ಸೋಮವಾರ, ಫೆಬ್ರವರಿ 22, 2010

ಕೆಲವರಿರುತ್ತಾರೆ 'ಅವರಂತೆ' ಅವರ ಮನಸ್ಸು ವಿಶಾ.......ಲ?

ಹೌದು, ಕೆಲವರಿರುತ್ತಾರೆ ಅವರ ಮಾತು ಮೃದು, ಮನಸ್ಸು ವಿಶಾಲ, ನೋಡಲು ಅತ್ಯಂತ ಸೌಮ್ಯವಾದಿಗಳು. ಆದರೆ ವಾತ್ಸವ ಅಂದರೆ ಆ ಸೌಮ್ಯವಾದ, ಮೃದುತ್ವ ಎಲ್ಲಾ ವ್ಯಾಗ್ರತ್ವದ ಮುಖವಾಡ. ಅಂದರೆ ಅವರಲ್ಲಿ ತಮ್ಮ ತಪ್ಪನ್ನ ತಿರುಚಿ ಬೇರೆಯವರ ಮೇಲೆ ಗೂಬೆ ಕೂರಿಸುವುದೇ ಅವರ ಬದುಕು. ಅದರಲ್ಲೇ ಅವರ ಖುಷಿ, ಸಂತೋಷ ಇರತ್ತೆ. ಇದು ಎಲ್ಲಾ ಕಡೆ ಸರ್ವೇ ಸಾಮಾನ್ಯ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು, ದುಡಿದು ತಿನ್ನುವ ಹಂತದವರಲ್ಲೂ ಇದು ನಿಲ್ಲದ ನಿರಂತರ ಪ್ರಕ್ರಿಯೆ. ತಡೆ ಇಲ್ಲದಂತೆ ನಡೆದಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳೊಂದಿಗೆ ತಗ್ಗಿ ಬಗ್ಗಿ ನಡೆದರೆ ಚೆಂದ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಇವತ್ತಿನ ದಿನ ತಗ್ಗಿ ಬಗ್ಗಿ ಅಂದರೆ ಅದು ಬೇರೆ ಅರ್ಥ ಸ್ವರೂಪ ಪಡೆದಿದೆ. ಈಗೆಲ್ಲ ತೋರಿಕೆಗಾಗಿ ತಗ್ಗಿ ಬಗ್ಗಿ ನಡೆಯುವುದು ಮಾಮೂಲು. ಅದಕ್ಕೆ ಸೂಕ್ತ ಪದ ಕೂಡ ಬಳಕೆಯಲ್ಲಿದೆ. ಅದು ಬಕೀಟು ಹಿಡಿಯುವುದು ಎಂದರ್ಥ. ಇಂತವರು ಗುರುಗಳು ಹೇಳಿದ್ದಕ್ಕೆಲ್ಲ, ಅದು ಒಳ್ಳೆಯದಿರಲಿ ಕೆಟ್ಟದ್ದಿರಲಿ ಅವರ ಖುಷಿಗಾಗಿ, ಅಥವಾ ಅವರನ್ನು ಮೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಾಗಿದೆ. ಕಾಗೆ ಬೆಳ್ಳಗಿದೆ ಅಂದರೂ ಹೌದು ಸಾರ್ ಅನ್ನೋ ಜಾತಿಯಿಂದ, ಒಳ್ಳೆಯ ನೇರ ನಡೆ ನುಡಿಯಿರುವವರಿಗೆ ಅವಿವೇಕಿ, ನಿಷ್ಪ್ರಯೋಜಕ ಎಂದು ಹಣೆ ಪಟ್ಟಿ. ಇದು ವಿದ್ಯಾರ್ಥಿ ಜೀವನದ ಕಥೆಯಾದರೆ ಇನ್ನು ಒಂದೆಡೆ ಉದ್ಯೋಗ ಮಾಡುವಲ್ಲೂ ಇದೆ ಹಣೆಬರಹ. ಇಲ್ಲಿ ತಮ್ಮ ಮೇಲಧಿಕಾರಿಯನ್ನು ಮೆಚ್ಚಿಸಲು ಇದ್ದದ್ದು, ಇಲ್ಲದ್ದು ಎಲ್ಲಾ ಒಗ್ಗರಣೆ ಸಮೇತ ವರದಿ ಒಪ್ಪಿಸುವ 'ಅಕ್ಷರಸ್ತರ, ನಾಗರೀಕರ ?' ಗುಂಪು. ಅವರು ಯಾವ ರೀತಿಯಲ್ಲಿ ತಮ್ಮ (ವಾದ) ವರದಿ ಮಂಡಿಸುತ್ತಾರೋ ತಿಳಿಯದು. ಆದರೂ ಅವರ ಮಾತಿಗೆ ಸಿಗುವ ಮರ್ಯಾದೆ ಮಾತ್ರ ಮುತ್ತಿನಂತದು. ಹೌದು ಬಂಗಾರದ ಬೆಲೆ ಅವರ ಮಾತಿಗೆ. ವಿಪರ್ಯಾಸ ಅಂದರೆ ಅಂಥವರ ಮಾತನ್ನು ಸರಿನೋ ತಪ್ಪೋ ಎಂದು ಯೋಚಿಸದೆ ಒಪ್ಪಿಕೊಳ್ಳುವ ಮೇಲಾಧಿಕಾರಿ ಇನ್ನೆಂಥ ಅವಿವೇಕಿ ಇರುತ್ತಾನೋ ಊಹಿಸಲೂ ಕಷ್ಟ. ಈ ಥರದ ಮೇಲಾಧಿಕಾರಿಯಿಂದ ಅದ್ಯಾವ ಮಟ್ಟದ ಆಡಳಿತ ನಿರೀಕ್ಷಿಸಲು ಸಾಧ್ಯ. ಇಂಥ ಅಧಿಕಾರಿಗಳಿಗೆ ಒಬ್ಬರು ತಮ್ಮ ತಾಳಕ್ಕೆ ಸರಿಯಾಗಿ ಕುಣಿಯಬಲ್ಲರು (ಬಕೀಟು) ಅಂತ ಗೊತ್ತಾದರೆ ಸಾಕು ಅವರ ವರದಿಯನ್ನೇ (ಆಡು ಭಾಷೆಯಲ್ಲಿ ಇದನ್ನು 'ಚಾಡಿ' ಅಂತಾರೆ) ನಿರೀಕ್ಷಿಸುತ್ತಾ ಅವರು ಹೇಳಿದ್ದೆ ವೇದವಾಕ್ಯ ಅಂತ ನಂಬುವುದು. ಅಷ್ಟಕ್ಕೆ ಸುಮ್ಮನಾಗದೆ 'ಬಕೀಟಿನ' ವರದಿಯನ್ನ ಪರಾಮರ್ಶಿಸದೇ ನಿಯತ್ತಿನ, ಕೆಲಸ ಸರಿಯಾಗಿ ಮಾಡುವವರ ಮೇಲೆ, ಅಥವಾ ಮಾನವ ಸಹಜ ಸಣ್ಣ ಪುಟ್ಟ ತಪ್ಪಿಗೂ ಮಾತಿನಲ್ಲೇ ಮಂಗಳಾರತಿ ಮಾಡಿ, ಅಷ್ಟಕ್ಕೂ ಸುಮ್ಮನಾಗದೆ ಇನ್ನೂ ಮುಂದೆ ಹೋಗಿ ಅಸಹ್ಯ ಅನ್ನುವಂತೆ ಬಾಯಿಗೆ ಬಂದದ್ದು ಬಡ ಬಡಾಯಿಸಿ ತಮ್ಮ ಯೋಗ್ಯತೆ? ಪ್ರದರ್ಶಿಸುತ್ತಾರೆ.
ಇಂಥಹ ಅಧಿಕಾರಿಗಳು, ಬಕೀಟು ಮಹಾಶಯರಿಗೆ ಕೊರತೆ ಇಲ್ಲ. ಎಲ್ಲ ಕಡೆ ಇವರ ದರ್ಬಾರು? ಇದ್ದೆ ಇದೆ. ಇಂಥಹ ಅನುಭವಗಳು ಎಲ್ಲರಿಗೂ ಸಾಮಾನ್ಯ. ಆದರೂ ಇಂಥಹ ಭೂಪರಿಗೆ ಬಕೀಟು ತುಂಬಾ ಬೊಕ್ಕೆ ಇಟ್ಟು ಅಭಿನಂದಿಸಲೇ....? ಬೇಕು.
ಅಷ್ಟಕ್ಕೂ ಈ ವಿಷ್ಯ ಇಲ್ಲಾಕೆ ಹೇಳಿದೆ ಅಂದರೆ ನಾನು ನನ್ನ ಗೆಳೆಯರೆಲ್ಲ ಮಾತಾಡುವಾಗ ಈ ಪೆಡಂಭೂತದ ವಿಷ್ಯ ಬಂತು. ಯಾಕೆ ಬರೀಬಾರ್ದು ಅಂತ ಬರೆದೆ. ನನ್ನ ಸ್ನೇಹಿತನಿಗಾದ ಅನುಭವ ನಿಮಗೂ ಆಗಿದೆಯೇ? ಕೆಲವೊಮ್ಮೆ ನನಗೂ ಆಗಿದೆ. ನೀವೇನಂತೀರಾ? ಹೌದು, ಕೆಲವರಿರುತ್ತಾರೆ ಅವರಂತೆ ಅವರ ಮನಸ್ಸು ವಿಶಾ.......ಲ? ಅಂತ ಅನ್ನಿಸ್ತಿದೆಯ. ಪ್ಲೀಸ್ ಹೇಳಿ .........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ