇಂಥವೇ ಕೆಲವೊಂದು ವಿಚಾರಗಳನ್ನ ನಾನು ಚಿಕ್ಕವನಿದ್ದಾಗ ನಿನ್ನನ್ನೇ ಅನುಕರಿಸುತ್ತಿದ್ದೆ, ಅನುಸರಿಸುತ್ತಿದ್ದೆ. ನಿನ್ನ ದೈತ್ಯ ದೇಹ, ಗಾಂಭೀರ್ಯ, ಅಚ್ಚುಕಟ್ಟು, ಸ್ವಚ್ಛತೆ, ಸರಳತೆ ಜೋತೆಗೊಂದಿಸ್ಟ್ ಸಿರಿತನದ ಗತ್ತು ಇದೆಲ್ಲ ಒಂದೆರಡು ಕ್ಷಣದಲ್ಲೇ ಕಣ್ಣೀರ ಹನಿಯೊಳಗೆ ನೆನಪಾಗಿ ಜಾರಿದವು. ನೋವಿದ್ದರೂ ತೋರಗೊಡದೆ ಸಹಜವಾಗಿ ಮನೆಯೊಳಗೆ ಬಂದು ನಿನ್ನ ಉಸಿರಿಲ್ಲದ ದೇಹ ನೋಡಿದಾಗ ಬದುಕು ಇಸ್ಟೇನಾ? ಅಂತನ್ನಿಸಿತು. ನಿನ್ನ ನೋಡಿ ಭಾರವಾದ ಎದೆ ಹೊತ್ತುಕೊಂಡು ಹೊರ ಬರುವಾಗ, "ಇವನು ಬಾಳಾ ಗಟ್ಟಿಗಸ್ತ. ಸಿಕ್ಕಾಪಟ್ಟೆ ಧೈರ್ಯದ ಮನುಷ್ಯ. ದೊಡ್ಡ ಜೀವ ಬೇರೆ. ಪ್ರಾಯದಲ್ಲಿ ಒಂದು ಸರಿಯಾದ 'ಹುಲಿ' ಹೊಡೆದಿದ್ದ. ಅದನ್ನ ಇವನ ಜೊತೆ ಗಾಡಿ ಮೇಲೆ ಇಟ್ಟು ಊರ ತುಂಬಾ ಮೆರವಣಿಗೆ ಮಾಡಿದ್ವಿ. ಅಂಥಾ ಬೇಟೆಗಾರ" ಎಂಬ ಮಾತು ಕಿವಿಗೆ ಬಿತ್ತು. ತಿರುಗಿ ಆ ಕಡೆ ನೋಡಿದ್ರೆ ನಿನಗಿಂತಾ ಚಿಕ್ಕವರಾದ್ರೂ ಕೂಡಾ ಅಜ್ಜನ್ದಿರೆ ಆಗಿದ್ದವರೆಲ್ಲ ಒಂದು ಕಡೆ ಕೂತು ನಿನ್ನ ಬಗ್ಗೆ ಮಾತಾಡ್ತಾ ಇದ್ರು. ನೋಡಿದ್ಯಾ ಅಜ್ಜ ನೀ ಮಾಡಿದ ಒಂದೊಂದು ಕೆಲಸದಲ್ಲೂ ನಿಂದು ಅನ್ನೋದೊಂದಿರ್ತಿತ್ತು. ಅಲ್ಲೇ ನೂರಾರು ಹಂದಿ ಹೊಡೆದವ ಇದ್ರೂ ಬೇಟೆಗಾರ ಅನ್ನಿಸ್ಕೊಲ್ಲಿಲ್ಲ ನೀ ಒಂದ್ ಹುಲಿ ಹೊಡೆದು ಬೇಟೆಗಾರ ಅನ್ನಿಸ್ಕೊಂಡೆ. ಮೊನ್ನೆ ಅಂದ್ರೆ ಮೊನ್ನೆ ಎರಡು ತಿಂಗಳ ಹಿಂದೆ ಅಜ್ಜಿ ಕಳಕೊಂಡ ನನಗೆ ನೀನೊಬ್ಬನೇ ಅಜ್ಜ ಅಂತಾ ಕೊನೆಯದಾಗಿ ಉಳಿದುಕೊಂಡವನು. ನೀನೂ ಇನ್ಮೇಲೆ ನೆನಪು ಮಾತ್ರ. ನಿನ್ನ ಬಗ್ಗೆ, ನಿನ್ನ ಪ್ರೀತಿ ಬಗ್ಗೆ ನಾ ಇಲ್ಲೇನೆ ಬರೆದರೂ ಅದು ಇರುವೆ ಗೂಡಿನ ಹೊರಗೆ ಹರಿದಾಡುವ ನಾಲ್ಕಾರು ಇರುವೆಯಂತೆ. ಇನ್ನೂ ಗೂಡಿನಲ್ಲಿರುವ ಸಹಸ್ರ ಇರುವೆಯಂತೆ ನಿನ್ನ ನೆನಪು, ಆರೈಕೆ, ನಿನ್ನಿಂದ ಕಲಿತದ್ದು ಎಲ್ಲ ನನ್ನೊಳಗೆ ಇನ್ನೂ ಹಸಿರಾಗಿದೆ. ಇದು ಬರೀ ನನ್ನ ಹೃದಯ ಭಾರವನ್ನು ಸ್ವಲ್ಪ ಹೊರ ಹಾಕ್ಲಿಕ್ಕೆ ಬರೆದಿದ್ದಸ್ಟೇ. ಅಜ್ಜ ಈ ಪತ್ರ ಮುಗಿಸುವಾಗ ಆ ದೇವರಲ್ಲಿ ಬೇಡಿಕೊಳ್ಳುವುದೆನೆಂದರೆ ನಿನ್ನ ಮತ್ತು ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಜ್ಜ. ಮತ್ತೊಮ್ಮೆ ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತಿರುವ ನಿನ್ನ ಮೊಮ್ಮಗ ಪ್ರಶಾಂತ.

ಸೋಮವಾರ, ಆಗಸ್ಟ್ 31, 2009

ನಂದಿ ಬೆಟ್ಟ ಕೊಟ್ಟ ಖುಷಿ







ತುಂಬಾ ದಿನದ ಆಸೆಯೊಂದು ಮೊನ್ನೆ ಭಾನುವಾರ ಪೂರ್ತಿಯಾಗಿತ್ತು. ಅದೇನೆಂದರೆ ನಂದಿ ಬೆಟ್ಟ ನೋಡುವುದಾಗಿತ್ತು. ಅದಕ್ಕಾಗಿ ಕಳೆದ ವಾರಾನೇ ಗೆಳೆಯರೆಲ್ಲ ಸೇರಿ ಮುಂದಿನ ಭಾನುವಾರ ನಂದಿಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಿದೆವು. ಅದರಂತೆ ಭಾನುವಾರ ಬೆಳಿಗ್ಗೆ ಸುಮಾರು ಐದೂವರೆಗೆ ಸರಿಯಾಗಿ ಚುಮು ಚುಮು ಚಳಿಯಲ್ಲಿ ಬೈಕ್ ಮಾಡಿಕೊಂಡು ಹೊರಟ್ವಿ. ಜೊತೆಗೆ ಬೆಳಿಗ್ಗೆ ಬೇಗ ಎದ್ದು ಮಾಡಿದ್ದ ಟೊಮ್ಯಾಟೊ ಬಾತ್ ಬೆನ್ನ ಮೇಲಿನ ಬ್ಯಾಗ್ನಲ್ಲಿತ್ತು. ನಮ್ಮನೆಯಿಂದ ನಾನು ಮತ್ತು ನನ್ಗೆಳೆಯ ಚಂದ್ರು ನನ್ ಬೈಕ್ನಲ್ಲಿ, ಹಾಗೆ ಇನ್ನೊಬ್ಬ ನನ್ ಫ್ರೆಂಡ್ ಉಮೇಶನ ಬೈಕ್ನಲ್ಲಿ ಅವನ ಗೆಳೆಯ ಶಶಾಂಕ್ ಇದ್ದ. ಹೀಗೆ ಹೊರಟವರು ಕೆ ಆರ್ ರೋಡ್ ಮೇಲೆ ಮಾರ್ಕೆಟ್ ದಾಟಿ ವಿಧಾನಸೌಧ ನೋಡ್ತಾ ನೋಡ್ತಾ ಮುಂದೆ ಹೆಬ್ಬಾಳದ ಹತ್ತಿರ ಕೊಲಂಬಿಯ ಆಸ್ಪತ್ರೆ ಎದುರಿಗೆ ಬೈಕ್ ನಿಲ್ಲಿಸಿದೆವು. ಅಲ್ಲಿಗೆ ಮತ್ತೈದು ಬೈಕ್ ಬಂದವು. ಅದರಲ್ಲಿ ನನ್ ತಮ್ಮ ಮತ್ತು ನನ್ನತ್ತೆಮಗ ಇಬ್ಬರೇ ನಂಗೆ ಚಂದ್ರುಗೆ ಗೊತ್ತಿದ್ದಿದ್ದು. ಮತ್ತೆಲ್ಲ ನಮಗೆ ಹೊಸ ಪರಿಚಯದವರಾಗಿದ್ದರು. ಅಂದರೆ ಅವರೆಲ್ಲ ಉಮೇಶನ ಫ್ರೆಂಡ್ಸ್. ಅಲ್ಲಿಂದ ಟೀಕುಡಿದು ಹೊರಟ ನಮ್ಮ ತಂಡದಲ್ಲಿ ಏಳು ಬೈಕ್, ಹದಿನಾಲ್ಕು ಜನರ ಪಯಣ ನಂದಿ ಬೆಟ್ಟದ ಕಡೆಗೆ. ಆ ಸುಂದರ ರಸ್ತೆಗೆ ಎಲ್ಲರೂ ಏರ್ ಪೋರ್ಟ್ ರಸ್ತೆ ಅನ್ನೋದು ಸರಿಎನೋ ಅನ್ನಿಸ್ತು. ಕಾರಣ ಅಲ್ಲಿ ಓಡಾಡೋ ಪ್ರತಿಯೊಂದು ವಾಹನಾನು ವಿಮಾನದ ತರಾನೆ ಗುಯ್ನ್ನ್ನ್ ಅಂತಾನೆ ಶಬ್ದ ಮಾಡ್ತಾ ಸುಯ್ನ್ನ್ ಸುಯ್ನ್ನ್ ಅಂತ ಓಡಾಡ್ತವೆ.ಸ್ವಲ್ಪ ಭಯದಲ್ಲೇ ಕೊನೆ ಲೈನ್ ನಲ್ಲಿ ಬೈಕ್ ಓಡಿಸ್ತಿದ್ದ ನನಗೆ ಹಿಂದಿಂದ ದೊಡ್ಡದೊಂದು ಲಾರಿ ಬರ್ತಾ ಇದೆ ಅಂತ ಅನ್ನಸ್ತು. ಅದರ ಶಬ್ದಕ್ಕೆ ಕೊಂಚ ಹೆದರಿ ಇನ್ನೂ ಸ್ವಲ್ಪ ಸೈಡ್ ಗೆ ಹೋದೆ. ಆ ಲಾರಿ ನನ್ ಹಿಂದೇನೆ ಬಂದೇ ಬಿಡ್ತು ಇನ್ನೇನ್ ಮಾಡ್ಲಿ ಅನ್ನೋಸ್ಟ್ ತ್ತಿಗಾಗ್ಲೆ ಆ ಲಾರಿ ಕಣ್ಣಿಗೆ ಕಾಣದ ವೇಗದಲ್ಲಿ ನನ್ನ ದಾಟಿ ಹೋಗಿತ್ತು. ಆದ್ರೆ ಅದು ಲಾರಿಯಾಗಿರಲಿಲ್ಲ ಬದಲಿಗೆ ಬೈಕ್ ರೇಸ್ ನಲ್ಲಿ ಇರುವಂತಹ ಬೈಕ್ ಆಗಿತ್ತು.ಆ ಸಾಹಸಿಗಳು ಮೈಗೆಲ್ಲ ರೊಬೋಟ್ ತರ ಬಟ್ಟೆ ಹಾಕ್ಕೊಂಡಿದ್ರು.ಅವರು ಹೋದ ವೇಗದಿಂದಾಗಿ ನಂಗೆ ಸರಿಯಾಗಿ ಆ ಬೈಕ್ನ ಚಂದ ನೋಡ್ಲಿಕ್ಕು ಆಗ್ಲಿಲ್ಲ. ನಾನ್ ಭಯಪಟ್ಟಿದ್ದು ನನ್ ಹಿಂದೆ ಕೂತಿದ್ ಭೂಪನಿಗೆ ಗೊತ್ತಾಯ್ತೋ ಇಲ್ವೋ ಗೊತ್ತಿಲ್ಲ. ಯಾಕೆ ಅಂದ್ರೆ ನನ್ ಬೈಕ್ ನಲ್ಲಿ ಸದಾ ಜೊತೆಗಿರೋನು ಅಂದ್ರೆ ಈ ಚಂದ್ರುನೇ. ಇವನ ಒಂದ್ ವಿಶೇಷ ಅಂದ್ರೆ ಹಿಂದೆ ಕೂತರೆ ನಾನು ಪದೇ ಪದೇ ಮುಟ್ಟಿನೋಡ್ಬೇಕು ಅವನ್ನ ಕೂತಿದಾನೋ ಇಲ್ವೋ ಅಂತ.ಅಸ್ಟ್ ನೀಟಾಗಿ ಕೂರ್ತಾನೆ.ನಾನೇನಾದ್ರು ಸ್ವಲ್ಪ ಚನ್ನಾಗಿ ಬೈಕ್ ಓಡಿಸ್ತೀನಿ ಅಂದ್ರೆ ಅದು ಇವನು ಹಿಂದೆ ಕೂತಾಗ ಮಾತ್ರ. ಇರಲಿ, ಆ ಸಾಹಸಿಗಳ ಬಗ್ಗೆನೇ .... ಏನ್ ಸ್ಪೀಡಗೊದ್ರೋ ಮಾರಾಯ ಅಂತ ಹೇಳ್ತಾ ಹೇಳ್ತಾ ಏರ್ ಪೋರ್ಟ್ ದಾಟಿ ನಂದಿ ಬೆಟ್ಟದ ಹತ್ರ ಹತ್ರ ಬಂದ್ವಿ. ಆಗಿನ್ನೂ ಆರೂವರೆ ಇರಬಹುದು. ಅಬ್ಬಬ್ಬಾ ಆ ಬೆಟ್ಟ ನೋಡಿದ್ರೆ, ಬೆಟ್ಟದ ತುದಿಗೆ ಸುತ್ತಲೂ ಹೊಗೆಯ ಟೋಪಿ ಧರಿಸಿದ ಹಾಗೆ ಕಾಣಿಸ್ತಿತ್ತು. ಅಸ್ಟೊಂದು ಹಿಮ ಬೀಳ್ತಾ ಇತ್ತು. ನಿದಾನವಾಗಿ ಬೆಟ್ಟದ ಕೆಳಗಿಂದ ಹತ್ತಲು ಪ್ರಾರಂಬಿಸಿ, ತಿರುವುಗಳಲ್ಲಿ ಸಾಗುವಾಗ ಭಯಮಿಶ್ರಿತ ಆನಂದ ಅನುಭವಿಸಿದ್ದು ಮರೆಯಲು ಸಾದ್ಯವಿಲ್ಲ. ಆಶ್ಚರ್ಯ ಅಂದ್ರೆ ಅಲ್ಲೂ ಕೂಡಾ ಮತ್ತದೇ ಗುಂಯ್ ಗುಂಯ್ ಶಬ್ದ. ಈಗ ಮಾತ್ರ ನಮಗೆ ಗೊತ್ತಾಯ್ತು, ಇದು ಅವ್ರೆ ಬೈಕ್ನವರು ಅಂತ.ಆದ್ರೆ ಆ ಹಾವು ಹರಿದಂತಿರುವ ಡೊಂಕು ಡೊಂಕು ರಸ್ತೆಲೂ ಅವರದ್ದು ಅದೇ ವೇಗ. ನೋಡಿ ನಿಜಕ್ಕೂ ಗಾಬರಿಯಾಯಿತು.ಅವರು ಸ್ಪರ್ದೆಗೆ ತಯಾರಿ ನಡೆಸ್ತಾ ಇದ್ರು. ನಂತರ ಬೆಟ್ಟದ ಮೇಲೆ ಹೊದಾಗಲಂತೂ ಚಳೀ ಚಳೀ. ಪೂರ್ತಿ ಮಂಜಿನಿಂದ ಮುಚ್ಚಿಕೊಂಡಿತ್ತು ಬೆಟ್ಟ. ಇದೇನೂ ಮಲೆನಾಡಿನವನಾದ ನನಗೆ ಹೊಸತೆನಲ್ಲದಿದ್ದರೂ ಸಹ ಸದ್ಯಕ್ಕಿದು ಹಳೆಯ ನೆನಪುಗಳನ್ನ ಮತ್ತೆ ಮತ್ತೆ ಕಣ್ಮುಂದೆ ತಂದಿತು. ಇದೇ ಥರದ ಬೆಟ್ಟಗಳು ನಮ್ಮೂರಿನಲ್ಲಿವೆ. "ಕೆಮ್ಮಣ್ಣುಗುಂಡಿ, ಕುಂದಾದ್ರಿ ಬೆಟ್ಟ, ಆಗುಂಬೆ, ಕೊಡಚಾದ್ರಿ. ಬಾಬಾ ಬುಡನ್ಗಿರಿ" ಇವೆಲ್ಲ ನಮ್ಮೂರಿಗೆ ಕೆಲವೇ ಕಿಲೋಮೀಟರುಗಳ ದೂರದವು. ಅವುಗಳನ್ನೆಲ್ಲ ಸ್ನೇಹಿತರ ಜೊತೆಗೆ ಹತ್ತಿಳಿದ ದಿನಗಳು ಅದೆಸ್ಟೋ. ಈ ನಂದಿ ಬೆಟ್ಟವು ಸಹ ಅಸ್ಟೇ ಸುಂದರವಾದ ಬೆಟ್ಟ. ಈಗ ನಮ್ಮದು ಬೆಟ್ಟ ಸುತ್ತುವ ಸರದಿ. ಮೊದಮೊದಲು ಕಂಡಿದ್ದೇ ಆ ದೊಡ್ಡ ಸುಂದರ ಕೆರೆ. ನಿಜಕ್ಕೂ ಸುಂದರವಾಗಿದೆ. ಆಮೇಲೆ ಉದ್ಯಾನ ವನ, ಬಂಡೆಗಲ್ಲು, ಮರಗಿಡ, ಮೊಖವಿಸ್ಮಿತರನ್ನಾಗಿಸುವ ದೇವಸ್ಥಾನಗಳು ಮನಸ್ಸಿಗೆ ಉಲ್ಲಾಸ ತಂದವು. ಆದರೆ ವಿಪರೀತ ಅನ್ನಿಸಿದ್ದು ಅಲ್ಲಿನ ಕೋತಿಗಳ ಅತೀ ಎನ್ನಿಸುವ ಒಗ್ಗಟ್ಟು ಮತ್ತು ಕಿತ್ತು ತಿನ್ನುವ ಬುದ್ದಿ. ಹೌದು, ಅವು ನಾವು ತೆಗೆದುಕೊಂಡು ಹೋಗಿದ್ದ ತಿಂಡಿನ ಯಾರದ್ದೂ ಅನುಮತಿ ಇಲ್ಲದೆ, ಭಯವೂ ಇಲ್ಲದೇ ಕಿತ್ತು ತಿಂದು ಮುಗಿಸಿದವು. ಆಮೇಲೆ ಅಲ್ಲಿಂದ ಭಯಾನಕ ಟಿಪ್ಪೂ ಡ್ರಾಪ್ ನೋಡಿಕೊಂಡು ಕೆಲವೊಂದು ಫೋಟೋ ತೆಗೆದುಕೊಂಡು ನಂದಿ ಬೆಟ್ಟದ ಕೆಳಗೆ ಬರುವಾಗಲೇ ಸ್ವಲ್ಪ ದಣಿವಾದಂತೆ ಆಗಿದ್ದೆವು. ಬೆಟ್ಟದ ಕೆಳಗೆ ಬಂದು ಟೀ ಕುಡಿಯುತ್ತಿರುವಾಗ ಸಮಯ ಸುಮಾರು ಹನ್ನೆರಡು ಘಂಟೆ ಅನ್ನಿಸತ್ತೆ, ಆಗ ಕಂಡಂತ ದೃಶ್ಯ ಚನ್ನಾಗಿತ್ತು. ಅದೇನೆಂದರೆ ನಂದಿಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಬೈಕ್ ನಲ್ಲಿ ಹುಡುಗ ಹುಡುಗಿಯರ ಜೋಡಿಯಿತ್ತು. ಆಗ ಅನ್ನಿಸಿದ್ದೇನೆಂದರೆ ನಾವು ಬೇಗ ಬೆಟ್ಟ ಇಳಿದು ಬಂದೆವ? ಅಂತ. ಇರಲಿ ಈ ಪ್ರವಾಸ ನನಗಂತೂ ವಿಶೇಷ ಅನ್ನಿಸಿದ್ದು, ಮುಂದಿನ ಬೇರೆ ಸುಂದರ ಸ್ಥಳದ ಹುಡುಕಾಟದಲ್ಲಿ ನಾವಿದ್ದೇವೆ. ನೀವೂ ಒಮ್ಮೆ, ಮತ್ತೊಮ್ಮೆ ಸಮಯ ಮಾಡಿಕೊಂಡು ನಂದಿ ಬೆಟ್ಟಕ್ಕೆ ಹೋಗಿಬನ್ನಿ. ಆ ರೋಮಾಂಚನದ ಸವಿ ನೀವೇ ಅನುಭವಿಸಿ.

ಮಂಗಳವಾರ, ಜುಲೈ 28, 2009

ಸ್ನೇಹ ಅಂದರೆ.......

ಮನಸು ಮೌನವಾದಾಗ
ಮಾತು ಬಾರದಾದಾಗ
ಮಾನ ಹೋಗುವಂತಿರುವಾಗ
ಸಿಗುವ ಮುತ್ತಿನಂಥ ಮಾತೇ ಸ್ನೇಹ.

ಗೆದ್ದಾಗ ಗಮನಿಸುವ
ಸೋತಾಗ ಸಂತೈಸುವ
ಸತ್ತಾಗ ಸ್ಮರಿಸುವ
ಆ ಜೀವದ ಹೃದಯವೇ ಸ್ನೇಹ.

ಭಾವನೆಯಲ್ಲಿನ ಭವ್ಯತೆಯನ್ನ
ಕಣ್ಣುಗಳಲ್ಲಿನ ಕನಸುಗಳನ್ನ
ಕನಸುಗಳಲ್ಲಿನ ಕವನಗಳನ್ನ
ಬರೆಯಲು ಸಿಗುವ ಸ್ಪೂರ್ತಿಯೇ ಸ್ನೇಹ.

ಸಾಧನೆ ಮಾಡಲು ಸೇತುವೆಯನ್ನ
ಸಮಸ್ಯೆ ಬಂದಾಗ ಸಹಕಾರವನ್ನ
ಸಿಟ್ಟು ಬಂದಾಗ ಸಂಯಮವನ್ನ
ತೋರಿಸುವ ಕೈಗಳೇ ಸ್ನೇಹ.

ಸುಮ್ ಸುಮ್ನೆ ಸಡಿಲವಾಗದ
ಚಂಗ್ ಚಂಗನೆ ಬಂದು ಹೋಗದ
ನಿಶ್ಚಲವಾದ, ಅಚಲವಾದ, ಶುಭ್ರವಾದ
ಈ ನಮ್ಮ ಬಾಂಧವ್ಯವೇ ಸ್ನೇಹ.

ಮನದ ಗೆಳತಿ

ನೀ ಇಬ್ಬನಿಯಾದರೆ
ನಾ ಗರಿಕೆಯಾಗುವೆ ಗೆಳತಿ
ಸದಾ ಶೋಭಿಸುತ್ತಿರು ನನ್ನ ಶಿರದ ಮೇಲೆ.

ನೀ ತಾರೆಯಾದರೆ
ನಾ ಬಾನಾಗುವೆ ಗೆಳತಿ
ಸದಾ ಮಿನುಗುತ್ತಿರು ನನ್ನಲ್ಲೇ.

ನೀ ಚುಕ್ಕೆಯಾದರೆ
ನಾ ಜಿಂಕೆಯಾಗುವೆ ಗೆಳತಿ
ಸದಾ ಮಿಂಚುತ್ತಿರು ನನ್ನ ಮೈಮೇಲೆ.

ನೀ ತಾವರೆಯಾದರೆ
ನಾ ತೊರೆಯಾಗುವೆ ಗೆಳತಿ
ಸದಾ ಅರಳಿ ನಿಂತಿರು ನನ್ನ ಎದೆ ಮೇಲೆ

ನೀ ಮೀನಾದರೆ
ನಾ ಸಾಗರವಾಗುವೆ ಗೆಳತಿ
ಸದಾ ನೀ ಆಡುತ್ತಿರು ನನ್ನ ಒಡಲಲ್ಲೇ

ಅನಾಹುತಗಳ ಸರಮಾಲೆ

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.

ಮಾನವನ ಸುತ್ತ ಅನಾಹುತಗಳ ಸರಮಾಲೆ
ಆದರೂ ಪ್ರಪಂಚವ ನೋಡುವನು ಕಾಮಾಲೆ ಕಣ್ಣಲ್ಲೇ
ಮಾಡುವುದೆಲ್ಲ ದೂರದೃಷ್ಟಿಯಿಂದಲೇ
ಆದರೆ ಆಗುವುದೆಲ್ಲ ದುರಾದ್ರುಸ್ಟದಲ್ಲೇ

ಮಾನವ ಹಾರಾಡುವುದು ವಿಮಾನದಲ್ಲೇ
ಆಗ ಹೇಳುತ್ತಾನೆ ಸ್ವರ್ಗ ಇಲ್ಲೇ ಮೇಲೆ
ಅನಾಹುತವಾದಾಗ ಮದ್ಯದಲ್ಲೇ
ಅವನ ಸಾವು ವಿಮಾನ ಬಿದ್ದ ಸ್ತಳದಲ್ಲೇ.

ಮಾನವನ ಜೀವನ ಸಾಗುವುದು ಬೆಳಕಲ್ಲೇ
ಅದಕ್ಕಾಗಿ ಹರಡಿರುವನು ತಂತಿಯ ಮಾಲೆ
ವಿದುತ್ ಎನ್ನುವ ಮಿಂಚು ಅದರ ಮೇಲೆ
ಕೊಂಚ ಎಚ್ಚರ ತಪ್ಪಿದರೆ ಸಾವು ಕ್ಷಣದಲ್ಲೇ

ಮಾನವ ಈಗ ತಿರುಗಾಡುವುದೆಲ್ಲಕಾರಲ್ಲೇ
ಅದೂ ಘಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲೇ
ಅಪ್ಪಿತಪ್ಪಿ ಕಣ್ಣು ಮುಚ್ಚಿದರೆ ತೂಕಡಿಕೆಯಲ್ಲಿ
ಮತ್ತೆ ಕಣ್ಣು ತೆರೆಯುವುದು ಪರಲೋಕದಲ್ಲೇ.

ಮಾನವನು ಆಹಾರ ಬೆಳೆಯುವುದು ಕಲ್ಮಶದಲ್ಲೇ
ಹೀಗಾಗಿ ಅವನ ಹೊಟ್ಟೆಯೂ ತುಂಬಿರುವುದು ವಿಷದಲ್ಲೇ
ಆದ್ದರಿಂದ ವರ್ಷವಿಡೀ ನರಳುವನು ರೋಗದಲ್ಲೇ
ಅದು ಕೊನೆಯಾಗುವುದು ಆತನ ಸಾವಿನಲ್ಲೆ.

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.



ಏಕೆ ಹೀಗೆ?

ಮನಸ್ಸಿಗೆ ಬೇಜಾರಾಗಿದೆ
ಹೃದಯ ಭಾರವಾಗಿದೆ
ದೇಹ ನಿಶ್ಚಲವೆನಿಸಿದೆ
ದುಃಖ ಉಮ್ಮಳಿಸುತ್ತಿದೆ
ಏಕೆ ಹೀಗೆ?

ಕಣ್ಣು ಕಾಣದಾಗಿದೆ
ಕಿವಿ ಕೇಳದಾಗಿದೆ
ಕೈ ಆಡದಾಗಿದೆ
ಕಾಲು ನಡುಗುತಲಿದೆ
ಏಕೆ ಹೀಗೆ?

ಊಟ ಸೇರದಾಗಿದೆ
ನೀರು ಬೇಡವಾಗಿದೆ
ಬಾಯಿ ಒಣಗಿ ಹೋಗಿದೆ
ನಾಲಿಗೆ ಸಪ್ಪೆಯಾಗಿದೆ
ಏಕೆ ಹೀಗೆ?

ನೆನಪು ಕಹಿಯಾಗಿದೆ
ಮಾತೆ ಬಾರದಾಗಿದೆ
ಪ್ರೀತಿ ಇಲ್ಲದಾಗಿದೆ
ಜೀವನ ಬೇಡವಾಗಿದೆ
ಏಕೆ ಹೀಗೆ?

ಜೀವನವೆಂದರೆ ಇದೇನಾ?
ಇದು ಜೀವನದ ಭಾಗ ಮಾತ್ರಾನಾ?
ಇದು ಒಂದೆರಡು ಗಳಿಗೆ ಮಾತ್ರಾನಾ?
ಜೀವನಪೂರ್ತಿ ಇದೇನಾ?
ಬದಲಾಗುವುದು ಹೇಗೆ?

ಶಿವರಾತ್ರಿಯ ಸುಂದರಿ

ಶಿವರಾತ್ರಿಯ ದಿನದಂದು
ನೀ ಬಂದೆ ಪೂಜೆಗೆಂದು
ಹೂ, ಹಣ್ಣು, ಕಾಯಿ ಹಿಡಿದು
ನಿಂತಿದ್ದೆ ನೀ ಕೈ ಮುಗಿದು.

ಪೂಜೆ ಮಾಡುವ ಸಲುವಾಗಿ
ನನ್ನ ನೀ ಕರೆದೆ ಮೆಲುವಾಗಿ
ನಿನ್ನಂದಕ್ಕೆ ನಾ ಮರುಳಾಗಿ
ಪೂಜೆ ಮಾಡಿದೆ ಪೂಜಾರಿಯಾಗಿ.

ನಿನ್ನ ನೋಡಿದ ಆ ಹೊತ್ತು
ನನ್ನ ಹೃದಯ ಹಾರಿಹೋಯ್ತು
ನಿನಗಾಗಿ ಹಂಬಲಿಸುತ್ತ
ಹುಡುಕಾಡಿದೆ ಸುತ್ತಾ ಮುತ್ತಾ .

ನೀ ಅಲ್ಲೇ ಪಕ್ಕದಲ್ಲೇ ನಿಂತಿದ್ದೆ
ನಾ ನಿನ್ನೆ ಗಮನಿಸುತಿದ್ದೆ
ನೀ ನನ್ನ ಮನಗೆದ್ದೆ, ಹೃದಯ ಕದ್ದೆ
ನಾ ನಿನ್ನ ಪ್ರೀತಿಯ ಬಲೆಗೆ ಬಿದ್ದೆ.

ಆಮೇಲೆರಡು ಬಾರಿ ಆಯಿತು
ನಮ್ಮಿಬ್ಬರ ಭೇಟಿ
ನಾಚಿಕೆಯ ದಾಟಿ, ಭಾವನೆಗಳ ಮೀಟಿ
ಸೇರಿಸಿದೆವು ನಾವಿಬ್ಬರೂ ತುಟಿಗೆ ತುಟಿ.

ಆಮೇಲೆಏನಾಯ್ತೆ ನಮಗೆ ಗೆಳತಿ
ಹೃದಯದಲ್ಲೈತೆ ಈ ಪ್ರೀತಿ
ಅದಕ್ಕಡ್ಡಿ ನಮ್ಮಿಬ್ಬರ ಜೀವನ ರೀತಿ
ಸುದಾರಿಸಲಿ ಈ ರೀತಿ ನೀತಿ.

ನನಗಾಗಿ ನೀ ಬರುವೆ
ಅಂತಾ ನಾ ಕಾದಿರುವೆ
ನನ್ನ ಹೃದಯ ನೀನಾಗಿರುವೆ
ನಿನಗಾಗಿ ನಾ ಕಾದಿರುವೆ.

ನನ್ನ ಪ್ರೀತಿಯ ಹುಡುಗಿಗೆ

ನನ್ನ ಪ್ರೀತಿಯ ಹುಡುಗಿಗೆ
ಈ ನನ್ನ ಕವನದ ಕೊಡುಗೆ
ಇದರಲ್ಲಿ ಬರೆದಿದ್ದೇನೆ ನಿನಗೆ
ನಾನು ನಿನ್ನ ಪ್ರೀತಿಸುವ ಬಗೆ.

ಆಕಾಶವನ್ನೇ ನಿನ್ನ ಅಂಗೈಯಲ್ಲಿರಿಸುವೆ
ಆ ಸಾಗರವನ್ನೇ ನಿನ್ನ ಕೈ ಸೆರೆಯಾಗಿಸುವೆ
ತಾರೆಯನ್ನೇ ತಂದು ಹಣೆಮೆಲಿಡುವೆ
ಸುಂದರ ಜಲಪಾತವನ್ನೇ ನಿನ್ನ ಜಡೆಯಾಗಿಸುವೆ.

ಅರಳುವ ಮೊದಲ ಹೂವು ನಿನಗಾಗಿ
ಬೀಳುವ ಮೊದಲ ಮಂಜು ನಿನಗಾಗಿ
ನನ್ನದೆನ್ನುವ ವಸ್ತುವೆಲ್ಲ ನಿನಗಾಗಿ.

ನಿನಗಾಗಿ ಕಟ್ಟಿಸುವೆ ಸುಂದರ ಅರಮನೆ
ಅಲ್ಲಿನ ಸಿಂಹಾಸನಕ್ಕೆ ಹಾಕಿಸುವೆ ಚಿನ್ನವನ್ನೇ
ಅದರಲ್ಲಿ ಕೂರಿಸುವೆ ನಾ ನಿನ್ನನ್ನೇ
ಇದೆಲ್ಲ ನಿನಗಾಗಿ ಓ ನನ್ನ ಮನದೆನ್ನೆ.

ಪ್ರಿಯೆ, ನಿನಗಿದು ಬದುಕಲು ಬೇಕಿಲ್ಲ
ಇದು ಅನಿವಾರ್ಯವೂ ಅಲ್ಲ
ಇದನ್ನೆಲ್ಲಾ ನಾ ನಿನಗೆ ಕೊಡಿಸುವುದಿಲ್ಲ
ಅದು ನನ್ನಿಂದ ಸಾಧ್ಯವೂ ಇಲ್ಲ.

ಆಸೆಯೆಂಬ ಕನಸು ಬೇಕೇ?
ಪ್ರೀತಿಸುವ ಮನಸು ಸಾಕೆ
ಜಗಮಗಿಸುವ ಅರಮನೆ ಬೇಕೆ?
ಹೃದಯವೆಂಬ ಗುಡಿಸಲಲ್ಲೇ ಜಾಗ ಸಾಕೆ.

ನನ್ನ ವಿಶಾಲವಾದ ಹೃದಯದಲ್ಲಿ
ನಿನ್ನ ನೆನಪು ಸದಾ ಇರಲಿ
ಅದರ ಒಂದೊಂದು ಬಡಿತದಲ್ಲಿ
ನಿನ್ನ ಹೆಸರು ಹಾಡಾಗಿ ಬರಲಿ

ಓ ನನ್ನ ಮುದ್ದಿನ ಗೆಳತಿ
ಈ ಹೃದಯಕ್ಕೆ ನೀನೆ ಒಡತಿ
ಇದಕ್ಕಿದ್ದರೆ ಸಮ್ಮತಿ
ನೀನಾಗುವೆ ನನ್ನ ಶ್ರೀಮತಿ.



ಮಂಗಳವಾರ, ಜೂನ್ 30, 2009

ನೀ ನನ್ನೆದುರಿಗಿನ ಅದ್ಭುತ ಕಣೋ

ಇದು ತೀರ ಇತ್ತೀಚಿಗೆ ನಡೆದದ್ದು. ಅಂದರೆ ಮೊನ್ನೆ ಮೊನ್ನೆಯದು. ಆವತ್ತು ನಾನು ನಮ್ಮ ಕಾಲೇಜಿನಲ್ಲಿ ಎಗ್ಸಾಂ ನಡೀತಾ ಇತ್ತು. ನಾನು ಎಗ್ಸಾಂ ಡ್ಯೂಟಿ ನಲ್ಲಿದ್ದೆ. ಸುಮಾರು ಹನ್ನೊಂದುವರೆ ಅಸ್ಟೋತ್ತಿಗೆ ನಂಗೊಂದ್ ಫೋನ್ ಬಂತು. ಫೋನ್ ಮಾಡಿದ್ದು ನಂ ದೇವೇಂದ್ರಪ್ಪ ಸರ್ ಅಂತ. ನಾನ್ ಅವರನ್ನ ದೇವು ಅಂತಲೇ ಪ್ರೀತಿಯಿಂದ, ಆತ್ಮೀಯತೆಯಿಂದ ಕರೆಯುವದು. ಕಾರಣ ನನಗೂ ಅವರಿಗೂ ಸುಮಾರು ಏಳೆಂಟು ವರ್ಷದ ಗೆಳೆತನ ಕಾರಣವಿರಬಹುದು. ಏನೇ ಇರಲಿ, ನನಗೆ ದೇವು ಕರೆ ಮಾಡಿ ಎಲ್ಲಿದಿಯೋ ಅಂದ. ಇಲ್ಲಿ ಎಗ್ಸಾಂ ಡ್ಯೂಟಿನಲ್ಲಿದೀನಿ ಯಾಕೋ ಅಂದೆ. ಬೇಗ ಬಾರೋ, ಪೊಲಿಟಿಕಲ್ ಸೈನ್ಸ್ ಮಲ್ಲಿಕಾರ್ಜುನ ಬಂದಿದಾನೆ ಅಂತಹೇಳಿದಾಗ, ಆಯಿತು ಬರ್ತೀನಿ ಅಂದಿದ್ದೆ. ಆದರೆ ....... ಮಲ್ಲಿಕಾರ್ಜುನ ಅಂದ್ರೆ ಯಾರು ಅಂತ ಗೊತ್ತಾಗಿರಲಿಲ್ಲ. ಅದಕ್ಕಾಗಿಯೇ ಏನೋ ಸ್ವಲ್ಪ ಸೋಮಾರಿತನ ಮಾಡಿ, ಹೋದರಾಯಿತು ಅಂತ ಹೇಳಿ ತಡವಾಗಿ ಅಂದ್ರೆ ಹತ್ಹತ್ರ ಒಂದ್ ಘಂಟೆಯಾಗಿತ್ತು ನಾಬಂದಾಗ. ಅಲ್ಲಿ ಆಶ್ಚರ್ಯ ಅನ್ನೋದು ನನಗಾಗಿ ಕಾದಿತ್ತು ಅನ್ಸತ್ತೆ. ಹೌದು..... ಖಂಡಿತ ಆಶ್ಚರ್ಯ ಆಯ್ತು. ಅದೇನೆಂದರೆ ನಾಕಂಡ ಅದ್ಭುತ ವ್ಯಕ್ತಿಯೊಬ್ಬ ಅಲ್ಲಿ ಕೂತಿದ್ದ. ನನ್ನ ದ್ವ್ಹನಿಯಿಂದಲೇ ವ್ಯಕ್ತಿ ನನ್ನ ಪರಿಚಯ ಕಂಡುಕೊಂಡ. ನನ್ನ ಮುಟ್ಟಲು ಪ್ರಯತ್ನಿಸಿ ತನ್ನ ಕೈಗಳನ್ನ ಮಗುವಿನ ರೀತಿ ಕಡೆ, ಕಡೆಯಲ್ಲಾ ಅಲ್ಲಾಡಿಸಲು ಪ್ರಾರಂಭಿಸಿದ. ಕೊನೆಗೆ ನಾನೇ ಕೈ ಮುಟ್ಟಿ ನಾನಿರುವ ಜಾಗ ತಿಳಿಸಿದೆ. ಅವನು ನನ್ನೆಡೆಗೆ ನೋಡುತ್ತಾ .......? ನಿಷ್ಕಲ್ಮಶ ನಗೆ ನಕ್ಕು ಏನಪ್ಪಾ ಹೇಗಿದ್ದೀಯ? ಎಸ್ಟ್ ವರ್ಷಆಯ್ತು ನಿಮ್ಮನ್ನೆಲ್ಲ ನೋಡಿ ....? ......ಹಾಂ .....ಅಂತೆಲ್ಲ ಏನೇನೋ ಬಡಬಡಿಸಿದ. ಏನಂದ್ರೆ ಇಸ್ಟೋತ್ತಂಕ ಪ್ರಶಾಂತ ಅಂದ್ರೆ ಯಾರು ಅಂತ ಗೊತ್ತಾಗಿರಲಿಲ್ಲ ಕಣೋ. ಇಲ್ಲೇ ಈಗ ನಿನ್ನ ಧ್ವನಿ ಕೇಳಿದ ಮೇಲೆ ಗೊತ್ತಾಗ್ತಾ ಇದೆ ಅಂತ ಅಂದ ನನ್ ಗೆಳೆಯ.
ಹೌದು, ನೀವಂದುಕೊಂಡಿದ್ದು ನಿಜ. ನನ್ನ ಗೆಳೆಯ ಆ ರೀತಿಯಲ್ಲಾ ಆಡಲಿಕ್ಕೆ ಕರಣ ಒಂದೇ. ಅದೇನೆಂದರೆ ಪ್ರಪಂಚದ ದೃಷ್ಟಿಯಲ್ಲಿ ಮತ್ತು ದೈವ ಸೃಷ್ಟಿಯಲ್ಲಿ ಆತ ದೈಹಿಕವಾಗಿ "ಅಂಧ"ನಾಗಿದ್ದಾನೆ. ಅವನಿಗೆ ತನ್ನ ಸ್ನೇಹಿತರನ್ನು ನೋಡಲು ಸಾದ್ಯವಿಲ್ಲ, ಈ ಜಗತ್ತನ್ನು, ಈ ಜಗತ್ತಿನಲ್ಲಿರುವ ಸೌಂದರ್ಯವನ್ನು, ವಿಸ್ಮಯವನ್ನು, ಇಲ್ಲಿನ ಕ್ರೌರ್ಯವನ್ನು, ಮೋಸ ವಂಚನೆಯನ್ನು, ಕೊಲೆ ಸುಲಿಗೆಯನ್ನು ನೋಡಲು ಸಾದ್ಯವಿಲ್ಲ. ಅಂತಹ ವ್ಯಕ್ತಿಯೊಬ್ಬ ನನ್ನ ಗೆಳೆಯ. ಬಹಳ ವರ್ಷಗಳ ನಂತರ ಭೇಟಿಯಾದೆ. ಸರಿಸುಮಾರು ನಾಲ್ಕು ವರ್ಷದ ನಂತರ.
ಇದೆ ನಾಲ್ಕೈದು ವರ್ಷದ ಹಿಂದೆ....................
ನಾನು ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ , ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಮಾಡುತ್ತಿದ್ದರೆ ನನ್ನ ಗೆಳೆಯ ಅಲ್ಲೇ ರಾಜ್ಯಶಾಸ್ತ್ರ ಅದ್ಯಾಯನ ಮಾಡುತ್ತಿದ್ದ. ಅವನನ್ನು ನೋಡಿದ ದಿನದಿಂದ ನನಗನ್ನಿಸಿದ್ದು ಅವನೊಂದು ಭೂಮಿಮೆಲಿನ ಅದ್ಭುತ ಜೀವಿ ಅಂತ. ಈ ಜಗತ್ತಿನ ಯಾರನ್ನಾದರು ಅವನು ನಿಮಿಷಮಾತ್ರದಲ್ಲಿ ಸೆರೆ ಹಿಡಿಯಬಲ್ಲವನಾಗಿದ್ದ. ನೋಡಿ, ನಮಗೂ ನನ್ನ ಗೆಳೆಯನ ವಿಭಾಗದವರಿಗೂ ಯಾವಾಗಲು ಒಂದು ವಿಷಯದಲ್ಲಿ ಸದಾ ಜಿದ್ದಾ ಜಿದ್ದಿ. ಅದು ವಾಲಿಬಾಲ್ ಆಟದಲ್ಲಿ. ಅವನ ಗೆಳೆಯ ಪ್ರವೀಣ ವಾಲಿಬಾಲ್ನ ಧೈತ್ಯ ಪ್ರತಿಬೆ. ನಮ್ಮದೂ ಒಂಥರಾ ಒಳ್ಳೆ ಟೀಮೆ ಆಗಿತ್ತು. ನಾವಿಬ್ಬರೂ ಯಾವಾಗಲೂ ಅಂತರ ವಿಭಾಗದ ಆಟದಲ್ಲಿ ಮುಖಾಮುಕಿ. ಕಣ್ಣು ಕಾಣದ....? ನನ್ನ ಗೆಳೆಯ ಎಲ್ಲರನ್ನು ಧ್ವನಿಯ ಮೂಲಕ ಇವರೇ ಎಂದು ಗುರುತಿಸುತ್ತಿದ್ದ. ಪಂದ್ಯ ನಡೆಯುತ್ತಿದ್ದರೆ ಸಾಕಸ್ಟು ರೋಷ ಇರುತ್ತಿತ್ತು. ಆ ಸಮಯದಲ್ಲಿ ಈ ಗೆಳೆಯನ ಬಿರುಸು ಮಾತುಗಳು. ಅವನು ಅವನ ಟೀಮ್ಗೆ ಹೇಗೆ ಹುರುಪು ತುಂಬುತ್ತಿದ್ದ ಅಂದ್ರೆ .... ಆಹಾ ಎಂಥಾ ಹೊಡೆತಾ ಹೊಡೆದ್ಯೋ ಪ್ರವೀಣ, ಭೇಷ್ ಕಣೋ. ನೀ ಹುಟ್ಟಿದ್ದು ಸಾರ್ಥಕ ಕಣೋ. ಅಲ್ನೋಡು ಕಾರ್ನರಲ್ಲಿ ಕಾಳಿ (ಕೆಲ ಆತ್ಮೀಯರು ಕರೆಯುವ ನನ್ನ ಹೆಸರದು ) ಇದಾನೆ, ತುಂಬಾ ಎಗರಾಡ್ತಾ ಇದಾನೆ. ಅವನ ತಲೆ ಮೇಲೆ ಹೊಡ್ಯೋ. ಹೀಗೆಲ್ಲ ಹೇಳ್ತಾ ಇದ್ರೆ ಏ ನಿಂಗೆ ಕಣ್ಣು ಕಾಣೋಲ್ಲ ಅಂದ್ರೆ ನಾವು ನಂಬೋಲ್ಲ ಅಂತಿದ್ವಿ. ಇನ್ನು ನನ್ನ ಗೆಳೆಯ ಚೆಸ್ ಆಟದ ದೊರೆ. ಅವನನ್ನ ಗೆದ್ದವರಾರೂ ಅಲ್ಲಿರಲಿಲ್ಲ. ಅಸ್ಟ್ರಮಟ್ಟಿಗೆ ಚೆಸ್ ಸಾಮ್ರಾಜ್ಯದ ರಾಜ ಅವನು. ಹ್ಞಾ... ಮತ್ತೆ ಕೇಳಿ, ಆಗ ಹಾಸ್ಟೆಲ್ನಲ್ಲಿ ಒಂದೇ ಎಸ್ಟಿಡಿ ಬೂತ್. ಅದರಲ್ಲೂ ಮರದ ನೆರಳು ಅದೂ ಇದೂ ಅಂತ ಸ್ವಲ್ಪ ಕತ್ತಲು. ಅದರಲ್ಲಿ ಬಾಗಿಲು ಹಾಕ್ಕೊಂಡು ಮಾತಾಡೋ ಅಭ್ಯಾಸ ಒಳಗೆ ಪೂರ್ತಿ ಕತ್ತಲು. ನಂಬರ್ ಹೊಡಿಲಿಕ್ಕು ಕಷ್ಟ. ಆ ಸಮಯದಲ್ಲಿ ಈ ಗೆಳೆಯನೆ ದಾರಿ 'ದೀಪ' ಇವನು ಫೋನ್ ಮೇಲೆ ಒಂದ್ ಕೈ ಇಟ್ಟು ಬೆರಳುಗಳನ್ನ ಚಲಿಸಿದನೆಂದರೆ ಅದು ಗುರಿ ತಪ್ಪದ ರಾಮನ ಬಾಣ. ನಿಮಗೆ ತಿಳಿದಿರಲಿ ಕಣ್ಣಿರುವ ನಮ್ಮಂತ ಕಮಂಗಿಗಳಿಗೆ ಇವನೇ ಸರ್ವ ಜ್ಯೋತಿ. ಇನ್ನೊಂದು ವಿಷ್ಯ ನೆನಪಿರಲಿ "ನನಗೆ ಕಣ್ಣಿದೆ ನಾ ಎಲ್ಲಿ ಬೇಕಾದರೂ ಜಿಗಿಯಬಲ್ಲೆ ಅಂತ ಬೀಗಿದ ಕುದುರೆಗಳಿಗೆ ಜಿಗಿಯಬೇಕಾದ ಜಾಗದಲ್ಲಿ ಕಣ್ಣು ಕಾಣದಾಗಿತ್ತು. ಅಲ್ಲಿ ನನ್ನ ಗೆಳೆಯ ಬಂಗಾರದ ಪದಕ ಗೆದ್ದ". ಅಂದರೆ ಇವನೇ ಆ ವರ್ಷದ ರ್ಯಾಂಕ್ ಸ್ಟೂಡೆಂಟ್. ಈಗ ಹೇಳಿ ಇವನೊಬ್ಬ ಅದ್ಭುತ ಜೀವಿ ಅಲ್ಲವೇ? ಈ ಅದ್ಭುತ ಜೀವಿ ಯಾರು ಗೊತ್ತಾ? "ಮಲ್ಲಿಕಾರ್ಜುನ ಅಂತ".
ಆಶ್ಚರ್ಯ ಕಣೋ, ೪-೫ ವರ್ಷ ನಾ ನಿನ್ನ ಮಾತಾಡಿಸಿರಲ್ಲಿಲ್ಲ. ಈಗಲೂ ನೀ ನನ್ನ ಧ್ವನಿ ಗುರ್ತಿಸಿದೆಯಲ್ಲ. ಅದು ಹೇಗೋ? ಅಲ್ಲಿ ನಾವೆಲ್ಲ ಮಲ್ಲಿ ಹೋಗೋ, ಬಾರೋ ಅಂತಿದ್ವಿ ಪ್ರೀತಿಯಿಂದ. ಆದರೆ ಇವತ್ತು ಹಾಗನ್ಲಿಕ್ಕೆ ಸಾದ್ಯಾನೆ ಆಗ್ಲಿಲ್ಲ ಕಣೋ. ನೆನಪಿದಿಯ ದಿಡೀರ್ ಅಂತ "ಏನ್ರಿ ಸರ್" ಅಂದೆ. ಎಲ್ಲಾರು"ನೆಟ್ , ಸ್ಲೆಟ್" ಅಂದ್ರೆ ಹೆದರಿ ಕಿಲೋಮೀಟರ್ ದೂರ ಇರುವಾಗ ನೀನು ಅದ್ಯಾವಾಗಲೋ ಎರಡನ್ನೂ ಮುಗಿಸಿ ಪದವಿ ಕಾಲೇಜ್ನಲ್ಲಿ ಲೆಕ್ಚರರ್ ಆಗಿದಿಯಲ್ಲ ನೀನೊಬ್ಬ ನಿಜವಾದ ಸಾದಕ ಕಣೋ. ಅಲ್ಲಾ ಕಣೋ ಇಲ್ಲೇ ಇರುವ ನಿನ್ನಂತಹ ಸಾದಕನ ಬಗ್ಗೆ ಮಾತಾಡೋದು ಬಿಟ್ಟು ದೂರದಲ್ಲಿರೋ ಕಾಣದ, ಕಾಣದವರ ಬಗ್ಗೆ ಹೌದಾ? ಅಬ್ಬಾ? ಅಂತೀವಲ್ಲಾ ನಮಗೇ ನಾವು ಯಾವುದರಲ್ಲಿ ಹೊಡ್ಕೊಬೇಕು ಹೇಳು.ನಿನ್ನ ಇಂಗ್ಲಿಷ ಪದಗಳು, ಆ ಹುಡುಗಾಟಿಕೆಯ ಮಾತುಗಳು, ಹಳೆಯ ನೆನಪುಗಳು ವಾ.... ಹ್ . ನಿನ್ನ ಜೋತೆಗಿದ್ರೆ ನಾವು ಪ್ರಪಂಚ ಗೆಲ್ಲಬಹುದೇನೋ? ಅನ್ಸತ್ತೆ. ಏನಂದೆ .....? ನಿಮಗೆಲ್ಲ ಅನ್ಸೋದ್ ಅಸ್ಟೇ. ಗೆಲ್ಲೋಕ್ಕಾಗಲ್ಲ ಅಂದ್ಯಾ?. ಗೆಲ್ಲೋದು ನಿನ್ನನ್ತೋನು ಮಾತ್ರ ಅಂದ್ಯ?. ಹೌದು ನೂರಕ್ಕೆ ನೂರರಸ್ಟ್ ಸತ್ಯ ಕಣೋ ನಿನ್ ಮಾತು.
ಹಾಗೆ ಮಾತಾಡ್ತಾ ಮಾತಾಡ್ತಾ ಊಟಕ್ಕೆ ಹೋದ್ರೆ ಏನು ನೀಟಾಗಿ ಊಟ ಮಾಡಿದ್ಯೋ ನೀನು. ಸ್ವಲ್ಪವೂ ಅನ್ನ ಚೆಲ್ಲಲಿಲ್ಲ ಕೆಳಗೆ. ಜೊತೆಗೆ ಬೇಳೆ ಬೆಂದಿಲ್ಲ ಅಂತ ಸರಿಯಾಗಿ ಹೇಳಿದ್ಯಲ್ಲ ಅದು ಹೇಗೋ ಗೆಳೆಯ. ನಿನ್ನ ಕಲ್ಪನೇಲಿ ಬೇಳೆ ಹೇಗಿರತ್ತೆ? ಹೌದು ನೀನು ನನ್ನನ್ನ ಯಾವ ರೀತಿ ಕಲ್ಪಿಸಿಕೊಂಡಿದಿಯ? ಜಗತ್ತು, ಪರಿಸರನ್ನೆಲ್ಲ ನಿನ್ನ ಸ್ಮೃತಿ ಪಟಲದಲ್ಲಿ ಯಾವ ರೀತಿಯಲ್ಲಿ ಊಹಿಸಿಕೊಂಡಿದಿಯ? ಸ್ವಲ್ಪ ಹೇಳ್ತಿಯ. ಅಲ್ಲ ಕಣೋ ನಾವೆಲ್ಲ ಅದು ಬೇಕು ಇದು ಬೇಕು ಅಂತ ಕಂಡಿದ್ದರ ಹಿಂದೆಲ್ಲ ಓಡ್ತಿವಿ. ಆದ್ರೆ ನಮಗದೆಲ್ಲ ಎಸ್ಟೋ ಸಾರಿ ಬರೀ ಮರೀಚಿಕೆ ಅಸ್ಟೆ. ನೀನ್ ಏನನ್ನೂ ಕಾಣಲ್ಲ ......? ಆದರೂ ಎಂಥೆನ್ಥವೆಲ್ಲ ನಿನ್ನ ಕಾಲಡಿ ಬಿದ್ದಿವೆ. ನಂಗೊತ್ತು ಕಣೋ ಇದಕ್ಕೆಲ್ಲ ಕಾರಣ ನಿನ್ನ ಸಾಮರ್ಥ್ಯ, ಶ್ರಮ ಅಂತ. ಗೆಳೆಯ ಇನ್ನೊಂದ್ ವಿಷ್ಯ ಹೇಳಲಾ? ಅವತ್ತು ನೀ ನಮ್ಮ ಕಾಲೇಜಿನ ಮೆಟ್ಟಿಲುಗಳನ್ನ ಹತ್ತುವಾಗ ಅಕ್ಷರಶಃ ನಾನು ಭಯಪಟ್ಟೆ. ಕಾರಣ ಎಲ್ಲಿ ಎಡವಿ ಬೀಳುತ್ತಿಯೋ ಅಂತ ಸದಾ ನಿನ್ನ ಪಾದದ ಕಡೆಗೇ ನೋಡುತ್ತಿದ್ದೆ. ನೀ ಎಲ್ಲೂ ಎಡವಲೂ ಇಲ್ಲ ಬೀಳಲೂ ಇಲ್ಲ. ಬದಲಾಗಿ ಜೋರಾಗಿ ಗಹಗಹಿಸಿ ನಗುತ್ತಾ, .. ಮೂರ್ಖ ಸರಿಯಾಗಿ ದಾರಿ ನೋಡ್ತಾ ನಡಿಯೋ ಬಿದ್ದೀಯ? ಅಂತ ಹೇಳ್ತಿದಿಯೇನೋ ಅನ್ನಿಸ್ತು. ಹೌದು ಕಣೋ ನಿನ್ನ ಅನಿಸಿಕೆ ನಿಜ. ನೀನೀ ಜಗತ್ತಿಗೆ ನನಗಿಂತಲೂ ಮೊದಲು ಬಂದವನು. ಎಲ್ಲೋ ಯಾವತ್ತೋ ಒಂದು ದಿನ ಸಿಕ್ಕಾಗ ದೇವು ಹೇಳಿದ್ದನಂತೆ, ನಮ್ಮ ಕಾಲೇಜ್ ಹೆಸರು ದಯಾನಂದ ಸಾಗರ್ ಅಂತ. ಕುಮಾರಸ್ವಾಮಿ ಲೇಔಟ್, ಬನಶಂಕರಿ ಹತ್ರ ಇದೆ ಅಂತ. ಇಸ್ಟ್ಅನ್ನೇ ಹೇಳಿದ್ದಂತೆ. ಅಸ್ಟೇ ಮಾಹಿತಿ ಇಟ್ಟುಕೊಂಡು ಹುಡುಕುತ್ತಾ ಹುಡುಕುತ್ತಾ ..... ಅಲ್ಲಲ್ಲಾ ಸಲೀಸಾಗಿ ಬಂದಿದಿಯಲ್ಲ ನೀನು ನಿಜವಾಗಿ ಅಂಧ......? ಹೌದಾ?. ಆಮೇಲೆ ಕೆ ಆರ್ ರೋಡ್ ಇನ್ನೂ ಚಿಕ್ಕದಾಗೇ ಇದೆ ಅಂತ ಮಾತಿನ ಮದ್ಯೆ ಅಂದ್ಯಲ್ಲ ನೀನು ನಿಜವಾಗಿ...? ಇಂಥ ಮಹಾ ನಗರದಲ್ಲಿ ನೀನೊಬ್ಬನೇ ನಿರ್ಭಯವಾಗಿ ಓಡಾಡ್ತಿಯಲ್ಲ ಗೆಳೆಯ ನೀನು ನಿಜವಾಗಿ ...?
ಏ ಗೆಳೆಯ ನಾ ನಿನಗೆ ಇಲ್ಲಿ ಪದೇ ಪದೇ ಅಂಧ ಅಂದೆ ಅಂತ ಅನ್ಯತಾ ಭಾವಿಸಬೇಡ ಕಣೋ.ನೀ ನಿಜವಾಗಿ ಅಂಧ ಅಲ್ಲ ಕಣೋ. ಅಸ್ಟ್ ನೀಟಾಗಿ ಬಟ್ಟೆ ಹಾಕ್ಕೊಂಡ್ ಇನ್ಶರ್ಟ್ ಮಾಡಿ, ಸ್ವಚ್ಚವಾಗಿ, ಕಣ್ಣಿಗೆ ಗ್ಲಾಸ್ ಹಾಕ್ಕೊಂಡ್ ಸುಂದರವಾಗಿರೋ ನೀನು ಅಂಧನ ಮುಖವಾಡ ಹಾಕ್ಕೊಂಡು ಭೂಮಿಗೆ ಬಂದಿರೋ ಗಂಧರ್ವ ಕಣೋ. ನಿಜವಾಗಿಯೂ ನೀ ಗಂಧರ್ವ ಕಣೋ.

ಶುಕ್ರವಾರ, ಜೂನ್ 26, 2009

ಅಜ್ಜೀ......


ಇದು ನಂಬಲಸಾದ್ಯವಾದರು ನಂಬಲೇಬೇಕಾದ ಸತ್ಯ. ನಾನು ನನ್ನ ಅಜ್ಜಿ ಊರಾದ {ಅಮ್ಮನ ಅಮ್ಮ } ಜಡ್ದಗದ್ದೆಯಲ್ಲಿಬೆಳೆದವನು. ಆದ್ದರಿಂದ ನನ್ನ ತಂದೆಯ ಮನೆಗೆ ನಾನೊಬ್ಬ ಅಥಿತಿ ತರ. ಅಲ್ಲಿನವರೆಲ್ಲಾ ನನಗೆ ನೆಂಟರಂತೆ. ನನಗರಿವಿರುವಂತೆ ನನ್ನ ತಂದೆಯ ತಾಯಿಯನ್ನು ನನ್ನ ಸ್ವಂತ ಅಜ್ಜಿ ಅಂತ ತಿಳುವಳಿಕೆ ಬಂದಿದ್ದು ಬಹುಶಃ ನಾನು ನಾಲ್ಕೋ ಐದನೇ ಕ್ಲಾಸ್ನಲ್ಲಿ ಇದ್ದಾಗ ಅನ್ಸತ್ತೆ. ಅಲ್ಲೀವರೆಗೂ ಅವರ ಒಡನಾಟ ಆಸ್ಟಕಸ್ಟೆ. ಆಮೇಲೂ ಕೂಡಾ ಅಂದರೆ ಪಿ ಯೂ ಸಿ ಹಂತದವರೆಗೂ ಹಾಗೋ ಹೀಗೋ ಅನ್ನೂ ರೀತಿ ಅವರ ಮೇಲೆ ಪ್ರೀತಿ. ಆದರೆ ನಂತರದ ದಿನಗಳಲ್ಲಿ ನನ್ನಜ್ಜಿ ನನಗೆ ಅತ್ಯಂತ ಪ್ರಿಯವೆನಿಸಿದರು. ಇದಕ್ಕೆ ಕಾರಣ ನನ್ನ ಮುದ್ದಿನ ಅಜ್ಜಿ {ಅಮ್ಮನ ಅಮ್ಮ } ಯನ್ನು ಕಳೆದುಕೊಂಡದ್ದಾಗಿರಬಹುದು. ಆ ನನ್ನಜ್ಜಿ ತೋರಿಸುತ್ತಿದ್ದ ಪ್ರೀತಿ ಈ ಅಜ್ಜಿಯಿಂದ ಸಿಗುತ್ತಿತ್ತಲ್ಲ ಅದಕ್ಕೆ. ಮೊದಮೊದಲು ನೆಂಟನಂತಿದ್ದ. ನನಗೆ ಈಗ ನಾನೂ ಮನೆಯ ಸದಸ್ಯ ಅನ್ನೋ ಸಂಪೂರ್ಣ ತಿಳುವಳಿಕೆ ಬಂದಿದೆ. ಹಾಗಾಗಿ ನನ್ನ ಕುಟುಂಬದ ಬಗ್ಗೆ ವಿಶೇಷ ಆಸಕ್ತಿ ನನಗೆ. ನನಗೆ ನೆನಪಿರುವ ಹಾಗೆ ಈ ನನ್ನಜ್ಜಿ ಬದುಕು ವಿಸ್ಮಯ, ಅದ್ಭುತ ಅಂದ್ರೆ ತಪ್ಪಾಗಲಾರದು. ಸರಳ ಆದರೆ ಅತ್ಯಂತ ಕಷ್ಟ ಜೀವಿ. ನಮ್ಮೂರಿನಲ್ಲಿ ಈಗಲೂ ಒಣಕಟ್ಟಿಗೆಯಿಂದಲೇ ಅಡಿಗೆ ಇನ್ನಿತರ ಕೆಲಸಗಳು ನಡೆಯುವುದು. ಬೆಸಿಗೆಯಾಯಿತೆಂದರೆ ಸಾಕು ಕೊಟ್ಟಿಗೆಗೆ ದರಗು ತಂದು ಹಾಕಬೇಕು. ಜಾನುವಾರುಗಳಿಗೆ ಮಲಗಲು ಸಹಕಾರಿಯಾಗಲಿ ಅಂತ ಅಂದರೂ ಕೂಡಾ ಅದರ ಹಿಂದೆ ಗೊಬ್ಬರ ಮಾಡುವ ಉದ್ದೇಶವಿದೆ. ಮಳೆಗಾಲ ಶುರುವಾದರೆ ಆ ಬಿರುಗಾಳಿ ಮಳೆಯಲ್ಲೂ ಧೈತ್ಯಾಕಾರದ, ದೇಹಕ್ಕೆ ದುಪ್ಪಟ್ಟು ಭಾರದ ಗೊರಬು ಹಾಕಿಕೊಂಡು ನಾಟಿ ಮಾಡಬೇಕು. ಗದ್ದೆಗೆ, ತೋಟಕ್ಕೆ ಗೊಬ್ಬರ ಹಾಕಬೇಕು, ಬೇಸಾಯ ಮಾಡ್ಬೇಕು ಜ್ಯೋತೆಗೆ ಮನೆಯಲ್ಲೂ ಕೆಲಸ ಹೀಗೆ ಹತ್ತು ಹಲವು ಕೆಲಸಗಳನ್ನ ನನ್ನಜ್ಜಿ ಮಾಡಿದ್ದು ಕಂಡಿದ್ದೇನೆ. ಆಗೆಲ್ಲ ಅದು ಅಸ್ಟೋನ್ದು ಗಮನಿಸುವ ಅಂಶವಾಗಿರಲಿಲ್ಲ. ಆದರೂ ಅವರು ಧರಗು, ಸೌದೆ ತರುವಾಗ ಮೈಲುಗಳ ದೂರದಿಂದ ಕಾಲಿಗೆ ಮೆಟ್ಟಿಲ್ಲದೆ {ಚಪ್ಪಲಿ } ಕಲ್ಲು, ಇನ್ಚಿಂಚಿಗೊಂದರಂತೆ ನಾನಾ ಜಾತಿಯ ಮುಳ್ಳುಗಳು, ಕೊರಲುಗಲು, ಕ್ರಿಮಿ, ಕೀಟ, ಹಾವು, ಚೇಳು ಎಂಬಿತ್ಯಾದಿ ಅಪಾಯಕಾರಿ ಹಂತಗಳನ್ನೆಲ್ಲ ದಾಟಿ ಬಯಲಿಗೆ ಕಾಲಿಟ್ಟರೆ ಸಾಕು ಅಲ್ಲಿ ಬಿಸಿಲಿಗೆ ಬೆಂದು ಬೆಂದು ಕೆಂಡವಾಗಿರುವ ನೆಲದ ಮೇಲೆ ಬರಿಗಾಲಲ್ಲಿಯೇ ತಲೆಯ ಮೇಲಿರುವ ಭಾರವನ್ನು ಹೊತ್ತುಕೊಂಡೇ ಮನೆ ಸೇರುವ ಅಂದಿನ ಆ ಸ್ಥಿತಿಯನ್ನು ಈಗ ಹಾಗೆ ಯೋಚಿಸಿದರೆನೆ ಮೈ ಜುಂ ಅನ್ಸತ್ತೆ. ಆದರೂ ನನ್ನಜ್ಜಿ ಅಂಜಲಿಲ್ಲ, ಅಳುಕಲಿಲ್ಲ, ಸೋಮಾರಿಯಂತೂ ಅಲ್ಲವೇ ಅಲ್ಲ.

ನೋಡಲೇಸ್ಟು ಸಪೂರ ಗೊತ್ತ ನನ್ನಜ್ಜಿ. ಆದರೂ ನನ್ನಂತಹ ಹುಡುಗರು ಮಾಡಲು ಅಂಜುವಂತಹ ಕೆಲಸಗಳನ್ನು ಸಹ ನನ್ನಜ್ಜಿ ಸರಾಗವಾಗಿ ಮಾಡಿದ್ದಾಳೆ. ನನಗಿನ್ನೂ ಹಸಿರಾಗಿದೆ ಆ ಒಂದು ದಿನದ ನೆನಪು. ನನಗಾಗ ಹತ್ತೋ ಹನ್ನೆರಡೋ ವರ್ಷವಿರಬೇಕು ಅನ್ಸತ್ತೆ. ರಜೆಗೆಂದು ನನ್ನಜ್ಜಿ {ಅಮ್ಮನ ಅಮ್ಮ } ಊರಿಂದ ಬಂದಿದ್ದೆ. ಒಂದು ದಿನ ನನ್ನಜ್ಜಿ ಜ್ಯೋತೆಗೆ ಇನ್ನೊಂದಿಸ್ಟು ಹೆಂಗಸರೆಲ್ಲ ಸೇರಿ {ಬಹುಷಃ ನನ್ನ ಅಮ್ಮನೂ ಅವರ ಗುಂಪಿನಲ್ಲಿ ಇದ್ದರೋ? ಸರಿಯಾಗಿ ನೆನಪಿಲ್ಲ} ಕಾಡಿಗೆ ಹೊರಟರು. ಅವರೊಂದಿಗೆ ನಾನೂ ಹಠ ಮಾಡಿ ಹೋಗಿದ್ದೆ. ನಮ್ಮೂರು ಮತ್ತು ಕಾಡಿನ ಮದ್ಯ ಮಾಲತಿ ನದಿ ಇದೆ. ನದಿಯಾಚೆ ದಾಟಿದ ಸ್ವಲ್ಪ ಸಮಯದಲ್ಲೇ ಬಾನೆಲ್ಲ ಕಪ್ಪಾಗಿ, ಭಯಾನಕ ಗಾಳಿ ಮಳೆಯಾಯಿತು. ಬಾನೆತ್ತರದ ಮರಗಳು ಸರಿಯಾಗಿ ನಿಲ್ಲಲಾಗದೆ ಅತ್ತಿಂದಿತ್ತ ಜೋರಾಗಿ ತೂಗಾಡುತ್ತಿದ್ದವು.ಸೌದೆಗೆ ಬಂದವರೆಲ್ಲ ತರಾತುರಿಯಿಂದ ಇದ್ದಸ್ಟೆ ಸೌದೆಯನ್ನು ಹೊರೆಕಟ್ಟಿ ಹೊತ್ತುಕೊಂಡು ಮನೆಕಡೆ ಹೊರಟರು. ಅಸ್ಟ್ರಲ್ಲಾಗಲೇ ಮಳೆ ಶುರು ಆಗಿ ಅರ್ಧ ಘಂಟೆ ಮೇಲೆ ಆಗಿತ್ತು. ನಾವೆಲ್ಲಾ ಒದ್ದೆ ಮುದ್ದೆಯಾಗಿದ್ವಿ. ನದೀ ದಂಡೆ ಹತ್ರ ಬಂದಾಗ ನದಿ ನೀರು ವಿಪರೀತ ಜಾಸ್ತಿ ಆಗಿತ್ತು. ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ನೀರಿನ ಸೆಳವು ಹೆಚ್ಚಾಗಿದ್ದು ನೀರಿಗಿಳಿಯಲು ಭಯವಾಗಿತ್ತು. ಆದರೆ ವಿಧಿಯಿಲ್ಲ. ಯೋಚಿಸುತ್ತಿದ್ದರೆ ಮತ್ತೆ ನೀರು ಹೆಚ್ಚಾಗುತ್ತದೆ. ದಾಟಲು ಸಾದ್ಯವೇ ಇಲ್ಲ. ಆಗಲೇ ನನ್ನಜ್ಜಿ ಅನುಭವ ಹಾಗು ಧೈರ್ಯದಿಂದ ಒಂದು ಆಯಕಟ್ಟಿನ ಸ್ಥಳದಲ್ಲಿ ನೀರಿಗಿಳಿದರೆ.....! ಸಣ್ಣ ಹುಡುಗ ನನಗೆ ಕುತ್ತಿಗೆಮಟ್ಟದ ನೀರು. ಕಾಲು ಎಸ್ಟೇ ಪ್ರಯತ್ನಿಸಿದರೂ ನೆಲದ ಮೇಲೆ ನಿಲ್ಲುತ್ತಿಲ್ಲ. ತೇಲುವ ಅನುಭವ. ಹೆಜ್ಜೆ ಇಟ್ಟರೆ ಪಾದದಡಿಯಿರುವ ಮರಳು ಕೊರೆದು ಮತ್ತೆ ಮತ್ತೆ ತೆಲುವಂತಾಗುತ್ತಿತ್ತು. ಅಂದೇ ಇರಬೇಕು ಮೊದಲ ಬಾರಿಗೆ ನದಿ ನೀರಿಗೆ ಹೆದರಿದ್ದು. ಆದರೂ ನಾನು ನೀರಿನಲ್ಲಿ ತೇಲಿ ಹೋಗಲಿಲ್ಲ. ಕಾರಣ ನನ್ನಜ್ಜಿ ನನ್ನನ್ನು ಗಿಡುಗನಂತೆ ಭದ್ರವಾಗಿ ತನ್ನ ಪಕ್ಕೆಯಲ್ಲಿ ಅವುಚಿಕೊಂಡಿದ್ದಳು. ತಲೆಯಲ್ಲಿ ಮಣಭಾರದ ಸೌದೆ ಹೊರೆ, ಜೊತೆಗೆ ನೀರಿನ ವಿಪರೀತ ಸೆಳೆತ, ನನ್ನ ಭಯ ಮಿಶ್ರಿತ ಒದ್ದಾಟ, ಸರಿಯಾಗಿ ಹೆಜ್ಜೆ ಹಾಕಲು ಅಡ್ಡಿಪಡಿಸುವ ಸೀರೆ. ಇದೆಲ್ಲವನ್ನೂ ಸರಾಗವಾಗಿ ನಿಭಾಯಿಸಿ ಆಚೆ ದಡ ಮುಟ್ಟಿಸಿದ್ದ ನನ್ನಜ್ಜಿ ಮುಖದಲ್ಲಿ ಆ ವಯಸ್ಸಿನಲ್ಲೇ ನಾ ಕಂಡಿದ್ದು ದೈವ ಸಮಾನ ಶಕ್ತಿ. ಆಗ ನನ್ನಜ್ಜಿಗೆ ವಯ್ಯಸ್ಸು ಎಷ್ಟು ಇರಬಹುದು ಗೊತ್ತೇ? ಕನಿಸ್ಟ ಅಂದರೂ ಎಪ್ಪತ್ತರಿಂದ ಎಪ್ಪತ್ತೈದಿರಬಹುದು. ನನ್ನಜ್ಜಿಯ ದೇಹ ಬಡಕಲಾದರೆನಂತೆ ಆಕೆಯ ಅಂದಿನ ಭಯಂಕರವಾದ ಬದುಕಿನ ಅನುಭವವೇ ಬಲ ತಂದಿತ್ತು.ಅದೇ ನಮಗೂ ಅವರಿಗೂ ಇರುವ ವ್ಯತ್ಯಾಸ.......?


ಮೊನ್ನೆ ಅಂದ್ರೆ ಮೊನ್ನೆ ತಾನೆ ನನ್ನ ತಂದೆ ಹೀಗೆ ದಿನನಿತ್ಯದಂತೆ ಫೋನಲ್ಲಿ ಮಾತಾಡುವಾಗ ಹೇಳಿದ್ದೇನು ಗೊತ್ತ? ನಿಮಗೆಲ್ಲ ಫ್ರೀ ಇದ್ದರೆ ....... ಒಮ್ಮೆ ನಿಮ್ಮಜ್ಜಿನ ಬಂದು ನೋಡ್ಕೊಂಡ್ ಹೋಗಿ ಅಂತ. ಅಂದರೆ... ನನ್ನಜ್ಜಿ ಈಗ ಜೀವನದ ಅಂತಿಮ ದಿನಗಳನ್ನ ಕಾಣುತ್ತಿದ್ದಾರೆ. ಅವರ ಮಾತಿನಂತೆ ಒಂದು ದಿನ ರಜೆ ಹಾಕಿ ನನ್ನಜ್ಜಿನ ನೋಡಲು ನಾನು ನನ್ನಣ್ಣ ಹೋಗಿದ್ದೆವು. ಅವತ್ತೆನಾಯಿತೋ ಏನೋ ಯಾವತ್ತೂ ನನ್ನಜ್ಜಿ ನೋಡಿದಾಗ ಇಲ್ಲದ ದುಃಖ ನನ್ನ ಎದೆಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿತು. ನನ್ನಜ್ಜಿ ಅಸ್ತಿಪಂಜರದಂತಹ ದೇಹದ ಮೇಲೆ ಚರ್ಮದ ಹೊದಿಕೆಯೊಂದಿದೆ ಅಸ್ಟೆ.ಆದರೆ ಅವರ ಕಣ್ಣು ಈಗಲೂ ಸ್ಪಷ್ಟವಾಗಿದೆ, ಮಾತು ತೊದಲಾದರೂ ಸ್ಪಷ್ಟ. ಕಿವಿ ಸ್ವಲ್ಪ ಮಂದ. ನಿಮಗೆ ಗೊತ್ತ? ನನ್ನಜ್ಜಿ ಈಗಲೂ ಇಂಥಾ ಸ್ಥಿತಿಯಲ್ಲೂ ಸೌಚಕ್ಕೆ ತಾನೊಬ್ಬರೇ ಜಲ್ಲೂರಿಕೊಂಡ್ ಹೋಗಿ ಬರ್ತಾರೆ. ಈಗವರ ಆಹಾರ ಕೇವಲ ಹಾಲು, ಕಾಫ್ಫೀ ಸ್ವಲ್ಪ ಸ್ವಲ್ಪ ಸಾರಾಯಿ. ಅಸ್ಟೆ. ನನ್ನಜ್ಜಿಗೀಗ ವಯ್ಯಸ್ಸು ನನ್ನ ತಂದೆಯ ಅಂದಾಜಿನಂತೆ ತೊಂಬತ್ತೈದರಿಂದ ನೂರೆರಡು. ಅವರನ್ನ ನೋಡಿಕೊಂಡು ವಾಪಾಸ್ಸು ಹೊರಡುವ ಮುನ್ನ ಅವ್ರ ಆಶೀರ್ವಾದಕ್ಕಾಗಿ ಆ ದೈವ ಪಾದಕ್ಕೆ ನಮಸ್ಕರಿಸಿದಾಗ ನನ್ನಜ್ಜಿ ಕೇಳಿದ ಪ್ರಶ್ನೆ ಏನು ಗೊತ್ತಾ? ಯಾವತ್ತೂ ಕೇಳದ ಪ್ರಶ್ನೆ ಅದು......"ನೀ ಮತ್ತೆ ಬತ್ತೀಯ?".


ಅಜ್ಜೀ ...... ನಿನ್ನ ಮಾತಿನ ಅರ್ಥ ಏನೇ. ನಾ ಬಾರುವಾಗ ಚಿಕ್ಕ ಮಕ್ಕಳ ತರ ಟಾಟ ಮಾಡಿದೆಯಲ್ಲ ಅದ್ಯಾಕೆ ಅಜ್ಜಿ? ಇಂಥ ಸ್ಥಿತಿಯಲ್ಲಿ ನಿನ್ನೊಂದಿಗಿಲ್ಲದ ಈ ನಮ್ಮ ಜೀವನದ ಬಗ್ಗೆ ಅಸಹ್ಯ ಅನ್ಸತ್ತ ನಿಂಗೆ ?.ಇದು ಒಂದ್ ಜೀವನನ ನಂದು ..... ಛೀ


ಏನೇ ಆದರು ಅಜ್ಜೀ ನೀನಂದ್ರೆ ನಂಗಿಸ್ಟ ಕಣೇ

ಇದು ಮೋಡಕವಿದ ವಾತಾವರಣ

ಇದಾಗಿದ್ದು ಹೋದ ವರ್ಷ ಅನ್ಸತ್ತೆ . ಹೌದು ಹೋದ ವರ್ಷಾನೇ, ನಾನು ಊರಿಗೆ ಬಂದಿದ್ದೆ ಆಗ. ಸಂಜೆ ಸುಮಾರು ನಾಲ್ಕು ಘಂಟೆ ಅನ್ಸತ್ತೆ. ಅನ್ಸತ್ತೇನು ನಾಲ್ಕು ಘಂಟೇನೆ ಕಣೇ ನಂಗೆ ನೆನಪಿದೆ. ಅವತ್ತು ನಾವಿಬ್ರು ಕೈ ಹಿಡ್ಕೊಂಡ್ ಹಾಯಾಗಿ ಬೇಕಾಗಿದ್ದಕ್ಕಿಂತ ಹೆಚ್ಚಾಗಿ ಬೇಡದಿದ್ದೆ ಮಾತಾಡಿಕೊಂಡು ಹೋಗ್ತಾ ಇದ್ವಿ. ದಿಡೀರ್ ಅಂತ ಮಳೆ ಬರೋ ಹಾಗೆ ಆಯ್ತು . ಈ ಮಲೆನಾಡೇ ಹಾಗೆ ಹೊತ್ತೂ ಗೊತ್ತೂ ಇಲ್ಲ ಮಳೆ ಬರಲಿಕ್ಕೆ. ಹಠಾತ್ತಾಗಿ ಬಾನಲ್ಲಿ ಕಪ್ಪನೆ ಮೋಡ ಕವಿದು ಮಳೆ ಬರಲು ವೇದಿಕೆ ಸಿದ್ದವಾಯ್ತು. ಮೊದಲ ಪಾತ್ರದಾರಿಗಳಂತೆ ರಭಸವಾಗಿ ಗಾಳಿ, ದೂಳು, ಮತ್ತು ಅದರ ಜೊತೆಗೆ ಏನೋ ಒಂಥರಾ ಸುಗಂಧಯುಕ್ತ ಪರಿಮಳ ಸೂಸಿ ಬಂದಾಗ ನಾವಿಬ್ಬರೂ ಸಹ ಪಿಸುಮಾತಿನಲ್ಲೆ ಆಹಾ ಎಸ್ಟೊಂದು ಹಿತಕರವಾಗಿದೆ ಎಂದೆವಲ್ಲ ಇದಾದ್ರು ನೆನಪಿದೆಯೆ ನಿಂಗೆ.ಅದರ ಜ್ಯೋತೆ ಜ್ಯೋತೆಗೆ ಕ್ಷಣ ಕ್ಷಣಕ್ಕೂ ಬದಲಾಗುವ, ಬೀಸುವ ಬಿಸಿ ಬಿಸಿ ತಣ್ಣನೆಯ ಒಂಥರಾ ಬೆಚ್ಚಗಿನ ಗಾಳಿ ಕಚಗುಳಿಯಿಡುತ್ತಿದ್ದಾಗ, ನಾನು ಅತ್ಯಂತ ಪ್ರೀತಿಯಿಂದ, ಮುದ್ದಿನಿಂದ ನಿನಗೊಂದು ಮುತ್ತು ಕೊಡಲಾ? ಅಂದೆ. ಆದರೆ ನಿನ್ನ ಮುಖ ಕೆಂಪೇರಿ ನಾಚಿಕೆಯಿಂದಿರುವಾಗಲೇ ನಿನ್ನ ಉತ್ತರಕ್ಕೂ ಕಾಯದೆ ಸಿಹಿಮುತ್ತನ್ನಿಟ್ಟೆ. ಛೀ... ಏನೋ ಇದು ಅಂತ ಹುಸಿ ಮುನಿಸು ತೋರಿದಾಗ ನಾನಂದ ಮಾತಾದರು ನೆನಪಿದೆಯೆ ನಿಂಗೆ? ಅದೇ ಕಣೇ "ಇದು ಮೋಡಕವಿದ ವಾತಾವರಣ" ಇಂಥಾ ಸಮಯದಲ್ಲಿ ನಿನ್ನಂತಹ ಮುದ್ದು ಜ್ಯೋತೆಯಲ್ಲಿದ್ದರೆ ಮುತ್ತು ಕೊಡುವುದು, ತೆಗೆದುಕೊಳ್ಳುವುದು ಸಹಜ ಕಣೇ ಅಂತ ಅಂದೆ. ತಕ್ಷಣವೇ ನೀನು ಹೌದಾ ಹಾಗಾದರೆ........ ಅಂದವಳೇ ನನ್ನ ಕೆನ್ನೆಗೆ ತಟ್ಟಂತ ಮುತ್ತಿಟ್ಟೆಯಲ್ಲ. ಜ್ಯೋತೆಗೆ ಏನೇ ಇದು ಅಂದ್ರೆ "ಮೋಡಕವಿದ ವಾತಾವರಣ" ಎಂದಸ್ಟೇ ಹೇಳಿ ತಬ್ಬಿಕೊಂಡೆಯಲ್ಲ ಅದಕ್ಕಿಂತ ಬೇರೆ ಸುಖ ಬೇಕಾ ಮುದ್ದು. ಮುದ್ದು, ನಾನಿನ್ನು ಅದ್ರ ಗುಂಗಿನಲ್ಲೇ ಇದ್ದೆ ಅನ್ಸತ್ತೆ ಮೊನ್ನೆ ನೀನು ಫೋನ್ ಮಾಡಿ ಮಾತಿನ ಮದ್ಯೆ ಗೆಳತಿಯರು ಜ್ಯೋತೆಯಲ್ಲಿರುವುದನ್ನು ಮರೆತು ಪ್ರೀತಿಯ ಪರಕಾಸ್ಟೆಯಲ್ಲಿ ಮುತ್ತಿಟ್ಟೆಯಲ್ಲ, ಆಗ ಗೆಳತಿಯರು 'ಏನೇ ಅದು ಅಂದಾಗ ಅವರಿಗೂ "ಈಗ ಮೋಡಕವಿದ ವಾತಾವರಣ" ಅಂತ ಹೇಳಿ ನಾಚಿಕೆಯಿಂದ ಫೋನ್ ಇಟ್ಟೆಯಲ್ಲ........
ಅದಕ್ಕೆ ಮುದ್ದು ನೀನಂದ್ರೆ ನಂಗಿಸ್ಟ ಕಣೇ......

ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.

ಹೆಣ್ಣು ಅಂದ್ರೆ "ಬೆಳಕು" ಅಂತ ತಾನೆ ನೀನಂದಿದ್ದು?

ನಿಂಗೆ ನೆನಪಿದೆಯೆ ಮುದ್ದು, ಒಂದ್ ದಿನ ನಾವಿಬ್ರು ಫೋನಲ್ಲಿ ಮಾತಾಡ್ತಾ ಇದ್ದಾಗ ನೀನು ನಿಮ್ಮನೆ ಮಹಡಿ ಮೇಲೆ ನಿಂತು ನಕ್ಷತ್ರ ನೋಡ್ತಾ ನೋಡ್ತಾ ಮಾತಾಡ್ತಿದ್ದೆ. ನಂಗೂ ಮಹಡಿ ಮೇಲೆ ಬಾರೋ ಇಲ್ಲೊಂದ್ ನಕ್ಷತ್ರ ಇದೆ ಎಸ್ಟ್ ಹೊಳಿತಾ ಇದೆ ನೋಡು ಅಂತ ನನ್ನೂ ಮಹಡಿ ಮೇಲೆ ಹೋಗಲು ಹೇಳಿದ್ದೆ. ಆದ್ರೆ ನೀನು ಹೇಳಿದ ನಕ್ಷತ್ರ ಹುಡುಕಲು ಪರದಾಡಿದೆ. ಅಂತೂ ನಿನ್ನತ್ರ ದಡ್ಡ, ನಿನ್ ತಲೆ, ಅದಲ್ಲ ಕಣೋ, ಅದರ ಪಕ್ಕದಲ್ಲಿದೆ ನೋಡು..... ಹೀಗೆ ಏನೇನೋ ಹೇಳಿಸಿಕೊಂಡ ಮೇಲೆ ಕೊನೆಗೂ ನೀನು ನೋಡುತ್ತಿದ್ದ ನಕ್ಷತ್ರವನ್ನೇ ಹೇಗೋ ಗುರುತಿಸಿದೆ.ಹೌದು ಕಣೇ ಅದರ ಪ್ರಕಾಶಮಾನತೆ ಎಸ್ಟಿತ್ತೆಂದರೆ ನೇರವಾಗಿ ದಿಟ್ಟಿಸಿ ನೋಡಲು ಕಷ್ಟ ಆಗ್ತಾ ಇತ್ತು. ನಾವಿಬ್ರೂ ಅದನ್ನೇ ನೋಡ್ತಾ ನೋಡ್ತಾ ಬಹಳ ಹೊತ್ತು ಮಾತಾಡಿದ್ವಿ. ಆಗಲೇ ನೀ ಕೇಳಿದ ಪ್ರಶ್ನೆ ನೆನಪಿದೆಯಾ ನಿಂಗೆ. ಅಲ್ಲ ಕಣೋ ಆ ನಕ್ಷತ್ರದಲ್ಲಿ ನಿಂಗೇನು ಕಾಣುತ್ತಿದೆ ಅಂದೇ. ನನಗೆ ಇತ್ತೀಚಿನ ದಿನದಲ್ಲಿ ಪ್ರಪಂಚವೇ ನೀನಾಗಿದ್ದೆ. ಅಂತಾದ್ದರಲ್ಲಿ ಆ ಹೊಳೆಯೋ ಜ್ಯೋತಿಯಲ್ಲಿ ನನಗೆ ನೀನೇ ಕಾಣುತ್ತಿದ್ದೆ ಜ್ಯೋತೆಗೆ ಅದರ ಹೊಳೆಯೋ ಬೆಳಕಲ್ಲಿ ಸುತ್ತಲಿನ ಪ್ರಪಂಚ ಕತ್ತಲೆಯಾಗಿತ್ತು. ಅದನ್ನೇ ನಾನೂ ನಿಂಗೆ ಹೇಳಿದೆ. ಒಂದು ಕ್ಷಣ ಮೌನವಹಿಸಿದ ನೀನು, ಹೇಯ್ ನಂಗೊತ್ತು ಕಣೋ ನೀನೆಸ್ಟ್ ನನ್ನ ಪ್ರೀತಿಸ್ತಿಯ ಅಂತ, ಯಾವಾಗಲೂ ನನ್ನೇ ನೆನಪಿಸಿಕೊಳ್ತೀಯ ಅಂತ. ಆದ್ರೆ..... ನಕ್ಷತ್ರ ಅಂದ್ರೆ ದೀಪ ಕಣೋ. ದೀಪದ ಬೆಳಕಲ್ಲಿ ಪ್ರಪಂಚ ನೋಡಬೇಕೆ ವಿನಃ ಅದೇ ದೀಪ ನೋಡ್ತಾ ನೋಡ್ತಾ ಪ್ರಪಂಚ ಕತ್ತಲೆಯಾಗ್ಲಿಕ್ಕೆ ಬಿಡಬಾರದು ಅಲ್ವೇನೋ? ಅಂತ ಅಂದ್ಯಲ್ಲ, ಎಂಥಾ ಮಾತೆ ಅದು. ಅದರಲ್ಲಿ ಕೋಟಿ ಅರ್ಥ ಇತ್ತಲ್ವ. ಮುದ್ದು ನೀನ್ ಹೇಳಿದ್ದು ಹೆಣ್ಣು ಅಂದ್ರೆ ಬೆಳಕು ಕೊಡೊ ಜ್ಯೋತಿ ಕಣೋ. ಅದರ ಬೆಳಕಲ್ಲಿ ಬದುಕಬೇಕು. ಅದನ್ನೇ ನೋಡ್ತಾ ನೋಡ್ತಾ ಬಾಳು ಕತ್ಲು ಮಾಡ್ಕೋಬೇಡ ಅಂತ ತಾನೆ ನೀನ್ ಹೇಳಿದ್ದು.
ಮುದ್ದು ಅದಕ್ಕೆ ನೀನಂದ್ರೆ ನಂಗಿಸ್ಟ ಕಣೇ .......

ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.

ಗುರುವಾರ, ಜೂನ್ 25, 2009

ಮುದ್ದು ನಿನಗಿದು ಮೊದಲ ಪತ್ರ

ನೂರಾರು ಭಾವನೆಗಳಿಗೆ, ನೂರಾರು ಕನಸುಗಳಿಗೆ ಆಸರೆಯಾಗಿದ್ದ ನನ್ನ ಮನಸ್ಸಲ್ಲಿ ದಿಡೀರನೆ ಬಂದೆರಗಿದ ಬದುಕಿನ ಬವಣೆಗಳನ್ನ, ಅವುಗಳನ್ನೆದುರಿಸುವ ಧಾವಂತದಲ್ಲಿ ನಿರಾಸೆ, ನೋವು, ಆಘಾತ, ಅವಮಾನ ಅನ್ನೋಬಿರುಗಾಳಿ ಬೀಸಿ ನನ್ನ ಬಾವನೆಗಳನ್ನ, ಕನಸುಗಳನ್ನ ಒಣಗಿಸಿ ತರಗೆಲೆಗಳಂತೆ ಧರೆಗಿಳಿಸಿದ್ದವು. ಒಣಗಿದ ಮರದಂತೆ, ಮೌನ ಸ್ಮಶಾನದಲ್ಲಿ ಏಕಾಂಗಿ ಪಿಶಾಚಿಯಂತೆ, ಹರೆಯದಲ್ಲೇ ಮುದಿಯಾದಂತಿತ್ತು ನನ್ನ ಮನಸ್ಸು. ಇಂಥಹ ದುಷ್ಪರಿಣಾಮದ ಪರಿಚಯವಾದ ದಿನದಿಂದಲೇ ಮನಸ್ಸಿಗೆ ಮುದ ನೀಡಲು ಪರಿ ಪರಿಯಾಗಿ ಪ್ರಯತ್ನಿಸಿದೆ. ಪ್ರಯತ್ನ ಮಾತ್ರ ನನ್ನದಾಗಿತ್ತು. ಫಲ ನನ್ನಿಂದ ಬಲು ದೂರದಲ್ಲಿ ನಿಂತು "ತು" ನಿನ್ನ ಅಂತಿತ್ತು. ನಿರಾಸೆಯ ಬೀಜಾಸುರ ನನ್ನೊಳಗಿನ ಅಲ್ಪ ಸ್ವಲ್ಪ ಆಸೆಗಳನ್ನ ಅಟ್ಟಾಡಿಸಿಕೊಂಡು ನಿರ್ಭಯವಾಗಿ, ನಿರಾತಂಕವಾಗಿ ನುಂಗುವಂತಹ ಸಮಯದಲ್ಲಿ ನನಗೊಂದು ರೋಮಾಂಚನದ ಅನುಭವವಾಯ್ತು. ತೊಟ್ಟಿಲಲ್ಲಿದ್ದ ಮಗುವೊಂದು ಎದೆಗೆ ಒದ್ದ ಅನುಭವ. ಆಗ ತಾನೇ ಚಿಗುರಿದ ಎಲೆಯನ್ನು ಸ್ಪರ್ಶಿಸಿದ ಅನುಭವ. ಎಳೆಗರುವಿನ ಹಣೆಗೆ ಮುತ್ತಿಟ್ಟ ಖುಷಿಯ ಅನುಭವ. ಏನಿದು? ಏನಾಶ್ಚರ್ಯ? ಏನಾಗಿದೆ..... ಅಲ್ಲ ಅಲ್ಲ ಏನಾಗುತ್ತಿದೆ ಅನ್ನೋಸ್ಟರಲ್ಲಿ ನನಗರಿವಿಲ್ಲದೆ ನನ್ನ ಹೃದಯದೊಳಗೊಂದು ಕೋಗಿಲೆ ನುಸಿಳಿತ್ತು. ಅದು ನಿರಂತರವಾಗಿ ಕುಹೂ ಕುಹೂ ಅಂತಿತ್ತು. ಆ ಕೋಗಿಲೆಯ ಆಗಮನವೇ ನನ್ನ ಮನಸ್ಸಿಗೆ ಮರುಜನ್ಮ ನೀಡಿದ್ದು. ಅದರ ಕುಹೂ ಕುಹೂ ದನಿಯೇ ನನ್ನ ಮನಸ್ಸನ್ನ ಮುಗಿಲ ಗಲ್ಲಿ ಗಲ್ಲಿಗೂ ಹಾರಾಡುವಂತೆ ಮಾಡಿದ್ದು. ಆ ಕೋಗಿಲೆ ಯಾರು ಗೊತ್ತಾ? ನೀನೇ ಕಣೇ. ಕುಹೂ ದನಿ ಯಾರದ್ದು ಗೊತ್ತಾ? ನಿಂದೇ ಕಣೇ. ನನ್ನೊಳಗೇ ಬಾಡಿ ಹೋಗಿದ್ದ ಭಾವನೆಗಳು ಬದುಕುಳಿದಿದ್ದು ನಿನ್ನಿಂದ ಕಣೇ. ಕಣ್ಣುಗಳಿಗೆ ಕೋಲ್ಮಿಂಚಿನ ಬೆಳಕು ನೀಡಿ, ಕಣ್ಮರೆಯಾಗಿದ್ದ ಕನಸುಗಳನ್ನ ಹುಡುಕಿ ಕರೆತಂದದ್ದು ನೀನು. ಹೌದು ಕಣೇ ನೀನೇ ಅದು. ನಿನ್ನಿಂದಲೇ ಅದೆಲ್ಲ. ನನ್ನ ಮನಸ್ಸಿಗಾದ ವಸಂತಗಾಲ ನಿನ್ನಿಂದ ಕಣೇ.
ಏಯ್ ಮುದ್ದುಮರಿ ಅದಕ್ಕೆ ನೀನಂದ್ರೆ ನಂಗಿಸ್ಟ ಕಣೇ.........

ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.

ಮಂಗಳವಾರ, ಜೂನ್ 16, 2009

ಪ್ರೀತಿ ಅಂದರೆ..........

ಇಲ್ಲಿ ಪ್ರೀತಿಯನ್ನು ನದಿಗೆ ಹೋಲಿಸಿ ಪ್ರೇಮಿಗಳನ್ನ ಅಂದರೆ ಹುಡುಗನನ್ನ ಮೀನಿಗೆ ಮತ್ತು ಹುಡುಗಿಯನ್ನ ನೀರ ಮೇಲಿನ ಗುಳ್ಳೆ ಗೆ ಹೋಲಿಸಿ ಒಂದು ಕವನ ರಚಿಸಿದ್ದೇನೆ.ಇದೊಂಥರಾ ವಿಚಿತ್ರ ಕಲ್ಪನೆ. ಓದಿ......

ಪ್ರೀತಿ ಅಂದರೆ ನೀರ ಮೇಲಿನ
ಗುಳ್ಳೆ ಅಂತಾರೆ
ನಿಜ ಕಣೇ ಆ ಗುಳ್ಳೆನೆ ನೀನು
ನಿನ್ನನ್ನೇ ನಾ ಪ್ರೀತಿಸಿದೆ.

ನೀರಲ್ಲಿ ಹಾಯಾಗಿ ತೇಲುತ್ತಿದ್ದ
ನಿನ್ನನ್ನು ನಾ ಕಂಡೆ ದೂರದಿಂದ
ಎಕೆಂದೇ ತಿಳಿಯದು ನಿನ್ನ ಕಂಡಾಗ ವಿಚಿತ್ರ ಆನಂದ
ಶುರು ಮಾಡಿದೆ ನಾ ನಿನ್ನ ಪ್ರೀತಿಸಲು ಹೃದಯದಿಂದ.

ನೀ ನೀರ ಮೇಲೆ ಅಣಕಿಸುತ್ತ, ನೆಗೆಯುತ್ತಾ
ಮುಂದೆ ಮುಂದೆ ಹೋದೆ
ನಾ ದೂರದಿಂದಲೇ ಜಿಂಕೆಯಂತೆ
ಜಿಗಿಯುತ್ತಾ ಹಿಂದೆ ಹಿಂದೆ ಬಂದೆ.

ನಿನ್ನ ಮುಟ್ಟಿ ಮಾತಾಡಿಸಬೇಕೆಂಬ ಆಸೆ
ಮತ್ತೆಲ್ಲೋ ನಿನ್ನ ಜೊತೆಗೆ ಬದುಕಬೇಕೆಂಬ ಆಸೆ
ಅದನ್ನ ನೆನೆದರೆ ನೀರಲ್ಲೂ ಬೆಚ್ಚನೆಯ ಅನುಭವ
ಅದಕ್ಕಿಂತಲೂ ಹೆಚ್ಚಾಗಿ ಏನಾಗುವುದೋ ಎಂಬ ಭಯ.

ಒಂದು ಕ್ಷಣ ಮರೆಯಾದೆ ನೀ ಕಾಣದೆ
ಆಗ ನಾ ನಿನ್ನದೇ ಚಿಂತೆಯಲ್ಲಿ ಗಲಿಬಿಲಿಯಾದೆ
ನೋಡಿದರೆ ನೀ ನಿಂತಿದ್ದೆ ಜೋಗದ ಧರೆಯ ಮೇಲೆ
ಅಲ್ಲಿಗೂ ನಾ ಓಡಿ ಬಂದೆ ಕುಣಿದಾಡುತ್ತಲೇ.

ಸನಿಹದಿಂದಲೇ ಜೋರಾಗಿ ನಾ ನಿನ್ನ ಪ್ರೀತಿಸುವೆ ಎಂದೆ
ಅಸ್ಟ್ರಲ್ಲಾಗಲೇ ನೀ ಜಲಪಾತದ ಮದ್ಯದಲ್ಲಿ ಹಾರಾಡುತಿದ್ದೆ
ನಿನ್ನ ಗುಂಗಲ್ಲೇ ನಾನೂ ಜಿಗಿದೆ
ಕ್ಷಣ ಮಾತ್ರದಲ್ಲೇ ನಾ ಜಲಪಾತದ ತಳದಲ್ಲಿದ್ದೆ.

ನಿನ್ನೊಂದಿಗಿನ ಮಧುರ ನೆನಪಲ್ಲೇ ನಾ ಹೆಣವಾಗಿದ್ದೆ
ಎಲ್ಲಿಂದಲೋ ಹಾರಾಡುತ್ತಾ ನೀ ನನ್ನ ಮೇಲೆ ಬಿದ್ದೆ
ಆ ಸುಂದರ ಕ್ಷಣ ನೀ ನನ್ನ ದೇವತೆಯಾಗಿದ್ದೆ
ನಾ ನಿನಗೆ ಸಾವಿನಲ್ಲೂ ಮೆತ್ತನೆಯ ತೇರಾಗಿದ್ದೆ.

ಹೌದು ಗೆಳತಿ ನೀ ನೀರ ಮೇಲಿನ ಗುಳ್ಳೆಯಾಗಿದ್ದೆ
ನಾ ನಿನ್ನೊಂದಿಗೆ ಬದುಕುವ ಮೀನಾಗಿದ್ದೆ
ಸಾಯುವಾಗಲೂ ನಾ ನಿನ್ನೊಂದಿಗೆ ಪ್ರೀತಿಯ ಸವಿಯುಂಡೆ
ನೋಡೀಗ ಸತ್ತ ಮೇಲೂ ನಾ ಸುಂದರ ಸ್ವರ್ಗ ಕಂಡೆ.


ಕನಸಿನ ರಾಣಿ

ನನ್ನ ಕಣ್ಣಗೊಂಬೆಯಲ್ಲಿ
ಅಡಗಿರುವ ಏ ಹುಡುಗಿಯೇ
ನನ್ನ ಕಣ್ಣೆದುರಿಗೆ ಬಂದುಬಿಡು
ಅಲ್ಯಾಕೆ ಅಡಗಿರುವೆ.

ನೀ ನನ್ನ ಕಣ್ಣೋಳಗಿದ್ದರೆ
ಕುರುಡಾಗಬಹುದು ಜೀವನ
ಒಮ್ಮೆ ಬಂದುಬಿಡು ಕಣ್ಣೆದುರಿಗೆ
ಬೆಳಕಾಗಲೆಂದು ನನ್ನ ಜೀವನ.

ಕನಸಿನ ರಾಣಿಯೆಂದು
ಕರೆಯುವೆ ನಾ ನಿನ್ನನ್ನು
ಕಣ್ಣೋಳಗೆನೆ ಮಿಂಚಿ ಮರೆಯಾಗಬೇಡ
ಮಿಂಚು ಹುಳದ ಹಾಗೆ ನೀನು.

ಕಣ್ಣೊಳಗೆ ನೀ ಅವಿತಿದ್ದರೆ
ಹೇಗೆ ನೋಡಲಿ ನಾ ನಿನ್ನ
ಆದರೂ ನೋಡಲು ಪ್ರಯತ್ನಿಸಿದೆ
ಕನ್ನಡಿಯಲ್ಲಿ ಕಣ್ಣಿಟ್ಟು ನಿನ್ನ.

ಬೇಕು ಬೇಕೆಂದೇ ನಾ ಕಣ್ಣೀರಿಟ್ಟೆ
ಅದರ ಹನಿಯಲ್ಲಾದರೂ ನೀ ಕಾಣುವೆಯೆಂದು
ಅದರಲ್ಲೂ ನೀ ಕಾಣಲಿಲ್ಲ
ನೀ ಕಾಣುವುದಾದರು ಎಂದು, ಹೇಗೆಂದು.

ಕಣ್ಣೋಳಗಡೆ ಮುಖ ತೋರದೇನೆ
ಕುಣಿದಾಡುತ್ತಿರುವೆ ನೀನು
ನನ್ನ ಮನಸೆಲ್ಲ ಬಿರುಗಾಳಿಯಾಗಿದೆ
ಹೇಳೇ ನಿನ್ನ ಹೆಸರಾದರು ಏನು.

ಸುಮ್ಮನೆ ಹೀಗೆಲ್ಲ ಸತಾಯಿಸಬೇಡ
ಸತ್ತು ಹೋಗುವೆನು ನಾನು
ಒಮ್ಮೆ ಎದುರಿಗೆ ಬಂದು ಬಿಡು
ಇಲ್ಲವೇ ನೀ ನನ್ನ ಕೊಂದುಬಿದು.



ನಮ್ಮೂರದು ಆಗುಂಬೆ

ನಮ್ಮೊರದು ಆಗುಂಬೆ
ವಿಶ್ವಕ್ಕೆ ಅದೊಂದು ಗೊಂಬೆ
ನೋಡಲದೊಂದು ರಂಭೆ
ಆದ್ದರಿಂದ ನಾವದರ ಕೈಗೊಂಬೆ

ಈ ಪರಿಸರದಲ್ಲಿ ಪ್ರಾಣಿಗಳ ಓಡಾಟ
ನಮ್ಮ ಜೊತೆಯಲ್ಲೇ ಅವುಗಳ ಒಡನಾಟ
ನೀ ಮಾಡಿದ್ದರೆ ಪ್ರಾಣಿಗಾಗಿ ಹುಡುಕಾಟ
ಬಂದು ನೋಡು ನಮ್ಮೂರಲ್ಲಿ ಅವುಗಳಾಟ

ಆಗುಂಬೆಯ ನಿಸರ್ಗ
ಪ್ರಾಣಿ ಪಕ್ಷಿಗಳಿಗೆ ಸ್ವರ್ಗ
ಇಲ್ಲೂ ಉಂಟು ಕಾಡುಮೃಗ
ನೋಡಬೇಕೆಂದರೆ ಬಾ ಆಗುಂಬೆ ಮಾರ್ಗ

ಅಲ್ಲಿನ ದುಂಬಿಯ ಜೇಂಕಾರಕ್ಕೆ
ನಾಟ್ಯವಾಡಿದಳು ಇಂದ್ರನ ಮೇನಕೆ
ಅಲ್ಲಿ ಸಹ್ಯಾದ್ರಿ ಇರುವುದು ಅದರ ಸಂಕೇತಕ್ಕೆ
ನೀನೊಮ್ಮೆ ಬಾ ಅದ ನೋಡಲಿಕ್ಕೆ

ಆಗುಂಬೆಯಲ್ಲಿದೆ ನೋಡು ಸೂರ್ಯಾಸ್ತಮಾನ
ಆದ್ದರಿಂದ ಅದಕ್ಕೆ ವಿಶ್ವವ್ಯಾಪಿ ಸ್ಥಾನಮಾನ
ಕೈ ಬೀಸಿ ಕರೆಯುತಿದೆ ಅದು ನಿನ್ನನ್ನ
ಬಂದು ಆಸ್ವಾದಿಸು ಆ ಚಲುವನ್ನ

ಭರ್ ಅಂತ ಬಿದ್ದರೆ ಮಳೆ
ಭಯ ಹುಟ್ಟಿಸುವ ಸುನಾಮಿ ಅಲೆ
ಅಲ್ಲಿ ಬೀಳುವ ಭಯಾನಕ, ಸುಂದರ ಮಳೆ
ಮೂರನೇ ಅತಿ ಹೆಚ್ಚು ಇಡೀ ದೇಶದಲ್ಲೆ

ಆಗುಂಬೆಯಲ್ಲಿನ ಸೋಇಯ್ ಗುಡುವ ಗಾಳಿ
ಮೈಕೊರೆಯುವ ಆ ವಿಚಿತ್ರ ಚಳಿ
ನವ ದಂಪತಿಗಳಿಗೆ ಮಾಡಿದರೆ ಓಕಳಿ
ಹದಿಹರೆಯದವರಿಗಂತೂ ಅದೊಂತರ ಚಿಕಳಿ

ಆಗುಂಬೆಯಲ್ಲಿರುವುದು ಬರೀ ಶ್ರೀಗಂಧ
ಅಲ್ಲಿ ಹೂ, ಹಣ್ಣುಗಳದ್ದೇ ಸೌಗಂಧ
ಎನ್ಹೆಳಲಿ ನಮ್ಮೂರಿನ ಅಂದ ಚಂದ
ನನಗಂತೂ ಅಲ್ಲಿ ಹುಟ್ಟಿದ್ದಕ್ಕೆ ಪರಮಾನಂದ

ಅಲ್ಲಿನ ಆ ಮನೋಹರ ಕಣಿವೆ
ನೋಡುತ್ತಾ ನಿಂತರೆ ಬೆರಗುಗೊಳಿಸುತ್ತವೆ
ಕಣ್ಣುಗಳು ಮತ್ತೆ ಮತ್ತೆ ನೋಡಲು ಹಂಬಲಿಸುತ್ತವೆ
ಸಾಗರೋಪಾದಿಯಲ್ಲಿ ಜನ ಬರುವುದು ಅದಕ್ಕಾಗಿಯೇ ಅಲ್ಲವೇ?

ಅಲ್ಲಿನ ಆ ಪರಿಸರದ ಸಿರಿ
ನಾ ನಿಮಗೆ ಹೇಳಿದರೆ ಪರಿ ಪರಿ
ನಿಮಗಾಗಬಹುದು ಕಿರಿಕಿರಿ
ಅದಕ್ಕೆ ನೀವೇ ಬಂದು ಒಮ್ಮೆ ಸವಿಯಿರಿ

ಸಹೃದಯದವರು ಅಲ್ಲಿನ ಮುಗ್ದ ಜನ
ಅವರಿಗೆ ಆ ಹಸಿರಿನದೆ ಗುಣಗಾನ
ಹೆಮ್ಮೆಯುಂಟು ಅಲ್ಲಾಗಿದ್ದಕ್ಕೆ ಜನನ
ಆಸೆಯುಂಟು ಅಲ್ಲಾಗುವುದಕ್ಕೆ ಮರಣ.






ನನ್ನ ಬಗ್ಗೆ ಇನ್ನೊಂದಿಸ್ಟ್ ಮಾತು

ನನ್ ಹೆಸರು ಗೊತ್ತಲ್ಲ ನಿಮಗೆ ಪ್ರಶಾಂತ್ ಅಂತ. ನನ್ ತಂದೆ ಹೆಸರು ಚಂದ್ರಪ್ಪ ಗೌಡ ಎಸ್ ಎ. ತಾಯಿ ಕಲಾವತಿ ಅಂತ.ನಂಗೆ ಇಬ್ಬರು ಅಣ್ಣ ಒಬ್ಬ ತಮ್ಮ ಇದಾನೆ.ಜೊತೆಗೆ ಅಜ್ಜಿ ಇದಾರೆ.ಇದು ನಮ್ಮ ಕುಟುಂಬ.ಹುಟ್ಟೂರು ಶೀರೂರು. ಇದು ತೀರ್ಥಹಳ್ಳಿ ತಾಲ್ಲೋಕು ಶಿವಮೊಗ್ಗ ಜಿಲ್ಲೆಯಲ್ಲಿದೆ.ಈ ಊರು ತೀರ್ಥಹಳ್ಳಿ ಮತ್ತು ನಿಸರ್ಗದ ತವರೂರೆನ್ನಬಹುದಾದ ಆಗುಂಬೆಯ ಮಾರ್ಗಮದ್ಯದಲ್ಲಿ ಸಿಗುವಂತಹ ಸುಂದರವಾದ ಊರು.ಆದರೆ ನಾನು ಬೆಳೆದಿದ್ದು, ಓದಿದ್ದು, ನನ್ನ ಒಡನಾಟ ಮತ್ತು ನಾ ಹೊತ್ತಿರುವ ನೆನಪಿನ ಮೂಟೆಯಲ್ಲಿ ಹೆಚ್ಚಿನ ಪಾಲು ನನ್ನ ಅಜ್ಜಿ ಊರಾದ ಜಡ್ದಗದ್ದೆಯದ್ದು. ಇದು ಸಹ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪವಿದೆ. ಇದು ನನ್ನ ಅಚ್ಚು ಮೆಚ್ಚಿನ ಹಾಗು ಸದಾ ಸ್ಮರಿಸುವ ಊರು.ಈ ಊರಿನಲ್ಲಾದ ನನ್ನ ಬಾಲ್ಯದ ಅನುಭವಗಳನ್ನು ಮೆಲಕು ಹಾಕಿಕೊಂಡರೆ ಮತ್ತೆ ಅದೇ ಊರಿನಲ್ಲಿ ಅದೇ ಸ್ನೇಹಿತರ ಜೊತೆ ಕುಣಿದಾಡಬೇಕು ನಲಿದಾಡಬೇಕು ಅನ್ಸತ್ತೆ. ಹಾಗೇ ನನ್ನಜ್ಜಿ (ಅಮ್ಮನ ತಾಯಿ), ಅಜ್ಜ, ಮಾವಂದಿರು, ಅತ್ತೆ, ಅವರ ಮಕ್ಕಳು, ನೆರೆಹೊರೆಯವರು, ಆ ಪರಿಸರ, ಅವರ ಸಂಸ್ಕೃತಿ, ಅವರ ಕೃಷಿ ಕೆಲಸ ಕಾರ್ಯಗಳು, ಆ ಮಳೆಗಾಲ, ಕೊರೆಯುವ ಚಳಿಗಾಲ, ಉರಿ ಬಿಸಿಲಿನ ಬೆಸಿಗೆಗಾಲ, ಆ ನನ್ನ ಶಾಲೆ, ಆ ಶಾಲೆಗೆ ಹೋಗೋ ಮೂರು ಕಿಲೋಮೀಟರ್ ದಾರಿ, ಹಳ್ಳ, ಗದ್ದೆಬೈಲು, ಕಾಡುಕೋಳಿ ಹಿಂಡು, ನವಿಲುಗರಿಗಳು, ಶಾಲೆವರೆಗೂ ಬಿಟ್ಟುಬರೋ ನಮ್ಮೂರಿನ ನಾಯಿಗಳು. ಚಂದ ಚಂದ ಹುಡುಗಿಯರೂ ಆಹಾ ಎಂಥೆಂಥಾ ಮಧುರ ಅನುಭವಗಳವು. ಹೇಳಿ ಆ ಊರನ್ನ ನಾ ಮರೆಯಲು ಸಾದ್ಯಾನ? ಖಂಡಿತ ಆಗಲ್ಲ. ಈ ಎಲ್ಲದರ ಬಗ್ಗೆ ಬರಿತೀನಿ.ಆ ಸುಂದರ ಅನುಭವಗಳನ್ನ ಈ ಮೂಲಕ ಮತ್ತೆ ಈ ಮೂಲಕ ಮತ್ತೆ ಮತ್ತೆ ಮೆಲಕು ಹಾಕ್ಕೊಳ್ತಿನಿ ಆದರೆ ನನ್ನ ಭಾಷಾ ಬಳಕೆ ನಿಮಗೆ ಕಿರಿಕಿರಿ ಅನ್ನಿಸಿದರೆ ನೇರವಾಗಿ ಹೇಳಿ. ಮಲೆನಾಡಿನ ಆಡು ಭಾಷೆಯಲ್ಲಿ ಹಿರಿಯರಿಗೆ ತುಂಬಾನೆ ಗೌರವ ಇರತ್ತೆ. ಆದರು ನಾವು ಅಮ್ಮಂಗೆ, ಅಜ್ಜಿಗೆ, ಅಥವಾ ಮನೆಯ ಯಾರೇ ಸದಸ್ಯರಿಗೆ ಪ್ರೀತಿಯಿಂದ "ಕಣೇ, ಹೋಗೆ, ಬಾರೆ", ಈ ಥರದ ಮಾತು ರೂಡಿಯಲ್ಲಿದೆ. ಇಂಥಾ ಪದಗಳು ಅತ್ಯಂತ ಪ್ರೀತಿಪೂರ್ವಕ ಮಾತುಗಳು. ದಯವಿಟ್ಟು ಅನ್ಯತಾ ಭಾವಿಸಬೇಡಿ. ಹಾಗೇ ನಾ ಬರೆಯುವಾಗ ಅಲ್ಲಲ್ಲಿ ಘಟನೆಗಳು, ವಿಷಯಗಳು ಹಿಂದೆ ಮುಂದೆ ಆಗಬಹುದು. ಹಾಗಿದ್ದರೂ, ಬರೆಯಬೇಕೆಂಬ ಮನಸ್ಸಿಗೆ ಇದೊಂದು ಮೊದಲ ಮೆಟ್ಟಿಲು ಅಂತ ಭಾವಿಸಿದ್ದೇನೆ. ಇದರಲ್ಲಿ ಹೆಚ್ಚು ವಾತ್ಸವತೆ ಇದ್ದರೂ ಅಲ್ಲಲ್ಲಿ ಕಾಲ್ಪನಿಕ ವಿಚಾರಗಳು ಮನರಂಜನೆಗಾಗಿಯೋ, ಅಥವಾ ವಿಷಯ ಗಂಬೀರತೆಗಾಗಿಯೋ ಬಂದಿರಬಹುದಾಗಿದೆ.ನನಗನ್ನಿಸಿದ್ದನ್ನು ನನ್ನದೇ ಧಾಟಿಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ. ಹ್ಞಾ.... ಇನ್ನೊಂದು ವಿಷಯ, ಈ ನನ್ನ ಬ್ಲಾಗಿನ ಶೀರ್ಷಿಕೆಯಲ್ಲಿ "ನೀನಂದ್ರೆ ನಂಗಿಷ್ಟ ಕಣೇ" ಅಂತಿದೆ. ಇಲ್ಲಿ ನನ್ನಜ್ಜಿ ಇರಬಹುದು, ದೂರದಲ್ಲಿ ನಿಂತು ಕೈ ಬೀಸಿ, ನಗು ಬಿಸಾಕಿದ ಗೆಳತಿ ಇರಬಹುದು, ನನ್ನ ಕಲ್ಪನೆಯಲ್ಲಿನ ಪ್ರೇಯಸಿ ಇರಬಹುದು, ಅಥವಾ ನನ್ನ ಹೃದಯಕ್ಕೆ ಹತ್ತಿರವಾದ ಯಾರೇ ಇರಬಹುದು. ಹಾಗೇನೇ ಇಲ್ಲಿ ಬರೆಯಲು ಸಾಕಸ್ಟ್ ವಿಷಯಗಳಿವೆ. ಆದರೆ ಯಾವುದು ಮೊದಲು ಯಾವುದು ನಂತರ ಅನ್ನೋ ಗೊಂದಲವಿದೆ. ಇದೆಲ್ಲ ಸ್ವಲ್ಪ ಸಮಯದ ನಂತರ ತನಗೆ ತಾನಾಗೇ ಮತ್ತು ನಿಮ್ಮ ಸಲಹೆಗಳಿಂದ ಸರಿಯಾಗುತ್ತದೆಂಬ ಧೃಡ ನಂಬಿಕೆ ನನಗಿದೆ. ಇಲ್ಲಿ ಪ್ರಥಮವಾಗಿ ನನ್ನ ಕೆಲವು ಕವಿತೆಗಳನ್ನ ಬರೆಯುತ್ತೇನೆ. ಹಂತಹಂತವಾಗಿ ಗಂಬೀರವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನನ್ನ ಕವಿತೆಗಳು, ಬರಹಗಳ ಬಗ್ಗೆ ನಿಮಗೇನನ್ನಿಸುತ್ತದೆ ಅದನ್ನ ನೇರವಾಗಿ ತಿಳಿಸಿ ಅಂತ ತಮ್ಮಲ್ಲಿ ವಿನಮ್ಬ್ರವಾಗಿ ಕೇಳಿಕೊಳ್ಳುತ್ತೇನೆ. ಸ್ನೇಹಿತರೇ.... ಬರೆಯಬೇಕು ಎಂದುಕೊಂಡಾಗ ಈ ರೀತಿಯ (ಬ್ಲಾಗ್) ದಾರಿ ತೋರಿಸಿದ ನನ್ನೊಬ್ಬ ಗೆಳೆಯನಿಗೆ, ಆತ ಈಗ ಏನೋ ಸಾದಿಸುವ ತುದಿತದಲ್ಲಿದ್ದಾನೆ. ಅವನಿಗೆ ಆ ದಾರಿಯಲ್ಲಿ ಯಶಸ್ಸು ಸಿಗಲಿ ಅಂತ ಈ ಮೂಲಕ ಶುಭ ಹಾರೈಸುತ್ತೇನೆ. ಹಾಗೆಯೇ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲೆಂದು ಬಯಸುತಾ ನನ್ನ ಬರವಣಿಗೆ ಪ್ರರಂಬಿಸುತ್ತೇನೆ.