ಮಂಗಳವಾರ, ಫೆಬ್ರವರಿ 2, 2010

ಬೆಸಿಗೆಯಲ್ಲೊಂದು ದಿನ ಮಳೆ

ಸಂಜೆ ನಾಲ್ಕರ ಸಮಯ
ಇಳಿ ಬಿಸಿಲ ಕಿರಣಗಳು
ಮನೆ ಎದುರಿಗಿನ ಕಟ್ಟೆ ಮೇಲೆ
ತೆವಳುತ್ತಾ ಸಾಗಿದೆ ಹೊಸ್ತಿಲೆಡೆಗೆ

ಮನೆಯೊಳಗೆ ಮುದುಕಿಯರಿಬ್ಬರ
ಮಾತೋ ಮಾತು. ಮತ್ತೆ ಮೌನ
ವಿಚಿತ್ರ ಸಂದೇಶಗಳ ಗೋಚರ
ದಿಡೀರ್ ಮರೆಯಾಯಿತು ಬಿಸಿಲ ಕಿರಣ

ಸೋಗೆಯುದುರಿಸಿ ತೂಗಾಡಿದವು
ಬಾಗಿದವು ಅಡಿಕೆ ಮರಗಳು
ಹಾರಾಡಿದವು ಹಾಳೆ, ಹೊಟ್ಟು
ಹೂವಿನ ಬೀಜಗಳು ಹೆಂಚಮೇಲೆ

ಗಳಿಗೆ ಹಿಂದಿದ್ದ ಬೆತ್ತಲೆ ಬಾನು
ಕತ್ತಲೆಯ ಬಲೆ ಬೀಸಿತು
ನೋಡನೋಡುತ್ತಲೇ ಬಳಿಯಿತು
ಸೂರ್ಯನಿಗೂ ಮೋಡದಿಂದ ಮಸಿ.

ಗಾಳಿಯ ರೌದ್ರಾವತಾರಕ್ಕೆ
ನಡುಗಿ ದಿಕ್ಕೆಟ್ಟು ಶರಣಾಗಿ
ತಲೆ ಬಾಗಿಸಿ, ಬಾಲ ನಿಮಿರಿಸಿ
ಓಡೋಡಿ ಬಂದವು ದನಗಳೆಲ್ಲ.

ಗಿಡುಗನೊಂದಿಗೆ ಘಂಟೆಗಟ್ಟಲೆ ಕಾದಾಡಿ
ಒಂದೇ ಸಮನೆ ಒದರುತ್ತಿದ್ದ ಕೋಳಿ
ಸನ್ನಿವೇಶಕ್ಕೆ ಹೆದರಿ, ಮುದುರಿ
ಕುಳಿತಿತ್ತು ಗೂಡಲ್ಲಿ ಒದರದೆ, ಕದಲದೆ.

ಬೇಲಿ ಮೇಲೆ ಬಟ್ಟೆಗಳಿಲ್ಲ
ಈಗವು ಸೂತ್ರವಿಲ್ಲದ ಗಾಳಿಪಟ.
ಬಾವಿ ಮೇಲಿತ್ತು ಖಾಲಿ ಕೊಡ
ಈಗದು ಬಾವಿಯೊಳಗೆ ತುಂಬಿದ ಕೊಡ.

ಪಟಪಟನೆ ಬಿದ್ದ ಹನಿಗಳೆರಡು
ಚಿತ್ತಾರ ಮೂಡಿಸಿತು ದೂಳಿನ ಮೇಲೆ
ನೋಡಲದು ಹಾಳೆಯ ಮೇಲೆ
ಶಾಯಿ ಹಚ್ಚಿ ಒತ್ತಿದ ಹೆಬ್ಬೆಟ್ಟಿನ ಹಾಗೆ.

ಮಳೆ, ಗಾಳಿಗೆ ಹೆದರಿದ
ಬಾಳೆಮರ ಅವಿತಿದ್ದು
ನಾರಿಯ ಸೀರೆ ಸೆರಗಿನಂತೆ
ತನ್ನೆಲೆಯನ್ನೇ ಅಡ್ಡ ಹಿಡಿದು.

ಸುರಿಯಿತು ಸುರಿಯಿತು ಮಳೆ
ಕೆಲಸಮಯದ ಹಿಂದಸ್ಟೇ ಇದ್ದ
ಬಿಸಿಲಿಗೆ ಬೆದರಿ ಬೆವರಿದ ದೇಹವೀಗ
ಚುಮು ಚುಮು ಚಳಿಯಲ್ಲಿ ನಡುಗಿತು.

ಮೂಲೆಯಲ್ಲಿದ್ದ ಜಾಡಿ, ಕಂಬಳಿ
ಎಳೆದೆಳೆದು ತಂದು ಹೊದ್ದು
ಮಲಗಿತು ಜೀವ ಮತ್ತದೇ
ಮೂಲೆಯಲ್ಲಿ ಕೋಳಿ ಕಾವು ಕೂತ ಹಾಗೆ.

ಅರೆಗಳಿಗೆಯ ನಿದ್ರಾ ಮಮ್ಪರಿನಿಂದೆದ್ದು
ಕಿವಿ ನಿಮಿರಿಸಿದರೆ ಘೋರ ಶಬ್ದವಿಲ್ಲ
ಬರೀ ಹನಿ ತೊಟ್ಟಿಕ್ಕುವ ರಾಗ
ಅರಿವಾಯಿತು ನಿಂತಿದೆ ಮಳೆಯ ಆರ್ಭಟ.

ಮೌನಕ್ಕೆ ಶರಣಾಗಿದ್ದ ಮುದುಕಿಯರ
ಮಾತೆಲ್ಲ ಕವಳದೊಂದಿಗೆ ಪಿಕ್ತಾನೆಗೆ ಬಿದ್ದಿತ್ತು
ಮಳೆ ಮಳೆ ಎಂಥಾ ಮಳೆಯಿದು
ಕವಳದೊಂದಿಗೆ ಮಾತು ಮತ್ತೆ ಶುರುವಾಯಿತು.

ಹೊದ್ದು ಮಲಗಿದ ಕಂಬಳಿಯ
ಒದ್ದು ಎದ್ದು ಬಂದು ನೋಡಿದರೆ
ಮಾಡಿನ ನೀರು ಬಿದ್ದು ಇಳೆಯಲ್ಲಿ
ಒಂದೆರಡಿಂಚು ಗುಳಿ ಬಿದ್ದಿತ್ತು.

ಒಂದೆರಡು ಘಂಟೆ ಜಡಿದ ಮಳೆ
ಹೊಳೆ ನೀರನ್ನು ದಡ ಮುಟ್ಟಿಸಿದ್ದಕ್ಕೆ
ಗುರುತಾಗಿ ಅದು ಹೊತ್ತು ತಂದ
ಕಸ, ಕಡ್ಡಿ ಇಟ್ಟು ತೋರಿಸಿತ್ತು.

ಮತ್ತೆ ಬಾನು ಬಿಳಿಯಾಗಿತ್ತು
ಮಳೆ ನೀರಲ್ಲಿ ಸೂರ್ಯ ಮಿನ್ದನೇನೋ
ಅನ್ನುವಸ್ಟು ಶುಭ್ರವಾಗಿ, ತೀಕ್ಷ್ಣವಾಗಿ
ಬೆಳ್ಳಿಕಿರಣಹರಿಸಿದ ಧರೆಗೆ.

ಹೆದರಿದ್ದೆ, ಎದುರಿಸಿದ್ದೆ ಅನಿರೀಕ್ಷಿತ ಮಳೆ
ಏನೋ ಬೇಸರ, ಏನೋ ಅವಸರ ಒಳಗೊಳಗೆ
ಏನನ್ನೋ ನೆನೆಸಿ, ಮತ್ತೇನನ್ನೋ ಚಿಂತಿಸಿ
ಅಬ್ಭಾ! ಬೆಪ್ಪಾಗಿ ನಿಂತೆ ನಾ ಮಲೆನಾಡ ಮಳೆಗೆ.

3 ಕಾಮೆಂಟ್‌ಗಳು: