ಸೋಮವಾರ, ಜುಲೈ 31, 2023

ಬೃಹತ್ ಆಲದ  ಮರ: ಚಿಕ್ಕಮಲ್ಲಯ್ಯ , ಐ ಐ ಎಂ ಬಿ 

ಕೆಲವು ಸಂಭ್ರಮಗಳೇ  ಹಾಗೆ ತನ್ನ ವ್ಯಾಪ್ತಿಗಿಂತ ಮಿಗಿಲಾಗಿ ಹರಡಿಕೊಳ್ಳುತ್ತವೆ. ಮೊನ್ನೆ ಶನಿವಾರ ಡಾ. ಚಿಮ್ಮೋಜಿ ರಾವ್ ತಾವು ಪಡೆದ ಡಾಕ್ಟೊರೇಟ್ ಪದವಿಯನ್ನ ಸಮಾನ  ಮನಸ್ಕರೊಂದಿಗೆ ಹಂಚಿಕೊಳ್ಳಲು ಬಯಸಿ, ಸಣ್ಣ ಗೆಟ್ಟೋಗೆಥೆರ್  ಆಯೋಜಿಸಿದರು. ಆ ಕಾರ್ಯಕ್ರಮಕ್ಕೆ ನಂಗೂ ಆಹ್ವಾನ ನೀಡಿದ್ದರು. ಆದರೆ ನಮ್ಮೆಲ್ಲರ ಜೊತೆ ಅವರು ಈ ಸಂಭ್ರಮವನ್ನ ಚಿಕ್ಕಮಲ್ಲಯ್ಯ ಸರ್ , ಗ್ರಂಥಪಾಲಕರು ಐ ಐ ಎಂ ಬಿ ಅವರ ಸಮ್ಮುಖದಲ್ಲಿ ಆಚರಿಸಲು ಬಯಸಿದರು.  ನಾವು ಸಹ ಆ ಚೇತನದ ಜೊತೆ ಮುಖಾಮುಖಿ ಭೇಟಿಯಾಗಲು ಬಹಳ ವರ್ಷಗಳಿಂದ ಬಯಸಿದ್ದೆವು. ಆ ಭಾಗ್ಯ  ನಂಗೆ ಮತ್ತು ನನ್ನ ಗೆಳೆಯರಿಗೆ ಮೊನ್ನೆ ನೆರವೇರಿತು. 

ಆ ಪ್ರಕಾರ, ಎಲ್ಲರೂ ಶನಿವಾರ ಬೆಳಿಗ್ಗೆ  ಸುಮಾರು ೧೦:೪೫ ಕ್ಕೆ ಚಿಕ್ಕಮಲ್ಲಯ್ಯ ಸರ್ ಮನೆ ಮುಂದೆ ಸೇರಿದೆವು. ಮೇಲಿನಿಂದ ನೋಡಿದ ಚಿಕ್ಕಮಲ್ಲಯ್ಯ ಸರ್ ಖುದ್ಧು  ನಮ್ಮನ್ನೆಲ್ಲ ಬರಮಾಡಿಕೊಂಡರು. ಅವರ ಮನೆಯೊಳಗೆ ಸುಮಾರು ೨೫ ರಿಂದ ೩೦  ಜನರಿದ್ದ ನಾವುಗಳು ಅವರ ಸುತ್ತುವರಿದು ಅವರನ್ನು ಕೇಂದ್ರಿತರಾಗಿ ಕುಳಿತೆವು. ಅವರ ಮನೆಯವರೆಲ್ಲರೂ ಸಹ ನಮ್ಮನ್ನೆಲ್ಲ ಆದರದಿಂದ ಸತ್ಕರಿಸಿದರು. ಸರ್ ಆರೋಗ್ಯ ಹೇಗಿದೆ ಅಂದಾಗ "ವಯಸ್ಸಿಗೆ ತಕ್ಕ ಆರೋಗ್ಯ ಭಗವಂತ ನೀಡಿದ್ದಾನೆ" ಎಂದರು. ಅವರ ಪ್ರತಿಕ್ರಿಯೆಯೇ ಅವರ ನೇರ, ನಿಸ್ಕಲ್ಮಷ ಹಾಗೂ ಪ್ರಭುದ್ಧ ಜೀವನ ಕ್ರಮದ ಸೂಕ್ಷ್ಮ ವಿವರಣೆ ನೀಡಿತು. 

ಸಾಮಾನ್ಯವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿದ್ಯಾರ್ಥಿಗಳು, ವೃತ್ತಿಪರರು ಕೇವಲ ಚಿಕ್ಕಮಲ್ಲಯ್ಯ ಅಂದ್ರೆ ಗೊತ್ತಾಗದೆ ಇರಬಹುದು. ಐ ಐ ಎಂ ಬಿ ಚಿಕ್ಕಮಲ್ಲಯ್ಯ ಸರ್ ಅಂದ್ರೆ ಪ್ರತಿಯೊಬ್ಬರಿಗೂ ಆ ಹೆಸರಿನ ಪರಿಚಯವಿದೆ. ಮುಖಾಮುಖಿ ನೋಡದೆ, ಭೇಟಿ ಮಾಡದೇ ಹೋದರೂ  ಸಹ ಅವರ  ಹೆಸರಿನ ಪರಿಚಯವಂತೂ ಇದ್ದೇ  ಇದೆ. ಅಷ್ಟು ದೊಡ್ಡ ವ್ಯಕ್ತಿತ್ವ ಅವರದ್ದು. 

ಇದಿಷ್ಟೇ ಆಗಿದ್ದರೆ ನಾ ಇಲ್ಲಿ ವಿಶೇಷವಾಗಿ ಅವರ ಬಗ್ಗೆ, ಈ ಕಾರ್ಯಕ್ರಮದ ಬಗ್ಗೆ ಬರೆಯಲು ಹೋಗುತ್ತಿರಲಿಲ್ಲ. ಬದಲಾಗಿ ಆ ಹಿರಿಯರನ್ನ ಭೇಟಿಯಾದಾಗ ಆದ ಅನುಭವ ನನ್ನನ್ನು ನಾಲ್ಕಕ್ಷರ ಬರೆಯಲು ಪ್ರೇರೇಪಿಸಿತು. ಅಂತಹ ವ್ಯಕ್ತಿತ್ವ ಅವರದ್ದು. ಪ್ರತಿ ಮಾತಿಗೂ ಭಗವಂತನ ಸಹಾಯ ನೆನೆಯುವ ಅವರು ನಮಗೆ ಮಾದರಿಯಾಗಿದ್ದು ಸುಳ್ಳಲ್ಲ. ಅತ್ಯಂತ ವಿನಯದಿಂದ ನಮ್ಮನ್ನೆಲ್ಲ ಮಾತನಾಡಿಸಿದ ರೀತಿ, ನಮ್ಮ ವೃತ್ತಿಬದುಕಿನ  ಏರಿಳಿತಗಳನ್ನ  ವಿಚಾರಿಸಿದ ರೀತಿ ಮತ್ತು ಅದರ ವಿಚಾರವಾಗಿ ಅವರು ನೀಡಿದ ಸಲಹೆಗಳು ಅತ್ಯಂತ ಪ್ರಸ್ತುತವಾಗಿತ್ತು. 

ಅದೆಷ್ಟು ಸರಳತೆ ಅವರದ್ದು. ಐ ಐ ಎಂ ಬಿ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದರೂ ಸಹ ಯಾವ ಬಿಗುಮಾನ ಅವರಲ್ಲಿರಲಿಲ್ಲ. ನಾವು ದಿನ ನಿತ್ಯ ನೋಡುವ ಹಾಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಹಣದ ಹಿಂದೆ ಬಿದ್ದು ವಿದ್ಯಾರ್ಥಿಗಳ ಸುಲಿಗೆ ಮಾಡುವ ಸೊ ಕಾಲ್ಡ್ ಪೊಫೆಸರ್ಸು ಇವರ ನೋಡಿ  ಕಲಿಯಬೇಕು. ಅಸಹ್ಯದ  ಪರಮಾವದಿ ತಲುಪಿರುವ, ಸರ್ಕಾರಿ ಸಂಬಳದ ಜೊತೆಗೆ ಸದಾ ದೋಚುವ, ಬಾಚುವ ಬಗ್ಗೆಯೇ ಮನಸ್ಸನ್ನ ಕೇಂದ್ರೀಕರಿಸಿರುವ ಬಹುತೇಕರ ನಡುವೆ ಚಿಕ್ಕಮಲ್ಲಯ್ಯ  ಸರ್ ಬೇರೆಯದೇ  ರೀತಿಯಲ್ಲಿ ಕಾಣುತ್ತಾರೆ. ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದೆ ದೇವಲೋಕದಿಂದ ಇಳಿದು ಬಂದವರಂತೆ ವರ್ತಿಸುವವರ ನಡುವೆ ಸೌಮ್ಯ ಸ್ವಭಾವಾದ ಈ ವ್ಯಕ್ತಿತ್ವ ಮನಸ್ಸಿಗೆ ಹತ್ತಿರವಾದರು. ನಿವೃತ್ತಿ ಹೊಂದಿದ್ದರೂ ಸಹ ಮತ್ತೆ ಪ್ರಭಾವ ಬಳಸಿ, ಮತ್ತೆ ಮತ್ತೆ  ಕುರ್ಚಿಗೆ ಅಂಟಿಕೊಂಡಿದ್ದು, ಹೊಸಬರ ಅವಕಾಶಗಳನ್ನ ಕಬಳಿಸುವ ಅದೆಷ್ಟೋ ಮಂದಿಯ ಕಂಡಿರುವ ಹಾಗೂ  ಅವರಿಂದ ರೋಸಿ ಹೋಗಿರುವ ನಮಗೆ ಈ ವ್ಯಕ್ತಿತ್ವ ಬೇರೆಯದೇ ರೀತಿಯಲ್ಲಿ ಕಂಡಿತು . 

ಬಂದಿರುವ ಎಲ್ಲರೂ (ನಾವೊಂದು ೬ ಜನ ಹೊರತುಪಡಿಸಿ) ೧೯೯೫-೧೯೯೬ ರರಲ್ಲಿ  ಚಿಕ್ಕಮಲ್ಲಯ್ಯ ಸರ್ ಅವರ ಔದಾರ್ಯದಿಂದ ಐ ಐ ಎಂ ಬಿ ನಲ್ಲಿ ಗ್ರಂಥಾಲಯದಲ್ಲಿ ತರಬೇತಿ ಪಡೆಯಲು ಅವಕಾಶ ದೊರೆತು ಈಗ ಆ ಎಲ್ಲರೂ ಕೂಡ ದೊಡ್ಡ ಹೆಮ್ಮರಗಳಾಗಿ ಇವತ್ತು ಬೇರೆ ಬೇರೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಮಲ್ಲಯ್ಯ ಸರ್ ಅವರ ಪ್ರಭಾವ ಬಹುತೇಕರಲ್ಲಿ ಅಚ್ಚೋತ್ತಿದ್ದಂತೆ ಕಂಡಿದ್ದು ಸುಳ್ಳಲ್ಲ. ಯಾಕೆಂದರೆ, ಬಹುತೇಕರು ತಮ್ಮ ತಮ್ಮ ಗ್ರಂಥಾಲಯದಲ್ಲಿ ಹೊಸದಾಗಿ ವೃತ್ತಿಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳಿಗೆ ತರಬೇತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವಿಚಾರವಾಗಿ ಅವರೆಲ್ಲ ಚಿಕ್ಕಮಲ್ಲಯ್ಯ ಸರ್ ಅವರ ಬಳಿ ಹೇಳಿದಾಗ ಅವರೂ ಖುಷಿಯಿಂದ "ನಾನಾಗಲಿ ನೀವಾಗಲಿ ಸ್ವಯಂ ಪ್ರೇರಣೆಯಿಂದ ಇವೆಲ್ಲ ಮಾಡಲಾಗುವುದಿಲ್ಲ. ಯಾವುದೊ ಶಕ್ತಿ ನಮಗೆ ಪ್ರೇರಣೆ ನೀಡಿ ನಮ್ಮಿಂದ ಈ ಕೆಲಸ ಮಾಡಿಸುತ್ತದೆ" ಎನ್ನುವ ವಿಶಾಲ ಮನಸ್ಸಿನ ಹಿರಿಜೀವ ಅವರದ್ದು. ಇನ್ನೂ ವಿಶೇಷವೆಂದರೆ ಚಿಕ್ಕಮಲ್ಲಯ್ಯ ಸರ್ ಮುಂದೆ ಕುಳಿತಿದ್ದ ಬಹುತೇಕರೇ ಇನ್ನ ನಾಲ್ಕೈದು ವರ್ಷದಲ್ಲಿ ನಿವೃತ್ತಿಯಾಗುವ ವಯಸ್ಸಿನವರು. ಆದರೂ ಸಹ ಗುರುವಿನ ಮುಂದೆ ಚಿಕ್ಕ ಮಕ್ಕಳಂತೆ ವಿನಯ, ವಿಧೇಯದಿಂದ ಕುಳಿತ್ತಿದ್ದು ನಾ ಕಂಡಾಗ ಇದು ಚಿಕ್ಕಮಲ್ಲಯ್ಯ ಸರ್ ಅವರ ಪರಿಶುದ್ಧ ವ್ಯಕ್ತಿತ್ವದ ಕುರುಹು ಎಂದೇ ನಾ ಭಾವಿಸುತ್ತೇನೆ. 




ಇದೇ  ಸಂದರ್ಭದಲ್ಲಿ ಚಿಕ್ಕಮಲ್ಲಯ್ಯ ಸರ್ ಅವರಿಗೆ ಸನ್ಮಾನ ಮಾಡಿ ಅವರ ಆಶೀರ್ವಾದ ಪಡೆದೆವು. 
ನಾವೆಲ್ಲರೂ ಚಿಕ್ಕಮಲ್ಲಯ್ಯ ಸರ್ ಅವರ ಇಡೀ ಕುಟುಂಬದೊಂದಿಗೆ  ಒಟ್ಟಿಗೆ ಊಟ ಮಾಡಿದ ಸಂದರ್ಭ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ವಿಶೇಷವಾಗಿ ನಾ ಇಲ್ಲಿ ಹೇಳಲೇ ಬೇಕಾದ ಅತಿ ಮುಖ್ಯವಾದ ವಿಷಯವೆಂದರೆ ಅವರ ಕುಟುಂಬದವರ ಸರಳತೆ, ಅನ್ಯೂನ್ಯತೆ ಮತ್ತೆ ಸಹೃದಯತೆ. ವಿಶೇಷವಾಗಿ, ಸ್ಪಷ್ಟವಾಗಿ ಕನ್ನಡವನ್ನೇ ಮಾತನಾಡುವ ಪ್ರತಿಷ್ಠಿತ ಜೇನುಗೂಡಿನ ಕುಟುಂಬ ಅದು. ಪ್ರತಿಯೊಬ್ಬರೂ ಕೂಡ ಸ್ಪಷ್ಟ ಕನ್ನಡದಲ್ಲೇ ಮಾತನಾಡಿದ್ದು ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿತು. ಈಗ ಇಂಗ್ಲಿಷ್ ಮಾತಾಡಿದರೆ ಮಾತ್ರ ಶ್ರೇಷ್ಠರು ಅಂತ ಸಾಮಾನ್ಯರೂ ಕೂಡ ಇಂಗ್ಲಿಷ್ನಲ್ಲಿ ಉಲಿಯುವಾಗ, ಅವರ ಮೊಮ್ಮಕ್ಕಳೂ ಕೂಡ ಕನ್ನಡದಲ್ಲೇ ಮಾತನಾಡಿದ್ದು ಆ ಕುಟುಂಬದ ಸರಳ ಮತ್ತು ಸ್ವಚ್ಛ  ಸಂಪ್ರದಾಯಕ್ಕೆ ಸಾಕ್ಷಿ. ಇವರ ಶಿಷ್ಯ ಕೋಟಿ ಅಂಕೆಗೆ ಮೀರಿದ್ದು. ಮೊನ್ನೆ ಸೇರಿದ ಶಿಷ್ಯರು  ಒಂದು ಅವಧಿಯಲ್ಲಿ ಐ ಐ ಎಂ ಬಿ ನಲ್ಲಿ ತರಬೇತಿ ಹೊಂದಿದವರ ಬಳಗ. ಇದೆ ರೀತಿಯಲ್ಲಿ ಅದೆಷ್ಟೋ  ಮಂದಿಗೆ ಅವಕಾಶ ನೀಡಿದ ಚೇತನ ಇವರು. ಈ ಎಲ್ಲಾ ಕಾರಣಗಳಿಗಾಗಿಯೇ ಅವರನ್ನು ನಾನು ಬೃಹತ್ ಆಲದ  ಮರ ಎಂದು ಭಾವಿಸಲು ಕಾರಣವಾಗಿದ್ದು.




ಡಾ. ಚಿಮ್ಮೋಜಿ ಸರ್ ಗೆ ನಾ ಕೇಳಿದೆ "ಇಷ್ಟು ಜನರನ್ನ ಒಟ್ಟಿಗೆ ಸೇರಿಸಿದ್ದು ಸವಾಲೇ ಸರಿ ಅಂತ. ಆಗ ಅವರು ಹೇಳಿದ್ದು, ನಾ ಸೇರಿಸಿಲ್ಲ ಪ್ರಶಾಂತ್  ಚಿಕ್ಕಮಲ್ಲಯ್ಯ ಸರ್ ಹೆಸರೇ ಅಂತದ್ದು. ಅವರ ಹೆಸರಿಗೆ ಇವರೆಲ್ಲ ಬಂದಿದ್ದು" ಅಂದರು. ಅದು  ನಿಜ ಕೂಡ. ಅಷ್ಟು ಸರಳ ಬದುಕಿನ ಚಿಕ್ಕಮಲ್ಲಯ್ಯ ಸರ್ ಗೆ ಮತ್ತೊಮ್ಮೆ  ನಮಸ್ಕರಿಸಿ ಹೊರಡುವಾಗ, "ಇರುವುದನ್ನ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ" ಎಂಬ  ಡಿ ವಿ ಜಿ ಯವರ ಮಾತನ್ನ ತಮ್ಮ ಸಂಭಾಷಣೆಯಲ್ಲಿ ಪದೇ ಪದೇ ಹೇಳುತ್ತಾ ನೀವು ಇದನ್ನೇ ಅನುಸರಿಸಿ ಮತ್ತು ನೆಮ್ಮದಿಯಾಗಿರಿ ಅಂದು ಹರಸಿದರು.  




ಒಂದೊಳ್ಳೆ ಜೀವದ ಜೊತೆ ನೇರಾನೇರ ಮತ್ತು ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದ ಡಾ ಚಿಮಾಜಿ ಸರ್ ಅವರಿಗೆ ಕೃತಜ್ಞತೆ ಹೇಳುತ್ತಾ, ಅವರ ಸಾಧನೆಗೆ ಮತ್ತೊಮ್ಮೆ ಶುಭಾಶಯ  ಹೇಳುತ್ತಾ ಇನ್ನೂ ಅನೇಕ ಸಾಧನೆಗಳು ನಿಮ್ಮದಾಗಲಿ  ಎಂದು ಶುಭ ಹಾರೈಸುತ್ತೇನೆ. 

 

ಡಾ. ಪ್ರಶಾಂತ ಶೀರೂರು