ಸೋಮವಾರ, ನವೆಂಬರ್ 14, 2011

ಮರಳಿ ಬರುವ ಮುನ್ನ ............

ಸ್ನೇಹಿತರೆ, ತುಂಬಾ ದಿನಗಳ ನಂತರ ಅಂದ್ರೆ ತಪ್ಪಾಗತ್ತೇನೋ ವರ್ಷದ ನಂತರ ನಿಮ್ಮ ಮುಂದೆ ಮತ್ತೆ ನನ್ನ ಭಾವನೆಗಳನ್ನ ತೆರೆದಿಡ್ತಾ ಇದೀನಿ. ನಿಮ್ಮ ಮುಂದೆ ಇಷ್ಟು ದಿನ ಬರಲಾಗದ್ದಕ್ಕೆ ಕ್ಷಮೆ ಇರಲಿ. ಮತ್ತೆ ನಾನು ಇಷ್ಟು ದಿನ ನೋಡಿದ, ಕೇಳಿದ, ಅನುಭವಿಸಿದ ಸಣ್ಣ ಸಣ್ಣ ವಿಷಯಗಳನ್ನ ಬರೆಯಲು ಪ್ರಯತ್ನಿಸುತ್ತೇನೆ. ಮೊದಲಿನ ಹಾಗೆಯೇ ನನ್ನ ಬರವಣಿಗೆ ನಿಮಗೆ ಇಷ್ಟವಾಗಿದ್ದರೆ ಅಭಿನಂದಿಸಿ, ಪ್ರೀತಿಯಿಂದ ಕಾಲೆಳೆಯಿರಿ. ನಿಮ್ಮ ಎಲ್ಲ ಅನಿಸಿಕೆಗಳಿಗೆ ನನ್ನ ಬರವಣಿಗೆ ಕಾಯುತ್ತಿರುತ್ತದೆ. ಈ ದೊಡ್ಡ ಅಂತರದಲ್ಲಿ ಏನೇನೆಲ್ಲಾ ಆಗಿ ಹೋದವು. ಹಾಗೆಯೇ ಅದೆಲ್ಲ ಮರೆತೂ ಹೋದವು. ಏನಾದರು ಸ್ವಲ್ಪ ಉಳಿದಿದ್ದರೆ ಅದರ ತುಣುಕನ್ನು ಬರೀತೀನಿ. ದಿನಕ್ಕೊಂದು ಅಲ್ಲದಿದ್ರೂ ವಾರಕ್ಕೊಂದಾದ್ರು ಬರೀಬೇಕು ಅನ್ನೋ ನಿರ್ದಾರ ಮಾಡಿದಿನಿ. ಬರೀತೀನಿ ಕೂಡಾ. ನನ್ನ ಬರವಣಿಗೆ ನಿಮಗೆ ಇಷ್ಟವಾದರೆ ತಪ್ಪದೆ ಕಾಮೆಂಟ್ಸ್ ಬರೀರಿ. ಪ್ಲೀಸ್
ನಿಮಗೆ ಗೊತ್ತಲ್ಲ ನೀನಂದ್ರೆ ನಂಗಿಷ್ಟ, ನೀನ್ ಯಾರಾದ್ರು ಆಗಿರು ಅನ್ನೋದು ನನ್ನ ಮನಸ್ಸಿನ ಮಾತು ಅಂತ. ಹ್ಮಂ ಮತ್ತೇಕೆ ತಡ ಮಾಡೋದು ಇದರ ಹಿಂದೇನೆ ಹೊಸ ಲೇಖನ ಬರತ್ತೆ ಓದೋದು ಮರೀಬೇಡಿ.

ನಿಮ್ಮವ ಪ್ರಶಿ.......

ಸೋಮವಾರ, ಫೆಬ್ರವರಿ 22, 2010

ಕೆಲವರಿರುತ್ತಾರೆ 'ಅವರಂತೆ' ಅವರ ಮನಸ್ಸು ವಿಶಾ.......ಲ?

ಹೌದು, ಕೆಲವರಿರುತ್ತಾರೆ ಅವರ ಮಾತು ಮೃದು, ಮನಸ್ಸು ವಿಶಾಲ, ನೋಡಲು ಅತ್ಯಂತ ಸೌಮ್ಯವಾದಿಗಳು. ಆದರೆ ವಾತ್ಸವ ಅಂದರೆ ಆ ಸೌಮ್ಯವಾದ, ಮೃದುತ್ವ ಎಲ್ಲಾ ವ್ಯಾಗ್ರತ್ವದ ಮುಖವಾಡ. ಅಂದರೆ ಅವರಲ್ಲಿ ತಮ್ಮ ತಪ್ಪನ್ನ ತಿರುಚಿ ಬೇರೆಯವರ ಮೇಲೆ ಗೂಬೆ ಕೂರಿಸುವುದೇ ಅವರ ಬದುಕು. ಅದರಲ್ಲೇ ಅವರ ಖುಷಿ, ಸಂತೋಷ ಇರತ್ತೆ. ಇದು ಎಲ್ಲಾ ಕಡೆ ಸರ್ವೇ ಸಾಮಾನ್ಯ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು, ದುಡಿದು ತಿನ್ನುವ ಹಂತದವರಲ್ಲೂ ಇದು ನಿಲ್ಲದ ನಿರಂತರ ಪ್ರಕ್ರಿಯೆ. ತಡೆ ಇಲ್ಲದಂತೆ ನಡೆದಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳೊಂದಿಗೆ ತಗ್ಗಿ ಬಗ್ಗಿ ನಡೆದರೆ ಚೆಂದ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಇವತ್ತಿನ ದಿನ ತಗ್ಗಿ ಬಗ್ಗಿ ಅಂದರೆ ಅದು ಬೇರೆ ಅರ್ಥ ಸ್ವರೂಪ ಪಡೆದಿದೆ. ಈಗೆಲ್ಲ ತೋರಿಕೆಗಾಗಿ ತಗ್ಗಿ ಬಗ್ಗಿ ನಡೆಯುವುದು ಮಾಮೂಲು. ಅದಕ್ಕೆ ಸೂಕ್ತ ಪದ ಕೂಡ ಬಳಕೆಯಲ್ಲಿದೆ. ಅದು ಬಕೀಟು ಹಿಡಿಯುವುದು ಎಂದರ್ಥ. ಇಂತವರು ಗುರುಗಳು ಹೇಳಿದ್ದಕ್ಕೆಲ್ಲ, ಅದು ಒಳ್ಳೆಯದಿರಲಿ ಕೆಟ್ಟದ್ದಿರಲಿ ಅವರ ಖುಷಿಗಾಗಿ, ಅಥವಾ ಅವರನ್ನು ಮೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಾಗಿದೆ. ಕಾಗೆ ಬೆಳ್ಳಗಿದೆ ಅಂದರೂ ಹೌದು ಸಾರ್ ಅನ್ನೋ ಜಾತಿಯಿಂದ, ಒಳ್ಳೆಯ ನೇರ ನಡೆ ನುಡಿಯಿರುವವರಿಗೆ ಅವಿವೇಕಿ, ನಿಷ್ಪ್ರಯೋಜಕ ಎಂದು ಹಣೆ ಪಟ್ಟಿ. ಇದು ವಿದ್ಯಾರ್ಥಿ ಜೀವನದ ಕಥೆಯಾದರೆ ಇನ್ನು ಒಂದೆಡೆ ಉದ್ಯೋಗ ಮಾಡುವಲ್ಲೂ ಇದೆ ಹಣೆಬರಹ. ಇಲ್ಲಿ ತಮ್ಮ ಮೇಲಧಿಕಾರಿಯನ್ನು ಮೆಚ್ಚಿಸಲು ಇದ್ದದ್ದು, ಇಲ್ಲದ್ದು ಎಲ್ಲಾ ಒಗ್ಗರಣೆ ಸಮೇತ ವರದಿ ಒಪ್ಪಿಸುವ 'ಅಕ್ಷರಸ್ತರ, ನಾಗರೀಕರ ?' ಗುಂಪು. ಅವರು ಯಾವ ರೀತಿಯಲ್ಲಿ ತಮ್ಮ (ವಾದ) ವರದಿ ಮಂಡಿಸುತ್ತಾರೋ ತಿಳಿಯದು. ಆದರೂ ಅವರ ಮಾತಿಗೆ ಸಿಗುವ ಮರ್ಯಾದೆ ಮಾತ್ರ ಮುತ್ತಿನಂತದು. ಹೌದು ಬಂಗಾರದ ಬೆಲೆ ಅವರ ಮಾತಿಗೆ. ವಿಪರ್ಯಾಸ ಅಂದರೆ ಅಂಥವರ ಮಾತನ್ನು ಸರಿನೋ ತಪ್ಪೋ ಎಂದು ಯೋಚಿಸದೆ ಒಪ್ಪಿಕೊಳ್ಳುವ ಮೇಲಾಧಿಕಾರಿ ಇನ್ನೆಂಥ ಅವಿವೇಕಿ ಇರುತ್ತಾನೋ ಊಹಿಸಲೂ ಕಷ್ಟ. ಈ ಥರದ ಮೇಲಾಧಿಕಾರಿಯಿಂದ ಅದ್ಯಾವ ಮಟ್ಟದ ಆಡಳಿತ ನಿರೀಕ್ಷಿಸಲು ಸಾಧ್ಯ. ಇಂಥ ಅಧಿಕಾರಿಗಳಿಗೆ ಒಬ್ಬರು ತಮ್ಮ ತಾಳಕ್ಕೆ ಸರಿಯಾಗಿ ಕುಣಿಯಬಲ್ಲರು (ಬಕೀಟು) ಅಂತ ಗೊತ್ತಾದರೆ ಸಾಕು ಅವರ ವರದಿಯನ್ನೇ (ಆಡು ಭಾಷೆಯಲ್ಲಿ ಇದನ್ನು 'ಚಾಡಿ' ಅಂತಾರೆ) ನಿರೀಕ್ಷಿಸುತ್ತಾ ಅವರು ಹೇಳಿದ್ದೆ ವೇದವಾಕ್ಯ ಅಂತ ನಂಬುವುದು. ಅಷ್ಟಕ್ಕೆ ಸುಮ್ಮನಾಗದೆ 'ಬಕೀಟಿನ' ವರದಿಯನ್ನ ಪರಾಮರ್ಶಿಸದೇ ನಿಯತ್ತಿನ, ಕೆಲಸ ಸರಿಯಾಗಿ ಮಾಡುವವರ ಮೇಲೆ, ಅಥವಾ ಮಾನವ ಸಹಜ ಸಣ್ಣ ಪುಟ್ಟ ತಪ್ಪಿಗೂ ಮಾತಿನಲ್ಲೇ ಮಂಗಳಾರತಿ ಮಾಡಿ, ಅಷ್ಟಕ್ಕೂ ಸುಮ್ಮನಾಗದೆ ಇನ್ನೂ ಮುಂದೆ ಹೋಗಿ ಅಸಹ್ಯ ಅನ್ನುವಂತೆ ಬಾಯಿಗೆ ಬಂದದ್ದು ಬಡ ಬಡಾಯಿಸಿ ತಮ್ಮ ಯೋಗ್ಯತೆ? ಪ್ರದರ್ಶಿಸುತ್ತಾರೆ.
ಇಂಥಹ ಅಧಿಕಾರಿಗಳು, ಬಕೀಟು ಮಹಾಶಯರಿಗೆ ಕೊರತೆ ಇಲ್ಲ. ಎಲ್ಲ ಕಡೆ ಇವರ ದರ್ಬಾರು? ಇದ್ದೆ ಇದೆ. ಇಂಥಹ ಅನುಭವಗಳು ಎಲ್ಲರಿಗೂ ಸಾಮಾನ್ಯ. ಆದರೂ ಇಂಥಹ ಭೂಪರಿಗೆ ಬಕೀಟು ತುಂಬಾ ಬೊಕ್ಕೆ ಇಟ್ಟು ಅಭಿನಂದಿಸಲೇ....? ಬೇಕು.
ಅಷ್ಟಕ್ಕೂ ಈ ವಿಷ್ಯ ಇಲ್ಲಾಕೆ ಹೇಳಿದೆ ಅಂದರೆ ನಾನು ನನ್ನ ಗೆಳೆಯರೆಲ್ಲ ಮಾತಾಡುವಾಗ ಈ ಪೆಡಂಭೂತದ ವಿಷ್ಯ ಬಂತು. ಯಾಕೆ ಬರೀಬಾರ್ದು ಅಂತ ಬರೆದೆ. ನನ್ನ ಸ್ನೇಹಿತನಿಗಾದ ಅನುಭವ ನಿಮಗೂ ಆಗಿದೆಯೇ? ಕೆಲವೊಮ್ಮೆ ನನಗೂ ಆಗಿದೆ. ನೀವೇನಂತೀರಾ? ಹೌದು, ಕೆಲವರಿರುತ್ತಾರೆ ಅವರಂತೆ ಅವರ ಮನಸ್ಸು ವಿಶಾ.......ಲ? ಅಂತ ಅನ್ನಿಸ್ತಿದೆಯ. ಪ್ಲೀಸ್ ಹೇಳಿ .........

ಮಂಗಳವಾರ, ಫೆಬ್ರವರಿ 2, 2010

ಬೆಸಿಗೆಯಲ್ಲೊಂದು ದಿನ ಮಳೆ

ಸಂಜೆ ನಾಲ್ಕರ ಸಮಯ
ಇಳಿ ಬಿಸಿಲ ಕಿರಣಗಳು
ಮನೆ ಎದುರಿಗಿನ ಕಟ್ಟೆ ಮೇಲೆ
ತೆವಳುತ್ತಾ ಸಾಗಿದೆ ಹೊಸ್ತಿಲೆಡೆಗೆ

ಮನೆಯೊಳಗೆ ಮುದುಕಿಯರಿಬ್ಬರ
ಮಾತೋ ಮಾತು. ಮತ್ತೆ ಮೌನ
ವಿಚಿತ್ರ ಸಂದೇಶಗಳ ಗೋಚರ
ದಿಡೀರ್ ಮರೆಯಾಯಿತು ಬಿಸಿಲ ಕಿರಣ

ಸೋಗೆಯುದುರಿಸಿ ತೂಗಾಡಿದವು
ಬಾಗಿದವು ಅಡಿಕೆ ಮರಗಳು
ಹಾರಾಡಿದವು ಹಾಳೆ, ಹೊಟ್ಟು
ಹೂವಿನ ಬೀಜಗಳು ಹೆಂಚಮೇಲೆ

ಗಳಿಗೆ ಹಿಂದಿದ್ದ ಬೆತ್ತಲೆ ಬಾನು
ಕತ್ತಲೆಯ ಬಲೆ ಬೀಸಿತು
ನೋಡನೋಡುತ್ತಲೇ ಬಳಿಯಿತು
ಸೂರ್ಯನಿಗೂ ಮೋಡದಿಂದ ಮಸಿ.

ಗಾಳಿಯ ರೌದ್ರಾವತಾರಕ್ಕೆ
ನಡುಗಿ ದಿಕ್ಕೆಟ್ಟು ಶರಣಾಗಿ
ತಲೆ ಬಾಗಿಸಿ, ಬಾಲ ನಿಮಿರಿಸಿ
ಓಡೋಡಿ ಬಂದವು ದನಗಳೆಲ್ಲ.

ಗಿಡುಗನೊಂದಿಗೆ ಘಂಟೆಗಟ್ಟಲೆ ಕಾದಾಡಿ
ಒಂದೇ ಸಮನೆ ಒದರುತ್ತಿದ್ದ ಕೋಳಿ
ಸನ್ನಿವೇಶಕ್ಕೆ ಹೆದರಿ, ಮುದುರಿ
ಕುಳಿತಿತ್ತು ಗೂಡಲ್ಲಿ ಒದರದೆ, ಕದಲದೆ.

ಬೇಲಿ ಮೇಲೆ ಬಟ್ಟೆಗಳಿಲ್ಲ
ಈಗವು ಸೂತ್ರವಿಲ್ಲದ ಗಾಳಿಪಟ.
ಬಾವಿ ಮೇಲಿತ್ತು ಖಾಲಿ ಕೊಡ
ಈಗದು ಬಾವಿಯೊಳಗೆ ತುಂಬಿದ ಕೊಡ.

ಪಟಪಟನೆ ಬಿದ್ದ ಹನಿಗಳೆರಡು
ಚಿತ್ತಾರ ಮೂಡಿಸಿತು ದೂಳಿನ ಮೇಲೆ
ನೋಡಲದು ಹಾಳೆಯ ಮೇಲೆ
ಶಾಯಿ ಹಚ್ಚಿ ಒತ್ತಿದ ಹೆಬ್ಬೆಟ್ಟಿನ ಹಾಗೆ.

ಮಳೆ, ಗಾಳಿಗೆ ಹೆದರಿದ
ಬಾಳೆಮರ ಅವಿತಿದ್ದು
ನಾರಿಯ ಸೀರೆ ಸೆರಗಿನಂತೆ
ತನ್ನೆಲೆಯನ್ನೇ ಅಡ್ಡ ಹಿಡಿದು.

ಸುರಿಯಿತು ಸುರಿಯಿತು ಮಳೆ
ಕೆಲಸಮಯದ ಹಿಂದಸ್ಟೇ ಇದ್ದ
ಬಿಸಿಲಿಗೆ ಬೆದರಿ ಬೆವರಿದ ದೇಹವೀಗ
ಚುಮು ಚುಮು ಚಳಿಯಲ್ಲಿ ನಡುಗಿತು.

ಮೂಲೆಯಲ್ಲಿದ್ದ ಜಾಡಿ, ಕಂಬಳಿ
ಎಳೆದೆಳೆದು ತಂದು ಹೊದ್ದು
ಮಲಗಿತು ಜೀವ ಮತ್ತದೇ
ಮೂಲೆಯಲ್ಲಿ ಕೋಳಿ ಕಾವು ಕೂತ ಹಾಗೆ.

ಅರೆಗಳಿಗೆಯ ನಿದ್ರಾ ಮಮ್ಪರಿನಿಂದೆದ್ದು
ಕಿವಿ ನಿಮಿರಿಸಿದರೆ ಘೋರ ಶಬ್ದವಿಲ್ಲ
ಬರೀ ಹನಿ ತೊಟ್ಟಿಕ್ಕುವ ರಾಗ
ಅರಿವಾಯಿತು ನಿಂತಿದೆ ಮಳೆಯ ಆರ್ಭಟ.

ಮೌನಕ್ಕೆ ಶರಣಾಗಿದ್ದ ಮುದುಕಿಯರ
ಮಾತೆಲ್ಲ ಕವಳದೊಂದಿಗೆ ಪಿಕ್ತಾನೆಗೆ ಬಿದ್ದಿತ್ತು
ಮಳೆ ಮಳೆ ಎಂಥಾ ಮಳೆಯಿದು
ಕವಳದೊಂದಿಗೆ ಮಾತು ಮತ್ತೆ ಶುರುವಾಯಿತು.

ಹೊದ್ದು ಮಲಗಿದ ಕಂಬಳಿಯ
ಒದ್ದು ಎದ್ದು ಬಂದು ನೋಡಿದರೆ
ಮಾಡಿನ ನೀರು ಬಿದ್ದು ಇಳೆಯಲ್ಲಿ
ಒಂದೆರಡಿಂಚು ಗುಳಿ ಬಿದ್ದಿತ್ತು.

ಒಂದೆರಡು ಘಂಟೆ ಜಡಿದ ಮಳೆ
ಹೊಳೆ ನೀರನ್ನು ದಡ ಮುಟ್ಟಿಸಿದ್ದಕ್ಕೆ
ಗುರುತಾಗಿ ಅದು ಹೊತ್ತು ತಂದ
ಕಸ, ಕಡ್ಡಿ ಇಟ್ಟು ತೋರಿಸಿತ್ತು.

ಮತ್ತೆ ಬಾನು ಬಿಳಿಯಾಗಿತ್ತು
ಮಳೆ ನೀರಲ್ಲಿ ಸೂರ್ಯ ಮಿನ್ದನೇನೋ
ಅನ್ನುವಸ್ಟು ಶುಭ್ರವಾಗಿ, ತೀಕ್ಷ್ಣವಾಗಿ
ಬೆಳ್ಳಿಕಿರಣಹರಿಸಿದ ಧರೆಗೆ.

ಹೆದರಿದ್ದೆ, ಎದುರಿಸಿದ್ದೆ ಅನಿರೀಕ್ಷಿತ ಮಳೆ
ಏನೋ ಬೇಸರ, ಏನೋ ಅವಸರ ಒಳಗೊಳಗೆ
ಏನನ್ನೋ ನೆನೆಸಿ, ಮತ್ತೇನನ್ನೋ ಚಿಂತಿಸಿ
ಅಬ್ಭಾ! ಬೆಪ್ಪಾಗಿ ನಿಂತೆ ನಾ ಮಲೆನಾಡ ಮಳೆಗೆ.

ಮಂಗಳವಾರ, ಡಿಸೆಂಬರ್ 8, 2009

ಫ್ರೆಂಡ್ ನ ಒಂದ್ ಮಾತು, ಮನಸನ್ನ ಮುಗಿಲೆತ್ತರಕ್ಕೆ ಹಾರಿಸತ್ತ?

ಖಂಡಿತ ಹಾರಿಸತ್ತೆ. ಅದೆನಾಯ್ತು ಅಂದ್ರೆ ನಿನ್ನೆ ಹೀಗೆ ಮನೇಲಿ ಫ್ರೆಂಡ್ಸ್ ಜೊತೆ ಏನೇನೋ ಮಾತಾಡ್ತಾ, ಕಿತ್ತಾಡ್ತಾ ಇದ್ದಾಗ ನನ್ಫ್ರೆಂಡ್ ಪುಷಿ ಫೋನ್ ಮಾಡಿದ್ಲು. ಏನ್ ಮಾಡ್ತಾ ಇದ್ಯೋ? ಅಂದ್ಲು. ಏನಿಲ್ಲ ಕಣೇ ಅಡಿಗೆ ಮಾಡ್ತಾ ಇದೀನಿ ಊಟ ಮಾಡಬೇಕು ಅಂದೆ. ಹೌದಾ ಸರಿ, ನಿನ್ ಫ್ರೆಂಡ್ ಫೋನ್ ಮಾಡಿದ್ಲು ಅಂದ್ಲು. ಯಾರೇ? ಅಂದೆ. ಭವ್ಯಾ ಕಣೋ ಅಂದ್ಲು. ಅದೇ ನಾವು ಯೂನಿವೆರ್ಸಿಟಿನಲ್ಲಿದ್ದಾಗ ಫ್ರೆಂಡ್ ಆಗಿದ್ವಲ್ಲ? ಅದೇ ಕಣೋ ನಾವೆಲ್ಲ ನಿಂಗೆ ಏನೇನೋ ಹೇಳ್ತಾ ಇದ್ವಲ್ಲ? ........ ಅದೂ ಇದೂ ಅಂತ ಒಂದೇ ಸಮನೆ ಹೇಳ್ತಾ ಇದ್ಲು.ಆದ್ರೆ ಅವ್ಳು ಭವ್ಯಾ ಕಣೋ ಅಂದಾಗಲೇ ನಂಗೆ ಗೊತ್ತಾಗಿತ್ತು ಇವಳು ಯಾರ ಬಗ್ಗೆ ಮಾತಾಡ್ತಾ ಇದಾಳೆ ಅಂತ. ಅವ್ಳು ಹೇಳಿದ್ದು ನನ್ ಫ್ರೆಂಡ್ ಭವ್ಯಾ ಬಗ್ಗೆ. ನನಗೆ ಈ ಬರವಣಿಗೆ ಬಗ್ಗೆ ಆಸಕ್ತಿ ಮೂಡಿಸಿದ ನನ್ ಫ್ರೆಂಡ್ ಭವ್ಯಾ ಬಗ್ಗೆ. ಏನ್ ಅಂದ್ರೆ ಈ ಗೆಳೆತನ ಹುಟ್ಟಿದ್ದೇ ಚಿತ್ರ ವಿಚಿತ್ರವಾಗಿ. ಸ್ನೇಹಿತರ ಏನೋ ಒಂದು ಸವಾಲಿಗೆ ಬೆಲೆ (ತಲೆ) ಕೊಟ್ಟು, ಆ ಸವಾಲನ್ನ ಸಾದಿಸಲು ಹೋಗಿ, ಅವಾಂತರ ಆಗಿ, ಈ ವಿಷ್ಯ ನನ್ ತಂಗಿಯರ ಕಿವಿಗೆ ಬಿದ್ದು (ಅವ್ರು ಭವ್ಯಾ ಫ್ರೆಂಡ್ಸ್) ಅವರಿಂದ "ಅದ್ದೂರಿ" ಮಂಗಳಾರತಿ ಕಾರ್ಯಕ್ರಮ ಆಗಿ, ನಂತರ ಮೂರ್ನಾಲ್ಕು ತಿಂಗಳು ಭವ್ಯಾ ಜೊತೆ ಮಾತಾಡದೆ ಇದ್ದಿದ್ದು, ......ಅಬ್ಬ ಅದೆಲ್ಲ ಈಗ ಸುಂದರ ನೆನಪು ಮಾತ್ರ. ಕೊನೆಗೆ ಆಟೋಗ್ರಾಪ್ಹ್ ಬರೆಯೋ ಸಮಯದಲ್ಲಿ ನನ್ ತಂಗಿ ಫ್ರೆಂಡ್ಸೆ ಮತ್ತೆ ಭವ್ಯಾ ಜೊತೆಗೆ ಫ್ರೆಂಡ್ ಮಾಡ್ಸಿದ್ರು. ಆಮೇಲಿಂದ ನಿಜಕ್ಕೂ ಅತ್ಯಂತ ಆತ್ಮೀಯವಾದ ಗೆಳೆತನ ನಮ್ಮಲ್ಲಿತ್ತು. ಸುಮಾರು ಒಂದೆರಡು ವರ್ಷಗಳ ಕಾಲ ಹಾಗೆ ಇತ್ತು. ಆದ್ರೆ ಯಾವಾಗಲೋ ಏನೋ ಭವ್ಯಾ ದಿಡೀರ್ ಅಂತಾ ನಂಬರ್ ಚೇಂಜ್ ಮಾಡಿದ್ಲು. ಯಾಕೋ ಏನೋ ಆ ನಂಬರ್ ನನಗೆ ಕೊಡಲೇ ಇಲ್ಲ. ನಂಗೂ ಎಲ್ಲೋ ಒಂದ್ಕಡೆ ಸ್ವಲ್ಪ ಬೇಜಾರಾಗಿತ್ತು. ಅವಳು ನಂಗೆ ಒಳ್ಳೆ ಫ್ರೆಂಡ್ ಆಗಿದ್ಲು. ಅಂಥಾ ಫ್ರೆಂಡ್ಶಿಪ್ನ ಕಳ್ಕೊಲ್ಲೋದಿಕ್ಕೆ ನನ್ ಮನಸು ಒಪ್ಪಲಿಲ್ಲ. ಹಾಗಾಗಿ ಅವಳ ನಂಬರ್ ಹುಡುಕೋಕೆ ಸ್ವಲ್ಪ ಜಾಸ್ತಿನೆ ಪ್ರಯತ್ನ ಪಟ್ಟೆ. ಊಹೂ ನಂಬರ್ ಸಿಗ್ಲಿಲ್ಲ. ಆಗ ಅಂದ್ಕೊಂಡೆ ಬಹುಷಃ ಭಾವ್ಯಾಗೆ ನನ್ ಫ್ರೆಂಡ್ ಶಿಪ್ ಸಾಕಾಯ್ತು ಅಂತ ಅನ್ಸತ್ತೆ ಅಂತ. ಹಾಗಂದುಕೊಂಡು ಸುಮ್ನಾದೆ ಕೂಡಾ. ಆದ್ರೆ ಅವಳ ನೆನಪು ಸದಾ ಇತ್ತು. ಕಾರಣ ಮತ್ತದೇ ಫ್ರೆಂಡ್ ಶಿಪ್. ಹೀಗಿರುವಾಗಲೇ, ಸುಮಾರು ಮೂರು ವರ್ಷಗಳ ನಂತರ ಮತ್ತೆ ಭಾವ್ಯಾನ ಜೊತೆ ಮಾತಾಡೋದು ಅಂದ್ರೆ ಖುಷಿ ಆಲ್ವಾ?. ನನಗಂತೂ ಖುಷಿ ಆಯ್ತು. ಪುಷಿ ನಂಬರ್ ಕೊಟ್ಟಾಗ, ಕಾಲ್ ಮಾಡಿದಾಗ, ಮಾತಾಡಿದಾಗ, ಮಾತಾಡಿ ಮುಗಿಸಿದಾಗ, ಮೊದಲೇ ಸ್ವಚ್ಚಂದವಾಗಿ ಹಾರಾಡ್ತಾ ಇದ್ದ ನನ್ ಮನಸ್ಸು ಮತ್ತಸ್ತು ಎತ್ತರಕ್ಕೆ ಹಾರಿತು. ಕಾರಣ ಮತ್ತದೇ ಸ್ನೇಹ. ಈ ಸ್ನೇಹ ಅಂದ್ರೇನೆ ಹೀಗೆ ನೀರಿನ ತರ. ಇದಕ್ಕೆ ರುಚಿ ಇಲ್ಲ, ಬಣ್ಣ ಇಲ್ಲ, ಅಕಾರ ಗೊತ್ತಿಲ್ಲ. ಇದಕ್ಕೆ ಗೊತ್ತಿರೋದು ಆಳ, ಅಗಲ ಮಾತ್ರ. ಆಳ ಎಷ್ಟು ಅಂದ್ರೆ ಸಾಗರಕ್ಕಿಳಿಯತ್ತೆ, ಅಗಲ ಎಷ್ಟು ಅಂದ್ರೆ ಆಕಾಶ ಅನ್ನತ್ತೆ. ಈ ತರದ ಸ್ನೇಹ ನಿಮ್ಮಲ್ಲಿದ್ದರೆ , ಇಂತಹ ಗೆಳತಿ/ಗೆಳೆಯ/ಗೆಳೆತನ ನಿಮ್ಮಲ್ಲಿದ್ದರೆ ಅವರೊಂದಿಗಿನ ನಿಮ್ಮ ಸವಿ ಸವಿ ನೆನಪನ್ನ ಹಾಗೆ ಹರಿಯಬಿಡಿ. ಇದು ಸಣ್ಣ ಸಣ್ಣ ವಿಷಯ ಅನ್ನಿಸಿದರೂ ಸಾಕಷ್ಟುಖುಷಿ ಇರತ್ತೆ. ಏನಂತೀರಾ?

ಮಂಗಳವಾರ, ಅಕ್ಟೋಬರ್ 20, 2009

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... !

ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ! ಆಶ್ಚರ್ಯ ಆಗ್ತಾ ಇದ್ದೀಯ? ಆಶ್ಚರ್ಯ ಪಡೊಂಥದ್ದೆನಿಲ್ಲ ನಿಜವಾಗಿಯೂ ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ಕಂಡ್ರೀ.

ಪೀ ಯೂ ಸಿ ಓದೋವಾಗ ಸುಮಾರು ಹತ್ತು ವರ್ಷಗಳ ಹಿಂದೆ ನನಗೊಬ್ಬಳು ಆತ್ಮೀಯ ಗೆಳತಿ ಇದ್ದಳು. ಅವಳು ಮೊದಮೊದಲು ಅಸ್ಟೊಂದು ಹತ್ತಿರವಾಗಿರದಿದ್ದರೂ ಸಹ ನಂತರದ ದಿನಗಳಲ್ಲಿ ತುಂಬಾನೆ ಆತ್ಮೀಯಳಾದಳು. ಇದಕ್ಕೆ ಕಾರಣ ಆ ಕಾಲೇಜಿನ ವಾತಾವರಣ, ನಮ್ಮ ಆಟ, ಹಾರಾಟ, ತಲೆಹರಟೆ, ಏನ್ ಎಸ್ ಎಸ್, ಮತ್ತೆ ಆ ಒಂಬತ್ತು ದಿನಗಳ ತಮಿಳುನಾಡು ಪ್ರವಾಸ ಕಾರಣವಿರಬಹುದು. ಈ ರೀತಿಯಲ್ಲೆಲ್ಲೋ ಪರಿಚಯವಾದ ನಮ್ಮ ಗೆಳೆತನ ಅತ್ಯಂತ ಸಮೃದ್ಧವಾಗಿ ಬೆಳೆದು ಇಂದಿಗೂ ಹಾಗೇ ಇದೆ. ಆಗೊಮ್ಮೆ ಈಗೊಮ್ಮೆ ಫೋನ್ ಮಾಡುವ ಮೂಲಕ ಮಾತನಾಡುತ್ತೇವೆ. ಆ ನನ್ನ ಗೆಳತಿ ಅತ್ಯಂತ ಬುದ್ದಿವಂತೆ. ಅವಳ ನಗು, ಮುಗ್ಧ ಮುಖ, ಹಾಗೂ ಅವಳ ಮಾತು ನಮಗೆಲ್ಲರಿಗೂ ಇಸ್ಟಾನ್ದ್ರೆ ಇಷ್ಟ. ಅದರಲ್ಲೂ ನನಗಂತೂ ತುಂಬಾನೆ ಇಷ್ಟ. ಹೇಗ್ಹೇಗೋ ನಾವಿಬ್ರೂ ಸಖತ್ ಫ್ರೆಂಡ್ಸ್ ಆದ್ವಿ. ಅವಳಿಗೆ ನಾನು ತುಂಬಾನೆ ಗೌರವ ಕೊಡ್ತಾ ಇದ್ದೆ. ನಮ್ಮ ಜೊತೆಗೆ ಇನ್ನೂ ತುಂಬಾ ಜನ ಇದ್ರೂ. ಅವರೂ ಸಹ ನಮ್ಮ ಫ್ರೆನ್ದ್ಸೆ ಆಗಿದ್ರು. ಆದರೂ ಅವರೆಲ್ಲರಿಗಿಂತ ಈ ಹುಡುಗಿ ಸ್ವಲ್ಪ ಹೆಚ್ಚು. ಯಾಕೆ ಅಂತಾ ಇನ್ನೂ ಗೊತ್ತಿಲ್ಲ. ನಮ್ಮಿಬ್ಬರ ಗೆಳೆತನದಲ್ಲಿ ಪ್ರೀತಿ ಇತ್ತಾ? ಪ್ರೀತಿ ಅನ್ನೋದೇನಾದ್ರೂ ಗೆಳೆತನದ ಮುಖವಾಡ ಹಾಕ್ಕೊಂಡಿತ್ತಾ? ಪ್ರೀತಿ ಗೆಳೆತನ, ಗೆಳೆತನ ಪ್ರೀತಿ ಅಂತಾ ಜಪಿಸೋ ವಯಸ್ಸಿನ ಕಿತಾಪತಿ ಏನಾದರೂ......! ಉಹೂ ...... ಹಾಗೇನೂ ಇಲ್ಲ. ಅದು ನಿಜವಾದ ಸ್ನೇಹಾನೆ ಆಗಿತ್ತು ಅನ್ಸತ್ತೆ. ಅದಕ್ಕೇನೆ ನಾವಿಬ್ರೂ ಇಂದಿಗೂ ಯಾವುದೇ ಮುಜುಗರ ಇಲ್ಲದೆ ನಿರಾಳವಾಗಿ, ಆತ್ಮೀಯತೆಯಿಂದ ಮಾತಾಡ್ಲಿಕ್ಕೆ ಸಾದ್ಯವಾಗಿರೋದು. ಆದ್ರೆ ಅದೇನೋ ಗೊತ್ತಿಲ್ಲ ಆ ದಿನ ನಾನು ನನ್ನ ಈ ಮೇಲ್ ಐಡಿ ಕ್ರಿಯೇಟ್ ಮಾಡೋವಾಗ ಪಾಸ್ವರ್ಡ್ ಗೆ ದಿಡೀರ್ ಅಂತ ಅವಳ ಹೆಸರೇ ಬಂತು. ಆ ಗಟ್ಟಿ ಸ್ನೇಹದ ಕುರುಹಿಗಾಗಿ ಅನ್ಸತ್ತೆ. ನಾನೂ ಅದೇ ಹೆಸರನ್ನ ಹಾಕಿದೆ. ಅದರಲ್ಲೇನಾದ್ರೂ ತಪ್ಪಿದೆಯ? ಅದಕ್ಕೆ ಶಾಶ್ವತವಾಗಿ ಅದೇ ಹೆಸರೇ ಇತ್ತು. ಹೀಗಿರುವಾಗ ಮೊನ್ನೆ ನನ್ನ ಅಜ್ಜಿ ಊರಿನ, ಪಿ ಯೂ ಸಿ ಗೆಳೆಯ ಒಬ್ಬ ಸಿಕ್ಕಿದ. ಸಿಕ್ಕಿದವನೇ ಹೇ ನಿನ್ನ ಫ್ರೆಂಡ್ ........ಗೆ ಮದುವೆ ಕಣೋ ಅಂದ. ಯಾರಿಗೋ ಅಂತ ನಾ ಕೇಳಿದ್ದಕ್ಕೆ, ಅವ ಹೇಳಿದ್ದು ನನ್ ಪಾಸ್ವರ್ಡ್ ಹೆಸರನ್ನೇ. ಹೌದೇನೋ .....? ತುಂಬಾ ಖುಷಿ ಆಗ್ತಿದೆ ಕಣೋ. ಮತ್ತೆ ಅವ್ಳು ಹೇಳಲೇ ಇಲ್ಲಾ ಅಂತಾ ಅವ್ನಿಗೆ ನಗು ನಗುತಾ ಹೇಳಿದ್ರೂ ಸಹ ಒಳಗೆಲ್ಲೋ ಸ್ವಲ್ಪ ನೋವಾಗ್ತಾ ಇತ್ತು. ಯಾಕೆ ಅಂತಾನೆ ಗೊತ್ತಾಗ್ಲಿಲ್ಲ. ಆಗೆಲ್ಲಾ ಮತ್ತದೇ ಯೋಚನೆ ನಮ್ ಗೆಳೆತನ ಏನಾದರೂ, ಎಲ್ಲಾದ್ರೂ "ಒಂದ್ ಕಣ್ಣನ್ನ" ಮಿಟುಕಿಸಿತ್ತಾ.....? ಅಂತಾದ್ದೇನೂ ಗೊತ್ತಾಗ್ಲಿಲ್ಲಪ್ಪ. ಇರಲಿ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಆತ್ಮೀಯ ಗೆಳತಿಯ ಹೆಸರು ನನ್ನ ಈ ಮೇಲ್ ಐಡಿ ಗೆ ಪಾಸ್ವರ್ಡ್ ಆಗಿ ನನ್ನ ಕೈ ಬೆರಳುಗಳ ತುದಿಯಲ್ಲಿ ಕುಣೀತಾ ಇದ್ಲು. ಆದ್ರೆ ಈಗ ನನ್ನ ಪಾಸ್ ವರ್ಡ್ ಗೆ ಮದುವೆ ಇದೆ. ಹಾಗಾಗಿ ಅನಿವಾರ್ಯವಾಗಿ ಆ ಗೆಳತಿ ಹೆಸರನ್ನ ಭಾರವಾದ ಹೃದಯದಿಂದ ತೆಗೆದು ಬೇರೊಂದು ಹೆಸರು ಪಾಸ್ ವರ್ಡ್ ರೀತಿಯಲ್ಲಿ ಈಗಾಗ್ಲೇ ನನ್ನ ಬೆರಳುಗಳನ್ನ ಬಲವಂತವಾಗಿ ಕುಣಿಸ್ತಾ ಇದೆ.

ಏನೇ ಇರಲಿ ನನ್ನ ಪಾಸ್ ವರ್ಡ್ ನ ಮದುವೆಗೆ ನೀವೆಲ್ಲ ತುಂಬು ಹೃದಯದಿಂದ ಹಾರೈಸುತ್ತೀರಾ ಅಂತ ಭಾವಿಸಿದಿನಿ. ಹ್ಞಾ.......ನೆನಪಿರಲಿ, ಆಗಮನ ಮತ್ತು ಆಶೀರ್ವಾದವೇ ಉಡುಗೊರೆ

ಅಪ್ಪಾ...... ನನ್ನ ಕೈ ಬೆರಳುಗಳು ಮತ್ತೆ ಬೆಳೆಯೋದು ಯಾವಾಗ?

ಒಬ್ಬ ವ್ಯಕ್ತಿ ಒಂದು ದಿನ ತನ್ನ ಕಾರನ್ನ ತೊಳೀತಾ ಇದ್ದ. ಆಗ ಅಲ್ಲೇ ಇದ್ದ ಅವನ ನಾಲ್ಕು ವರ್ಷದ ಮಗ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಒಂದು ಮೂಲೆಯಲ್ಲಿ ಗೀಚುತ್ತಾ ಇದ್ದ. ಅದನ್ನ ನೋಡಿ ತಂದೆಗೆ ವಿಪರೀತ ಕೋಪ ಬಂದು ಅದನ್ನ ತಡೀಲಾರದೆ ಮಗುವಿನ ಮುದ್ದಾದ ಕೈ ಬೆರಳುಗಳ ಮೇಲೆ ಅತ್ಯಂತ ಬಲವಾಗಿ ಹಲವಾರು ಬಾರಿ ಹೊಡೆಯುತ್ತಾನೆ. ಆದರೆ ಕೊನೆಗೊಮ್ಮೆ ತನ್ನ ಕೋಪದ ಅರಿವಾಗಿ, ತಪ್ಪಿನ ಮನವರಿಕೆಯಾಗಿ ತಂದೆಯು ತನ್ನ ಮಗುವನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ ಹೋದರು. ಆದರೆ ಅಲ್ಲಿ ಆ ಮಗು ತನ್ನೆಲ್ಲಾ ಬೆರಳುಗಳನ್ನ ಕಳೆದುಕೊಂಡಿರುತ್ತದೆ. ತನ್ನ ತಂದೆಯನ್ನು ನೋಡಿದ ಆ ಮಗು ತನ್ನ ನೋವು ತುಂಬಿಕೊಂಡ ಕಣ್ಣುಗಳಿಂದ ತಂದೆಯನ್ನ ಕೆಳುವುದೆನೆಂದರೆ, "ಅಪ್ಪಾ ....ಯಾವಾಗ ನನ್ನ ಕೈ ಬೆರಳುಗಳು ಮೊದಲಿನಂತೆ ಬೆಳೆಯೋದು ?" ಅಂತ. ಈ ಪ್ರಶ್ನೆ ಕೇಳಿದ ತಂದೆಗೆ ಇನ್ನೂ ದುಃಖ ತಡೆಯಲಾಗಲಿಲ್ಲ. ಮಾತೇ ಬಾರದಂತಾಗಿ ತನ್ನ ಕಾರಿದ್ದ ಸ್ಥಳಕ್ಕೆ ಹೋಗಿ ಕಾರಿಗೆ ಮನ ಬಂದಂತೆ ಒದ್ದು ಒದ್ದು ಹತಾಶನಾಗಿ ಅವನು ಮೂಲೆಯಲ್ಲಿ ಕಾರಿಗೆ ಒರಗಿ ಕೂರುತ್ತಾನೆ. ಅಚಾನಕ್ಕಾಗಿ ತನ್ನ ಮಗು ಗೀಚಿದ ಜಾಗ ನೋಡುತ್ತಾನೆ. ಅದರ ಮೇಲೆ ಆ ಮಗು ಬರೆದಿದ್ದೇನು ಗೊತ್ತಾ? "ಲವ್ ಯೂ ಡ್ಯಾಡಿ " ಅಂತ. ಎಷ್ಟು ಪ್ರೀತಿಯಿತ್ತು ಆ ಮಗುವಿನಲ್ಲಿ ಅಲ್ವಾ?
ಈ ಕಥೆಯಲ್ಲಿ "ವಸ್ತುಗಳಿರುವುದು ಉಪಯೋಗಿಸಲು, ಮನುಷ್ಯರಿರುವುದು ಪ್ರೀತಿಸಲು" ಎಂಬ ಮಾತಿಗೆ ಬದಲಾಗಿ " ವಸ್ತುಗಳಿರುವುದು ಪ್ರೀತಿಸಲು, ಮನುಸ್ಯರಿರುವುದು ಉಪಯೋಗಿಸಲು" ಎಂಬಂತಾಗಿದೆ. ಇದನ್ನ ನಾನು ಮೊದಲೇ ಓದಿದ್ದೆ ಅಂತಾ ನೀವನ್ದುಕೊಂದಿದ್ದರೆ ನಿಮ್ಮ ಮಾತು ನಿಜ. ಇದು ಯಾರೋ, ಎಲ್ಲೋ ಬರೆದಿದ್ದು ನನ್ನ ಗೆಳೆಯ ಒಬ್ಬ ಮೇಲ್ ಮಾಡಿದ್ದ. ಅರ್ಥಪೂರ್ಣ ಹಾಗೂ ಮನ ಕಲುಕುವಂತೆಇತ್ತಲ್ಲ ಎಂದು ನಿಮಗೂ ತಿಳಿಸುವ ಮನಸ್ಸಾಯಿತು ಬರೆದೆ. ನಿಮ್ಮ ಅಭಿಪ್ರಾಯ ?

ಮಂಗಳವಾರ, ಸೆಪ್ಟೆಂಬರ್ 22, 2009

ಅಜ್ಜಾ........... ನಿನಗೊಂದು ಪತ್ರ
ಅಜ್ಜ, ಹೇಗಿದ್ದೀಯ? ಹೇಗಿದೆ ನಿನ್ ಪ್ರಪಂಚ. ಅಲ್ಲೆಲ್ರೂ ನಿನ್ನ ಏನಂತ ಮತಾಡ್ಸಿದ್ರು. ನನ್ನಜ್ಜಿ ಹೇಗಿದಾಳೆ. ಮೊನ್ನೆ ಭಾನುವಾರ ರಾತ್ರಿ ಮಾವ ಫೋನ್ ಮಾಡಿದ್ದ. ನಿಂಗೆ ಹುಷಾರಿಲ್ಲ ಇನ್ನೊಂದು ಸಾರಿ ಬಂದು ನೋಡ್ಕೊಂಡ್ ಮಾತಾಡ್ಸ್ಕೊಂಡ್ ಹೋಗು ಅಂತ ಅಂದಿದ್ದ. ನಿಂಗೊತ್ತಾ ಅವತ್ತೇ ರಾತ್ರಿ ನಾ ಹೊರಟು, ಶಿವಮೊಗ್ಗ ರೈಲು ಹತ್ತಿಯಾಗಿತ್ತು. ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಾಗ ಆರೂವರೆಯಾಗಿತ್ತು. ಮಾವ ಹೇಳಿದ್ದ, ಬೆಳಿಗ್ಗೆ ಏಳೂವರೆಗೆ ಬಸ್ಸಿದೆ ಅಂತ. ಆದ್ರೆ ಯಾವ ಬಸ್ಸು ಅಂತ ನಾನೂ ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಅದಿಕ್ಕೆ ಮತ್ತೆ ಫೋನ್ ಮಾಡಿದಾಗಲೇ ಮಾವ ಸರಿಯಾಗಿ ಹೇಳಿದ್ದು. ಏಳೂವರೆಗೆ ಗಣೇಶ ಬಸ್ಸಿದೆ, ನೀನು ಅಲ್ಲೇ ಹೂವು ಹಿಡ್ಕೊಂಡ್ ಬಾ. ಅಜ್ಜ ರಾತ್ರೀನೇ ಎರಡೂವರೆಗೆ ತೀರ್ಕೊಂಡಿದಾರೆ ಅಂತ. ತುಂಬಾ ನೋವಾಯ್ತು ಅಜ್ಜ. ಆ ಕ್ಷಣ ಏನೇನೋ ನೆನಪಾಯ್ತು. ನಾ ಹುಟ್ಟಿದಾಗಿನಿಂದ ನಿನ್ನ ಮನೇಲಿ, ನಿಮ್ಮೆಲ್ಲರ ಜೊತೆಗೆ ಬೆಳೆದವನು. ಅದರಲ್ಲೂ ನಿನ್ನ ಪ್ರೀತಿ, ಕೋಪ ಎಲ್ಲಾ ನೋಡಿದವನು, ಅನುಭವಿಸಿದವನು. ಅದೆಸ್ಟು ಸಲ ನೀ ನನ್ನ ಸ್ನಾನ ಮಾಡಿಸಿಲ್ಲ, ಅದೆಸ್ಟು ಸಲ ನಿನ್ನ ಹೆಗಲ ಮೇಲೆ ಕೂತು ತೋಟ, ಗದ್ದೆ, ಅಸ್ಟೇ ಏಕೆ ಶನಿವಾರ ಶನಿವಾರ ದಿನ ಮಾತ್ರ ಕಟ್ಟಿಂಗ್ ಮಾಡಿಸ್ಕೊಲ್ಲೋದಿಕ್ಕು ನಿನ್ನ ಹೆಗಲ ಮೇಲೆ ನನ್ ಸವಾರಿ. ನಿನ್ ಜೊತೆ ಆ ಭಯಂಕರ "ಕಾನುಮನೆ ಕಾನು, ಹನ್ದೊಲ್ಲಿ ಕಾನಲ್ಲಿ" ಗಬ್ಬದ ದನ ಕರು ಹಾಕಿತ್ತು ಅಂತ ರಾತ್ರಿ ಹಗಲೆಲ್ಲ ಹುಡ್ಕಿದ್ದು, ಇಬ್ಬರೇ ಬ್ಯಾಣದಲ್ಲಿ ಎಮ್ಮೆ, ಎತ್ತಿನ ಮೆಯಿಸಿದ್ದು, ಆಗ ನೀ ನನ್ಗೆಸ್ಟು ಪೆಟ್ಲೆ, ಬುಗುರಿ, ಚಿನ್ನಿದಾಂಡು, ಬಾರುಕೋಲು, ಗಾಡಿ, ಗಾಡಿಚಕ್ರ, ಗಿರಿಗಿಟ್ಲೆ ಇನ್ನೂ ಏನೇನೋ ಆಟದ ವಸ್ತುಗಳನ್ನ ಮಾಡಿಕೊಟ್ಟಿದ್ದೆ. ಅದೇನೂ ಒಂದೆರಡು ಬಾರಿಯಲ್ಲ ಪದೇ ಪದೇ. ಹಾಗೆ ಅದನ್ನ ಹಾಳು ಮಾಡಿಕೊಂಡಾಗ ನೀ ಕೊಟ್ಟ ಅದೇ ಬಾರುಕೊಲಿನ ಎಟುಗಳೂ ನೆನಪಾಯ್ತು. ನಿನ್ನೊಂದಿಗೆ ದೇವಸ್ಥಾನಗಳಿಗೆ ಸುತ್ತಾಡಿದ್ದು ನೆನಪಾಯ್ತು. ನಿನ್ನ ದೈವಭಕ್ತಿ, ಹಬ್ಬದ ದಿನಗಳಲ್ಲಿ ನಿನ್ನ ಸಂಬ್ರಮದ ಹಾಗು ಅಚ್ಚುಕಟ್ಟು ಆಚರಣೆ, ಶನಿವಾರದ ಒಪ್ಪೊತ್ತು, ಅವತ್ತಿನ ಪೂಜೆಯಲ್ಲಿ ಹಣೆ, ಮೈಗೆಲ್ಲ ನಾಮ ಹಾಕ್ಕೊಂಡಾಗ ನನಗೂ ಜೊತೆ ಕೂರಿಸಿಕೊಂಡು ನಿನ್ನಂತೆ ನಂಗೂ ಹಚ್ಚುತ್ತಿದ್ದೆ. ಇಂಥವೇ ಕೆಲವೊಂದು ವಿಚಾರಗಳನ್ನ ನಾನು ಚಿಕ್ಕವನಿದ್ದಾಗ ನಿನ್ನನ್ನೇ ಅನುಕರಿಸುತ್ತಿದ್ದೆ, ಅನುಸರಿಸುತ್ತಿದ್ದೆ. ನಿನ್ನ ದೈತ್ಯ ದೇಹ, ಗಾಂಭೀರ್ಯ, ಅಚ್ಚುಕಟ್ಟು, ಸ್ವಚ್ಛತೆ, ಸರಳತೆ ಜೋತೆಗೊಂದಿಸ್ಟ್ ಸಿರಿತನದ ಗತ್ತು ಇದೆಲ್ಲ ಒಂದೆರಡು ಕ್ಷಣದಲ್ಲೇ ಕಣ್ಣೀರ ಹನಿಯೊಳಗೆ ನೆನಪಾಗಿ ಜಾರಿದವು. ನೋವಿದ್ದರೂ ತೋರಗೊಡದೆ ಸಹಜವಾಗಿ ಮನೆಯೊಳಗೆ ಬಂದು ನಿನ್ನ ಉಸಿರಿಲ್ಲದ ದೇಹ ನೋಡಿದಾಗ ಬದುಕು ಇಸ್ಟೇನಾ? ಅಂತನ್ನಿಸಿತು. ನಿನ್ನ ನೋಡಿ ಭಾರವಾದ ಎದೆ ಹೊತ್ತುಕೊಂಡು ಹೊರ ಬರುವಾಗ, "ಇವನು ಬಾಳಾ ಗಟ್ಟಿಗಸ್ತ. ಸಿಕ್ಕಾಪಟ್ಟೆ ಧೈರ್ಯದ ಮನುಷ್ಯ. ದೊಡ್ಡ ಜೀವ ಬೇರೆ. ಪ್ರಾಯದಲ್ಲಿ ಒಂದು ಸರಿಯಾದ 'ಹುಲಿ' ಹೊಡೆದಿದ್ದ. ಅದನ್ನ ಇವನ ಜೊತೆ ಗಾಡಿ ಮೇಲೆ ಇಟ್ಟು ಊರ ತುಂಬಾ ಮೆರವಣಿಗೆ ಮಾಡಿದ್ವಿ. ಅಂಥಾ ಬೇಟೆಗಾರ" ಎಂಬ ಮಾತು ಕಿವಿಗೆ ಬಿತ್ತು. ತಿರುಗಿ ಆ ಕಡೆ ನೋಡಿದ್ರೆ ನಿನಗಿಂತಾ ಚಿಕ್ಕವರಾದ್ರೂ ಕೂಡಾ ಅಜ್ಜನ್ದಿರೆ ಆಗಿದ್ದವರೆಲ್ಲ ಒಂದು ಕಡೆ ಕೂತು ನಿನ್ನ ಬಗ್ಗೆ ಮಾತಾಡ್ತಾ ಇದ್ರು. ನೋಡಿದ್ಯಾ ಅಜ್ಜ ನೀ ಮಾಡಿದ ಒಂದೊಂದು ಕೆಲಸದಲ್ಲೂ ನಿಂದು ಅನ್ನೋದೊಂದಿರ್ತಿತ್ತು. ಅಲ್ಲೇ ನೂರಾರು ಹಂದಿ ಹೊಡೆದವ ಇದ್ರೂ ಬೇಟೆಗಾರ ಅನ್ನಿಸ್ಕೊಲ್ಲಿಲ್ಲ ನೀ ಒಂದ್ ಹುಲಿ ಹೊಡೆದು ಬೇಟೆಗಾರ ಅನ್ನಿಸ್ಕೊಂಡೆ. ಮೊನ್ನೆ ಅಂದ್ರೆ ಮೊನ್ನೆ ಎರಡು ತಿಂಗಳ ಹಿಂದೆ ಅಜ್ಜಿ ಕಳಕೊಂಡ ನನಗೆ ನೀನೊಬ್ಬನೇ ಅಜ್ಜ ಅಂತಾ ಕೊನೆಯದಾಗಿ ಉಳಿದುಕೊಂಡವನು. ನೀನೂ ಇನ್ಮೇಲೆ ನೆನಪು ಮಾತ್ರ. ನಿನ್ನ ಬಗ್ಗೆ, ನಿನ್ನ ಪ್ರೀತಿ ಬಗ್ಗೆ ನಾ ಇಲ್ಲೇನೆ ಬರೆದರೂ ಅದು ಇರುವೆ ಗೂಡಿನ ಹೊರಗೆ ಹರಿದಾಡುವ ನಾಲ್ಕಾರು ಇರುವೆಯಂತೆ. ಇನ್ನೂ ಗೂಡಿನಲ್ಲಿರುವ ಸಹಸ್ರ ಇರುವೆಯಂತೆ ನಿನ್ನ ನೆನಪು, ಆರೈಕೆ, ನಿನ್ನಿಂದ ಕಲಿತದ್ದು ಎಲ್ಲ ನನ್ನೊಳಗೆ ಇನ್ನೂ ಹಸಿರಾಗಿದೆ. ಇದು ಬರೀ ನನ್ನ ಹೃದಯ ಭಾರವನ್ನು ಸ್ವಲ್ಪ ಹೊರ ಹಾಕ್ಲಿಕ್ಕೆ ಬರೆದಿದ್ದಸ್ಟೇ. ಅಜ್ಜ ಈ ಪತ್ರ ಮುಗಿಸುವಾಗ ಆ ದೇವರಲ್ಲಿ ಬೇಡಿಕೊಳ್ಳುವುದೆನೆಂದರೆ ನಿನ್ನ ಮತ್ತು ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಜ್ಜ. ಮತ್ತೊಮ್ಮೆ ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತಿರುವ ನಿನ್ನ ಮೊಮ್ಮಗ ಪ್ರಶಾಂತ.